ಹಾಸನ, ಸೆಪ್ಟಂಬರ್ 24: ಸಾರ್ವಜನಿಕ ಪಡಿತರ(ರೇಷನ್) ವಿತರಣೆಯಲ್ಲಿ ರಾಜ್ಯ ಸರ್ಕಾರವು ನೂತನವಾಗಿ ಜಾರಿಗೊಳಿಸಿರುವ ‘ಕೂಪನ್’ ಪದ್ದತಿ ಅತ್ಯಂತ ಅವೈಜ್ಞಾನಿಕ ಮತ್ತು ಜನವಿರೊಧಿಯಾಗಿದೆ. ರೇಷನ್ ವಿತರಣೆಯ ಸಂದರ್ಭದಲ್ಲಿ ಆಗುತ್ತಿರುವ ತಾಂತ್ರಿಕ ಅಡಚಣೆ, ಅನಗತ್ಯ ವಿಳಂಬ, ಗಂಟೆಗಟ್ಟಲೆ ಕ್ಯೂ ನಿಲ್ಲುವುದು ಇಂತಹ ಹತ್ತಾರು ಸಮಸ್ಯೆಗಳಿಗೆ ಕೂಪನ್ ವ್ಯವಸ್ಥೆ ರಾಮಬಾಣವಾಗಲಿದೆ ಎಂದು ಹೇಳಿ ಜಾರಿಗೆ ತಂದ ಈ ‘ಕೂಪನ್’ ಪದ್ದತಿ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ತಳ್ಳುತ್ತಿದೆ. ರೇಷನ್ ಪಡೆಯಲು ರೇಷನ್ ಡಿಪೋಗಳಲ್ಲಿ ಕ್ಯೂ ನಿಲ್ಲುತ್ತಿದ್ದ ಗ್ರಾಹಕರು ಈಗ ಇದರ ಜೊತೆಗೆ ‘ಕೂಪನ್’ ಪಡೆಯಲೂ…, ಕ್ಯೂ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕನಿಷ್ಟ 3 ರಿಂದ 4 ದಿನಗಳ ಕಾಲ ‘ಕೂಪನ್’ ಮತ್ತು ರೇಷನ್‍ಗಾಗಿಯೇ ತಮ್ಮ ಕೆಲಸಗಳನ್ನು ಬಿಟ್ಟು ಓಡಾಡಬೇಕಾಗಿದೆ.
ಜನಸಾಮಾನ್ಯರ ಆಹಾರದ ಕೊರತೆಯನ್ನು ನೀಗಿಸಿ ಆಹಾರ ಭಧ್ರತೆಯನ್ನು ಒದಗಿಸಲು ಪೂರಕವಾಗಿ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲಪಡಿಸಲು ಬೇಕಾದ ಕ್ರಮಗಳನ್ನು ತೆಗೆದುಕೊಳ್ಳಬೇಕಾದ ಸರ್ಕಾರ ಬದಲಿಗೆ ಜನರನ್ನು ರೇಷನ್ ವ್ಯವಸ್ಥೆಯಿಂದ ದೂರಮಾಡುವ ಹಾಗೂ ಆಹಾರದ ಕೊರತೆಯಿಂದ ನಲುಗುವಂತೆ ಮಾಡುವ ಹುನ್ನಾರದ ಭಾಗವಾಗಿ ಈ ಅವೈಜ್ಞಾನಿಕ ‘ಕೂಪನ್’ ಪದ್ದತಿ ಜಾರಿಮಾಡಿದೆ. ಬಡವರ ಬದುಕಿಗೆ ಆಶಾಕಿರಣವಾಗಿರುವ ಈ ಪಡಿತರ ವ್ಯವಸ್ಥೆಯನ್ನು ಹಂತಹಂತವಾಗಿ ನಿಷ್ಕ್ರಿಯಗೊಳಿಸಿ ಮುಂದೊಂದು ದಿನ ಈ ವ್ಯವಸ್ಥೆಯನ್ನೇ ಸಂಪೂರ್ಣವಾಗಿ ನಾಶಮಾಡುವ ವ್ಯವಸ್ಥಿತ ಹುನ್ನಾರ ಇಂತಹ ಯೋಜನೆಗಳ ಹಿಂದೆ ಇದೆ. ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಕಾಂಗ್ರೇಸ್ ಸರ್ಕಾರಗಳು ಒಂದಕ್ಕೊಂದು ಪೂರಕವಾಗಿಯೇ ಕೆಲಸಮಾಡುತ್ತಿದ್ದು ಜನರಿಗೆ ಆಹಾರ ಭದ್ರತೆ ಕಸಿದುಕೊಳ್ಳುವಂತಹ ಜನವಿರೋಧಿ ನೀತಿಗಳನ್ನು ಜಾರಿಮಾಡುತ್ತಿವೆ.
ಜಿಲ್ಲೆಯ ಯಾವುದೇ ರೇಷನ್ ಡಿಪೋಗಳಿಗೆ ಹೋದರೂ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಕಣ್ಣಿಗೆ ರಾಚುವಂತೆ ಕಾಣುತ್ತವೆ. ಅಳತೆಯಲ್ಲಿ ಮೋಸ, ಡಿಜಿಟಲ್ ತೂಕದ ಯಂತ್ರವನ್ನು ಬಳಸದಿರುವುದು, ನಿಗದಿ ಪಡಿಸಿದಷ್ಟು ರೇಷನನ್ನು ಗ್ರಾಹಕರಿಗೆ ನೀಡದಿರುವುದು, ನಿಗದಿಪಡಿಸಿದಷ್ಟು ದರಕ್ಕಿಂತ ಹೆಚ್ಚು ದರವನ್ನು ಪಡೆಯುವುದು, ಯಾವುದೇ ರೇಷನ್ ಡಿಪೋದಲ್ಲಿಯೂ ನಿಗದಿತ ಸಮಯಕ್ಕೆ ರೇಷನ್ ವಿತರಿಸದಿರುವುದು ಮತ್ತು ಯಾವ ಡಿಪೋಗಳಲ್ಲಿಯೂ ಸರ್ಕಾರ ನಿಗದಿಪಡಿಸಿದ ದರದ ಪಟ್ಟಿಯನ್ನು ಗ್ರಾಹಕರಿಗೆ ತಿಳುವಳಿಕೆ ನೀಡುವ ಸಲುವಾಗಿ ಪ್ರದರ್ಶಿಸದಿರುವುದು, ಪ್ರತಿ ಕೂಪನ್‍ಗೆ ಗ್ರಾಹಕರಿಂದ 10 ರೂ ಪಡೆಯುವುದು ಹೀಗೆ ಪಟ್ಟಿ ಮಾಡುತ್ತಾ ಹೋದರೆ ಬೆಳೆಯುತ್ತಾ ಹೋಗುತ್ತದೆ.
ಈ ಹಿನ್ನೆಲೆಯಲ್ಲಿ ಜನರ ಸಮಸ್ಯೆಗಳಿಗೆ ಕಾರಣವಾಗಿರುವ ಅವೈಜ್ಞಾನಿಕ ‘ಕೂಪನ್’ ಪದ್ದತಿಯನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಹಾಗೂ ಈ ಕೆಳಕಂಡ ಬೇಡಿಕೆಗಳಿಗಾಗಿ ಆಗ್ರಹಿಸಿ ಸಿಪಿಐ(ಎಂ) ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸಲ್ಲಿಸುತ್ತಿರುವ ಮನವಿ.
ಬೇಡಿಕೆಗಳು
- ಪಡಿತರ ವ್ಯವಸ್ಥೆಯಲ್ಲಿನ ಕೂಪನ್ ಪದ್ದತಿಯನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು.
- ಪಕ್ಕದ ರಾಜ್ಯ ಕೇರಳಾದಲ್ಲಿ ಸಿಪಿಐ(ಎಂ) ನೇತೃತ್ವದ ಎಡರಂಗ ಸರ್ಕಾರದ ನೇತೃತ್ವದಲ್ಲಿ ಮಾವಳ್ಳಿ ಸ್ಟೋರ್‍ಗಳ ಮೂಲಕ 19 ಅಗತ್ಯ ವಸ್ತುಗಳನ್ನು ರಿಯಾಯಿತಿ ದರದಲ್ಲಿ ನೀಡುವಂತೆ ಕರ್ನಾಟಕ ರಾಜ್ಯದಲ್ಲಿಯೂ ನೀಡಬೇಕು.
- ರಾಜ್ಯದ ಎಲ್ಲಾ ರೇಷನ್ ಡಿಪೋಗಳಲ್ಲಿ ಅಕ್ಕಿ, ಸಕ್ಕರೆ, ಸೀಮೆಎಣ್ಣೆಗಳ ಜೊತೆಗೆ ಅಗತ್ಯ ದಿನಬಳಕೆಯ 19 ವಸ್ತುಗಳನ್ನು ಸರ್ಕಾರವೇ ರಿಯಾಯಿತಿ ದರದಲ್ಲಿ ನೀಡಬೇಕು. ಎಲ್ಲಾ ರೇಷನ್ ಡಿಪೋಗಳಲ್ಲೂ ಡಿಜಿಟಲ್ ತೂಕದ ಯಂತ್ರವನ್ನು ಬಳಸಬೇಕು.
- ಎಪಿಎಲ್, ಬಿಪಿಎಲ್, ಅಂತ್ಯೋದಯದಂತಹ ತಾರತಮ್ಯದ ನೀತಿಯನ್ನು ಕೈಬಿಟ್ಟು ಎಲ್ಲರಿಗೂ ಒಂದೇ ರೀತಿಯ ರೇಷನ್ ಕಾರ್ಡ್ ವಿತರಿಸಬೇಕು.
- ಎಲ್ಲಾ ಕುಟುಂಬಗಳಿಗೂ 35 ಕೆಜಿ ಅಕ್ಕಿಯನ್ನು ನೀಡಬೇಕು. ಎಲ್ಲಾ ಡಿಪೋಗಳಲ್ಲೂ ತಿಂಗಳಪೂರ ರೇಷನ್ ವಿತರಿಸಬೇಕು.
- ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಬಲಪಡಿಸಿ ಸಾರ್ವತ್ರೀಕರಣಗೊಳಿಸಲು ಕ್ರಮಕೈಗೊಳ್ಳಬೇಕು.
ಹೇಮಾವತಿ ಪ್ರತಿಮೆ ಬಳಿಯಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಛೇರಿ ಆವರಣ ತಲುಪಿದ ಪ್ರತಿಭಟನಾಕಾರರು ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆಯ ಕಛೇರಿ ಎದುರು ಪ್ರತಿಭಟನೆ ನಡೆಸಿ ಅಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳಿಗೆ, ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವರು ಮತ್ತು ಉನ್ನತ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಧರ್ಮೇಶ್, ಕಾರ್ಯದರ್ಶಿ: ಜಿಲ್ಲಾ ಸಂಘಟನಾ ಸಮಿತಿ, ಹಾಸನ
ಎಚ್.ಆರ್.ನವೀನ್‍ಕುಮಾರ್, ಕಾರ್ಯದರ್ಶಿ : ಸ್ಥಳಿಯ ಸಮಿತಿ, ಹಾಸನ