ಅಕ್ಟೋಬರ್ 15, 2016ರಂದು ಸುಮಾರು 150 ಜನ ಬಿಜೆಪಿ ಕಾರ್ಯಕರ್ತರು ಮತ್ತು ಬೆಂಬಲಿಗರು ಮಹಾಲಕ್ಷ್ಮಿ ಲೇಔಟ್ ನಲ್ಲಿರುವ ಭಾರತ ಕಮ್ಯೂನಿಸ್ಟ್ ಪಕ್ಷ (ಮಾಕ್ರ್ಸ್‍ವಾದಿ)-ಸಿಪಿಐ(ಎಂ)ನ ರಾಜ್ಯ ಕೇಂದ್ರದ ಕಛೇರಿ ಇ.ಎಂ.ಎಸ್.ಭವನದ ಮೇಲೆ ದಾಳಿ ಮಾಡಿ ದಾಂದಲೆ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಅದೇ ದಿನ ಒಡಿಶಾದ ರಾಜ್ಯ ಕಚೇರಿ ಮೇಲೂ ದಾಳಿಯ ಪ್ರಯತ್ನಗಳು ನಡೆದಿವೆ. ತ್ರಿಪುರಾದ ಕಮ್ಯೂನಿಸ್ಟ್ ಮುಖ್ಯಮಂತ್ರಿ ಮಾಣಿಕ್ ಸರ್ಕಾರ್ ರವರ ಮನೆ ಮೇಲೆ ದಾಳಿ, ಹಾಗೂ ಕೇರಳ ರಾಜ್ಯದ ವಿವಿದೆಡೆ ಕಮ್ಯೂನಿಸ್ಟರನ್ನು ಗುರಿಯಾಗಿಸಿಕೊಂಡು ದಾಳಿಗಳು ವ್ಯಾಪಕವಾಗುತ್ತಿವೆ. ಇವೆಲ್ಲವನ್ನೂ ಖಂಡಿಸಿ ಅಕ್ಟೋಬರ್ 16, 17, 18ರಂದು ಸಿಪಿಐ(ಎಂ) ರಾಜ್ಯ ಸಮಿತಿಯ ಕರೆ ಮೇರೆಗೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ.
ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮೊದಲಿಗೆ ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯರು ಹಾಗೂ ಬೆಂಗಳೂರು ದಕ್ಷಿಣ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಕೆ.ಪ್ರಕಾಶ್‍ರವರು ಮಾತನಾಡಿ “ಇತ್ತೀಚಿಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಎಡಪಕ್ಷಗಳು ಅಭೂತಪೂರ್ವ ಯಶಸ್ಸು ಕಂಡಿದ್ದು, ರಾಜ್ಯದ ಮುಖ್ಯಮಂತ್ರಿಗಳಾಗಿ ಸಿಪಿಐ(ಎಂ)ನ ಪಿಣರಾಯ್ ವಿಜಯನ್‍ರವರು ಸರ್ಕಾರವನ್ನು ಮುನ್ನಡೆಸುತ್ತಿದ್ದಾರೆ. ಸಿಪಿಐ(ಎಂ) ಪಕ್ಷವು ದೇಶದ ಉದ್ದಗಲಕ್ಕೂ ಜನತೆಯ ಪರವಾಗಿ, ಕಾರ್ಮಿಕರ ಪರವಾಗಿ, ರೈತರ ಪರವಾಗಿ, ಅವರ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾದ ಹೋರಾಟಗಳನ್ನು ನಡೆಸುತ್ತಿದ್ದು ಇದನ್ನು ಸಹಿಸದ ಆರ್.ಎಸ್.ಎಸ್. / ಬಿಜೆಪಿ ಒಳಗೊಂಡ ಸಂಘಪರಿವಾರವು ಸಿಪಿಐ(ಎಂ) ಕಾರ್ಯಕರ್ತರ ಮೇಲೆ ದಾಳಿಗೆ ಮುಂದಾಗಿದ್ದಾರೆ.
ಹಾಗೆಯೇ ಮಾಣಿಕ್ ಸರ್ಕಾರ್‍ರವರ ಮನೆ ಮೇಲೆ ಆರ್.ಎಸ್.ಎಸ್. ಗೂಂಡಾಗಳು ದಾಳಿ ನಡೆಸಿ ಭದ್ರತಾ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಕೇರಳದಲ್ಲಿ ಸುಮಾರು 35 ಪಕ್ಷದ ಕಛೇರಿಗಳ ಮೇಲೆ ದಾಳಿ ನಡೆದಿದೆ. ರಾಜ್ಯದಲ್ಲಿ ಎಲ್‍ಡಿಎಫ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಲ್ಲಿ 7 ಜನ ಸಿಪಿಐ(ಎಂ) ಕಾರ್ಯಕರ್ತರನ್ನು ಕೊಲೆ ಮಾಡಲಾಗಿದೆ.
ಹಣದ ಆಮೀಷದ ಮೂಲಕ ಜನಪ್ರತಿನಿಧಿಗಳನ್ನು ಕೊಂಡುಕೊಂಡು ರಾಜ್ಯಸಭಾ ಸದಸ್ಯರಾಗಿರುವ ಬಿಪಿಎಲ್ ಕಂಪನಿ ಮಾಲೀಕ ರಾಜೀವ್ ಚಂದ್ರಶೇಖರ್‍ರವರು ಬಿಜೆಪಿ ಪಕ್ಷದ ಮುಖಂಡರಾಗಿ ನಡೆದ ಒಂದ ವಿಚಾರ ಸಂಕಿರಣದಲ್ಲಿ ಕಮ್ಯೂನಿಸ್ಟ್ ಪಕ್ಷದ ಮೇಲೆ ಆರೋಪ ಹೊರಿಸಿ, ಸಿಪಿಐ(ಎಂ) ಪಕ್ಷವನ್ನು ನಿರ್ನಾಮ ಮಾಡಬೇಕೆಂದು ಹೇಳಿದ್ದಾರೆ. ಬಿಜೆಪಿ ಪಕ್ಷದಲ್ಲಿರುವವರು ಬಹುತೇಕ ಜನ ಬಂಡವಾಳದಾರರು, ಶ್ರೀಮಂತರು, ಕೈಗಾರಿಕೋದ್ಯಮಿಗಳು ಇವರ ರಕ್ಷಣೆಗಾಗಿ ಬಿಜೆಪಿ ಪಕ್ಷವು ನಿಂತಿದೆ. ಜನತೆಯ ಪರವಾಗಿ ಕೆಲಸ ಮಾಡುವ ಸಿಪಿಐ(ಎಂ) ಪಕ್ಷದ ವಿರುದ್ಧ ದಾಳಿಗೆ ಮುಂದಾಗಿದ್ದಾರೆ.
ಕೇಂದ್ರದ ವಿರುದ್ಧ ಜನತೆಯ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಹಿನ್ನೆಯಲ್ಲಿಯೇ ಕಳೆದ ಸೆಪ್ಟಂಬರ್ 2ರಂದು ನಡೆದ ಮುಷ್ಕರದಲ್ಲಿ ಸುಮಾರು 18 ಕೋಟಿ ಜನರು ಭಾಗವಹಿಸಿದ್ದರು. ಕೇಂದ್ರದ ಜನ ವಿರೋಧಿ ನೀತಿಯ ವಿರುದ್ಧ ಜನತೆಯಲ್ಲಿ ಪ್ರತಿರೋಧಗಳು ಹೆಚ್ಚಾಗುತ್ತಿದೆ. ಕಾಂಗ್ರೆಸ್ ಪಕ್ಷ ಜನತೆಯ ಪರವಾಗಿ ಹೋರಾಟಗಳನ್ನು ಮಾಡುವುದಿಲ್ಲ. ಸಿಪಿಐ(ಎಂ) ನೇತೃತ್ವದ ಎಡಪಕ್ಷಗಳು ಮಾತ್ರ ಜನಪರವಾಗಿ ನಿರಂತರವಾಗಿ ಚಳುವಳಿ ನಡೆಸುತ್ತಾ ಬಂದಿದೆ.
ಒಂದು ಕಡೆ ರೈತರ ಆತ್ಮಹತ್ಯೆಗಳು, ಇನ್ನೊಂದು ಕರೆ ಜಾತಿ, ಧರ್ಮದ ಹೆಸರಿನಲ್ಲಿ ದಾಳಿ ದಬ್ಬಾಳಿಕೆಗಳು, ಕೋಮುಗಲಭೆಗಳು, ಗೋವಿನ ಹೆಸರು ಹೇಳಿಕೊಂಡು ದಲಿತರ ಮೇಲೆ ಹಲ್ಲೆಗಳು ಅತ್ಯಂತ ವ್ಯವಸ್ಥಿತವಾಗಿ ಸಂಘಟಿಸಲಾಗುತ್ತಿದೆ. ಜನತೆಯಿಂದ ಎದ್ದು ಬರುತ್ತಿರುವ ಪ್ರತಿರೋಧವನ್ನು ಹಿಮ್ಮೆಟ್ಟಿಸಲು ದಾಳಿ ದಬ್ಬಾಳಿಕೆಯನ್ನು ನಡೆಸುತ್ತಿದ್ದಾರೆ. ಇಂತಹ ದಾಳಿಗಳಿಗೆ ಸಿಪಿಐ(ಎಂ) ಎಂದಿಗೂ ಹೆದರುವುದಿಲ್ಲ. ಜನಪರ ಹೋರಾಟ ಮೂಲಕ ಉತ್ತರ ಕೊಡುತ್ತೇವೆ ಎಂದು ತಿಳಿಸಿದರು.
ಕಾ. ಹೆಚ್.ಎನ್.ಗೋಪಾಲಗೌಡ, ಆರ್.ಶ್ರೀನಿವಾಸ್, ಕೆ.ಎನ್.ಉಮೇಶ್ ಅವರುಗಳೂ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯಲ್ಲಿ ಅಕ್ಟೋಬರ್ 18ರಂದು ಸಿಪಿಐ(ಎಂ) ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಸಂಘಪರಿವಾರದ ಭೂತ ದಹನ ಮಾಡುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಜಿಲ್ಲಾ ಕಾರ್ಯದರ್ಶಿ ಕಾಂ||ಯಮುನಾ ಗಾಂವ್ಕರ್‍ರವರು “ದ್ವೇಷದ ರಾಜಕಾರಣ ನಿಲಿಸದಿದ್ರೆ ಜನತೆ ಉತ್ತರ ಕೊಡುತ್ತಾರೆ. ಹೋರಾಟ ಮಾಡುವುದಾದರೆ ದೇಶದ ತುಂಬಾ ಜನ ಸಾಮಾನ್ಯರ ಸಮಸ್ಯೆಗಳನ್ನೆತ್ತಿಕೊಂಡು ಪರಿಹಾರಕ್ಕೆ ಹೋರಾಡಿ, ಧರ್ಮ, ಜಾತಿ ರಾಜಕೀಯ ಕಾರಣ ಮುಂದಿಟ್ಟು ದೈಹಿಕ ದಾಳಿ, ಕೊಲೆ ಬೆದರಿಕೆ, ಕಛೇರಿ ಮೇಲೆ ದಾಳಿ ನಿಲ್ಲಿಸಿ, ಮಾಕ್ರ್ಸ್‍ವಾದಿ ಕಮ್ಯೂನಿಸ್ಟ್ ಪಕ್ಷದ ಮೇಲಿನ ದಾಳಿ ಜನ ಸಾಮಾನ್ಯರ ಮೇಲಿನ ದಾಳಿಯಾಗಿದೆ ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ನಾಗಪ್ಪ ನಾಯ್ಕ, ರಾಜಾಸಾಬ್, ಡಿ.ಸ್ಯಾಮ್‍ಸನ್, ಮಹಮ್ಮದ್ ಸಲಿಂ, ಜಗರೀಶ, ಪ್ರಭುದಾಸ, ರತ್ಮದೀಪಾ, ಲಕ್ಷ್ಮಣ ಕಾಂತ್ ರಾವ್ ಮತ್ತಿತರರು ಹಾಜರಿದ್ದರು.
ಹಾಸನ ಜಿಲ್ಲೆಯಲ್ಲಿ ಕಮ್ಯೂನಿಸ್ಟರ ಮೇಲಿನ ದಾಳಿಯನ್ನು ಖಂಡಿಸಿ ನಗರದ ಹೇಮಾವತಿ ಪ್ರತಿಮೆ ಮುಂಬಾಗ ಪ್ರತಿಭಟನೆ ನಡೆಸಿದ ಸಿಪಿಐ(ಎಂ) ಕಾರ್ಯಕರ್ತರು ಬಿ.ಜೆಪಿ-ಆರ್.ಎಸ್.ಎಸ್ ನ ಗೂಂಡಾ ಸಂಸ್ಕøತಿಯ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನೆಯಲ್ಲಿ ಸಿಪಿಐಎಂ ಸ್ಥಳಿಯ ಸಮಿತಿ ಕಾರ್ಯದರ್ಶಿ ಎಚ್.ಆರ್.ನವೀನ್‍ಕುಮಾರ್, ಜಿಲ್ಲಾ ಸಮಿತಿ ಮುಖಂಡರಾದ ಜಿ.ಪಿ.ಸತ್ಯನಾರಾಯಣ, ಸಿಪಿಐನ ಡೋಂಗ್ರೆ ಮತ್ತು ಪೃಥ್ವಿ ಮಾತನಾಡಿದರು.
ಸಿಪಿಐ(ಎಂ) ನೇತೃತ್ವದಲ್ಲಿ ಬಳ್ಳಾರಿ ಜಿಲ್ಲೆಯ ಬಳ್ಳಾರಿ, ಸಂಡೂರು ಹಾಗೂ ಹೊಸಪೇಟೆಯಲ್ಲಿ ತಹಶೀಲ್ದಾರ್ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಅದೇ ರೀತಿಯಲ್ಲಿ ಕಲಬುರಗಿ ಹಾಗೂ ಮೈಸೂರಿನಲ್ಲಿ ಜಿಲ್ಲಾಧಿಕಾರಿ ಕಛೇರಿ ಬಳಿ, ತುಮಕೂರು, ಚಿಕ್ಕಬಳ್ಳಾಪುರ, ಮಂಡ್ಯ, ದೇವದುರ್ಗ, ಸಿಂಧನೂರು, ಗಜೇಂದ್ರಗಢ, ರಾಯಚೂರು, ಇನ್ನಿತರೆ ಜಿಲ್ಲೆ, ತಾಲ್ಲೂಕು ಕೇಂದ್ರಗಳಲ್ಲಿ ಪ್ರತಿಭಟನೆಗಳು ನಡೆದಿವೆ.