ಅಕ್ಟೋಬರ್ 31 ರಂದು ಮಧ್ಯಪ್ರದೇಶದ ರಾಜಧಾನಿ ಭೋಪಾಲದ ಅತಿ ಭದ್ರತೆಯ ಸೆಂಟ್ರಲ್ ಜೈಲಿನಿಂದ ಪರಾರಿಯಾದ ಎಂಟು ಮಂದಿ ವಿಚಾರಣಾಧೀನ ಕೈದಿಗಳು ಆ ಮೇಲೆ ಭಯೋತ್ಪಾದಕ ನಿಗ್ರಹ ದಳ(ಎಟಿಸಿ)ದ ತಂಡದೊಂದಿಗೆ ‘ಎನ್ಕೌಂಟರ್’ನಲ್ಲಿ ಸತ್ತಿದ್ದಾರೆ ಎಂಬ ಸುದ್ದಿ ಈಗ ಬಹಳಷ್ಟು ಸಂದೇಹಗಳನ್ನು ಎಬ್ಬಿಸಿದೆ.
ಈ ಎಂಟು ಮಂದಿ ನಿಷೇಧಿತ ಸಿಮಿ ಸಂಘಟನೆಯೊಂದಿಗೆ ಸಂಪರ್ಕ ಇದ್ದವರು ಎಂಬ ಸಂದೇಹವಿತ್ತು. ಅವರು ವಿವಿಧ ಕೇಸುಗಳಲ್ಲಿ ವಿಚಾರಣೆಗಳನ್ನು ಎದುರಿಸುತ್ತಿದ್ದರು. ಈ ಘಟನೆಯ ಬಗ್ಗೆ ಮುಂದಿಡಲಾಗುತ್ತಿರುವ ದಾವೆಗಳು ಗಂಭೀರ ಸಂದೇಹಗಳನ್ನು ಎಬ್ಬಿಸಿವೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೋ ಈ ಬಗ್ಗೆ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖ ನಡೆಸಬೇಕು ಎಂದು ಆಗ್ರಹಿಸಿದೆ.
ಈ ಆಪಾದಿತರು ಅತ್ಯಂತ ಭದ್ರತೆಯ ಈ ಜೈಲಿನಿಂದ ತಪ್ಪಿಸಿಕೊಳ್ಳು ವುದು ಸಾಧ್ಯವಾಯಿತಾದರೂ ಹೇಗೆ ಎಂಬುದೂ ಗಂಭೀರ ಪ್ರಶ್ನೆಗಳನ್ನು ಎತ್ತುತ್ತದೆ. ಮಧ್ಯಪ್ರದೇಶ ಸರಕಾರ ಈ ಬಗ್ಗೆ ವಿವರಣೆ ನೀಡಬೇಕಾಗುತ್ತದೆ ಎಂದು ಸಿಪಿಐ(ಎಂ) ಅಭಿಪ್ರಾಯ ಪಟ್ಟಿದೆ.
ಪರಾರಿಯಾದ ಈ ಕೈದಿಗಳು ಎಟಿಎಸ್ ತಂಡದ ಮೇಲೆ ದಾಳಿ ಮಾಡಿದರು ಎಂದು ಮಧ್ಯಪ್ರದೇಶ ಪೋಲೀಸರು ಹೇಳಿದರೆ, ಅಲ್ಲಿನ ಗೃಹ ಮಂತ್ರಿ ಭುಪೇಂದ್ರ ಸಿಂಗ್ ಬೇರೆಯೇ ಹೇಳಿದ್ದಾರೆ. ಈ ಮಂದಿಗೆ ಶಸ್ತ್ರಾಸ್ತ್ರಗಳನ್ನು ಪಡೆಯಲು ಸಾಧ್ಯವಾಯಿತು, ಆದರೆ ಜೈಲಿನಿಂದ ಹೊರಗೆ ಬಂದಾಗ ಪರಾರಿಯಾಗಲು ಎಸ್ಯುವಿ ವಾಹನ ಪಡೆಯಲಾಗಲಿಲ್ಲ್ಲ ಎಂಬದು ನಂಬಬಹುದಾದ ಮಾತು ಎಂದನಿಸುವುದಿಲ್ಲ.
ಈ ಘಟನೆಯ ವಿಡಿಯೋಗಳು ಪ್ರಸಾರದಲ್ಲಿದ್ದು ಪೋಲೀಸನೊಬ್ಬ ನೆಲದಲ್ಲಿ ಬಿದ್ದಿದ್ದ ‘ಪರಾರಿ’ ವ್ಯಕ್ತಿಗೆ ಗುಂಡೇಟು ಹೊಡೆಯುವುದನ್ನು ಒಂದು ವಿಡಿಯೋ ತೋರಿಸುತ್ತದೆ. ಇನ್ನೊಂದು ಅವರೆಲ್ಲ ಪೋಲೀಸರಿಗೆ ಕೈಬೀಸುತ್ತಿರುವುದನ್ನು, ಬಹುಶಃ ಶರಣಾಗತರಾಗುವ ಸಂದೇಶವನ್ನು ಕೊಡುತ್ತಿರುವುದನ್ನು ತೋರಿಸುತ್ತದೆ. ಇವೆಲ್ಲ ಪೋಲೀಸರ ದಾವೆಗಳ ಬಗ್ಗೆ ಗಂಭೀರ ಸಂದೆಹಗಳನ್ನು ಎತ್ತುವುದರಿಂದ ಈ ಇಡೀ ಘಟನೆಯ ಒಂದು ಆಮೂಲಾಗ್ರ ತನಿಖೆ ನಡೆಯಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ. ಮುಖ್ಯಮಂತ್ರಿಗಳು ಎನ್ಐಎ ಯಿಂದ ತನಿಖೆ ನಡೆಸುವುದಾಗಿ ಪ್ರಕಟಿಸಿದ್ದಾರೆ, ಆದರೆ ಇಂತಹ ತನಿಖೆ ವಿಶ್ವಾಸಾರ್ಹವೂ ಆಗುವುದಿಲ್ಲ, ಸ್ವೀಕಾರಾರ್ಹವೂ ಆಗುವುದಿಲ್ಲ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.