ಗ್ರಾಮ ಪಂಚಾಯತಿಗಳು ನಮ್ಮ ದೇಶದ ಮೂಲ ಸೆಲೆ ಅಡಿಪಾಯ. ಆದರೆ ಇಂದು ಆಳುವ ರಾಜಕೀಯ ಪಕ್ಷಗಳಿಗೆ ಅಧಿಕಾರ ಹಿಡಿಯಲು ಬೇಕಾದ ಕಾಲಾಳುಗಳನ್ನು ಹುಡುಕಿಕೊಡುವ ಕೇಂದ್ರಗಳಾಗಿರುವುದು ಶೋಚನೀಯ. ಮೂಲಭೂತ ಸೌಕರ್ಯಗಳು ಇಲ್ಲದೆ, ನಿರಂತರವಾಗಿ ಗುಲಾಮಗಿರಿಯಂತೆ ಹಳ್ಳಿಗಳನ್ನು ಕಾಣಲಾಗುತ್ತಿದೆ. ಮುಂಬರುವ ಗ್ರಾಮ ಪಂಚಾಯತಿಗಳ ಚುನಾವಣೆಯಲ್ಲಿ ಮಹತ್ತರವಾದ ಬದಲಾವಣೆ, ಹೊಸ ರಾಜನೀತಿಯ ಚಿಂತನೆ ರಾಜ್ಯದಲ್ಲಿ ಪ್ರಾರಂಭವಾಗಬೇಕು. ಪಂಚಾಯತಿಗಳನ್ನೇ ಸರ್ಕಾರ ಮಾಡುವಂತಹ ದಿಶೆಯಲ್ಲಿ ಗ್ರಾಮಗಳ ಚಿಂತನೆಯಾಗಬೇಕು.
ನಮ್ಮ ಪ್ರಜಾಪ್ರಭುತ್ವದ ಚತುಸ್ತಂಭ ರಾಷ್ಟ್ರ ಕಲ್ಪನೆಯನ್ನು ದುರ್ಬಲಗೊಳಿಸಲಾಗುತ್ತಿದೆ. ದಿನೇ ದಿನೇ ಹೆಚ್ಚು ಅಧಿಕಾರ ಕೇಂದ್ರ ಸರ್ಕಾರದಲ್ಲಿ ಕೇಂದ್ರೀಕೃತವಾಗುತ್ತಿದೆ. ಭಾಷಾವಾರು ರಾಜ್ಯಗಳ ಸ್ವಾಯತ್ತತೆ ಮತ್ತು ಅವುಗಳ ವ್ಯಾಪ್ತಿಯಲ್ಲಿ ಇರುವ ಎಲ್ಲಾ ಭೂ-ಖನಿಜ, ಅರಣ್ಯ ಮುಂತಾದ ಸಂಪನ್ಮೂಲಗಳ ಮೇಲೆ ಪೂರ್ಣ ಅಧಿಕಾರ, ಕೈಗಾರಿಕೆಗಳ ಸ್ಥಾಪನೆ, ಕೃಷಿ, ಪಶುಸಂಗೋಪನೆ ಉತ್ಪಾದನೆಗಳ ಯೋಜನೆ, ನೀರಾವರಿ, ಗ್ರಾಮ ಮಟ್ಟದ ವಿದ್ಯುತ್ ಉತ್ಪಾದನೆ, ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ, ಪ್ರಾಥಮಿಕ ನ್ಯಾಯದಾನ. ಪೊಲೀಸ್ ವ್ಯವಸ್ಥೆ ಮೇಲೆ ಪೂರ್ಣ ಅಧಿಕಾರ ನೀಡಬೇಕು.
ಸದೃಢ ಪಂಚಾಯಿತಿ ಸದೃಢ ಭಾರತ ಎಂಬ ಗುರಿಯ ಮೇಲೆ ಸರ್ವೋದಯ ಕರ್ನಾಟಕ ಪಕ್ಷ ಮತ್ತು ಎಡ ಪಕ್ಷಗಳಾದ ಸಿಪಿಐ(ಎಂ), ಸಿಪಿಐ, ಫಾರ್ವರ್ಡ್ ಬ್ಲಾಕ್, ಎಸ್.ಯು.ಸಿ.ಐ.(ಸಿ), ಸಿಪಿಐ(ಎಂ-ಎಲ್), ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ದಲಿತ ಸಂಘರ್ಷ ಸಮಿತಿಗಳು ಸೇರಿ ಹೊಸ ರಾಜನೀತಿಯ ಚಿಂತನೆಯ ಆಧಾರದ ಮೇಲೆ ಈ ಆಶೋತ್ತರಗಳನ್ನು ರಾಜ್ಯದ ಜನತೆಯ ಮುಂದೆ ಇಡುತ್ತಿದ್ದೇವೆ.
ಈ ಕೆಳಕಂಡಂತೆ ಗ್ರಾಮ ಪಂಚಾಯಿತಿಯ ಆಶೋತ್ತರಗಳನ್ನು ಮತದಾರರ ಮುಂದೆ ಇಡುತ್ತಿದ್ದೇವೆ.
01. ಸರಕಾರದ ಬೊಕ್ಕಸಕ್ಕೆ ನಮ್ಮ ತೆರಿಗೆ ಹಣ 7 ಲಕ್ಷ ಕೋಟಿಗಿಂತ ಅಧಿಕವಾಗಿ ಬರುತ್ತದೆ. ಇದನ್ನು ಸಮಾನವಾಗಿ ಎಲ್ಲಾ ಪಂಚಾಯತಿಗೆ ಹಂಚಿಕೆ ಮಾಡಿದ್ದಲ್ಲಿ 5 ವರ್ಷಕ್ಕೆ 70ರಿಂದ 100ಕೋಟಿ ರೂ. ಆಗುತ್ತದೆ. ಇದರಲ್ಲಿ ಶೇ.20ರಷ್ಟು ಹಣವನ್ನಾದರೂ ಗ್ರಾಮಾಭಿವೃದ್ಧಿಗೆ ಮೀಸಲಿಡಬೇಕು.
02. ಪ್ರತಿ ಪಂಚಾಯತಿಯಲ್ಲಿ ಭೂ ದಾಖಲೆ, ಖನಿಜಗಳ ಮೇಲಿನ ನಿಯಂತ್ರಣಮ ಕೃಷಿ ಮತ್ತು ಪಶುಸಂಗೋಪನೆಯ ಅಭಿವೃದ್ಧಿ, ತಳಿ ಮತ್ತು ಬೀಜ ಸಂರಕ್ಷಣೆ, ಪ್ರಾಥಮಿಕ ಶಿಕ್ಷಣ ಮತ್ತು ಪಾಥಮಿಕ ಆರೋಗ್ಯ, ಪಂಚಾಯತಿಯ ಮಿತಿಯಲ್ಲಿ ನೀರಾವರಿ ಮತ್ತು ವಿದ್ಯುತ್ ತಯಾರಿಕೆ ಅಂತರ್ಜಲ ಸಂರಕ್ಷಣೆ, ರಸ್ತೆ ಮತ್ತು ಕೆರೆ ಅಭಿವೃದ್ಧಿ, ಆ ಪಂಚಾಯತಿಯ ಜವಾಬ್ದಾರಿಯಲ್ಲೇ ನಡೆಯಬೇಕು.
03. ಆಶ್ರಯ ಮನೆ, ಅಂಬೇಡ್ಕರ್ ವಸತಿ, ಬಸವ ಯೋಜನೆ, ಇಂದಿರಾಗಾಂಧಿ ವಸತಿ ಇತರೇ ಯಾವುದೇ ಯೋಜನೆಯಲ್ಲಿ ಮನೆಗಳನ್ನು 5 ವರ್ಷಗಳಲ್ಲಿ ಪ್ರತಿ ಪಂಚಾಯತಿಯನ್ನು ಗುಡಿಸಲು ಮುಕ್ತ ಮಾಡಲು ಅಗತ್ಯವಾದಷ್ಟು ಮನೆಗಳನ್ನು ನಿಗದಿ ಮಾಡಿ, ವಸತಿ ರಹಿತ ಬಡವರನ್ನು ಗುರುತಿಸಿ ಲಾಟರಿ ಮುಖಾಂತರ ಹಂಚಿಕೆ ಮಾಡಬೇಕು. ಬಡವರ ಮನೆ ಬಿದ್ದರೆ ಗ್ರಾಮ ಪಂಚಾಯತಿ ಕಚ್ಚಾ ಮನೆಗೆ ಕನಿಷ್ಠ 50,000 ಪರಿಹಾರ ಕೊಡುವ ಅಧಿಕಾರ ನೀಡಬೇಕು. ಸರಕಾರ ಬಡವರಿಗೆ ಮನೆ ಕಟ್ಟಿಕೊಳ್ಳಲು ನೀಡುವ ಹಣವನ್ನು ಪ್ರೋತ್ಸಾಹ ಧನ ಎಂದು ಪರಿಗಣಿಸಬೇಕು. ಅದನ್ನು ರೂ. 2.50 ಲಕ್ಷಕ್ಕೆ ಏರಿಸಬೇಕು. ಈಗ ಮನೆ ಕಟ್ಟಲು ವಿಧಿಸಿರುವ ನಿಬಂಧನೆಗಳನ್ನು ತೆಗೆದು ಹಾಕಬೇಕು.
04. ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯನ್ನು ಬಲಪಡಿಸಿ ಮೇಲಿನ ಎಲ್ಲಾ ಯೋಜನೆಗಳಿಗೆ ಪೂರಕವಾಗಿಸಿ ಸಮಗ್ರ ಗ್ರಾಮೀಣಾಭಿವೃದ್ದಿಯ ಸಾಧನವಾಗಿಸಬೇಕು ಮತ್ತು ಗುಳೆ ಹೋಗುವುದನ್ನು ತಡೆಗಟ್ಟಬೇಕು.
05. ಮಹಿಳೆಯರಿಗೆ ಹೆಚ್ಚು ಉದ್ಯೋಗ ಮತ್ತು ತರಬೇತಿ ಕೊಡುವುದರ ಮೂಲಕ ಆರ್ಥಿಕವಾಗಿ ಮೇಲೆತ್ತಿ ಸಬಲೀಕರಣಗೊಳಿಸುವ ಕೆಲಸ ಮಾಡಬೇಕು.
06. ಈ ಎಲ್ಲಾ ಯೋಜನೆಗಳು ಮತ್ತು ಗ್ರಾಮ ಪಂಚಾಯಿತಿಯ ಎಲ್ಲಾ ಕಾರ್ಯಗಳು ಗ್ರಾಮ ಸಭೆಯ ನಿಯಂತ್ರಣಕ್ಕೆ ಒಳಪಡಬೇಕು. ಗ್ರಾಮ ಸಭೆಯೇ ಪರಮಾವಧಿಕಾರದ ಕೇಂದ್ರವಾಗಬೇಕು.
07. ಪಂಚಾಯತಿ ಮತ್ತು ಬ್ಯಾಂಕುಗಳ ನಡುವೆ ಹೊಂದಾಣಿಕೆಯಲ್ಲಿ ಸಮಗ್ರ ಪಂಚಾಯತಿ ಅಭಿವೃದ್ದಿ ಕಾರ್ಯಗಳಿಗೆ ಹಾಗೂ ಯಾವುದೇ ಜಾತಿಯ ಬಡವರು ಮತ್ತು ರೈತರಿಗೆ ಯಾವುದೇ ಜಾಮೀನು ಇಲ್ಲದೆ ಸಾಲ ನೀಡುವುದರ ಮೂಲಕ ಖಾಸಗಿ ಸಾಲದಿಂದ ಮುಕ್ತ ಮಾಡಬೇಕು. ಪಂಚಾಯಿತಿ ಮೂಲಕ ಸಾಲ ಕೊಟ್ಟು, ಆ ಸಾಲವನ್ನು ಮರುಪಾವತಿ ಮಾಡುವಂತಹ ನೀತಿಯನ್ನು ಸೃಷ್ಟಿ ಮಾಡಬೇಕು.
08. ಗ್ರಾಮ ಪಂಚಾಯಿತಿಯಲ್ಲಿ ಸಾಮಾಜಿಕ ಅರಣ್ಯ ಬೆಳೆಸಲು ಸ್ಥಳೀಯ ಜನರ ಸಹಯೋಗದೊಂದಿಗೆ ಹೊಣೆಗಾರಿಕೆ ಮತ್ತು ಜವಾಬ್ದಾರಿಯನ್ನು ಪಂಚಾಯತಿಗೆ ವಹಿಸಬೇಕು.
09. ಪಕ್ಷಾತೀತವಾಗಿ, ಜ್ಯಾಜ್ಯಾತೀತವಾಗಿ, ಧರ್ಮಾತೀತವಾಗಿ, ಪ್ರತಿ ಪಂಚಾಯಿತಿಯಲ್ಲಿ ಜನತಾ ನ್ಯಾಯಾಲಯ ಸ್ಥಾಪನೆ ಮಾಡುವುದರ ಮೂಲಕ ವಿವಾದ ಮುಕ್ತ ಗ್ರಾಮ ಪಂಚಾಯಿತಿಯನ್ನು ಮಾಡಲು ಪಂಚಾಯಿತಿಗಳೇ ಜವಾಬ್ದಾರಿ ಹೊರಬೇಕು.
10. ಪಂಚಾಯತಿಗಳಲ್ಲಿ ಅಧಿಕಾರಿಗಳು ಮತ್ತು ಪಂಚಾಯಿತಿಯ ಸದಸ್ಯರುಗಳು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ವರೆಗೆ ಕಛೇರಿಯಲ್ಲಿಯೇ ಕುಳಿತು ಕೆಲಸ ಮಾಡಲು ಅನುಕೂಲವಾಗುವಂತೆ ಅವರಿಗೆ ಸಂಭಾವನೆ ಕೊಡಬೇಕು. ಗ್ರಾಮ ಪಂಚಾಯಿತಿಯ ಎಲ್ಲಾ ಸಿಬ್ಬಂಧಿಯನ್ನು ನೌಕರರೆಂದು ಪರಿಗಣಿಸಿ ವೇತನ ಸೌಲಭ್ಯ ನೀಡಬೇಕು ಮತ್ತು ಅವರ ಮೇಲಿನ ಎಲ್ಲಾ ನಿಯಂತ್ರಣ ಪಂಚಾಯಿತಿಗಳಿಗೆ ಇರಬೇಕು.
ಸದೃಡ ಪಂಚಾಯಿತಿಗಳಿಂದಲೇ ಸದೃಡ ಭಾರತ ಎಂಬ ಗುರಿಯ ಸಾಧನೆಗಾಗಿ ಈ ಮೇಲಿನ ಆಶೋತ್ತರಗಳ ಈಡೇರಿಕೆಗಾಗಿ ಜನಪರ ಪಕ್ಷಗಳು ಮತ್ತು ಸಂಘಟನೆಗಳು ಸೇರಿ ಒಟ್ಟಿಗೆ ಸ್ಪರ್ಧೆ ಮಾಡುವುದು ನಮ್ಮೆಲ್ಲರ ಆಶಯವಾಗಿದೆ.
ಕೆ.ಎಸ್. ಪುಟ್ಟಣ್ಣಯ್ಯ, ಶಾಸಕರು ಮತ್ತು ಕಾರ್ಯಧ್ಯಕ್ಷರು, ಸರ್ವೋದಯ ಕರ್ನಾಟಕ ಪಕ್ಷ
ಜಿ.ವಿ. ಶ್ರೀರಾಮರೆಡ್ಡಿ, ಮಾಜಿ ಶಾಸಕರು ಮತ್ತು ರಾಜ್ಯ ಕಾರ್ಯದರ್ಶಿ, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)-ಸಿಪಿಐ(ಎಂ)
ಜಿ.ಎನ್. ನಾಗರಾಜ್, ಕಾರ್ಯದರ್ಶಿ ಮಂಡಳಿ ಸದಸ್ಯರು, ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ)-ಸಿಪಿಐ(ಎಂ)
ಪಿ.ವಿ. ಲೋಕೇಶ್, ರಾಜ್ಯ ಕಾರ್ಯದರ್ಶಿ, ಭಾರತ ಕಮ್ಯೂನಿಸ್ಟ್ ಪಕ್ಷ – ಸಿಪಿಐ
ಬಡಗಲಪುರ ನಾಗೇಂದ್ರ,
ರಾಧಕೃಷ್ಟ, ಪ್ರಧಾನ ಕಾರ್ಯದರ್ಶಿ, ಎಸ್.ಯು.ಸಿ.ಐ.(ಸಿ.)
ಸಿಪಿಐ(ಎಂ-ಎಲ್), ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ, ಹಾಗೂ ಹಸಿರು ಸೇನೆ