500 ಮತ್ತು 1000ರೂಪಾಯಿ ನೋಟುಗಳನ್ನು ಹಿಂತೆಗೆದುಕೊಂಡು ಜನಗಳ ಮೇಲೆ ಮತ್ತಷ್ಟು ಹೊರೆಹಾಕಿ, ಅವರ ಜೀವನಾಧಾರಗಳ ಮೇಲೆ ಮಾಡಿರುವ ಪ್ರಹಾರದ ವಿರುದ್ಧ ನವಂಬರ್ 28ರಂದು ಬೀದಿಗಿಳಿದು ಪ್ರತಿಭಟನೆ ಮಾಡಿದ ಲಕ್ಷಾಂತರ ಜನಗಳನ್ನು ಅಭಿನಂದಿಸುತ್ತ ಸಿಪಿಐ(ಎಂ) ಪೊಲಿಟ್ಬ್ಯುರೊ, ಸಾಕಷ್ಟು ಪ್ರಮಾಣದಲ್ಲಿ ಪರ್ಯಾಯ ವ್ಯವಸ್ಥೆ ಏರ್ಪಡಿಸುವ ವರೆಗೆ ಎಲ್ಲ ವ್ಯವಹಾರಗಳಿಗೆ ಹಳೆಯ ನೋಟುಗಳನ್ನು ಬಳಸಲು ಅವಕಾಶವಾಗಬೇಕೆಂಬ ಹೋರಾಟವನ್ನು, ಪ್ರತಿಭಟನಾ ಚಳುವಳಿಯನ್ನು ಮುಂದುವರೆಸಬೇಕು ಎಂದು ಎಲ್ಲ ರಾಜಕೀಯ ಪಕ್ಷಗಳಿಗೆ, ಕಾರ್ಮಿಕ ಸಂಘಟನೆಗಳಿಗೆ ಮತ್ತು ಸಾಮೂಹಿಕ ಸಂಘಟನೆಗಳಿಗೆ ಕರೆ ನೀಡಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ಜನಗಳನ್ನು ದಾರಿ ತಪ್ಪಿಸಲೆಂದೇ ಈ ರಾಷ್ಟ್ರೀಯ ಪ್ರತಿಭಟನಾ ದಿನವನ್ನು ಭಾರತ್ ಬಂದ್ ಕರೆ ಎಂದು ಕರೆದಿದ್ದಾರೆ. ಈ ಪ್ರತಿಭಟನೆಗೆ ಕರೆ ನೀಡಿದ ಯಾವ ಪ್ರತಿಪಕ್ಷವೂ ಇದನ್ನು ಭಾರತ್ ಬಂದ್ ಎಂದು ಕರೆದಿಲ್ಲ. ವಾಸ್ತವವಾಗಿ ದೇಶದ ಮೇಲೆ ಈ ಅನಾಣ್ಯೀಕರಣದ ಮೂಲಕ ಆರ್ಥಿಕ ಬಂದ್ ಹೇರಿರುವುದು ಮೋದಿ ಸರಕಾರವೇ ಎಂದು ಸಿಪಿಐ(ಎಂ) ಟಿಪ್ಪಣಿ ಮಾಡಿದೆ.
ನಿರ್ದಿಷ್ಟವಾಗಿ ತ್ರಿಪುರ ಮತ್ತು ಕೇರಳದಲ್ಲಿ ಹರತಾಳಗಳು ಯಶಸ್ವಿಯಾಗಿರುವುದು ಎಡಪಕ್ಷಗಳು ಶಕ್ತಿಶಾಲಿ ಪ್ರತಿಭಟನೆಯನ್ನು ದಾಖಲಿಸಲು ಜನಗಳನ್ನು ಅಣಿನೆರೆಸಿದ್ದರಿಂದಾಗಿ ಎಂದು ಸಿಪಿಐ(ಎಂ) ಹೇಳಿದೆ.