ಸಂಸತ್ತಿಗೆ ನೀಡಿದ ಭರವಸೆಯ ಉಲ್ಲಂಘನೆ ಇದಾಗಿದೆ
ಪ್ರಧಾನ ಮಂತ್ರಿಗಳು ಹವಾಮಾನ ಬದಲಾವಣೆ ಕುರಿತು ಇತ್ತೀಚೆಗೆ ಪ್ಯಾರಿಸ್ನಲ್ಲಿ ಆದ ಒಪ್ಪಂದವನ್ನು ಭಾರತ ಅಕ್ಟೋಬರ್ 2ರಂದು ಗಾಂಧಿ ಜಯಂತಿಯ ದಿನ ಅನುಮೋದಿಸುವುದಾಗಿ ಸಪ್ಟಂಬರ್ 25ರಂದು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿಣಿಯ ಸಭೆಯಲ್ಲಿ ಪ್ರಕಟಿಸಿದ್ದಾರೆ. ಇದು ಆಶ್ಚರ್ಯಕರ ಸಂಗತಿ ಮತ್ತು ಈ ಬಿಜೆಪಿ ಸರಕಾರ ಭಾರತದ ಸಂಸತ್ತಿಗೆ ನೀಡಿದ ಭರವಸೆಯ ಉಲ್ಲಂಘನೆಯೂ ಆಗಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಖಂಡಿಸಿದೆ.
ಇದು ಭಾರತದ ಹಿತದಲ್ಲಿಲ್ಲ, ಮತ್ತು ದೇಶದ ಬಹುಪಾಲು ಜನಗಳ ಒಂದು ಉತ್ತಮ ಬದುಕಿಗೆ ಅಗತ್ಯವಾದ ಇಂಧನ ಒದಗಿಸಲು ಅಡ್ಡಿಯಾಗುತ್ತದೆ ಎಂದು ಅದು ಹೇಳಿದೆ. ವಾಸ್ತವವಾಗಿ ಸರಕಾರ ಈ ವಿಷಯದಲ್ಲಿ ಅಮೆರಿಕಾದ ಒತ್ತಡಗಳಿಗೆ ಶರಣಾಗಿ ತಿಪ್ಪರಲಾಗ ಹಾಕಿದೆ ಎಂದು ಸಿಪಿಐ(ಎಂ) ಹೇಳಿದೆ.
ಪ್ಯಾರಿಸ್ ಶೃಂಗ ಸಭೆ ಮುಗಿದ ಕೂಡಲೇ ಸಂಸತ್ತಿನಲ್ಲಿ ಈ ಬಗ್ಗೆ ಪ್ರಶ್ನೆ ಬಂದಾಗ, ಭಾರತ ಪರಿಸರ, ಅರಣ್ಯಗಳು ಮತ್ತು ಇಂಧನ ಕುರಿತ ರಾಷ್ಟ್ರೀಯ ಕಾನೂನುಗಳನ್ನು ಪರೀಕ್ಷಿಸಿ ಈ ಒಪ್ಪಂದದ ವಿವಿಧ ಅಂಶಗಳನ್ನು ಎಷ್ಟರ ಮಟ್ಟಿಗೆ ಅನುಷ್ಠಾನಗೊಳಿಸಲು ಸಾಧ್ಯ ಎಂದು ನಿರ್ಧರಿಸುವ ವರೆಗೆ ಅನುಮೋದನೆ ಕೊಡುವುದಿಲ್ಲ, ಹವಾಮಾನ ಬದಲಾವಣೆ ಕುರಿತ ಕೊಪನ್ಹೆಗನ್ ಶೃಂಗ ಸಭೆಯ ನಂತರ ಭಾರತದ ಸಂಸತ್ತು ಈ ಬಗ್ಗೆ ದೀರ್ಘವಾಗಿ ಚರ್ಚಿಸಿದ ಸಂದರ್ಭದಲ್ಲಿ ಹಾಕಿದ್ದ ‘ಕೆಂಪು ಗೆರೆ’ಗಳನ್ನು ಈ ಬಿಜೆಪಿ ಸರಕಾರ ದಾಟುವುದಿಲ್ಲ ಎಂದು ಭರವಸೆ ನೀಡಲಾಗಿತ್ತು.
ಅಲ್ಲದೆ ಭಾರತ ಈ ಪ್ಯಾರಿಸ್ ಒಪ್ಪಂದವನ್ನು ಅನುಮೋದಿಸಬೇಕು ಎಂಬ ಸೂಚನೆಯನ್ನು ಇತ್ತೀಚೆಗೆ ನಡೆದ ಜಿ-20 ಶೃಂಗ ಸಭೆಯ ಸಂದರ್ಭದಲ್ಲೂ ತಳ್ಳಿ ಹಾಕಲಾಗಿತ್ತು. ಭಾರತಕ್ಕಿಂತ ಬಹಳ ಹೆಚ್ಚು ಇಂಗಾಲ ಉತ್ಸರ್ಜನೆ ಮಾಡುವ ಯುರೋಪಿಯನ್ ಒಕ್ಕೂಟ ಮತ್ತು ಇತರ ಅಭಿವೃದ್ಧಿ ಹೊಂದಿರುವ ದೇಶಗಳೇ ಇದುವರೆಗೆ ಈ ಒಪ್ಪಂದವನ್ನು ಅನುಮೋದಿಸಿಲ್ಲ ಮತ್ತು ಸ್ಯೋಲ್ನಲ್ಲಿ ನಡೆದ ಎನ್ಎಸ್ಜಿ(ಪರಮಾಣು ಪೂರೈಕೆದಾರರ ಗುಂಪು)ಯ ಸಭೆಯಲ್ಲೂ ಈ ಒಪ್ಪಂದವನ್ನು ಅನುಮೋದಿಸುವುದನ್ನು ತನಗೆ ಎನ್ಎಸ್ಜಿ ಸದಸ್ಯತ್ವ ಕೊಡುವ ಪ್ರಶ್ನೆಯೊಂದಿಗೆ ತಳಕು ಹಾಕಿತ್ತು ಎಂಬ ಸಂಗತಿಗಳತ್ತ ಸಿಪಿಐ(ಎಂ) ಗಮನ ಸೆಳೆದಿದೆ.
ಜೂನ್ನಲ್ಲಿ ಒಬಾಮ-ಮೋದಿ ಭೇಟಿಯ ನಂತರ ಭಾರತದ ವಿದೇಶಾಂಗ ಕಾರ್ಯದರ್ಶಿ, ಭಾರತದ ರಾಷ್ಟ್ರೀಯ ಕಾನೂನುಗಳನ್ನು ಪರೀಕ್ಷಿಸುವ ಪ್ರಕ್ರಿಯೆ ನಡೆಯುತ್ತಿದೆ, ಮತ್ತು ಅದು ಪೂರ್ಣಗೊಳ್ಳುವ ವರೆಗೆ ಒಪ್ಪಂದವನ್ನು ಅನುಮೋದಿಸುವ ಪ್ರಶ್ನೆಯೇ ಇಲ್ಲ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಅದೇ ರೀತಿ ನೀತಿ ಆಯೋಗದ ಮುಖ್ಯಸ್ಥರು ಭಾರತ ಇನ್ನೂ ಆಂತರಿಕ ಕ್ರಿಯೆಗಳ ದೃಷ್ಟಿಯಿಂದ ಸಿದ್ಧವಾಗಿಲ್ಲ, ಆದ್ದರಿಂದ ತಕ್ಷಣವೇ ಈ ಒಪ್ಪಂದವನ್ನು ಅನುಮೋದಿಸಲು ಸಾಧ್ಯವಿಲ್ಲ ಎಂದಿದ್ದರು.
ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗಳ ಪ್ರಕಟಣೆ ಭಾರತವು ಅಮೆರಿಕಾದ ಜಾಗತಿಕ ವ್ಯೂಹದಲ್ಲಿ ಒಂದು ದೈನೇಸಿಯಾಗಿ ಮಾಡುತ್ತಿದೆ, ಅಮೆರಿಕಾದ ಒತ್ತಡಗಳಿಗೆ ತಲೆಬಾಗಿ ಭಾರತದ ಬಹು ಆವಶ್ಯಕ ಇಂಧನ ಆವಶ್ಯಕತೆಗಳನ್ನು ಚೌಕಾಸಿ ಮಾಡಿ ಸರಕಾರ ಈ ತಿಪ್ಪರಲಾಗವನ್ನು ಹಾಕಿದೆ ಎನ್ನುತ್ತ ಸಿಪಿಐ(ಎಂ) ಪೊಲಿಟ್ಬ್ಯುರೊ ಪ್ರಧಾನ ಮಂತ್ರಿಗಳ ಈ ಪ್ರಕಟಣೆಯನ್ನು ಬಲವಾಗಿ ಖಂಡಿಸಿದೆ, ಇದು ಭಾರತದ ಹಿತದಲ್ಲಿ ಇಲ್ಲ, ಬಡತನ ನಿರ್ಮೂಲನೆ ಮಾಡಲು ಮತ್ತು ನಮ್ಮ ಬಹುಪಾಲು ಜನಗಳ ಜೀವನಾಧಾರವನ್ನು ಉತ್ತಮಗೊಳಿಸಲು ಅಗತ್ಯವಾದ ಇಂಧನಗಳನ್ನು ಒದಗಿಸಲು ಸರಕಾರ ಬದ್ಧವಾಗಿರಬೇಕು, ಆದರೆ ಇದು ಅದಕ್ಕೆ ಅನುಗುಣವಾಗಲಿಲ್ಲ ಎಂದು ಬಲವಾಗಿ ಖಂಡಿಸಿದೆ. ಈ ಮೊದಲು ಸಂಸತ್ತಿಗೆ ಭರವಸೆ ನೀಡಿರುವುದರಿಂದ ಪ್ಯಾರಿಸ್ ಒಪ್ಪಂದವನ್ನು ಅನುಮೋದಿಸುವ ಈ ನಿರ್ಧಾರವನ್ನೂ ಸಂಸತ್ತಿನ ಚರ್ಚೆಗೆ ಮತ್ತು ಅನುಮೋದನೆಗೆ ಒಳಪಡಿಸಬೇಕು ಎಂದು ಅದು ಆಗ್ರಹಿಸಿದೆ.