ಉಡುಪಿ ಜಿಲ್ಲೆಯ ಹೆಬ್ರಿ ಬಳಿಯ ಸಂತೆಕಟ್ಟೆ ಎಂಬಲ್ಲಿ ದನದ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದ ಬಿಜೆಪಿ ಕಾರ್ಯುಕರ್ತ ಪ್ರವೀಣ ಪೂಜಾರಿ ಎಂಬವರನ್ನು ಬಜರಂಗ ದಳ ಮತ್ತು ವಿಶ್ವ ಹಿಂದೂ ಪರಿಷತ್ ಕಾರ್ಯಕರ್ತರು ಆಗಸ್ಟ್ 18ರಂದು ಮಾರಣಾಂತಿಕ ಹಲ್ಲೆಗೈದು ಹತ್ಯೆ ಮಾಡಿದ್ದು, ಘಟನೆಯನ್ನು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸಿದೆ. ಮತ್ತೋರ್ವ ಅಕ್ಷಯ ದೇವಾಡಿಗ ಎಂಬವರು ತೀವ್ರವಾಗಿ ಗಾಯಗೊಂಡಿದ್ದಾರೆ. ಶಾಂತಿಯನ್ನು ಬಯಸುವ ಕರಾವಳಿ ಜಿಲ್ಲೆಯ ಜನರು ಇದನ್ನು ಪ್ರತಿಭಟಿಸಬೇಕೆಂದು ಸಿಪಿಐ(ಎಂ) ಮನವಿ ಮಾಡುತ್ತದೆ.
ಹಿಂದೆ ಉಡುಪಿ ಜಿಲ್ಲೆಯಲ್ಲಿಯೇ ದನದ ವ್ಯಾಪಾರ ಮಾಡುತ್ತಿದ್ದ ಪಾಟಾಳಿ ಕೃಷ್ಣಯ್ಯ ಎಂಬವರನ್ನು ‘ಗೋ ರಕ್ಷಕರು’ ಎಂದು ಘೋಷಿಸಿಕೊಂಡ ಕೆಲವು ರಕ್ಕಸರು ಹತ್ಯೆ ನಡೆಸಿರುವುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕು. ಪೊಲೀಸ್ ಅಧಿಕಾರಿಗಳು ಆರೋಪಿಗಳನ್ನು ಬಂಧಿಸಿರುವುದು ಸಿಪಿಐ(ಎಂ) ಅಭಿನಂದಿಸುತ್ತದೆ. ಅಪರಾಧಿಗಳಿಗೆ ತೀವ್ರ ಶಿಕ್ಷೆ ಆಗುವಂತೆ ಹಾಗೂ ಮುಂದೆ ಇಂತಹ ಘಟನೆಗಳು ನಡೆಯದಂತೆ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಭಾರತ ಕಮ್ಯುನಿಷ್ಟ್ ಪಕ್ಷ (ಮಾರ್ಕ್ಸ್ ವಾದಿ) ಉಡುಪಿ ಜಿಲ್ಲಾ ಸಮಿತಿ ಆಗ್ರಹಿಸಿದೆ.
ಘಟನೆಯನ್ನು ಖಂಡಿಸಿ ಸಿಪಿಐ(ಎಂ) ಪಕ್ಷದಿಂದ ಮತ್ತು ಡಿವೈಎಫ್ಐ ಸಂಘಟನೆಯಿಂದ ಕುಂದಾಪುರದಲ್ಲಿ ಆಗಸ್ಟ್ 19ರಂದು ಪ್ರತಿಭಟನೆ ನಡೆಸಿದ್ದು, ಪ್ರವೀಣ ಪೂಜಾರಿ ನಿಧನದಿಂದ ಆಘಾತಕ್ಕೆ ಒಳಗಾದ ಅವರ ಕುಟುಂಬದವರಿಗೆ ಹಾಗೂ ಹಿತೈಷಿಗಳಿಗೆ ಸಿಪಿಐ(ಎಂ) ಸಂತಾಪ ಸೂಚಿಸಿದ್ದು, ಉಸ್ತುವಾರಿ ಸಚಿವರು ಮತ್ತು ರಾಜ್ಯ ಸರಕಾರ ಮಧ್ಯಪ್ರವೇಶಿಸಿ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದೆ.