ಸಿಪಿಐ(ಎಂ) ಪೊಲಿಟ್ಬ್ಯುರೊ ಶ್ರದ್ಧಾಂಜಲಿ
ಮಹಾದಂಡನಾಯಕ ಫಿಡೆಲ್ ರೂಝ್ ಕಾಸ್ಟ್ರೊ, ಕ್ಯೂಬಾ ಕ್ರಾಂತಿಯ ಮಹಾನ್ ನೇತಾರ, ಕಟ್ಟಾ ಅಂತರ್ರಾಷ್ಟ್ರೀಯವಾದಿ ಮತ್ತು ಸಮಾಜವಾದದ ಶಿಲ್ಪಿ ಇನ್ನಿಲ್ಲ.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಪೊಲಿಟ್ಬ್ಯುರೊ 20ನೇ ಶತಮಾನದ ಉತ್ತರಾರ್ಧದಲ್ಲಿ ಕ್ರಾಂತಿಕಾರಿ ಆಂದೋಲನಗಳನ್ನು ರೂಪಿಸಲು ಎಷ್ಟೊಂದು ಕೆಲಸ ಮಾಡಿದ ಈ ಅತ್ಯುನ್ನತ ಕ್ರಾಂತಿಕಾರಿ ವ್ಯಕ್ತಿತ್ವಕ್ಕೆ ತನ್ನ ಗೌರವಪೂರ್ಣ ಶ್ರದ್ಧಾಂಜಲಿಯನ್ನು ಅರ್ಪಿಸುತ್ತದೆ.
ಫಿಡೆಲ್ ಕಾಸ್ಟ್ರೊ ಕ್ಯೂಬಾದ ಅಸಹ್ಯ ಬಾತಿಸ್ತಾ ಆಳ್ವಿಕೆಯ ವಿರುದ್ಧ ಕ್ರಾಂತಿಕಾರಿ ಬಂಡಾಯಕ್ಕೆ ಉಜ್ವಲ ನೇತೃತ್ವ ನೀಡಿದವರು. 1959ರಲ್ಲಿ ಯಶಸ್ವಿಯಾದ ಕೂಬಾ ಕ್ರಾಂತಿ ಪಶ್ಚಿಮ ಗೋಳಾರ್ಧದಲ್ಲಿನ ಮೊದಲ ಸಮಾಜವಾದಿ ಕ್ರಾಂತಿಯಾಗಿ ಪರಿಣಮಿಸಿತು. ಅವರ ಕ್ರಿಯಾಶೀಲ ನೇತೃತ್ವದಲ್ಲಿ ಕ್ಯೂಬ ಅರೆ-ವÀಸಾಹತುಶಾಹಿ ಮತ್ತು ಗುಲಾಮಿಕೆಯಿಂದ ಹೊರಬಂದು, ಸಾಮಾಜಿಕವಾಗಿ ನ್ಯಾಯಯುತವಾದ, ಸಾರ್ವತ್ರಿಕ ಶಿಕ್ಷಣ, ಆರೋಗ್ಯ, ಆಹಾರ ಪೂರೈಕೆ, ಮಹಿಳಾ ಹಕ್ಕುಗಳು ಮತ್ತು ಜನಾಂಗೀಯ ಸಮಾನತೆಯತ್ತ ದಾಪುಗಾಲುಗಳನ್ನಿಡುವ ಒಂದು ಸಮಾಜವನ್ನು ಕಟ್ಟಲು ಮುನ್ನಡೆಯಿತು.
ಕ್ಯೂಬಾದ ಪ್ರಭುತ್ವದ ಅಧ್ಯಕ್ಷರಾಗಿ, ಕ್ಯೂಬ ಕಮ್ಯುನಿಸ್ಟ್ ಪಕ್ಷದ ಪ್ರಥಮ ಕಾರ್ಯದರ್ಶಿಯಾಗಿ ಫಿಡೆಲ್ ಕಾಸ್ಟ್ರೊ ಈ ಕ್ರಾಂತಿಕಾರಿ ಪರಿವರ್ತನೆಗೆ ನೇತೃತ್ವ ನೀಡಿದರು.
ಕೆಚ್ಚೆದೆಯ ಕ್ರಾಂತಿಕಾರಿ ಫಿಡೆಲ್ ಕಾಸ್ಟ್ರೊ, ಕೇವಲ 90 ಮೈಲಿ ದೂರದಲ್ಲಿರುವ ಜಗತ್ತಿನ ಅತ್ಯಂತ ದೊಡ್ಡ ಸಾಮ್ರಾಜ್ಯಶಾಹಿ ಶಕ್ತಿಯಾದ, ಅಮೆರಿಕ ಸಂಯುಕ್ತ ಸಂಸ್ಥಾನಗಳ ಕ್ರೋಧಕ್ಕೆ ಗುರಿಯಾಗಿದ್ದರು. ಐದು ದಶಕಗಳ ಕಾಲ ಅವರು, ಸಮಾಜವಾದಿ ಕ್ಯೂಬವನ್ನು ನಾಶಗೊಳಿಸುವ, ಅವರನ್ನು ವೈಯಕ್ತಿಕವಾಗಿ ಮುಗಿಸಿಬಿಡುವ ಪ್ರಯತ್ನಗಳೂ ಸೇರಿದಂತೆ ಹಲವಾರು ಪಿತೂರಿಗಳ ವಿರುದ್ಧ ಹೋರಾಡುತ್ತಲೇ ಕ್ಯೂಬಕ್ಕೆ ನೇತೃತ್ವ ನೀಡಿದರು. ಕ್ಯೂಬ ಈಗಲೂ ಅಮೆರಿಕಾ ಸಂಯುಕ್ತ ಸಂಸ್ಥಾನ ಹೇರಿರುವ ಆರ್ಥಿಕ ನಿರ್ಬಂಧದ ವಿರುದ್ಧ ದಿಟ್ಟತನದಿಂದ ಹೋರಾಡುತ್ತಿದೆ.
ಕ್ಯೂಬಾದ ಕ್ರಾಂತಿ ಲ್ಯಾಟಿನ್ ಅಮೆರಿಕಾದ ಎಲ್ಲ ಕ್ರಾಂತಿಕಾರಿ ಮತ್ತು ಪ್ರಗತಿಶೀಲ ಆಂದೋಲನಗಳಿಗೆ ದಾರಿ ದೀಪವಾಯಿತು, ಅಲ್ಲಿನ ಎಡಶಕ್ತಿಗಳ ಮುನ್ನಡೆಗೆ ಸ್ಫೂರ್ತಿ ತುಂಬಿತು. ಫಿಡೆಲ್ ಕಾಸ್ಟ್ರೊ ಮೂರನೇ ಜಗತ್ತಿನ ದೇಶಗಳಿಗೆ ಒಂದು ಕ್ರಾಂತಿಕಾರಿ ಬಿಂಬವಾದರು, ಹಲವು ಯುವ ಪೀಳಿಗೆಗಳಿಗೆ ಸ್ಫ್ಫೂರ್ತಿಯ ಚಿಲುಮೆಯಾದರು. ಅಲಿಪ್ತ ಆಂದೋಲನದಲ್ಲಿ ಅವರು ಒಂದು ನೇತೃತ್ವದ ಪಾತ್ರ ವಹಿಸಿದರು.
ಫಿಡೆಲ್ ನೇತೃತ್ವದಲ್ಲಿ ಕ್ಯೂಬಾ ಕ್ರಾಂತಿ ವಹಿಸಿರುವ ಅಂತರ್ರಾಷ್ಟ್ರೀಯವಾದಿ ಪಾತ್ರ ನಿಜಕ್ಕೂ ಅಸಾಧಾರಣವಾದದ್ದು. ಫಿಡೆಲ್ ಕ್ಯೂಬನ್ ಸಶಸ್ತ್ರ ಪಡೆಗಳನ್ನು ಅಂಗೋಲ, ಮೊಝಾಂಬಿಕ್ ಮತ್ತು ದಕ್ಷಿಣ ಆಫ್ರಿಕಾದಲ್ಲಿ ವಸಾಹತುಶಾಹಿ ಮತ್ತು ಸಾಮ್ರಾಜ್ಯಶಾಹಿಯ ವಿರುದ್ಧ ಹೋರಾಟದಲ್ಲಿ ನೆರವಾಗಲು ಕಳಿಸಿದರು. ಅವರ ನೇತೃತ್ವದಲ್ಲಿ ಕ್ಯೂಬ ಡಾಕ್ಟರುಗಳನ್ನು, ಶಿಕ್ಷಕರನ್ನು ಮೂರನೇ ಜಗತ್ತಿನ ವಿವಿಧ ದೇಶಗಳಿಗೆ ಕಳಿಸಿ ಅಂತರ್ರಾಷ್ಟ್ರೀಯ ಸೇವೆ ಒದಗಿಸುವುದನ್ನು ಮುಂದುವರೆಸಿತು.
ಫಿಡೆಲ್ ಕಾಸ್ಟ್ರೊ ತಾನೊಬ್ಬ ಮಾಕ್ರ್ಸ್ವಾದಿ ಸಿದ್ಧಾಂತ ಮತ್ತು ಆಚರಣೆಯ ಸೃಜನಶೀಲ ಕರ್ತೃ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. 20ನೇ ಶತಮಾನದ ಉತ್ತರಾರ್ಧದಲ್ಲಿ ಅವರು ಸಮಾಜವಾದದ ಅತ್ಯಂತ ಸ್ಫುಟವಾದ ಪ್ರತಿಪಾದಕರಾಗಿ ಮೂಡಿ ಬಂದರು.
ಅವರ ನಿಧನದೊಂದಿಗೆ ಒಂದು ಯುಗ ಅಂತ್ಯಗೊಂಡಿದೆ. ಆದರೆ ಅವರ ಕ್ರಾಂತಿಕಾರಿ ಪರಂಪರೆ ಗಟ್ಟಿಯಾಗಿ ಉಳಿಯುತ್ತದೆ. ಅವರ ಬದುಕು ಮತ್ತು ಮಾದರಿ ಜಗತ್ತಿನಾದ್ಯಂತ ಮುಂಬರುವ ಕಾಲಗಳಲ್ಲಿ ಎಲ್ಲ ಕ್ರಾಂತಿಕಾರಿಗಳು ಮತ್ತು ಪ್ರಗತಿಶೀಲರಿಗೆ ಮುಂದೆಯೂ ಸ್ಫೂರ್ತಿದಾಯಕವಾಗಿರುತ್ತದೆ.
ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಪೊಲಿಟ್ ಬ್ಯುರೊ ತನ್ನ ಕೆಂಬಾವುಟವನ್ನು ಬಾಗಿಸಿ ಶ್ರದ್ಧಾಂಜಲಿ ಅರ್ಪಿಸುತ್ತದೆ.