ಸೆಪ್ಟಂಬರ್ 28-29ರ ನಡುರಾತ್ರಿಯಿಂದ ಮುಂಜಾವಿನ ವರೆಗೆ ಭಾರತೀಯ ಸೇನೆಯ ಕಮಾಂಡೋಗಳು ಕ್ಷಿಪ್ರ ಮತ್ತು ಸೀಮಿತ ಕಾರ್ಯಾಚರಣೆ ನಡೆಸಿ ಹತೋಟಿ ರೇಖೆಯ ಬಳಿ ಭಾರತದೊಳಕ್ಕೆ ಪ್ರವೇಶಿಸಲು ಜಮಾವಣೆಗೊಂಡಿದ್ದ ಭಯೋತ್ಪಾದಕರ ಕ್ಯಾಂಪುಗಳ ಮೇಲೆ ದಾಳಿ ಮಾಡಿ ಅವರ ಪ್ರಯತ್ನಗಳನ್ನು ವಿಫಲ ಗೊಳಿಸಲಾಗಿದೆ, ಇದರಲ್ಲಿ ಭಯೋತ್ಪಾದಕರಿಗೆ ಮತ್ತು ಅವರಿಗೆ ರಕ್ಷಣೆ ನೀಡುತ್ತಿರುವವರಿಗೆ ಸಾವು-ನೋವುಗಳು ಉಂಟಾಗಿವೆ, ಈ ಕಾರ್ಯಾಚರಣೆ ಕೊನೆಗೊಂಡಿದೆ ಎಂದು ಸೇನಾಧಿಕಾರಿಗಳು ಮತ್ತು ವಿದೇಶಾಂಗ ಮಂತ್ರಾಲಯದ ಅಧಿಕಾರಿಗಳು ನಡೆಸಿದ ಪತ್ರಿಕಾ ಸಮ್ಮೇಳನದಲ್ಲಿ ತಿಳಿಸಿದ್ದಾರೆ.
ನಂತರ ಭಾರತ ಸರಕಾರ ರಾಜಕೀಯ ಪಕ್ಷಗಳ ಮುಖಂಡರನ್ನು ಕರೆದು ಈ ಬಗ್ಗೆ ಮಾಹಿತಿ ನೀಡಿದೆ. ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಈ ಸಭೆಯಲ್ಲಿ ಹಾಜರಿದ್ದರು.
ಕುಪ್ವಾರ ಮತ್ತು ಪೂಂಚ್ ಗಡಿಯಾಚೆ ಎರಡು ಕಡೆಗಳಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ, ಈ ಕಾರ್ಯಾಚರಣೆ ಸಪ್ಟಂಬರ್ 29ರ ಬೆಳಿಗ್ಗೆ ಮುಕ್ತಾಯಗೊಂಡಿದೆ ಎಂದು ಸರಕಾರ ಹೇಳಿರುವುದಾಗಿ ಈ ಕುರಿತು ನೀಡಿರುವ ಹೇಳಿಕೆಯಲ್ಲಿ ತಿಳಿಸುತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಕದನ ಮತ್ತಷ್ಟು ಮುಂದುವರಿಯುವುದಿಲ್ಲ ಎಂದು ಆಶಿಸಿದೆ.
ಇನ್ನು ಪಠಾಣಕೋಟ್ ಮತ್ತು ಉರಿಯಂತಹ ಘಟನೆಗಳು ಇನ್ನೂ ನಡೆಯುವದಿಲ್ಲ ಎಂಬ ನಿರೀಕ್ಷೆಯನ್ನು ಸಿಪಿಐ(ಎಂ) ವ್ಯಕ್ತಪಡಿಸಿದೆ. ಗಡಿಯಾಚೆಯ ಭಯೋತ್ಪಾದನೆಯಿಂದ ಜನರಿಗೆ ಭದ್ರತೆ ಮತ್ತು ರಕ್ಷಣೆÉ ಒದಗಿಸಬೇಕು ಎಂದು ತಾವು ಸದಾ ಹೇಳುತ್ತಾ ಬಂದಿರುವುದನ್ನು ನೆನಪಿಸುತ್ತ ಸಿಪಿಐ(ಎಂ) ಪೊಲಿಟ್‍ಬ್ಯುರೊ ಪರಿಸ್ಥಿತಿಯನ್ನು ತಿಳಿಗೊಳಿಸಲು ರಾಜತಾಂತ್ರಿಕ ಮತ್ತು ರಾಜಕೀಯ ನಡೆಗಳನ್ನು ಮುಂದುವರೆಸಬೇಕು ಎಂದು ಸರಕಾರವನ್ನು ಆಗ್ರಹಿಸಿದೆ.