ಸೆಪ್ಟೆಂಬರ್ 8, 1938
ನವ್ಯ ಸಾಹಿತ್ಯ ಜನ ಸಮುದಾಯದ ವಿರುದ್ಧವಾಗಿ, ಕೆಲವೇ ಜನರ ವೈಯಕ್ತಿಕ ಅನುಭವಗಳ, ಸ್ವಂತಿಕೆಯ ಅಭಿವ್ಯಕ್ತಿಯಾಗಿ ಪರಿಣಮಿಸಿತ್ತು. ಅದರ ವಿರುದ್ಧ ಎದ್ದು ನಿಂತು ಧೈರ್ಯವಾಗಿ ಸಾಹಿತ್ಯದ ಮೂಲಕ ಅಭಿವ್ಯಕ್ತಿಸಿದ, ನಂತರ ಗುಡುಗಿನಂತೆ ಮೊಳಗಿಸಿದ ಮೊದಲ ಬಂಡಾಯಗಾರ ಪೂರ್ಣಚಂದ್ರ ತೇಜಸ್ವಿ. ನವ್ಯ ಸಾಹಿತ್ಯದ ವಿರುದ್ಧ ಅಂದಿನಿಂದ ಆರಂಭವಾದ ತೇಜಸ್ವಿಯವರ ಬಂಡಾಯ ಮುಂದಿನ ವರ್ಷಗಳಲ್ಲಿ, ಅವರ ಸಾಹಿತ್ಯ ಕೃತಿಗಳ ಮೂಲಕವೇ ಬೆಳೆಯುತ್ತದೆ. ಕೇವಲ ಘೋಷಣೆಯಾಗದೆ ಬದುಕಿನ ಸ್ವರೂಪ ಮತ್ತು ಸಾಹಿತ್ಯ ಮತ್ತು ಚಳುವಳಿಗಳ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತುತ್ತಾರೆ.
ತೇಜಸ್ವಿಯವರು ತಮ್ಮ ಬರಹಗಳ ಮೂಲಕ ಮುಂದಿನ ಸಾಹಿತಿಗಳಿಗೆ ಮಾದರಿಯಾದದ್ದಲ್ಲದೆ ಅಂದಿನ ಕರ್ನಾಟಕದ ತಮ್ಮ ಜೊತೆಗಾರರೊಡನೆ ಚಳುವಳಿಗಳಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರ ಮೂಲಕವೂ ಬದುಕು – ಚಳುವಳಿ – ಬರಹಗಳ ನಡುವಣ ಸಂಬಂಧಕ್ಕೆ ಮಾದರಿ ಯಾದರು. ವಿಜ್ಞಾನವನ್ನು ಸಾಹಿತ್ಯದ ವಸ್ತುವಾಗಿ ಪರಿಣಾಮಕಾರಿಯಾಗಿ, ಆಕರ್ಷಕವಾಗಿ ಬಳಸಿಕೊಳ್ಳುವ ಮೂಲಕ ತೇಜಸ್ವಿಯವರು ಕನ್ನಡ ಸಾಹಿತ್ಯದ ಗಡಿಗೆರೆಗಳನ್ನು ವಿಸ್ತರಿಸಿದರು. ಸಾಹಿತ್ಯಕ್ಕೊಂದು ಹೊಸ ವಸ್ತುವನ್ನು ದೊರಕಿಸಿಕೊಟ್ಟುದಲ್ಲದೆ ಕನ್ನಡದ ಓದುಗರ ಸಮೂಹವನ್ನು ತಮ್ಮೊಡನೆ ವಿಜ್ಞಾನದ ಅನ್ವೇಷಣೆಯ ಹಾದಿಯಲ್ಲಿ ಕೊಂಡೊಯ್ದು ವೈಜ್ಞಾನಿಕ ಮನೋಭಾವದ ಬೆಳವಣಿಗೆಗೆ, ವಿಜ್ಞಾನದ ಜನಪ್ರಿಯತೆಗೆ ಕಾರಣರಾಗಿದ್ದಾರೆ.
ಹತ್ತಾರು ಸಾವಿರ ವಿಜ್ಞಾನ ಬೋಧಕ, ಪ್ರಾಧ್ಯಾಪಕರುಗಳಿಂದ ಸಾಧ್ಯವಾಗದ ಕೆಲಸವನ್ನು ಇವರು ತಮ್ಮ ಕರ್ವಾಲೊ, ಚಿದಂಬರ ರಹಸ್ಯ, ಅಲೆಮಾರಿಯ ಅಂಡಮಾನ್, ಮಿಸ್ಸಿಂಗ್ ಲಿಂಕ್ ಮೊದಲಾದ ಕೃತಿಗಳಿಂದ ಸಾಧಿಸಿದ್ದಾರೆ. `ಕರ್ವಾಲೋ’ನಂತಹ ಕಾದಂಬರಿಗಳು ಕನ್ನಡ ಸಾಹಿತ್ಯ ಲೋಕದಲ್ಲಿ ಒಂದು ಹೊಸ ಅಲೆಯನ್ನೇ ಮೂಡಿಸಬಹುದಾದ ಸಾಧ್ಯತೆಯುಳ್ಳ ಬರವಣಿಗೆಗಳು.