ಸೆಪ್ಟೆಂಬರ್ 30ರ ಸುಪ್ರೀಂ ಕೋರ್ಟು ತೀರ್ಪು

ಅಕ್ಟೋಬರ್ 6 ರವರೆಗೆ ನಿತ್ಯ 6 ಸಾವಿರ ಕ್ಯುಸೆಕ್ಸ್ ನೀರು ತಮಿಳುನಾಡಿಗೆ ಬಿಡಬೇಕು ಎಂದು ಕರ್ನಾಟಕ ಸರಕಾರಕ್ಕೂ, ಅಕ್ಟೋಬರ್ 4 ರೊಳಗೆ ಕಾವೇರಿ ನಿರ್ವಹಣಾ ಮಂಡಳಿ ರಚಿಸಿ ವಸ್ತುಸ್ಥಿತಿ ಅರಿಯುವ ಮೂಲಕ ಕಾವೇರಿ ನೀರು ಹಂಚಿಕೆ ಬಿಕ್ಕಟ್ಟಿಗೆ ಪರಿಹಾರ ಸೂಚಿಸಬೇಕೆಂದು ಕೇಂದ್ರ ಸರಕಾರಕ್ಕೂ ನಿರ್ದೇಶನವನ್ನು ನೀಡುವ ಸುಪ್ರೀಂ ಕೋರ್ಟಿನ ತೀರ್ಪು ಸೆಪ್ಟೆಂಬರ್ 30ರಂದು ಪ್ರಕಟವಾಗಿದೆ.

ಇದಕ್ಕಿಂತ ಮೊದಲು ಸುಪ್ರೀಂ ಕೋರ್ಟಿನ ಸೆಪ್ಟೆಂಬರ್ 30ರ ತೀರ್ಪಿನ ಸೂಚನೆಯಂತೆ ಕೇಂದ್ರ ಸರಕಾರದ ನೀರಾವರಿ ಮಂತ್ರಿ ಎರಡು ರಾಜ್ಯ ಸರಕಾರಗಳ ಪ್ರತಿನಿಧಿಗಳನ್ನು ಕರೆದಿದ್ದರು. ಆದರೆ ಕೇಂದ್ರ ಸರಕಾರದ ರಾಜಕೀಯ ಇಚ್ಛೆಯ ಮತ್ತು ಸಮಸ್ಯೆ ಬಗೆಹರಿಸಲು ಯಾವುದೇ ನಿರ್ದಿಷ್ಟ ಪ್ರಸ್ತಾವದ ಅಭಾವದಿಂದ ಯಾವುದೇ ಪ್ರಗತಿ ಆಗಿಲ್ಲ. ಎರಡೂ ರಾಜ್ಯಗಳು ನೇರವಾಗಿ ಮಾತುಕತೆ ನಡೆಸಬೇಕು ಎಂದು ಹೇಳಿ ಕೇಂದ್ರ ಸರಕಾರ ತನ್ನ ಜವಾಬ್ದಾರಿಯಿಂದ ಕೈತೊಳೆದುಕೊಂಡಿದೆ. ಇದರ ಹಿಂದೆ ಬಿಜೆಪಿಯ ಕ್ಷುಲ್ಲಕ ರಾಜಕೀಯ ಲೆಕ್ಕಾಚಾರಗಳೂ ಇವೆ. ಕಾವೇರಿ ವಿವಾದವನ್ನು ಚುನಾವಣಾ ರಾಜಕೀಯದ ದಾಳವಾಗಿ ಬಳಸಬಾರದು. ಎರಡು ರಾಜ್ಯಗಳ ಜನತೆಯ ನಡುವಿನ ಸೌಹಾರ್ದ ಸಂಬಂಧ ಕೆಡಿಸಲು ಪ್ರಯತ್ನಿಸಬಾರದು ಎಂದು ಎಲ್ಲಾ ರಾಜಕೀಯ ಪಕ್ಷಗಳಿಗೆ ಸಿಪಿಐ(ಎಂ) ಕರ್ನಾಟಕ ರಾಜ್ಯ ಸಮಿತಿ ಕಳಕಳಿಯ ಮನವಿ ಮಾಡುತ್ತದೆ.

ಸುಪ್ರೀಂ ಕೋರ್ಟಿನ ಸೆಪ್ಟೆಂಬರ್ 30ರ ತೀರ್ಪಿನಿಂದ ಉದ್ಭವವಾಗಿರುವ ಪರಿಸ್ಥಿತಿಯನ್ನು ಪುನರ್ವಿಮರ್ಶಿಸಿ ರಾಜ್ಯ ಸರಕಾರದ ಮುಂದಿನ ಕ್ರಮಗಳ ಬಗ್ಗೆ ಸೂಚನೆ ನೀಡಲು ವಿಧಾನ ಮಂಡಲದ ಸಭೆಯನ್ನು ಕರೆಯಬೇಕೆಂದೂ ಸಿಪಿಐ(ಎಂ) ರಾಜ್ಯ ಸಮಿತಿ ಕರೆ ನೀಡುತ್ತದೆ.

ಪ್ರಸ್ತಾವಿತ ಕಾವೇರಿ ನಿರ್ವಹಣಾ ಮಂಡಳಿಗೆ ಕಾವೇರಿ ಕಣಿವೆಯ ಜಲಾಶಯಗಳ ಮೇಲೆ ಮಂಡಳಿಯ ನಿಯಂತ್ರಣ ಇರುತ್ತದೆ. ಇದು ರಾಜ್ಯದ ಜನತೆಯ ಮತ್ತು ಅವರ ಪ್ರತಿನಿಧಿಯಾದ ರಾಜ್ಯ ಸರಕಾರದ ಹಕ್ಕನ್ನು ಮೊಟಕುಗೊಳಿಸುವ ಕ್ರಮ. ರಾಜ್ಯಗಳ ಸ್ವಾಯತ್ತತೆ ಹಾಗೂ ಸಂವಿಧಾನದತ್ತ ಅಧಿಕಾರಗಳನ್ನು ಕಿತ್ತುಕೊಳ್ಳುವ ಕ್ರಮ. ಒಕ್ಕೂಟ ವ್ಯವಸ್ಥೆಯನ್ನು ತಿರುಚಿ ಹಾಳುಗೆಡಹುವ ಕ್ರಮ. ಈ ಕಾರಣಗಳಿಗಾಗಿ ಕಾವೇರಿ ನಿರ್ವಹಣಾ ಮಂಡಳಿಯ ರಚನೆಯನ್ನು ಸಿಪಿಐ(ಎಂ) ರಾಜ್ಯ ಸಮಿತಿ ವಿರೋಧಿಸುತ್ತದೆ.

ಈ ವರ್ಷದ ಮಳೆಯ ಅಭಾವ ಮತ್ತು ನೀರು ಹಂಚಿಕೆಯ ವಿವಾದಗಳಿಂದಾಗಿ ಬೆಳೆ ನಷ್ಟ ಅನುಭವಿಸುತ್ತಿರುವ ಎರಡೂ ರಾಜ್ಯಗಳ ರೈತರಿಗೆ ಹಾಗೂ ಕೃಷಿ ಕೂಲಿಕಾರರರಿಗೆ ಎರಡೂ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸೂಕ್ತ ಪರಿಹಾರ ನೀಡಬೇಕೆಂದೂ ಸಿಪಿಐ(ಎಂ) ರಾಜ್ಯ ಸಮಿತಿ ಒತ್ತಾಯಿಸುತ್ತದೆ.

ಪ್ರಧಾನಿ ಮಧ್ಯಪ್ರವೇಶ ಮಾಡಿ ಎರಡೂ ರಾಜ್ಯಗಳ ಪ್ರತಿನಿಧಿಗಳ ಸಭೆ ಕರೆದು ಮಾತುಕತೆ ಮೂಲಕ ಈ ಸಮಸ್ಯೆ ಬಗೆಹರಿಸಬೇಕೆಂದು ಸಿಪಿಐ(ಎಂ) ರಾಜ್ಯ ಸಮಿತಿ ತನ್ನ ನಿಲುವನ್ನು ಪುನರುಚ್ಚರಿಸುತ್ತದೆ.

ಜಿ.ವಿ. ಶ್ರೀರಾಮರೆಡ್ಡಿ

ರಾಜ್ಯ ಕಾರ್ಯದರ್ಶಿ

Leave a Reply

Your email address will not be published. Required fields are marked *