ಏಪ್ರಿಲ್ 22ರಂದು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡಲಾದ ಹೇಳಿಕೆ
ಸಿಗರನಹಳ್ಳಿ ಇಷ್ಟೊಂದು ಸುದ್ದಿಯಾಗಲು ಕಾರಣ 2015ರ ಆಗಸ್ಟ್ 31 ರಂದು ನಾಲ್ಕು ಮಂದಿ ದಲಿತ ಮಹಿಳೆಯರು ಅಲ್ಲಿನ ಬಸವೇಶ್ವರ ದೇಗುಲ ಪ್ರವೇಶ ಮಾಡಿದ್ದು.
ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕಿನ ಹಳೇಕೋಟೆ ಹೋಬಳಿಯ ಸಿಗರನಹಳ್ಳಿಯ ಬಸವೇಶ್ವರ ಮಹಿಳಾ ಸಂಘದ 16 ಸದಸ್ಯರಲ್ಲಿ 12 ಮಂದಿ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದರೆ, ಉಳಿದ 4 ಮಂದಿ ಪರಿಶಿಷ್ಟ ಜಾತಿಗೆ ಸೇರಿದವರು. ಸಂಘಕ್ಕೆ 3 ಲಕ್ಷ ರೂಪಾಯಿ ಸಾಲ ಮಂಜೂರಾದ ಹಿನ್ನೆಲೆಯಲ್ಲಿ ವಿಶೇಷ ಪೂಜೆಯೊಂದನ್ನು ಏರ್ಪಡಿಸಿದ್ದರು. ಎಲ್ಲಾ ಸದಸ್ಯರು ಒಟ್ಟಾಗಿ ಪೂಜೆ ನೆರವೇರಿಸಿ ಹೊರ ಬಂದರು. ಇದು ಮೇಲ್ವರ್ಗದ ಪುರುಷರ ಕಣ್ಣಿಗೆ ಬಿದ್ದಿದ್ದೆ ತಡ ಉರಿದು ಬಿದ್ದರು. ದಲಿತ ಮಹಿಳೆ ತಾಯಮ್ಮ, ಪದ್ಮಮ್ಮ, ತಂಗ್ಯಮ್ಮ ಮತ್ತು ಸಣ್ಣಮ್ಮ ಅವರನ್ನು ಹೀನಾ ಮಾನವಾಗಿ ನಿಂದಿಸಿಬಿಟ್ಟರು. ಹೇಗೋ ಅಲ್ಲಿಂದ ವಾಪಸ್ ಬಂದ ಮಹಿಳೆಯರು ಮರು ದಿನ ಊರ ಪಟೇಲರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರ ಮುಂದೆ ತಮಗಾದ ಅವಮಾನ ಹೇಳಿಕೊಂಡರು. ಅವರಿಂದ ಸಮಾಧಾನದ ಉತ್ತರ ಸಿಗಲಿದೆ ಎಂದು ಬಯಸಿದ್ದ ತಾಯಮ್ಮನಿಗೆ ನೀವು ಮಾಡಿz್ದÉೀ ತಪ್ಪು ಎಂಬ ಉತ್ತರ ಬಂತು. ಇದರಿಂದ ಬೇಸತ್ತ ತಾಯಮ್ಮ ದಲಿತರಾಗಿ ಹುಟ್ಟಿದ್ದೆ ತಪ್ಪು ಎಂದು ಮನದಲ್ಲೆ ನೊಂದು ಸುಮ್ಮನಾದರು.
ಆದರೆ ಅದೇ ದಿನ ರಾತ್ರಿ ಪಂಚಾಯ್ತಿ ಸೇರಿದ ಮೇಲ್ಜಾತಿಯವರು ದಲಿತ ಮಹಿಳೆಯರನ್ನು ದೇಗುಲಕ್ಕೆ ಕರೆದೊಯ್ದ ಸ್ವಸಹಾಯ ಸಂಘಕ್ಕೆ 1 ಸಾವಿರ ರೂಪಾಯಿ ದಂಡ ಹಾಕಿದರು. ಅಲ್ಲದೇ ದೇವರಿಗೆ ಆದ ಮೈಲಿಗೆ ತೊಳೆಯಲು ತಗುಲುವ ವೆಚ್ಚ ಭರಿಸುವಂತೆ ಫರ್ಮಾನು ಹೊರಡಿಸಿದರು. ಮರು ದಿನ ಸಿಕ್ಕಿದ ಸಂಘದ ಮೇಲ್ಜಾತಿ ಸದಸ್ಯರು ನೀವು ದೇಗುಲಕ್ಕೆ ಬಂದು ನಾವು ದಂಡ ಕಟ್ಟುವಂತೆ ಮಾಡಿದಿರಿ ಎಂದು ನೊಂದುಕೊಂಡರು. ಮತ್ತಷ್ಟು ಅವಮಾನ ಅನುಭವಿಸಿದ ದಲಿತ ಮಹಿಳೆಯರು ಅದೇ ದಲಿತ ಕೇರಿಯ ಪತ್ರಕರ್ತ ವಿಜಯಕುಮಾರ್ ಸಿಗರನಹಳ್ಳಿ ಅವರಿಗೆ ಮೂರ್ನಾಲ್ಕು ದಿನಗಳ ನಂತರ ವಿಷಯ ಮುಟ್ಟಿಸಿದರು. ಅವರು ಪ್ರತಿನಿಧಿಸುತ್ತಿದ್ದ ಪತ್ರಿಕೆಗೆ ವಿಜಯಕುಮಾರ್ ವರದಿ ಮಾಡಿದರು.
ಮರು ದಿನ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು ದಲಿತರಿಗೆ ಆದ ಅವಮಾನದ ಕುರಿತು ಮಾಹಿತಿ ಪಡೆದುಕೊಂಡರು. ಮೇಲ್ವರ್ಗದವರ ಮನವೊಲಿಸಿ ಕಾನೂನಿನ ಬಗ್ಗೆ ತಿಳುವಳಿಕೆ ನೀಡುವ ಪ್ರಯತ್ನ ಮಾಡಿದರು. ಆದರೆ ಆ ಸಭೆಯತ್ತ ಯಾರೊಬ್ಬರೂ ಸುಳಿಯಲಿಲ್ಲ. ಮರು ದಿನ ಆ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ ನೇತೃತ್ವದಲ್ಲಿ ಸಭೆ ಆಯೋಜಿಸಿದರು. ಸಭೆಗೆ ಆಗಮಿಸಿದ ರೇವಣ್ಣ ಅವರಿಂದ ನ್ಯಾಯ ಸಿಗಲಿದೆ ಎಂದು ಭಾವಿಸಿದ್ದ ದಲಿತರು ದೇಗುಲದ ಪಕ್ಕದಲ್ಲೇ ಇರುವ ಸರ್ಕಾರಿ ಸಮುದಾಯ ಭವನಕ್ಕೂ 15 ವರ್ಷದಿಂದ ಪ್ರವೇಶ ನಿರಾಕರಿಸುವ ಬಗ್ಗೆ ಹೇಳಿದರು. ಶಾಸಕರಿಂದ ನ್ಯಾಯ ದೊರಕಲಿದೆ ಎಂದುಕೊಂಡಿದ್ದ ದಲಿತರಿಗೆ ಮತ್ತೊಂದು ಆಘಾತ ಕಾದಿತ್ತು. ರೇವಣ್ಣ ಅವರು ಮೇಲ್ಜಾತಿಯವರ ಪರ ವಕಾಲತ್ತು ವಹಿಸಿ ನಿಂತರು. ಆದರೂ ಜನರ ವಿರೋಧದ ನಡುವೆ ಪೆÇಲೀಸರು ಮತ್ತು ಅಧಿಕಾರಿಗಳು ಇಬ್ಬರು ಮಹಿಳೆಯರಿಗೆ ಬಲವಂತವಾಗಿ ದೇಗುಲಕ್ಕೆ ಮತ್ತೊಮ್ಮೆ ಪ್ರವೇಶ ಕೊಡಿಸಿ ಕೈತೊಳೆದುಕೊಂಡರು. ಅಂದು ಆ ಮಹಿಳೆಯರು ಪ್ರವೇಶ ಮಾಡಿದ ದೇಗುಲವೇ ಬೇಡ ಎಂದು ಬಹಿಷ್ಕರಿಸಿದ ಮೇಲ್ಜಾತಿಯವರು ಜಿಲ್ಲಾಡಳಿತ ಆಯೋಜಿಸಿದ್ದ ಶಾಂತಿ ಸಭೆಯಲ್ಲೂ ದಲಿತರ ದೇಗುಲ ಪ್ರವೇಶವನ್ನು ವಿರೋಧಿಸಿದರು. ಶಾಸಕ ಎಚ್.ಡಿ.ರೇವಣ್ಣ ಮೇಲ್ವರ್ಗಕ್ಕೆ ಹಿಂದಿನಿಂದ ನೀಡುತ್ತಿದ್ದ ಬೆಂಬಲ ಅದಕ್ಕೆ ಕಾರಣವಾಗಿತ್ತು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಕೂಡ ದಲಿತರ ದೇಗುಲ ಪ್ರವೇಶ ಹೋರಾಟವೇ ತಪ್ಪು ಎಂಬಂತೆ ಮಾತನಾಡಿದರು ಮತ್ತು ದಲಿತರು ದೇವಾಲಯದ ಗರ್ಭಗುಡಿಗೆ ಪ್ರವೇಶ ಬಯಸುತ್ತಿದ್ದಾರೆ ಎಂದು ಹೇಳಿ ವಿಷಯಾಂತರ ಮಾಡಲು ಪ್ರಯತ್ನಿಸಿದರು. ದಲಿತರ ಪರ ವರದಿ ಮಾಡಿದ ಪತ್ರಕರ್ತ ವಿಜಯಕುಮಾರನ ವಿರುದ್ಧವೂ ಸಿಡಿಮಿಡಿಗೊಂಡರು.
ಆದರೆ ದಲಿತರ ಬೆಂಬಲಕ್ಕೆ ನಿಂತಿದ್ದ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್ವಾದಿ) ಸಿಪಿಐ(ಎಂ), ದಲಿತ ಹಕ್ಕುಗಳ ಸಮಿತಿ, ದಲಿತ ಸಂಘರ್ಷ ಸಮಿತಿ ಹಾಗೂ ಇನ್ನಿತರ ಪ್ರಗತಿಪರ ಸಂಘಟನೆಗಳು ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ರೇವಣ್ಣ ವಿರುದ್ಧ ಮುಗಿಬಿದ್ದವು. ಜಿಲ್ಲಾಧಿಕಾರಿ ಕಚೇರಿಗೆ ನುಗ್ಗುವ ಹಂತದ ಹೋರಾಟ ರೂಪಿಸಿದರು. ಅಲ್ಲದೇ ಹೊಳೆನರಸೀಪುರದಿಂದ ಹಾಸನಕ್ಕೆ ಕಾಲ್ನಡಿಗೆ ಜಾಥಾವನ್ನೂ ನಡೆಸಲಾಯಿತು. ಜೊತೆಗೆ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ರಾಜ್ಯಾದ್ಯಾಂತ ಕಾಲ್ನಡಿಗೆ ಮತ್ತು ವಾಹನ ಜಾಥಾಗಳನ್ನು ನಡೆಸಿ ಬೆಂಗಳೂರಿನಲ್ಲಿ ಬೃಹತ್ ಸಮಾವೇಶವನ್ನು ಡಿಸೆಂಬರ್ 6ರಂದು ನಡೆಸಲಾಯಿತು. ಆದರೆ ಅದ್ಯಾವುದಕ್ಕೂ ಜಗ್ಗದ ಎಚ್.ಡಿ.ರೇವಣ್ಣ, ದಲಿತರ ಈ ಹೋರಾಟವನ್ನೇ ರಾಜಕೀಯ ಶಕ್ತಿಯನ್ನಾಗಿ ಮಾಡಿಕೊಂಡರು. ಪ್ರಬಲ ಜಾತಿಯಾದ ಒಕ್ಕಗಲಿರ ಪರ ಜೆಡಿಎಸ್ ಇದೆ ಎಂಬುದನ್ನು ಈ ಘಟನೆಯಲ್ಲಿ ಸಾಬೀತು ಮಾಡಲು ವೇದಿಕೆ ಮಾಡಿಕೊಂಡರು. ಅದರ ಪರಿಣಾಮವಾಗಿಯೇ ಇಂದಿಗೂ ಸಿಗರನಹಳ್ಳಿ ದಲಿತರಿಗೆ ನ್ಯಾಯ ಎಂಬುದು ಮರೀಚಿಕೆಯಾಗಿರುವುದು.
2015 ಸೆಪ್ಟೆಂಬರ್ 12 ರಂದು ಸಿಪಿಐ(ಎಂ) ನೇತೃತ್ವದಲ್ಲಿ ಸಿಗರನಹಳ್ಳಿಯಲ್ಲಿ ದಲಿತರೊಂದಿಗೆ ದೇವಾಯಲಯ ಹಾಗೂ ಸಮುದಾಯ ಭವನ ಪ್ರವೇಶ ಮತ್ತು ಸಹಪಂಕ್ತಿ ಭೋಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು ಆದರೆ ಈ ಕಾರ್ಯಕ್ರಮವನ್ನು ನಡೆಸದಂತೆ ತಡೆದ ಪೊಲೀಸ್ ಇಲಾಖೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿದ್ದ ಸಿಪಿಐ(ಎಂ)ನ ರಾಜ್ಯ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ, ದಲಿತ ಹಕ್ಕುಗಳ ಸಮಿತಿಯ ರಾಜ್ಯ ಸಂಚಾಲಕರಾದ ಗೋಪಾಲಕೃಷ್ಣ ಹರಳಹಳ್ಳಿ ಸೇರಿದಂತೆ 30ಕ್ಕೂ ಹೆಚ್ಚು ಮಂದಿಯನ್ನು ಬಂಧಿಸಿದರು.
ಎಚ್.ಡಿ.ದೇವೇಗೌಡರು ಮತ್ತು ರೇವಣ್ಣ ಅವರು ತಮ್ಮ ಬೆಂಬಲ ವಹಿಸಿದ್ದು ಸಿಗರನಹಳ್ಳಿ ಮೇಲ್ಜಾತಿಯ ಜನರಿಗೆ ತಾವು ಮಾಡಿz್ದÉೀ ಸರಿ ಎಂಬಂತಾಯಿತು. ದೇವೇಗೌಡರ ಸಂಸದರ ನಿಧಿಯಿಂದ ನಿರ್ಮಾಣ ಆಗಿರುವ ಸಮುದಾಯ ಭವನಕ್ಕೆ ಬರೆದಿರುವ ಒಕ್ಕಲಿಗರ ಸಮುದಾಯ ಭವನ ಎಂಬ ಬೋರ್ಡ್ ಅಳಿಸಲು ಬಂದ ಅಧಿಕಾರಿಗಳನ್ನು ಅಟ್ಟಾಡಿಸಿ ಓಡಿಸಿದರು. ದಲಿತರಿಗೆ ಅಂಗಡಿ, ಫೆÇ್ಲೀರ್ ಮಿಲ್ಗೆ ಬರದಂತೆ ನಿರ್ಬಂಧ ಹೇರಿದರು. ದಲಿತ ಕೇರಿಯ ಜನರನ್ನು ಕೂಲಿಗೆ ಕರೆಯುವುದನ್ನು ನಿಲ್ಲಿಸಿದರು. ಟ್ರ್ಯಾಕ್ಟರ್ ಬಾಡಿಗೆ ಬರುವುದನ್ನು ಸ್ಥಗಿತಗೊಳಿಸಿದರು. ಆ ಮೂಲಕ ದಲಿತರ ಮೇಲೆ ಸಾಮಾಜಿಕ ಬಹಿಷ್ಕಾರ ಹೇರಿದರು. ಇದನ್ನು ಪ್ರಶ್ನೆ ಮಾಡಲು ಬಂದ ಅಧಿಕಾರಿಗಳನ್ನೇ ಊರಿನಿಂದ ಓಡಿಸುವ ಮಟ್ಟಕ್ಕೆ ದಾಷ್ಟ್ಯ ಬೆಳಸಿಕೊಂಡರು. ಪತ್ರಿಕೆಯಲ್ಲಿ ವರದಿ ಮಾಡಿದ ಪತ್ರಕರ್ತ ಮತ್ತು ಸಾಮಾಜಿಕ ಬಹಿಷ್ಕಾರ ಪ್ರಶ್ನಿಸಿದ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಯ ವಿರುದ್ಧ ಮೇಲ್ಜಾತಿಯರು ಪ್ರತಿಭಟನೆ ನಡೆಸಿದರು. ಅದಕ್ಕೆ ಶಾಸಕ ಎಚ್.ಡಿ.ರೇವಣ್ಣ ಆಣತಿಯೂ ಕಾರಣವಾಗಿತ್ತು. ಅದಾದ ಮೂರ್ನಾಲ್ಕು ದಿನದಲ್ಲಿ ವಿಜಯವಾಣಿಯಿಂದ ಪತ್ರಕರ್ತ ವಿಜಯಕುಮಾರ್ರವರನ್ನು ಗಂಗಾವತಿಗೆ ವರ್ಗಾವಣೆಯ ಆದೇಶವೂ ಹೊರಬಿತ್ತು. ಅದಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಕಾರಣ ಎಂಬುದು ಗುಟ್ಟಾಗಿ ಉಳಿಯಲಿಲ್ಲ. ಅಸ್ಪೈಶ್ಯತೆ ಪ್ರಕರಣವನ್ನು ವರದಿ ಮಾಡಿದ ಪತ್ರಕರ್ತ ವರ್ಗಾವಣೆ ಶಿಕ್ಷೆ ಅನುಭವಿಸಬೇಕಾಯಿತು. ನಂತರ ಚುನಾವಣೆಗಳ ಸಂತೆಯಲ್ಲಿ ಸಿಗರನಹಳ್ಳಿ ವಿವಾದ ಬೂದಿ ಮುಚ್ಚಿದ ಕೆಂಡದಂತೆ ತಣ್ಣಗಾಗಿತ್ತು.
ಏಳು ತಿಂಗಳ ನಂತರ ಮತ್ತೊಮ್ಮೆ ವಿವಾದ ಭುಗಿಲೆದ್ದಿದೆ. ಅದಕ್ಕೆ ಕಾರಣ ಜಿಲ್ಲಾಡಳಿತ ಮತ್ತು ಪೆÇಲೀಸ್ ಇಲಾಖೆಗೆ ನೀಡಿದ ಒಂದು ಅರ್ಜಿ. ಏಪ್ರಿಲ್ 1 ಮತ್ತು 2 ರಂದು ಸಿಗರನಹಳ್ಳಿ ಸೇರಿದಂತೆ ಏಳು ಹಳ್ಳಿ ಸೇರಿ ನಡೆಸುವ ಹರಿಹರಪುರದ ಜಾತ್ರೆ ಉತ್ಸವದ ಅಂಗವಾಗಿ ವಾರದ ಮುನ್ನ 6 ತಿಂಗಳಿಂದ ಬೀಗ ಬಿದ್ದಿದ್ದ ದೇಗುಲ ಬಾಗಿಲು ತೆರೆದುಕೊಂಡಿತ್ತು. ದಲಿತರ ಪ್ರವೇಶ ಮಾಡಿ ನಂತರ 6 ತಿಂಗಳು ಬೀಗ ಹಾಕಿದ್ದ ದೇಗುಲವನ್ನು ಬಾಗಿಲು ತೆರೆದು 2 ಲಕ್ಷ ರೂಪಾಯಿ ಖರ್ಚು ಮಾಡಿ ಶುದ್ಧೀಕರಣ ಮಾಡಲಾಗಿತ್ತು. ಹೋಮ-ಹವನಾದಿಗಳು ನಡೆದಿದ್ದವು. ಶಾಸಕ ಎಚ್.ಡಿ.ರೇವಣ್ಣ ಕೂಡ ಆಗಮಿಸಿ ಪೂಜೆ ಸಲ್ಲಿಸಿದ್ದರು. ಆದರೆ ದಲಿತರು ಮಾತ್ರ ಈ ಎಲ್ಲದರಿಂದ ದೂರ ಇಟ್ಟಲಾಯಿತು. ಆದರೆ ಮಾರ್ಚ್ 30 ರಂದು ಒಂದು ಅರ್ಜಿಯನ್ನು ಜಿಲ್ಲಾಡಳಿತಕ್ಕೆ ಕೊಟ್ಟು ಏಪ್ರಿಲ್ 1 ರಿಂದ ಆರಂಭವಾಗುವ ಜಾತ್ರೆಯಲ್ಲಿ ದಲಿತರನ್ನು ಒಳಗೊಳ್ಳುವಂತೆ ಮಾಡಬೇಕು. ಊರೆಲ್ಲಾ ಸುತ್ತಾಡಿದರೂ ಈವರೆಗೆ ದಲಿತ ಕೇರಿ ನೋಡದ ಅಡ್ಡೆ ಉತ್ಸವ ಈ ಬಾರಿ ಈ ಬೀದಿಗೆ ಬರಬೇಕು, ಅದಕ್ಕೂ ಮುನ್ನ ಬಸವೇಶ್ವರ ದೇಗುಲದಲ್ಲಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಪತ್ರದಲ್ಲಿ ಬರೆಯಲಾಗಿತ್ತು. ಏಪ್ರಿಲ್ 1 ರಂದು ಆಗಮಿಸಿದ ಉಪವಿಭಾಗಾಧಿಕಾರಿ ವಿಜಯಾ ಹಾಗೂ ಎಎಸ್ಪಿ ಶೋಭಾರಾಣಿ ನೇತೃತ್ವದ ತಂಡ ಆ ಕ್ಷೇತ್ರದ ಶಾಸಕ ರೇವಣ್ಣ ಅವರಿಗೆ ವಿಷಯ ಮುಟ್ಟಿಸಿರಲಿಲ್ಲ. ಆದರೆ ಅರ್ಜಿ ಸರ್ಕಾರಿ ಕಚೇರಿ ತಲುಪಿದ ಮರು ಕ್ಷಣವೇ ರೇವಣ್ಣ ಅವರ ಕಿವಿಗೆ ತಲುಪಿತ್ತು. ಸಿಗರನಹಳ್ಳಿ ಮೇಲ್ವರ್ಗದ ಜನ ರೇವಣ್ಣ ಅವರ ಮನೆ ಬಾಗಿಲು ತಲುಪಿದ್ದರು. ತಮಗೆ ವಿಷಯ ಮುಟ್ಟಿಸದೆ ಸಿಗರನಹಳ್ಳಿಗೆ ಆಗಮಿಸುವ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುವಂತೆ ಮೌಖಿಕ ಆದೇಶ ನೀಡಿದ್ದ ರೇವಣ್ಣ, ದೃಶ್ಯ ಮಾಧ್ಯಮದವರು ಸಿಗರನಹಳ್ಳಿಯತ್ತ ಬರದಂತೆ ನೋಡಿಕೊಂಡರು. ನಾಲೆ ಕಾಮಗಾರಿ ವೀಕ್ಷಣೆ ನೆಪದಲ್ಲಿ ದೃಶ್ಯ ಮಾಧ್ಯಮದ ತಂಡವನ್ನು ಕರೆದೊಯ್ದರು.
ಇತ್ತ ದಲಿತ ಕೇರಿಗೆ ಬಂದ ಅಧಿಕಾರಿಗಳು ಮೇಲ್ವರ್ಗದವರ ಮನವೊಲಿಸಲು ಬಸವೇಶ್ವರ ದೇಗುಲದ ಬಳಿ ಹೋದರು. ಆದರೆ ಮಧ್ಯಾಹ್ನ ದಾಟಿದರು ಬರಲಿಲ್ಲ. 2 ಲಕ್ಷ ರೂಪಾಯಿ ಖರ್ಚು ಮಾಡಿದ ದೇಗುಲಕ್ಕೆ ದಲಿತರು ಮತ್ತೊಮ್ಮೆ ಪ್ರವೇಶ ಮಾಡುವುದನ್ನು ಅವರು ಕಡಾ ಖಂಡಿತವಾಗಿ ನಿರಾಕರಿಸಿದರು. ಈ ಸಂದರ್ಭ ವರದಿ ಮಾಡಲು ಬಂದಿದ್ದ ಹೊಳನರಸೀಪುರದ ಇಬ್ಬರು ಪತ್ರಕರ್ತರು ಫೆÇೀಟೋ ತೆಗೆದಿದ್ದೆ ತಡ ಅವರ ಮೇಲೆ ಎರಗಿ ಬಿದ್ದರು. ರಾಜ್ಯ ಮಟ್ಟದ ಪತ್ರಿಕೆಗಳ ಇಬ್ಬರು ವರದಿಗಾರರಾದ ಕೃಷ್ಣ ಮತ್ತು ವಸಂತಯ್ಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದರು, ಎಸಿ ಮತ್ತು ಎಎಸ್ಪಿ ಮತ್ತು ತಹಸಿಲ್ದಾರ್ರವರನ್ನು ದಿಗ್ಬಂಧನದಲ್ಲಿಟ್ಟು ಅಟ್ಟಹಾಸ ಮೆರೆದರು. ತಡೆಯಲು ಹೋದ ಪೆÇಲೀಸರ ವಿರುದ್ಧವೂ ತಮ್ಮ ದರ್ಪ ಮುಂದುವರಿಸಿದರು. ಪೆÇಲೀಸರ ಸಂಖ್ಯೆ ಕಡಿಮೆ ಇದ್ದ ಕಾರಣಕ್ಕೆ ನಿಯಂತ್ರಣ ಸಾಧ್ಯವಾಗಲಿಲ್ಲ. ನಂತರ ಆಗಮಿಸಿದ ಎಸ್ಪಿ ರಾಹುಲ್ ಕುಮಾರ್ ಮೇಲೂ ಕಲ್ಲು ತೂರಲಾಯಿತು. ಗಾಯಗೊಂಡ ಪೆÇಲೀಸರು, ಪತ್ರಕರ್ತರು ಆಸ್ಪತ್ರೆಗೆ ದಾಖಲಾದರು. ಅಲ್ಲಿಗೆ ಅಂದು ದೇಗುಲಕ್ಕೆ ದಲಿತರು ಪ್ರವೇಶ ಮಾಡಿಸುವ ಅಧಿಕಾರಿಗಳ ಕಸರತ್ತು ಕೊನೆಗೊಂಡಿತು. ಪರಿಸ್ಥಿತಿ ಹತೋಟಿಗೆ ತರಲು ಲಾಠಿ ಪ್ರಹಾರ ನಡೆಸಿ ಸೆಕ್ಷನ್ 144 ಜಾರಿ ಮಾಡಿದರು. ಸಿಗರನಹಳ್ಳಿ ಮೇಲ್ವರ್ಗದ ಜನ ಜಾತ್ರೆ ಮಾಡುವ ಆಸೆ ಬಿಟ್ಟು ಊರು ತೊರೆದರು. ಮರು ದಿನ ಆಗಮಿಸಿದ ಶಾಸಕ ರೇವಣ್ಣ, ದಲಿತರನ್ನು ದೇಗುಲಕ್ಕೆ ಪ್ರವೇಶ ಮಾಡಿಸದೆ ಜಾತ್ರೆಯ ರಥ ಎಳೆದೊಯ್ದರು.
ಇದೀಗ ಪೆÇಲೀಸರ ಮೇಲೆ ಹಲ್ಲೆ ನಡೆಸಿರುವ ಆರೋಪದಲ್ಲಿ 30 ಜನ ಬಂಧಿತರಾಗಿದ್ದಾರೆ. ಅವರನ್ನು ಬಿಡಿಸಲು ಓಡಾಡುತ್ತಿರುವ ರೇವಣ್ಣ, ದಲಿತರಿಗೆ ನ್ಯಾಯ ಕೊಡಿಸುವ ಬಗ್ಗೆ ಯೋಚಿಸಿಲ್ಲ. ಬದಲಿಗೆ ದೇಗುಲ ಪ್ರವೇಶಕ್ಕೆ ಅರ್ಜಿ ಕೊಟ್ಟಿದ್ದೆ ತಪ್ಪು ಎಂಬಂತೆ ದಲಿತರನ್ನು ಈ ಘಟನೆಗೆ ಖಳನಾಯಕರನ್ನಾಗಿ ಮಾಡಿ ಆರೋಪ ಮಾಡುತ್ತಿದ್ದಾರೆ. ಅಲ್ಲದೆ ದಲಿತರ ಮೇಲೆ ದೌರ್ಜನ್ಯ ನಡೆಸಿದವರ ಪರವಾಗಿಯೇ ಜೆಡಿಎಸ್ ನಾಯಕತ್ವದಲ್ಲಿ ಜಿಲ್ಲೆಯ ಎಲ್ಲ ಶಾಸಕರು ಮತ್ತು ಬೆಂಬಿಲಿಗರೊಂದಿಗೆ ಏಪ್ರಿಲ್ 4 ರಂದು ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ, ಆದರೆ ಇವರು ಹಿಂದೆಂದೂ ಜನರ ಯಾವ ಪ್ರಶ್ನೆಗಳಿಗಾಗಿಯೂ ಬೀದಿಗಿಳಿದು ಹೋರಾಟ ಮಾಡಿದವರಲ್ಲ. ದೌರ್ಜನ್ಯದಿಂದ ದಿಕ್ಕು ತೋಚದ ದಲಿತರು ನ್ಯಾಯಕ್ಕಾಗಿ ಹವಣಿಸುತ್ತಿದ್ದಾರೆ. ಇತ್ತ ಘಟನೆ ಪ್ರಾರಂಬವಾದಾಗಿನಿಂದ ಹಿಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಚ್.ಸಿ.ಮಹದೇವಪ್ಪ ಮತ್ತು ಈಗ ಹಾಸನದವರೇ ಆದ ಎ.ಮಂಜು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದರೂ ಇದುವರೆಗೂ ಒಮ್ಮೆಯೂ ಸಿಗರನಹಳ್ಳಿಗೆ ಬೇಟಿ ನೀಡಿಲ್ಲ. ರಾಜ್ಯ ಸರ್ಕಾರ ಇವೆಲ್ಲವನ್ನು ನೋಡುತ್ತ ಜಾಣಕುರುಡು ಪ್ರದರ್ಶಿಸುತ್ತಿದೆ. ಸ್ವತಹಃ ದಲಿತರೇ ಆಗಿರುವ ಗೃಹ ಸಚಿವರಾದ ಜಿ.ಪರಮೇಶ್ವರ್ರವರು ಜಿಲ್ಲೆಗೆ ಭೇಟಿ ನೀಡಿದರು ಸಿಗರನಹಳ್ಳಿಗೆ ಹೋಗುವ ಮನಸುಮಾಡಲಿಲ್ಲ. ಮತ್ತು ಇತ್ತೀಚೆಗೆ ಏಪ್ರಿಲ್ 13 ರಂದು ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಕರೆದಿದ್ದ ಸಭೆಯಲ್ಲಿ ಸಿಗರನಹಳ್ಳಿಗೆ ನಾನು ಭೇಟಿಕೊಟ್ಟರೆ ಅದಕ್ಕೆ ರಾಜಕೀಯ ಬಣ್ಣ ಬರುತ್ತದೆಂದು ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜುರವರು ಬೇಜವಾಬ್ದಾರಿ ಮಾತುಗಳನ್ನಾಡುತ್ತಾರೆ. ಮತ್ತು ಒಂದು ವಾರದ ಗಡುವು ಪಡೆದು ಸಿಗರನಹಳ್ಳಿಯಲ್ಲಿ ಶಾಂತಿ ನೆಲಸುವಂತೆ ಮಾಡುತ್ತೇವೆಂದು ಬರವಸೆ ನೀಡಿ ಇಲ್ಲಿಯವರೆಗು ಯಾವುದೇ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಿಲ್ಲ.
ಇತ್ತೀಚೆಗೆ ಮಾನ್ಯ ಎಚ್.ಡಿ.ದೇವೇಗೌಡರು ಸಿಗರನಹಳ್ಳಿಯ ವಿಚಾರಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜುರವರೇ ನೇರ ಹೊಣೆ ಎಂದು ಹೇಳುವ ಮೂಲಕ ಸಿಗರನಹಳ್ಳಿ ಘಟನೆಯನ್ನು ತಮ್ಮ ರಾಜಕೀಯ ದಾಳವನ್ನಾಗಿಸಿಕೊಳ್ಳುತ್ತಿದ್ದಾರೆ ಮತ್ತು ದಲಿತರು ದೇವಾಲಯದ ಗರ್ಭಗುಡಿಗೆ ಪ್ರವೇಶ ಕೋರುತ್ತಿದ್ದಾರೆಂದು ಸುಳ್ಳು ಹೇಳುವ ಮೂಲಕ ಸಾಮಾಜಿಕ ಬಹಿಷ್ಕಾರದಂತಹ ಗಂಬೀರ ವಿಚಾರವನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ. ಅಲ್ಲದೆ ಈ ಘಟನೆಯಿಂದ ನಾನು ಯಾವ ಮುಖ ಹೊತ್ತು ಪಾರ್ಲಿಮೆಂಟಿಗೆ ಹೋಗಲಿ ಎಂದಿದ್ದಾರೆ. ನಿಜ ದೇವೇಗೌಡರ ಊರಾದ ಹರದನಹಳ್ಳಿಯ ಪಕ್ಕದಲ್ಲೇ ಇರುವ ಸಿಗರನಹಳ್ಳಿಯಲ್ಲಿ ಇಂದಿಗೂ ದಲಿತರಿಗೆ ದೇವಸ್ಥಾನ ಮತ್ತು ಸಾರ್ವಜನಿಕ ಸಮುದಾಯ ಭವನದಲ್ಲಿ ಪ್ರವೇಶ ನಿರಾಕರಿಸಲಾಗುತ್ತಿದೆಯಲ್ಲಾ ಎನ್ನುವ ವಿಚಾರಕ್ಕೆ ನಾಚಿಕೆಯಾಗಬೇಕಾಗಿತ್ತು ಆದರೆ ದಲಿತರು ದೇವಸ್ಥಾನ ಮತ್ತು ಸಮುದಾಯ ಭವನ ಪ್ರವೇಶ ಕೇಳಿದ್ದಕ್ಕೆ ಅವಮಾನವಾಗುತ್ತಿದೆ ಎಂದು ಹೇಳುತ್ತಿದುವುದು ಪ್ರಜಾಪ್ರಭುತ್ವವನ್ನು ಮತ್ತು ಭಾರತದ ಸಂವಿಧಾನವನ್ನು ಅಣಕಿಸುವಂತಿದೆ. ಎಚ್.ಡಿ.ದೇವೇಗೌಡರು ಸಿಗರನಹಳ್ಳಿಯ ದಲಿತರು ದೇವಸ್ಥಾನ ಪ್ರವೇಶ ಮತ್ತು ಸಮುದಾಯ ಭವನಕ್ಕೆ ಪ್ರವೇಶ ಕೇಳುತ್ತಿರುವ ವಿಚಾರದ ಕುರಿತು ಯಾವ ನಿಲುವನ್ನು ತಳೆಯುತ್ತಾರೆ ಎಂಬುದನ್ನು ಸ್ಪಷ್ಟಪಡಿಸಬೇಕಿದೆ.
ಅಂತಿಮವಾಗಿ ಸಿಗರನಹಳ್ಳಿಯ ದಲಿತರಿಗೆ ಮತ್ತು ಜಿಲ್ಲೆಯಲ್ಲಿ, ರಾಜ್ಯದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದೌರ್ಜನ್ಯದ ವಿರುದ್ಧ ನ್ಯಾಯ ಸಿಗಬೇಕಾಗಿದೆ. ಸಿಗರನಹಳ್ಳಿಯಲ್ಲಿ ಶಾಂತಿ ನೆಲೆಸಿ ಎರಡೂ ಸಮುದಾಯದವರು ಅನ್ಯೂನ್ಯವಾಗಿ ಸಹಜೀವನ ನಡೆಸುವಂತಹ ವಾತಾವರಣ ನಿರ್ಮಾಣವಾಗಬೇಕಿದೆ ಆ ಮೂಲಕ ದಲಿತರಿಗೆ ನ್ಯಾಯ ಮತ್ತು ಸಂವಿಧಾನಾತ್ಮಕ ಹಕ್ಕುಗಳನ್ನು ಖಾತ್ರಿ ಮಾಡಬೇಕಾದದ್ದು ಜವಾಬ್ದಾರಿಯುತ ಸರ್ಕಾರದ್ದು. ಈ ವಿಚಾರದಲ್ಲಿ ರಾಜ್ಯದ ಕಾಂಗ್ರೇಸ್ ಸರ್ಕಾರಕ್ಕೂ ಮತ್ತು ಜಿಲ್ಲೆಯಲ್ಲಿ ಹತ್ತಾರು ವರ್ಷಗಳಿಂದ ರಾಜಕೀಯ ಅಧಿಕಾರವನ್ನು ಅನುಭವಿಸುತ್ತಿರುವ “ಜಾತ್ಯಾತೀತ”ಜನತಾ ದಳದ ನಾಯಕರಿಗೂ ಯಾವುದೇ ವ್ಯತ್ಯಾಸಗಳು ಗೋಚರಿಸುತ್ತಿಲ್ಲ.
ಕೂಡಲೇ ಜಿಲ್ಲಾಡಳಿತ ಮತ್ತು ರಾಜ್ಯ ಸರ್ಕಾರ ಗಂಬೀರ ಮಧ್ಯಪ್ರವೇಶ ನಡೆಸಿ ಸಿಗರನಹಳ್ಳಿ ದಲಿತರಿಗೆ ದೇವಸ್ಥಾನ ಮತ್ತು ಸಮುದಾಯ ಭವನಕ್ಕೆ ಪ್ರವೇಶ ಕೊಡಿಸಬೇಕು ಮತ್ತು ದಲಿತರ ಮೇಲೆ ದೌರ್ಜನ್ಯ ನಡೆಸಿದವರ ವಿರುದ್ಧ ಮತ್ತು ಅದಕ್ಕೆ ಕುಮ್ಮಕ್ಕು ನೀಡಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಿಪಿಐ(ಎಂ), ದಲಿತ ಹಕ್ಕುಗಳ ಸಮಿತಿ ಮತ್ತು ಎಲ್ಲಾ ದಲಿತ ಮತ್ತು ಪ್ರಗತಿಪರ ಸಂಘಟನೆಗಳೊಂದಿಗೆ ಮೇ ತಿಂಗಳಲ್ಲಿ ರಾಜ್ಯದ ಎಲ್ಲಾ ಭಾಗಗಳಿಂದ “ಸಿಗರನಹಳ್ಳಿ ಚಲೋ” ಹೋರಾಟವನ್ನು ನಡೆಸಲು ನಿರ್ಧರಿಸಲಾಗಿದೆ.
ಜಿ.ವಿ. ಶ್ರೀರಾಮರೆಡ್ಡಿ, ರಾಜ್ಯ ಕಾರ್ಯದರ್ಶಿ, ಮಾಜಿ ಶಾಸಕರು, ಸಿಪಿಐ(ಎಂ)
ಎಸ್. ವರಲಕ್ಷ್ಮಿ, ರಾಜ್ಯ ಕಾ. ಮಂಡಳಿ ಸದಸ್ಯರು, ಸಿಪಿಐ(ಎಂ)
ಧರ್ಮೇಶ್, ಜಿಲ್ಲಾ ಕಾರ್ಯದರ್ಶಿ, ಸಿಪಿಐ(ಎಂ), ಹಾಸನ
ನಾರಾಯಣದಾಸ್, ಹಿರಿಯ ದಲಿತ ಮುಖಂಡರು, ಹಾಸನ
ವಿಜಯಕುಮಾರ್ ಸಿಗರನಹಳ್ಳಿ, ಸಿಗರನಹಳ್ಳಿ ಗ್ರಾಮಸ್ಥರು ಮತ್ತು ಪತ್ರಕರ್ತರು
ಪೃಥ್ವಿ ಎಂ.ಜಿ, ಸಂಚಾಲಕರು, ದಲಿತ ಹಕ್ಕುಗಳ ಸಮಿತಿ, ಹಾಸನ ಜಿಲ್ಲೆ
ತಾಯಮ್ಮ, ಸಿಗರನಹಳ್ಳಿ ಗ್ರಾಮಸ್ಥರು
ಪದ್ಮಮ್ಮ, ಸಿಗರನಹಳ್ಳಿ ಗ್ರಾಮಸ್ಥರು
ರಾಜು, ಸಿಗರನಹಳ್ಳಿ ಗ್ರಾಮಸ್ಥರು
ನಂಜುಂಡ, ಸಿಗರನಹಳ್ಳಿ ಗ್ರಾಮಸ್ಥರು
ವಿಜಯಕುಮಾರ್, ಅಧ್ಯಕ್ಷರು, ಮಾದಿಗ ದಂಡೋರ, ಹಾಸನ ಜಿಲ್ಲೆ
ಹೆಚ್.ಆರ್. ನವೀನ್ಕುಮಾರ್, ಜಿಲ್ಲಾಧ್ಯಕ್ಷರು, ಕರ್ನಾಟಕ ಪ್ರಾಂತ ರೈತ ಸಂಘ, ಹಾಸನ ಜಿಲ್ಲೆ
ಪಿಡಿಎಫ್ ಆವೃತ್ತಿಗಾಗಿ ಕ್ಲಿಕ್ ಮಾಡಿ : Sigaranahalli Protest