ದಲಿತರಿಗೆ ಆಸ್ತಿಯ ಹಕ್ಕನ್ನು ನಿರಾಕರಿಸಿ, ಶಿಕ್ಷಣ ಮತ್ತು ಉದ್ಯೋಗಾವಕಾಶಗಳಿಂದ ವಂಚಿಸಿ ಆಳುವ ವರ್ಗಗಳು ತಮ್ಮ ವರ್ಗಶೋಷಣೆಯನ್ನು ನಿರಾತಂಕವಾಗಿ ಮುನ್ನಡೆಸುತ್ತಿವೆ. ಶೋಷಣೆಯ ವಿರುದ್ಧ ದಲಿತ ಶ್ರಮಜೀವಿಗಳು ದ್ವನಿ ಎತ್ತುವುದನ್ನು ತಡೆಯಲು ಸಾಮಾಜಿಕ ದಮನದ ಅಸ್ತ್ರವನ್ನು ವ್ಯವಸ್ಥಿತವಾಗಿ ಬಳಸುತ್ತಿವೆ. ಹೀಗಾಗಿ ಕಾರ್ನಾಟಕದಲ್ಲಿ ಹಾಗೂ ಇಡೀ ಇಂಡಿಯಾ ದೇಶದಲ್ಲಿ ದಲಿತರ ಮೇಲೆ ದೌರ್ಜನ್ಯಗಳು ಅವ್ಯಾಹತವಾಗಿ ನಡೆಯುತ್ತಿವೆ. ಅವರೂ ಆರ್ಥಿಕವಾಗಿ ಸಬಲರಾಗಿದ್ದರೆ ಇಂತಹ ದೌರ್ಜನ್ಯಗಳಿಗೆ ಅವರು ಬಲಿಯಾಗುತ್ತಿರಲಿಲ್ಲ.
ಕೋಲಾರದ ಕಂಬಾಲಪಲ್ಲಿ ದಲಿತರನ್ನು ಸವರ್ಣೀಯರು ಜೀವಂತ ದಹನ ಮಾಡಿದ ಪ್ರಕರಣದಲ್ಲಿ ದಲಿತರ ಮನೆಗಳಿಗೆ ಬೆಂಕಿ ಇಟ್ಟವರು ಯಾರು ಎಂಬ ವಿಷಯ ಇಡೀ ಊರಿಗೆ ತಿಳಿದಿದ್ದರೂ ಪ್ರತಿಕೂಲ ಸಾಕ್ಷಿಯ ನೆಪವೊಡ್ಡಿ ಎಲ್ಲ ಆರೋಪಿಗಳನ್ನು ನ್ಯಾಯಾಲಯವು ಖುಲಾಸೆಗೊಳಿಸಿತು.
ಗಂಗಾವತಿಯ ಮರಕುಂಬಿಯಲ್ಲಿ ಮೇಲ್ಜಾತಿ ಶ್ರೀಮಂತರು ದಲಿತರ ಕೇರಿಗೆ ನುಗ್ಗಿ, ದಲಿತ ಮಹಿಳೆಯರ ಮೇಲೆ ಹಲ್ಲೆ ಮಾಡಿ ಅವರ ಗುಡಿಸಲುಗಳಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ದಲಿತರಿಗೆ ಇಲ್ಲಿಯ ವರೆಗೂ ನ್ಯಾಯ ಸಿಕ್ಕಿಲ್ಲ ಮಾತ್ರವಲ್ಲ ಪ್ರಕರಣದ ಪ್ರಮುಖ ಸಾಕ್ಷಿ ದಲಿತ ಕಾರ್ಯಕರ್ತ ದೊಡ್ಡ ವಿರೇಶಪ್ಪ ಕೊಪ್ಪಳದ ರೈಲು ಹಳಿಗಳ ಪಕ್ಕ ಶವವಾಗಿ ದೊರತು 5 ತಿಂಗಳಾದರೂ ತನಿಖೆ ಚುರುಕಾಗಿ ನಡೆಯುತ್ತಿಲ್ಲ. ಪೊಲೀಸರು ಯಾರನ್ನೂ ಬಂಧಿಸಿಲ್ಲ. ನೊಂದ ದಲಿತ ಕುಟುಂಬಕ್ಕೆ ಇದುವರೆಗೂ ಪರಿಹಾರ ನೀಡಲಾಗಿಲ್ಲ.
ಹಾಸನ ಜಿಲ್ಲೆ ಹೊಳೆನರಸೀಪುರದ ಸಿಂಗಾರನಹಳ್ಳಿಯ ದೇವಸ್ಥಾನವೊಂದಕ್ಕೆ ಇತರ ಮಹಿಳೆಯರೊಂದಿಗೆ ಪ್ರವೇಶ ಮಾಡಿದ ನಾಲ್ಕು ಮಂದಿ ದಲಿತ ಮಹಿಳೆಯರ ಮೇಲೆ ಹಲ್ಲೆಮಾಡಿ ತಲಾ ಒಂದು ಸಾವಿರ ರೂ. ದಂಡ ವಿಧಿಸಲಾಗಿದೆ ಮಾತ್ರವಲ್ಲ ಸಾಮಾಜಿಕ ಬಹಿಷ್ಕಾರಕ್ಕೆ ಒಳಪಡಿಸಲಾಗಿದೆ. ಸ್ಥಳೀಯ ಸಮುದಾಯ ಭವನವನ್ನು ಒಕ್ಕಲಿಗರ ಭವನವಾಗಿ ಪರಿವರ್ತಿಸಿ ಅಲ್ಲಿ ದಲಿತರಿಗೆ ಪ್ರವೇಶ ನಿಷೇಧಿಸಲಾಗಿದೆ.
ಚಾಮರಾಜನಗರ ಜಿಲ್ಲೆಯ ಸಂತೇಮಾರನಹಳ್ಳಿಯಲ್ಲಿ ದಲಿತ ಕೃಷಿಕೂಲಿಕಾರರಾದ ನಂಜಯ್ಯ ಮತ್ತು ಕೃಷ್ಣಯ್ಯ ಎಂಬವರ ರುಂಡಗಳನ್ನು ಕಡಿದು ಕೊಲೆಮಾಡಿ 9 ತಿಂಗಳು ಕಳೆದರೂ ಪ್ರಕರಣದ ನಿಗೂಢತೆಯನ್ನು ಬೇಧಿಸಲು ಇದುವರೆಗೂ ಪೊಲೀಸರಿಗೆ ಸಾಧ್ಯವಾಗಲಿಲ್ಲ. ಬೆಳ್ತಂಗಡಿಯಲ್ಲಿ ಗೋಪಾಲಕೃಷ್ಣಗೌಡ ಎಂಬಾತ ಆದಿವಾಸಿ ಸಮುದಾಯಕ್ಕೆ ಸೇರಿದ ಸುಂದರ ಮಲೆಕುಡಿಯ ಎಂಬವರ ಕೈಗಳನ್ನು ಗಿಡ ಕತ್ತರಿಸುವ ಮಶಿನ್ನಿಂದ ಕತ್ತರಿಸಿ ಹಾಕಿದ ಅಮಾನುಷ ಕೃತ್ಯಕ್ಕೆ ಸಂಬಂಧಿಸಿ ಸಂತ್ರಸ್ತ ಕುಟುಂಬಕ್ಕೆ ಇದುವರೆಗೂ ನ್ಯಾಯ ಸಿಕ್ಕಿಲ್ಲ.
ರಾಮನಗರ ಜಿಲ್ಲೆಯ ಹುಣಸನಹಳ್ಳಿ ಗ್ರಾಮದ ದಲಿತ ಯುವಕರಾದ ಅಶೋಕ ಮತ್ತು ಸತೀಶ್ ಅವರನ್ನು ದಾರಿಯಲ್ಲಿ ಅಡ್ಡಗಟ್ಟಿ ಹೊಡೆದು ಕೊಲೆಮಾಡಿದವರು ರಾಜಾರೋಷವಾಗಿ ಓಡಾಡುತ್ತಿದ್ದರೂ ಪೊಲೀಸರು ಅವರನ್ನು ಬಂಧಿಸಿಲ್ಲ. ಗ್ರಾಮದ ದಲಿತರಿಗೆ ರಕ್ಷಣೆ ಇಲ್ಲ. ದೌರ್ಜನ್ಯಕ್ಕೊಳಗಾದ ಕುಟುಂಬಗಳಿಗೆ ಪರಿಹಾರ ವಿತರಿಸಿಲ್ಲ. ಕೊಪ್ಪಳ, ಬಳ್ಳಾರಿ, ದಾವಣಗೆರೆ ಮುಂತಾದ ಜಿಲ್ಲೆಗಳಲ್ಲಿ ದಲಿತ ಯುವತಿಯರಿಗೆ ಬಲವಂತದಿಂದ ಮುತ್ತು ಕಟ್ಟಿಸಿ ಅನಿಷ್ಟ ದೇವದಾಸಿ ಪದ್ಧತಿಗೆ ತಳ್ಳುವ ಪ್ರಕರಣಗಳು ನಡೆಯುತ್ತಿದ್ದು ಅದನ್ನು ತಡೆಯುವಲ್ಲಿ ಜಿಲ್ಲಾಡಳಿತಗಳು ಸಂಪೂರ್ಣ ವಿಫಲವಾಗಿವೆ.
ದಾವಣೆಗೆರೆಯ ದಲಿತ ಯುವ ಬರಹಗಾರ ಮತ್ತು ಪತ್ರಿಕೋದ್ಯಮ ವಿದ್ಯಾರ್ಥಿ ಉಚ್ಛಂಗಿ ಪ್ರಸಾದ್ ತಾನು ಚಿಕ್ಕಂದಿನಿಂದ ದಲಿತ ಕೂಲಿ ಕಾರ್ಮಿಕನ ಮಗನಾಗಿ ಅನುಭವಿಸಿದ ಜಾತಿ ಅಸ್ಪøಶ್ಯತೆಯ ಭೀಕರತೆಯನ್ನು ಬಿಂಬಿಸುವ ಕವನಗಳನ್ನು ಬರೆದು ‘ಒಡಲ ಕಿಚ್ಚು’ ಎಂಬ ತಲೆಬರಹದ ಅಡಿಯಲ್ಲಿ ಪ್ರಕಟಿಸಿ ಸಾಹಿತಿ ಕೆ.ಎಸ್. ಭಗವಾನ್ ಅವರಿಂದ ಬಿಡುಗಡೆ ಮಾಡಿಸಿದ್ದರು. ಇದರಿಂದ ಕುಪಿತರಾದ ಹಿಂದುತ್ವ ಕಾರ್ಯಕರ್ತರು ಉಚ್ಛಂಗಿ ಅವರನ್ನು ತಡೆದು ಜಾತಿ ನಿಂದನೆ ಮಾಡಿ ಈ ರೀತಿ ಬರೆಯುವುದನ್ನು ನಿಲ್ಲಿಸದಿದ್ದರೆ ನಿನ್ನ ಬಲಗೈಯನ್ನು ಕತ್ತರಿಸುವುದಾಗಿ ಬೆದರಿಸಿ ಮುಖದ ತುಂಬಾ ಕುಂಕುಮ ಬಳೆದಿದ್ದಾರೆ. ಪೊಲೀಸರು ಅಪರಾಧಿಗಳನ್ನು ಬಂಧಿಸುವ ಗೋಜಿಗೆ ಹೋಗಿಲ್ಲ.
ಮಂಡ್ಯ ತಾಲೂಕು ಹುಲಿವಾನ ಗ್ರಾಮದಲ್ಲಿ ಪರಸ್ಪರ ಪ್ರೀತಿಸುತ್ತಿದ್ದ ದಲಿತ ಯುವಕ ಸಂತೋಷ್ಕುಮಾರ್ ಮತ್ತು ಲಿಂಗಾಯತ ಸಮುದಾಯದ ಯುವತಿ ಸುಮಾ ಜಿಲ್ಲಾ ಎಸ್.ಪಿ. ಮಧ್ಯಸ್ಥಿಕೆಯಲ್ಲಿ ವಿವಾಹವಾಗಿದ್ದರು. ಮದುವೆಯ ನಂತರ ಗ್ರಾಮದ ಲಿಂಗಾಯತರು ಮತ್ತು ಒಕ್ಕಲಿಗರು ಒಂದಾಗಿ, ದಲಿತ ಕೇರಿಗೆ ನುಗ್ಗಿ ದಲಿತರ ಮನೆಗಳ ಮೇಲೆ ದಾಳಿ ಮಾಡಿದ್ದಾರೆ. ಸ್ಕೂಟರ್ಗಳಿಗೆ ಮತ್ತು ಹುಲ್ಲಿನ ಮೆದೆಗಳಿಗೆ ಬೆಂಕಿ ಹಚ್ಚಿದ್ದಾರೆ. ಇಂತಹ ಪ್ರಕರಣಗಳು ರಾಜ್ಯದ ಅನೇಕ ಕಡೆಗಳಿಂದ ಆಗಾಗ ವರದಿಯಾಗುತ್ತಿರುವೆ.
ಯಲಬುರ್ಗಾ ತಾಲೂಕಿನ ಸಂಗನಹಾಲ ಗ್ರಾಮದಲ್ಲಿ 7ನೇ ತರಗತಿ ದಲಿತ ವಿದ್ಯಾರ್ಥಿನಿಯ ಮೇಲೆ ಅದೇ ಶಾಲೆಯ ಶಿಕ್ಷಕ ಲಿಂಗಾಯತ ಸಮುದಾಯಕ್ಕೆ ಸೇರಿದ ಅಂದಾನಪ್ಪ ನಿಂಗೋಜಿ ಒಂದು ವರ್ಷದಿಂದ ನಿರಂತರ ಅತ್ಯಾಚಾರ ಎಸಗುತ್ತಾ ಬಂದಿದ್ದಾನೆ. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಜಂಗಮ ಜಾತಿಗೆ ಸೇರಿದ ಬಸವರಾಜಯ್ಯ ಸ್ವಾಮಿ ಅತ್ಯಾಚಾರಿ ಶಿಕ್ಷಕನ ವಿರುದ್ಧ ಕ್ರಮ ಜರಗಿಸುವ ಬದಲಾಗಿ ಆತನನ್ನು ಸಂಗನಹಾಲ ಶಾಲೆಯಿಂದ ಬಿಡುಗಡೆಗೊಳಿಸಿ ಬೇರೊಂದು ಶಾಲೆಗೆ ನಿಯೋಜಿಸುವ ಮೂಲಕ ರಕ್ಷಣೆ ನೀಡಲು ಪ್ರಯತ್ನ ಪಟ್ಟಿದ್ದಾನೆ. ಪ್ರಕರಣದ ತನಿಖೆಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ದಲಿತ ಯುವತಿಗೆ ನ್ಯಾಯ ಸಿಕ್ಕೀತೇ ಎಂಬುದನ್ನು ಕಾದು ನೋಡಬೇಕಾಗಿದೆ.
ಇಂತಹ ದೌರ್ಜನ್ಯಗಳು ಮಾತ್ರವಲ್ಲ. ಹಲವು ಬಗೆಯ ಅಸ್ಪೃಶ್ಯತಾ ಆಚರಣೆಗಳ ಮೂಲಕ ದಲಿತರನ್ನು ಮಾನಸಿಕ ಹಿಂಸೆಗೆ ಹಾಗೂ ಅವಮಾನಕ್ಕೀಡು ಮಾಡಲಾಗುತ್ತದೆ. ಕ್ಷೌರದ ಅಂಗಡಿಗಳಲ್ಲಿ ದಲಿತರಿಗೂ ಕ್ಷೌರ ಮಾಡಲು ಕ್ಷೌರಿಕರು ತಯಾರಿದ್ದಾಗಲೂ ಗ್ರಾಮದ ಸವರ್ಣೀಯರು ಅದನ್ನು ವಿರೋಧಿಸುತ್ತಾರೆ. ಕ್ಷೌರ ನಿರಾಕರಣೆಯಿಂದ ವಿದ್ಯಾವಂತ ದಲಿತ ಯುವಕರು ಖೇದಕ್ಕೊಳಗಾಗುತ್ತಾರೆ. ಅದರಂತೆ ಗ್ರಾಮೀಣ ಚಹದ ಅಂಗಡಿಗಳಲ್ಲಿ ಎರಡು ಲೋಟ ಪದ್ಧತಿಯ ಮೂಲಕ ದಲಿತರಿಗೆ ತಾರತಮ್ಯ ಮಾಡುತ್ತಾರೆ. ಸವರ್ಣಿಯರು ಬೆಂಚಿನ ಮೇಲಿ ಕುಳಿತುಕೊಂಡು ತಟ್ಟೆಯಲ್ಲಿ ತಿಂಡಿ ತಿನ್ನುತ್ತಿದ್ದರೆ ದಲಿತರನ್ನು ನೆಲದ ಮೇಲೆ ಕೂಡಿಸಿ ಪೇಪರ್ನಲ್ಲಿ ತಿಂಡಿ ನೀಡುತ್ತಾರೆ. ದೇವಸ್ಥಾನವನ್ನು ಕಟ್ಟುವಾಗ, ಅದಕ್ಕೆ ಸುಣ್ಣ ಬಣ್ಣ ಬಳಿಯುವಾಗ ದಲಿತರನ್ನು ಬಳಸಿಕೊಳ್ಳುತ್ತಾರೆ. ಆದರೆ ಅದೇ ದೇವಸ್ಥಾನದ ಒಳಗೆ ಪ್ರವೇಶ ನಿರಾಕರಿಸಿ ದಲಿತರಿಗೆ ಅವಮಾನ ಮಾಡುತ್ತಾರೆ. ಶಾಲೆಗಳಲ್ಲಿ ದಲಿತ ಮಹಿಳೆಯೊಬ್ಬಳು ಬಿಸಿಯೂಟ ತಯಾರು ಮಾಡಿದರೆ ಸವರ್ಣೀಯರು ಊಟವನ್ನೇ ಬಹಿಷ್ಕರಿಸುತ್ತಾರೆ.
ಸಾರ್ವಜನಿಕ ನಲ್ಲಿ, ಕೆರೆ, ಬಾವಿಗಳಿಂದ ದಲಿತರು ನೀರು ಪಡೆಯುವಂತಿಲ್ಲ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಚನ್ನಪಟ್ಟಣ ಎಂಬ ಗ್ರಾಮದಲ್ಲಿ ದಾರಿಯ ಮಧ್ಯದಲ್ಲಿರುವ ಅರಳೀಮರದ ಕಟ್ಟೆಯನ್ನು ದಲಿತರು ಏರಿ ಹಾದುಹೋದರೆ ಸವರ್ಣೀಯರು ಬಂದು ಗೋಮೂತ್ರ ಹಾಕಿ ದಾರಿಯನ್ನು ಶುದ್ದಿಗೊಳಿಸುತ್ತಾರೆ. ಮೈಸೂರು, ಕೋಲಾರ ಮೊದಲಾದ ಅನೇಕ ಜಿಲ್ಲೆಗಳಲ್ಲಿ ಮಲಹೊರುವ ಪದ್ಧತಿ ಇನ್ನೂ ಜೀವಂತವಾಗಿದೆ.
ದಲಿತರ ಬಗ್ಗೆ ಸವರ್ಣೀಯರ ಅಸಹಿಷ್ಣುತೆ ಹೆಚ್ಚಾಗುತ್ತಿದೆ. ದಲಿತ ಯುವಕರು ಒಳ್ಳೆಯ ಡ್ರೆಸ್ ಹಾಕಿಕೊಂಡು ಹೊರಟರೆ, ದ್ವಿಚಕ್ರ ವಾಹನಗಳನ್ನು ಓಡಿಸುತ್ತಿದ್ದರೆ, ಕಾಲಿಗೆ ಒಳ್ಳೆಯ ಪಾದರಕ್ಷೆಗಳನ್ನು ಹಾಕಿಕೊಳ್ಳುತ್ತಿದ್ದರೆ. ಮತ್ಸರ ವ್ಯಕ್ತಪಡಿಸುವ ಸವರ್ಣೀಯರೂ ಇದ್ದಾರೆ. ಮೀಸಲಾತಿ ಮೂಲಕ ಎಲ್ಲ ಸರ್ಕಾರಿ ಸೌಲಭ್ಯಗಳನ್ನು ಅವರೇ ದೋಚುತ್ತಿದ್ದಾರೆ. ಎಂಬ ಆಧಾರರಹಿತ ಆರೋಪಗಳನ್ನು ಮಾಡುತ್ತಿರುತ್ತಾರೆ.
ಶಿಕ್ಷೆಗೊಳಗಾಗದ ಪ್ರಕರಣಗಳೇ ಹೆಚ್ಚು:
‘ಕರ್ನಾಟಕದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಆತಂಕದ ಸಂಗತಿ’ ಎಂದು ರಾಷ್ಟೀಯ ಪರಿಶಿಷ್ಟ ಜಾತಿ ಆಯೋಗದ ಅಧ್ಯಕ್ಷ ಡಾ. ಪಿ.ಎಲ್. ಪುನಿಯಾ ಇತ್ತೀಚೆಗೆ ಬೆಂಗಳೂರಿನಲ್ಲಿ ಹೇಳಿದ್ದಾರೆ ‘ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯತಡೆ) ಕಾಯ್ದೆ 1989ರ ಅನುಷ್ಠಾನ 2014 ರ ರಾಜ್ಯ ವರದಿ ಇತ್ತೀಚೆಗೆ ಬಿಡುಗಡೆಯಾಗಿದ್ದು 2014 ರಲ್ಲಿ ಪರಿಶಿಷ್ಟ ಜಾತಿಗಳ ಮೇಲಿನ ದೌರ್ಜನ್ಯ ಪ್ರಕರಣಗಳ ಪ್ರಮಾಣ ಶೇ. 6 ರಷ್ಟು ಹೆಚ್ಚಾಗಿದೆ ಎಂದು ವರದಿ ತಿಳಿಸಿದೆ.
ರಾಜ್ಯದಲ್ಲಿ 2014ನೇ ಸಾಲಿನಲ್ಲಿ ಪ. ಜಾ/ಪ. ಪಂ.ಗಳ ಮೇಲಿನ ದೌರ್ಜನಕ್ಕೆ ಸಂಬಂಧಿಸಿದಂತೆ ಒಟ್ಟು 1950 ಪ್ರಕರಣಗಳು ದಾಖಲಾಗಿದ್ದವು. ಅವುಗಳ ಪೈಕಿ 339 ಪ್ರಕರಣಗಳು ತನಿಖೆಯ ಹಂತದಲ್ಲಿವೆ. 1269 ಪ್ರಕರಣಗಳು ಇತ್ಯರ್ಥವಾಗಿಲ್ಲ. 11 ಪ್ರಕರಣಗಳಲ್ಲಿ ಆರೋಪಿಗಳನ್ನು ಖುಲಾಸೆ ಮಾಡಲಾಗಿದ್ದು, 74 ಪ್ರಕರಣಗಳು ವಿಲೇವಾರಿಯಾಗಿವೆ. 243 ಪ್ರಕರಣಗಳಲ್ಲಿ ‘ಬಿ’ ವರದಿ ಸಿದ್ಧಪಡಿಸಲಾಗಿದೆ. 14 ಪ್ರಕರಣಗಳನ್ನು ಹೊರ ರಾಜ್ಯಗಳಿಗೆ ವರ್ಗಾಯಿಸಲಾಗಿದೆ. ಒಟ್ಟು 1950 ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿಯೂ ಆರೋಪಿಗೆ ಶಿಕ್ಷೆಯಾಗಿಲ್ಲ.
ರಾಜ್ಯದ ನೂತನ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಇತ್ತೀಚೆಗೆ ವಿಧಾನಸಭೆಯಲ್ಲಿ ಸದಸ್ಯರೊಬ್ಬರು ಕೇಳಿದ ಪ್ರಶ್ನೆಗೆ ಲಿಖಿತ ಉತ್ತರ ನೀಡುತ್ತಾ ‘ರಾಜ್ಯದಲ್ಲಿ 2013 ರಲ್ಲಿ 1961, 2014 ರಲ್ಲಿ 2,141 ಹಾಗೂ 2015 ರಲ್ಲಿ 1820 ದೌರ್ಜನ್ಯ ಪ್ರಕರಣಗಳು ವರದಿಯಾಗಿದ್ದು ಆ ಪೈಕಿ 2013 ರಲ್ಲಿ 104, 2014 ರಲ್ಲಿ 31 ಹಾಗೂ 2015 ರಲ್ಲಿ 30 ಸೇರಿದಂತೆ ಒಟ್ಟು 165 ಮಂದಿಗೆ ಶಿಕ್ಷೆಯಾಗಿದೆ’ ಎಂದು ಹೇಳಿದ್ದಾರೆ. ಪೊಲೀಸರು ಅಪರಾಧಿಗಳೊಂದಿಗೆ ಶಾಮೀಲಾಗುವುದು, ತನಿಖೆಯನ್ನು ತ್ವರಿತವಾಗಿ ಮಾಡದೆ ಇರುವುದು, ಪ್ರಕರಣದ ಸಾಕ್ಷಿಗಳಿಗೆ ಅಗತ್ಯ ರಕ್ಷಣೆ ನೀಡದಿರುವುದು ಮುಂತಾದ ಕಾರಣಗಳಿಂದಾಗಿ ದೌರ್ಜನ್ಯ ಪ್ರಕರಣಗಳಲ್ಲಿ ಅಪರಾಧಿಗಳಿಗೆ ಶಿಕ್ಷೆಯಾಗುತ್ತಿಲ್ಲ.