ಕಾಶ್ಮೀರ ಕಣಿವೆಯಾದ್ಯಂತ, ಬಹುಶಃ ಸ್ವಾತಂತ್ರ್ಯದ ನಂತರ ಮೊದಲ ಬಾರಿಗೆ ಇದ್-ಉಲ್-ಜುಹಾ ಬಕ್ರೀದ್ನ ದಿನ ಕರ್ಪ್ಯೂ ಹೇರಿರುವುದು ದುರದೃಷ್ಟಕರ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಖೇದ ವ್ಯಕ್ತಪಡಿಸಿದೆ. ಶ್ರೀನಗರದಲ್ಲಿ ಎಲ್ಲ ಪ್ರಮುಖ ಮಸೀದಿಗಳನ್ನು ಮುಚ್ಚಿದ್ದರಿಂದ ಪಾರಂಪರಿಕ ಈದ್ ಆಚರಣೆ ಮತ್ತು ಪ್ರಾರ್ಥನೆಗಳಿಗೆ ತಡೆಯುಂಟಾಗಿದೆ. ಕಾಶ್ಮೀರ ಕಣಿವೆಯಾದ್ಯಂತ ಪ್ರತಿ ಈದ್ನ ದಿನ ಈದ್ಗಾ ಮೈದಾನಗಳಿಗೆ ಪ್ರಾರ್ಥನೆ ಸಲ್ಲಿಸಲು ನಂಬಿಕೆಯಿರುವವರಿಗೆ ಬಿಡದಿರುವುದು ಅಭೂತಪೂರ್ವ ಸಂಗತಿ ಎಂದು ಅದು ಹೇಳಿದೆ.
ಇದುವರೆಗೆ ಬಂದ ವರದಿಗಳ ಪ್ರಕಾರ ಭದ್ರತಾ ಪಡೆಗಳೊಂದಿಗೆ ತಿಕ್ಕಾಟದಲ್ಲಿ ಮತ್ತೆರಡು ಜೀವಗಳು ಹೋಗಿವೆ, 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಸರ್ವಪಕ್ಷ ನಿಯೋಗ ದಿಲ್ಲಿಗೆ ಮರಳಿದ ಮೇಲೆ ಒಂದು ಹೇಳಿಕೆಯನ್ನು ಅಂಗೀಕರಿಸಿತು, ಅದನ್ನು ಸರಕಾರ ಪ್ರಕಟಿಸಿತು. ಅದರಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳು ಸಂಬಂಧಪಟ್ಟ ಎಲ್ಲರೊಂದಿಗೆ ಒಂದು ರಾಜಕೀಯ ಸಂವಾದವನ್ನು ಆರಂಭಿಸಲು ಮುತುವರ್ಜಿ ವಹಿಸುತ್ತವೆ ಎಂದು ಸ್ಪಷ್ಟವಾಗಿ ಹೇಳಲಾಗಿತ್ತು ಎಂಬುದನ್ನು ಪೊಲಿಟ್ಬ್ಯುರೊ ಈ ಸಂದರ್ಭದಲ್ಲಿ ನೆನಪಿಸಿದೆ. ಕಾಶ್ಮೀರ ಶಾಂತಿ ಮತ್ತು ಸಾಮಾನ್ಯ ಸ್ಥಿತಿಗೆ ಮರಳುವಂತಾಗುವ ಪ್ರಕ್ರಿಯೆ ಇದು ಎಂದು ಅದು ಅಭಿಪ್ರಾಯ ಪಟ್ಟಿದೆ.
ಇದರ ಬದಲು, ಕೇಂದ್ರ ಸರಕಾರ ಇನ್ನಷ್ಟು ಭದ್ರತಾ ಪಡೆಗಳನ್ನು ಕಳಿಸಿದೆ, ಪರಿಸ್ಥಿತಿಯನ್ನು ಮತ್ತಷ್ಟು ಕ್ಲಿಷ್ಟಗೊಳಿಸುವ ಮತ್ತು ಶಾಂತಿ ಮತ್ತು ಸಾಮಾನ್ಯ ಸ್ಥಿತಿಗೆ ಮರಳುವ ಪ್ರಕ್ರಿಯೆಯನ್ನು ನಿಧಾನಗೊಳಿಸ ಬಹುದಾದ ಇಂತಹ ಕ್ರಮಗಳನ್ನು ಕೈಗೊಂಡಿದೆ. ರಾಷ್ಟ್ರೀಯ ಸಾರ್ವಭೌಮತೆಯ ವಿಷಯದಲ್ಲಿ ರಾಜಿ ಸಾಧ್ಯವಿಲ್ಲವಾದರೂ, ಕಾಶ್ಮೀರದಲ್ಲಿ ಸಾಮಾನ್ಯ ಸ್ಥಿತಿ ಮರಳುವಂತಾಗುವುದು ಸಂಬಂಧಪಟ್ಟ ಎಲ್ಲರೊಂದಿಗೆ ಒಂದು ರಾಜಕೀಯ ಸಂವಾದವನ್ನು ಆರಂಭಿಸುವುದರ ಮೇಲೆ ನಿಂತಿದೆ ಎಂದಿರುವ ಸಿಪಿಐ(ಎಂ) ಈ ಪ್ರಕ್ರಿಯಯ ಮೂಲಕಷ್ಟೇ ಜನತೆಯ ವಿಶ್ವಾಸ ಗಳಿಸಲು ಸಾಧ್ಯ ಎಂದಿದೆ.
ಸರ್ವಪಕ್ಷ ನಿಯೋಗ ಒಮ್ಮತದಿಂದ ಒಪ್ಪಿರುವಂತೆ ಸಂಬಂಧಪಟ್ಟ ಎಲ್ಲರೊಂದಿಗೆ ರಾಜಕೀಯ ಸಂವಾದವನ್ನು ಜತೆಗೆ ಎಲ್ಲರೂ ಒಪ್ಪಿಕೊಂಡಿರುವ ವಿಶ್ವಾಸ ಕುದುರಿಸುವ ಕ್ರಮಗಳನ್ನು ತಕ್ಷಣವೇ ಆರಂಭಿಸಬೇಕು ಎಂಬ ಬೇಡಿಕೆಯನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಪುನರುಚ್ಚರಿಸಿದೆ.