ಸಿಪಿಐ(ಎಂ) ಪಕ್ಷದ ಬಗ್ಗೆ

ಸಿಪಿಐ(ಎಂ) ಅಥವಾ ಭಾರತೀಯ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ), 1964ರಲ್ಲಿ ಕಲ್ಕತ್ತದಲ್ಲಿ (ಈಗೀನ ಕೋಲ್ಕತ್ತಾ) ಅಕ್ಟೋಬರ್ 31 ರಿಂದ ನವಂಬರ್ 7 ರವರೆಗೆ ನಡೆದ ಭಾರತೀಯ ಕಮ್ಯುನಿಸ್ಟ್ ಪಕ್ಷದ 7ನೇ ಮಹಾಧಿವೇಶನದಲ್ಲಿ ಸ್ಥಾಪಿತವಾಯಿತು. ಅಂತರ್ರಾಷ್ಟ್ರೀಯ ಮತ್ತು  ರಾಷ್ಟ್ರೀಯ ಮಟ್ಟದ ಕಮ್ಯುನಿಸ್ಟ್ ಚಳುವಳಿಯಲ್ಲಿ ಪರಿಷ್ಕರಣವಾದ ಮತ್ತು ಪಂಥವಾದದ ವಿರುದ್ಧ ಮತ್ತು ಮಾರ್ಕ್ಸ್‌ವಾದ-ಲೆನಿನ್ ವಾದದ ವೈಜ್ಞಾನಿಕ ಹಾಗೂ ಕ್ರಾಂತಿಕಾರಿ ಅಂಶಗಳನ್ನು ಎತ್ತಿ ಹಿಡಿಯುವ, ಅದನ್ನು ಭಾರತದ ನಿರ್ದಿಷ್ಟ ಪರಿಸ್ಥಿತಿಗೆ ಅಳವಡಿಸುವ ಹೋರಾಟದ ಭಾಗವಾಗಿ ಸಿಪಿಐ(ಎಂ) ಜನ್ಮ ತಾಳಿತು.

ಸಿಪಿಐ(ಎಂ) 1920ರಲ್ಲಿ ಸ್ಥಾಪಿತವಾದ ಅವಿಭಜಿತ ಕಮ್ಯುನಿಸ್ಟ್ ಪಕ್ಷದ ಸಾಮ್ರಾಜ್ಯಶಾಹಿ ಹೋರಾಟ ಮತ್ತು ಕ್ರಾಂತಿಕಾರಿ ಪರಂಪರೆಗಳ ಸುಮಧುರ ಮಿಶ್ರಣದ ವಾರಸುದಾರನಾಗಿದೆ. ಪಕ್ಷ ಆ ಮೇಲಿನ ವರ್ಷಗಳಲ್ಲಿ ದೇಶದ ಅತಿ ದೊಡ್ಡ ಮಂಚೂಣಿಯ ಎಡ ಶಕ್ತಿಯಾಗಿ ಹೊಮ್ಮಿದೆ.

ಸಿಪಿಐ(ಎಂ) 1964ರ ನಂತರ ನಿರಂತರವಾಗಿ ಬೆಳೆಯುತ್ತಾ ಬಂದಿದೆ. 1.18 ಲಕ್ಷ ಸದಸ್ಯರೊಂದಿಗೆ ಸ್ಥಾಪನೆಯಾದ ಪಕ್ಷ 2011ರ ಹೊತ್ತಿಗೆ 10.44 ಲಕ್ಷ ಸದಸ್ಯರ ದೊಡ್ಡ ಪಕ್ಷವಾಗಿ ಬೆಳೆದಿದೆ. ಪಕ್ಷದ ನಾಯಕತ್ವದಲ್ಲಿರುವ ಸಾಮೂಹಿಕ ಸಂಘಟನೆಗಳ ಸದಸ್ಯತ್ವ 2011ರಲ್ಲಿ ಸುಮಾರು 4.8 ಕೋಟಿ ಇತ್ತು. ಪಕ್ಷ ಮಾರ್ಕ್ಸ್‌ವಾದ-ಲೆನಿನ್  ವಾದವನ್ನು ಭಾರತದ ನಿರ್ದಿಷ್ಟ ಪರಿಸ್ಥಿತಿಗೆ ಸ್ವತಂತ್ರವಾಗಿ ಅಳವಡಿಸಿ, ಭಾರತದ ಜನತೆಯ ಬದುಕನ್ನು ಹಸನುಗೊಳಿಸುವ ದಿಕ್ಕಿನಲ್ಲಿ ಮೂಲಭೂತ ಪರಿವರ್ತನೆ ಮಾಡಬಲ್ಲ ಜನತಾ ಪ್ರಜಾಪ್ರಭುತ್ವ ಕ್ರಾಂತಿಯ ವ್ಯೂಹ ಮತ್ತು ತಂತ್ರಗಳನ್ನು ರೂಪಿಸುವ ಕಾಯಕದಲ್ಲಿ ತೊಡಗಿದೆ. ಸಿಪಿಐ(ಎಂ) ಸಾಮ್ರಾಜ್ಯಶಾಹಿ, ದೊಡ್ಡ ಬಂಡವಾಳಶಾಹಿ ಮತ್ತು ಭೂಮಾಲಕರ ಶೋಷಣೆಯನ್ನು ಕೊನೆಗೊಳಿಸುವ ಕಾರ್ಯಕ್ರಮವನ್ನು ಜಾರಿ ಮಾಡುತ್ತಾ ಈ ಮೂಲಭೂತ ಪರಿವರ್ತನೆ ತರುವ ಸತತ ಪ್ರಯತ್ನದಲ್ಲಿ ತೊಡಗಿದೆ. ದೇಶದ ಮಂಚೂಣಿ ಎಡ ಪಕ್ಷವಾಗಿ ಪ್ರಸಕ್ತ ಬೂರ್ಜ್ವಾ-ಭೂಮಾಲಕ ನೀತಿಗಳಿಗೆ ನಿಜವಾದ ಬದಲಿ ನೀತಿಗಳನ್ನು ಪ್ರಸ್ತುತ ಪಡಿಸಬಲ್ಲ ಎಡ ಮತ್ತು ಪ್ರಜಾಸತ್ತಾತ್ಮಕ ರಂಗವನ್ನು ಕಟ್ಟಲು ಪಣ ತೊಟ್ಟಿದೆ.

ಕಳೆದ ಕೆಲವು ಚುನಾವಣೆಗಳಲ್ಲಿ ಸರಾಸರಿ ಸುಮಾರು ಶೇ.15ರಷ್ಟು ಸೀಟುಗಳಲ್ಲಿ ಸ್ಪರ್ಧಿಸಿ ಸಿಪಿಐ(ಎಂ) ಸುಮಾರು ಶೇ. 5-6 ಮತ ಗಳಿಸಿದೆ. 2009ರ ಲೋಕಸಭಾ ಚುನಾವಣೆಗಳಲ್ಲಿ ಸಿಪಿಐ(ಎಂ) 16 ಸೀಟುಗಳನ್ನು ಗೆದ್ದಿದೆ. 2004ರಲ್ಲಿ ಗಳಿಸಿದ 43 ಸೀಟುಗಳು ಸಿಪಿಐ(ಎಂ) ಇದುವರೆಗಿನ ಅತ್ಯಧಿಕ ಸೀಟುಗಳು. ರಾಜ್ಯಸಭಾದಲ್ಲಿ ಸಿಪಿಐ(ಎಂ) 11 ಸೀಟುಗಳನ್ನು ಹೊಂದಿದೆ. ಈಗ ಸಿಪಿಐ(ಎಂ) ಎರಡು ರಾಜ್ಯದಲ್ಲಿ ರಾಜ್ಯ ಸರಕಾರ ನಡೆಸುತ್ತಿದೆ. ಹಲವು ಅವಧಿಗಳಲ್ಲಿ ಸಿಪಿಐ(ಎಂ) ಮೂರು ರಾಜ್ಯಗಳಲ್ಲಿ ಅಧಿಕಾರ ವಹಿಸಿಕೊಂಡಿತ್ತು. ಪಶ್ಚಿಮ ಬಂಗಾಳದಲ್ಲಿ 1977ರಿಂದ 2011ರವರೆಗೆ ಸತತವಾಗಿ ಅಧಿಕಾರದಲ್ಲಿತ್ತು. ಕೇರಳದಲ್ಲಿ 1967ರಿಂದ ಆರಂಭಿಸಿ ಹೆಚ್ಚು ಕಡಿಮೆ ಅರ್ಧದಷ್ಟು ಅವಧಿಯಲ್ಲಿ ರಾಜ್ಯ ಸರಕಾರದ ನಾಯಕತ್ವ ವಹಿಸಿತ್ತು. ಈಗ ಸಿಪಿಐ(ಎಂ) ನಾಯಕತ್ವದ ಎಡ ಪ್ರಜಾಸತ್ತಾತ್ಮಕ ರಂಗ ಅಧಿಕಾರದಲ್ಲಿ ಇದೆ. ತ್ರಿಪುರಾದಲ್ಲಿ 1977ರಲ್ಲಿ ಮೊದಲ ಬಾರಿಗೆ ಅಧಿಕಾರ ಗ್ರಹಣ ಮಾಡಿತು. ಆ ನಂತರ ಒಂದು ಬಾರಿ ಬಿಟ್ಟರೆ (ಅದೂ ವ್ಯಾಪಕ ರಿಗ್ಗಿಂಗ್ ಪರಿಣಾಮವಾಗಿ) ಮತ್ತು 1988ರಿಂದ ಸತತವಾಗಿ ಭಾರೀ ಬಹಮತದಿಂದ ಚುನಾಯಿಸಲ್ಪಡುತ್ತಿದೆ. ಸಂಖ್ಯೆಯಲ್ಲಿ ಹಲವು ಏರುಪೇರುಗಳಿದ್ದರೂ ಸಿಪಿಐ(ಎಂ) ಎಂಟು ರಾಜ್ಯಗಳ ವಿಧಾನ ಸಭೆಗಳಲ್ಲಿ ಪ್ರಾತಿನಿಧ್ಯ ಹೊಂದಿದೆ.

ಇತರ ರಾಜ್ಯಗಳಂತೆ ಸಿಪಿಐ(ಎಂ)ನ ಕರ್ನಾಟಕ ಘಟಕ ಸಹ 1964ರಲ್ಲಿ ಅವಿಭಜಿತ ಕಮ್ಯುನಿಸ್ಟ್ ಚಳುವಳಿಯ ಒಳಗಿನ ಸೈದ್ಧಾಂತಿಕ ಹೋರಾಟದ ಭಾಗವಾಗಿ ಹುಟ್ಟಿ, ಸತತವಾಗಿ ಬೆಳೆಯುತ್ತಾ ಬಂದಿದೆ. 2011ರ ಹೊತ್ತಿಗೆ 7800 ಸದಸ್ಯರನ್ನು ಹೊಂದಿರುವ ದೊಡ್ಡ ಪಕ್ಷವಾಗಿ ಹೊಮ್ಮಿದೆ. ಪಕ್ಷದ ನಾಯಕತ್ವದಲ್ಲಿರುವ ಸಾಮೂಹಿಕ ಸಂಘಟನೆಗಳ ಸದಸ್ಯತ್ವ 2010ರಲ್ಲಿ ಸುಮಾರು 6 ಲಕ್ಷ ಇತ್ತು. ಈಗ ವಿಧಾನ ಸಭೆಯಲ್ಲಿ ಪಕ್ಷಕ್ಕೆ ಯಾವುದೇ ಪ್ರಾತಿನಿಧ್ಯ ಇಲ್ಲ. 1983ರಲ್ಲಿ ಗೆದ್ದ 3 ಸೀಟುಗಳು ಪಕ್ಷ ಗಳಿಸಿದ ಅತ್ಯಧಿಕ ಸೀಟುಗಳು. ಹಲವು ಜಿಲ್ಲಾ, ತಾಲೂಕು, ಗ್ರಾಮ ಪಂಚಾಯತುಗಳಲ್ಲಿ ಪ್ರಾತಿನಿಧ್ಯ ಹೊಂದಿದೆ.

Leave a Reply

Your email address will not be published. Required fields are marked *