ಪ್ರಧಾನ ಮಂತ್ರಿಗಳು ನವಂಬರ್ 8ರಂದು ಜನರಿಗೆ ಡಿಸೆಂಬರ್30 ರ ವರೆಗೆ 500 ರೂ. ಮತ್ತು 1000ರೂ. ನೋಟುಗಳನ್ನು ವಿನಿಮಯ ಮಾಡಲು ಬಿಡಲಾಗುವುದು ಎಂದು ಮಾತು ಕೊಟ್ಟಿದ್ದರು. ಆದರೆ ಈಗ ಮೋದಿ ಸರಕಾರ ವಿಶಾಸ್ವದ್ರೋಹ ಮಾಡಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಟೀಕಿಸಿದೆ.
ಪ್ರಧಾನ ಮಂತ್ರಿಗಳು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಈ ಪ್ರಕಟಣೆ ಮಾಡಿದ್ದರು. ಅಷ್ಟೇ ಅಲ್ಲ, ಹಳೆಯ ನೋಟುಗಳ ವಿನಿಮಯದ ಮಿತಿಗಳನ್ನು 25 ನವಂಬರ್ನಿಂದ 30 ಡಿಸೆಂಬರ್ ವರೆಗೆ ಏರಿಸಲಾಗುವುದು ಎಂದೂ ಹೇಳಿದ್ದರು. ರಿಝರ್ವ್ ಬ್ಯಾಂಕ್ ಕೂಡ ನವಂಬರ್11ರ ತನ್ನ ಪತ್ರಿಕಾ ಹೇಳಿಕೆಯಲ್ಲಿ ಹಳೆಯ ನೋಟುಗಳ ವಿನಿಮಯ ಸುಮಾರು 50 ದಿನಗಳ ವರೆಗೆ ಅಂದರೆ ಡಿಸೆಂಬರ್ 30ರ ವರೆಗೆ ಅವಕಾಶ ಲಭ್ಯವಿರುತ್ತದೆ ಎಂದಿತ್ತು.
ಆದರೆ ಈಗ ಸರಕಾರ ತಕ್ಷಣದಿಂದಲೇ ನೋಟುಗಳ ವಿನಿಮಯವನ್ನು ಕೊನೆಗೊಳಿಸುವ ಏಕಪಕ್ಷೀಯ ಪ್ರಕಟಣೆ ಮಾಡಿದೆ. ಇದು ಜನಸಾಮಾನ್ಯರನ್ನು ಇನ್ನಷ್ಟು ತೊಂದರೆಗಳಿಗೆ ಈಡು ಮಾಡುತ್ತದೆ ಮತ್ತು ಬಡ ವಿಭಾಗಗಳ ಸಂಕಟಗಳನ್ನು ಹೆಚ್ಚಿಸುತ್ತದೆ, ಏಕೆಂದರೆ ಅವರಲ್ಲಿ ಬಹಳಷ್ಟು ಮಂದಿಯ ಬಳಿ ಬ್ಯಾಂಕ್ ಖಾತೆಗಳಿಲ್ಲ. ಅವರು ಈಗ ಪಾನ್ ಕಾರ್ಡ್ಗಳಿಲ್ಲದೆ ಖಾತೆಗಳನ್ನು ತೆರೆಯುವುನ್ನು ಕೂಡ ಸರಕಾರ ಅಸಾಧ್ಯಗೊಳಿಸಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ತಮ್ಮದೇ ಹಣದ ಮೇಲೆ ಜನತೆಯ ಹಕ್ಕು ಮತ್ತು ಅದನ್ನು ತಮಗೆ ಸರಿ ಕಂಡಂತೆ ಖರ್ಚು ಮಾಡುವ ಹಕ್ಕಿನ ಮೇಲೆ ಇದೀಗ ಹೊಚ್ಚ ಹೊಸ ಪ್ರಹಾರ ಎಂದು ಬಲವಾಗಿ ಖಂಡಿಸಿದೆ. ಹೊಸ ನೋಟುಗಳ ಪರ್ಯಾಯ ವ್ಯವಸ್ಥೆ ಆಗುವ ವರೆಗೆ ಹಳೆಯ ನೋಟುಗಳಲ್ಲಿ ಎಲ್ಲ ವ್ಯವಹಾರಗಳನ್ನು ನಡೆಸಲು ಅವಕಾಶ ಕೊಡಬೇಕು ಎಂಬ ಬೇಡಿಕೆಯನ್ನು ಅದು ಪುನರುಚ್ಚರಿಸಿದೆ.
ಈ ಎಲ್ಲ ಜನ-ವಿರೋಧಿ ಕ್ರಮಗಳ ವಿರುದ್ಧ ಸಾರ್ವಜನಿಕ ಅಭಿಪ್ರಾಯವನ್ನು ಅಣಿನೆರೆಸಿ ನವಂಬರ್ 28ರ ಅಖಿಲ ಭಾರತ ಪ್ರತಿಭಟನೆಯ ಕರೆಯನ್ನು ಅತ್ಯಂತ ಯಶಸ್ವಿಗೊಳಿಸಬೇಕು ಎಂದು ತನ್ನ ಎಲ್ಲ ಘಟಕಗಳಿಗೆ ಸಿಪಿಐ(ಎಂ) ಪೊಲಿಟ್ಬ್ಯುರೊ ಕರೆ ನೀಡಿದೆ.