ಉಡುಪಿ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನು ಖಾಸಗೀಕರಿಸುವುದನ್ನು ವಿರೋಧಿಸಿ ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿಯ ವತಿಯಿಂದ ಅಕ್ಟೋಬರ್ 17 ರಂದು ಅಲ್ಲಿನ ಸರ್ವಿಸ್ ಬಸ್ ನಿಲ್ದಾಣದ ಎದುರು ಪ್ರತಿಭಟನೆ ನಡೆಸಲಾಯಿತು.
ಉಡುಪಿ ನಗರದ ಆಧುನಿಕ ಇತಿಹಾಸದಲ್ಲೇ ಪ್ರಖ್ಯಾತ ದಾನಿಯೆಂದು ಹೆಸರಾದ ಹಾಜಿ ಅಬ್ದುಲ್ ಹಾಜಿ ಖಾಸಿಂ ಸಾಹೇಬರು ಸರಕಾರಕ್ಕೆ ದಾನವಾಗಿ ನೀಡಿದ ತಮ್ಮ ಜಮೀನಿನಲ್ಲಿ ಈ ಸರಕಾರಿ ಆಸ್ಪತ್ರೆ ನಡೆಯುತ್ತಿದೆ. ಬಡವರು ಹಾಗೂ ಕಾರ್ಮಿಕರು ಈ ಆಸ್ಪತ್ರೆಯನ್ನೇ ಅವಲಂಬಿಸಿದ್ದಾರೆ. ಗರ್ಭಿಣಿ ಮಹಿಳೆಯರ ಸಾಲಿನ ಪ್ರಮಾಣ ಅತ್ಯಂತ ಕಡಿಮೆ ಇರುವ ರಾಜ್ಯದ ಸರ್ಕಾರೀ ಆಸ್ಪತ್ರೆ ಇದಾಗಿದೆ. ಈ ಆಸ್ಪತ್ರೆಯಲ್ಲಿ ದೊರೆಯುವ ಸೇವೆಯು ಯಾವ ಖಾಸಗಿ ಆಸ್ಪತ್ರೆಗೂ ಕಡಿಮೆಯದಾಗಿಲ್ಲ. ಇಂಥ ಸರ್ಕಾರಿ ಆಸ್ಪತ್ರೆಯನ್ನು ಖಾಸಗೀಯವರಿಗೆ ಹಸ್ತಾಂತರಿಸುವ ಸರ್ಕಾರದ ಧೋರಣೆಯನ್ನು ಪ್ರತಿಭಟನೆಯಲ್ಲಿ ಭಾಗವಹಿಸಿದ ಮುಖಂಡರು ಖಂಡಿಸಿ ಮಾತನಾಡಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಖ್ಯಾತ ವೈದ್ಯ ಹಾಗೂ ಡಾ||ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ನಿರ್ದೇಶಕ ಡಾ||ಪಿ.ವಿ.ಭಂಡಾರಿ, ಸಿಪಿಐ(ಎಂ) ಉಡುಪಿ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಮಾತನಾಡಿದರು. ಪಕ್ಷದ ಹಿರಿಯ ಮುಖಂಡ ಕೆ.ಶಂಕರ್, ಪಿ.ವಿಶ್ವನಾಥ ರೈ, ವಿಠಲ ಪೂಜಾರಿ, ಕರ್ನಾಟಕ ಕೋಮು ಸೌಹಾರ್ದ ವೇದಿಕೆಯ ಜಿ.ರಾಜಶೇಖರ್ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.