130 ಕೋಟಿ ಜನತೆಗೆ ಅಗೌರವ : ಪ್ರಧಾನಿಗಳಿಗೆ ಯೆಚೂರಿ ಪತ್ರ
ಈ ಹೊಸ ಒಪ್ಪಂದದ ಹಿನ್ನೆಲೆಯಲ್ಲಿ ಸಿಪಿಐ(ಎಂ) ಪ್ರದಾನ ಕಾರ್ಯದರ್ಶಿ ಮತ್ತು ರಾಜ್ಯಸಭಾ ಸದಸ್ಯ ಸೀತಾರಾಮ್ ಯೆಚೂರಿಯವರು ಪ್ರಧಾನ ಮಂತ್ರಿಗಳಿಗೆ ಒಂದು ಪತ್ರ ಬರೆದು ಅಮೆರಿಕಾದಲ್ಲಿ ಇದನ್ನು ಪ್ರಕಟಿಸಿ ಮಂಜೂರಾತಿಗೆ ಅಲ್ಲಿನ ಸೆನೆಟ್ ಮುಂದೆ ಇಡಲಾಗಿದೆಯಾದರೂ ಇಲ್ಲಿ ಭಾರತ ಸರಕಾರ ಯಾವ್ಯಾವ ಶರತ್ತುಗಳಿಗೆ ಒಪ್ಪಿದೆ ಎಂಬುದನ್ನು ತಿಳಿಸಿಲ್ಲ ಎಂಬ ಸಂಗತಿಯತ್ತ ಗಮನ ಸೆಳೆದಿದ್ದಾರೆ. ಅಲ್ಲದೆ ಇದನ್ನು ಭಾರತೀಯ ಜನತೆಯನ್ನು ಪ್ರತಿನಿಧಿಸುವ ಸಂಸತ್ತು ಅಧಿವೇಶನದಲ್ಲಿರುವಾಗಲೇ, ಅದರ ಗಮನಕ್ಕೆ ತರದೆ ಅಮೆರಿಕಾದೊಂದಿಗೆ ಕುದುರಿಸಿ 130 ಕೋಟಿ ಜನತೆಗೆ ಅಗೌರವ ತೋರಿಸಿದೆ, ಅಮೆರಿಕಾದಲ್ಲಿ ಪ್ರಕಟವಾಗಿರುವ ವಿವರಗಳ ಪ್ರಕಾರ ಮೋದಿ ಸರಕಾರ ದೇಶದ ಸಾರ್ವಭೌಮತೆ ಮತ್ತು ಸಾಮರಿಕ ಸ್ವಾಯತ್ತತೆಗೆ ಧಕ್ಕೆತರುವ ಶರತ್ತುಗಳಿಗೆ ಒಪ್ಪಿದೆ ಎಂಬ ಗಂಭೀರ ಸಂಗತಿಯತ್ತ ಪ್ರಧಾನಿಗಳ ಗಮನ ಸೆಳೆದಿದ್ದಾರೆ. ಅವರ ಪತ್ರದ ಪೂರ್ಣ ಪಾಠವನ್ನು ಇಲ್ಲಿ ಕೊಡಲಾಗಿದೆ:
ಪ್ರಧಾನ ಮಂತ್ರಿಗಳೇ,
ನಿಮ್ಮ ಮಂತ್ರಿಮಂಡಲ ಡಿಸೆಂಬರ್ 8, 2016ರಂದು ಹೊರಡಿಸಿದ ಒಂದು ಜಂಟಿ ಹೇಳಿಕೆಯ ಮೂಲಕ ಪ್ರಕಟಿಸಿರುವ ಪ್ರಕಾರ ‘ಅಮೆರಿಕ ಸಂಯುಕ್ತ ಸಂಸ್ಥಾನಗಳಿಂದ ಭಾರತಕ್ಕೆ ‘ಪ್ರಮುಖ ರಕ್ಷಣಾ ಭಾಗೀದಾರ’ ಎಂಬ ಹುದ್ದೆಯನ್ನು ಅಂತಿಮಗೊಳಿಸಿದ್ದಕ್ಕೆ ಸಂಬಂಧಪಟ್ಟಂತೆ ನಾನು ಈ ಪತ್ರವನ್ನು ನಿಮಗೆ ಬರೆಯುತ್ತಿದ್ದೇನೆ. ಇದು ಈ ವರ್ಷದ ಆರಂಭದಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳು ಮತ್ತು ಭಾರತದ ಮಂತ್ರಿಗಳು ‘ಸಮರ ಸಾಗಾಣಿಕೆ ವಿನಿಮಯ ಒಪ್ಪಂದದ ಮನವಿ ಪತ್ರ’ಕ್ಕೆ ಸಹಿ ಹಾಕಿದ್ದನ್ನು ಅನುಸರಿಸಿ ಬಂದಿದೆ.
‘ಪ್ರಮುಖ ರಕ್ಷಣಾ ಭಾಗೀದಾರ’ ಎನ್ನುವುದು ಹೇಳಿಕೆಯಲ್ಲಿ ತಿಳಿಸಿರುವಂತೆ “ಭಾರತಕ್ಕೆ ವಿಶಿಷ್ಟವಾದ ಒಂದು ಸ್ಥಾನಮಾನ” ಮತ್ತು ಇದು “ಭಾರತವನ್ನು ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಅತಿ ನಿಕಟ ಮಿತ್ರರು ಮತ್ತು ಭಾಗೀದಾರರುಗಳಿಗೆ ಸಮನಾದ ಮಟ್ಟಕ್ಕೆ ತರುತ್ತದೆ.” ಈ ಮೂಲಕ ರಕ್ಷಣಾ ಸಂಬಂಧಗಳನ್ನು ಕುರಿತಂತೆ ಭಾರತದ ದೀರ್ಘಕಾಲದ ಧೋರಣೆಯಿಂದ ಗಮನಾರ್ಹ ರೀತಿಯಲ್ಲಿ ದೂರ ಸರಿಯಲಾಗಿದೆ, ಮತ್ತು ಇದನ್ನು ಸಂಸತ್ತನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಮಾಡಲಾಗಿದೆ.
ಅಮೆರಿಕನ್ ಸರಕಾರ ಈ ‘ಪ್ರಮುಖ ರಕ್ಷಣಾ ಭಾಗೀದಾರ’ ಎಂಬ ಹುದ್ದೆಯ ವಿವರಗಳನ್ನು ಅಮೆರಿಕನ್ ಸೆನೆಟ್ಗೆ ಮಂಜೂರಾತಿಗೆ ‘ಎಫ್ವೈ 2017 ಎನ್ಡಿಎಎ’- ರಾಷ್ಟ್ರೀಯ ರಕ್ಷಣಾ ಅಧಿಕಾರ ನೀಡಿಕೆ ಕಾಯ್ದೆಯ ಭಾಗವಾಗಿ ಸಲ್ಲಿಸಿದೆ. ಆದರೆ ನಿಮ್ಮ ಸರಕಾರ ಇಂತಹ ಒಂದು ಮಹತ್ವದ ವ್ಯವಹಾರದ ಬಗ್ಗೆ ಸಂಸತ್ತಿನಲ್ಲಿ ಒಂದು ಹೇಳಿಕೆಯನ್ನೂ ಕೂಡಕೊಟ್ಟಿಲ್ಲ. ದೇಶ ಈ ‘2017 ಎನ್ಡಿಎಎ’ ಓದಿಕೊಂಡು ಈ ವ್ಯವಹಾರದ ಅಮೆರಿಕನ್ ಭಾಗವನ್ನು ನೋಡಬಹುದಾಗಿದೆ, ಆದರೆ ಅಮೆರಿಕಾದ ಒಂದು ‘ಪ್ರಮುಖ ರಕ್ಷಣಾ ಭಾಗೀದಾರ’ನಾಗಲು ಭಾರತ ಯಾವ ಶರತ್ತುಗಳಿಗೆ ಬದ್ಧವಾಗಿದೆ ಎಂಬುದು ಅಜ್ಞಾತವಾಗಿಯೇ ಉಳಿದಿದೆ.
ನಾನು ನಿಮ್ಮ ಗಮನವನ್ನು ‘2017 ಎನ್ಡಿಎಎ’ಯ ಸೆಕ್ಷನ್ 1292ರ ‘ಇ’ ಪರಿಚ್ಛೇದಕ್ಕೆ ಸೆಳೆಯ ಬಯಸುತ್ತೇನೆ. ಇದು “ರಕ್ಷಣಾ ಸಾಮಗ್ರಿಗಳು, ರಕ್ಷಣಾ ಸೇವೆಗಳು ಮತ್ತು ಸಂಬಂಧಪಟ್ಟ ತಂತ್ರಜ್ಞಾನ, ಸೂಕ್ತ ಸೈಬರ್ ಭದ್ರತೆ ಮತ್ತು ಅಂತಿಮವಾಗಿ ಬಳಕೆಯ ಮೇಲುಸ್ತುವಾರಿಯ ಒಪ್ಪಂದಗಳನ್ನು ತಪಾಸಣೆ ಮಾಡುವ ವ್ಯವಸ್ಥೆಗಳ” ಬಗ್ಗೆ ಹೇಳುತ್ತದೆ. ಅಂದರೆ ಭಾರತಕ್ಕೆ ಮಾರಿರುವ ಸಾಮಗ್ರಿಗಳು ಮತ್ತು ತಂತ್ರಜ್ಞಾನಗಳ ಮೇಲುಸ್ತುವಾರಿಯ ಬಗ್ಗೆ. ನಂತರ ಪರಿಚ್ಛೇದ (ಎಫ್) ಭಾರತ ತನ್ನ “ರಫ್ತು ನಿಯಂತ್ರಣ ಮತ್ತು ಖರೀದಿ ವ್ಯವಸ್ಥೆಗಳನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳ ವ್ಯವಸ್ಥೆಗಳೊಂದಿಗೆ” ಹೊಂದಿಸಿಕೊಳ್ಳುತ್ತದೆ ಎನ್ನುತ್ತದೆ. ಇವು ನಿಮ್ಮ ಸರಕಾರ ಕೊಟ್ಟಿರುವ ಮಹತ್ವದ ರಿಯಾಯ್ತಿಗಳು, ಇವು ಭಾರತೀಯ ರಕ್ಷಣಾ ಪಡೆಗಳನ್ನು ಅಮೆರಿಕನ್ ತಪಾಸಣೆಗೆ ಮತ್ತು ಭಾರತೀಯ ರಕ್ಷಣಾ ಉತ್ಪಾದನೆಯನ್ನು ಅಮೆರಿಕನ್ ಹತೋಟಿಗೆ ಒಳಪಡಿಸುತ್ತವೆ.
ನಿಮ್ಮ ಸರಕಾರ ಭಾರತೀಯ ಸಾರ್ವಭೌಮತೆ ಮತ್ತು ಸಾಮರಿಕ ಸ್ವಾಯತ್ತತೆಗೆ ಧಕ್ಕೆತರುತ್ತಿದೆ ಎಂಬ ಗಂಭೀರ ಆಶಂಕೆಗಳು ಏಳುತ್ತವೆ. 2017 ಎನ್ಡಿಎಎ’ಯ ಸೆಕ್ಷನ್ 1292ರ ಪರಿಚ್ಛೇದ (ಐ) ಈ ಸಂಗತಿಗಳನ್ನು ಸಾಕಷ್ಟು ಸ್ಪಷ್ಟಗೊಳಿಸುತ್ತದೆ. “ದಕ್ಷಿಣ ಏಶ್ಯದಲ್ಲಿ ಮತ್ತು ಇನ್ನೂ ದೊಡ್ಡ ಇಂಡೋ-ಏಶ್ಯ-ಫ್ಯಾಸಿಫಿಕ್ ಪ್ರದೇಶಗಳಲ್ಲಿ ಅಮೆರಿಕ ಸಂಸಯುಕ್ತ ಸಂಸ್ಥಾನಗಳ ಹಿತಗಳನ್ನು ಈಡೇರಿಸಲು ಭಾರತದೊಂದಿಗೆ ರಕ್ಷಣಾ ಮತ್ತು ಭದ್ರತಾ ಸಹಕಾರವನ್ನು” ಹೆಚ್ಚಿಸಲಾಗಿದೆ ಎಂದು ಅದು ವಿಶದವಾಗಿ ಎತ್ತಿತೋರಿದೆ. ಈ ಮೂಲಕ ನಮ್ಮದೇ ನೆರೆಕರೆಯಲ್ಲಿ ಅಮೆರಿಕ ಸಂಯುಕ್ತ ಸಂಸ್ಥಾನಗಳ ಕಿರಿಯ ಮಿತ್ರನಾಗಲು ನಿಮ್ಮ ಸರಕಾರ ಬದ್ಧಗೊಳಿಸಿಕೊಂಡಿದೆ ಎಂಬುದು ಬೇಸರದ ಸಂಗತಿ. ಇದು ಭಾರತದ ಸ್ವತಂತ್ರ ವಿದೇಶಾಂಗ ಧೋರಣೆಯ ಹೆಣಪೆಟ್ಟಿಗೆಯ ಮೇಲೆ ಹೊಡೆದಿರುವ ಅಂತಿಮ ಮೊಳೆ ಎಂಬುದನ್ನು ತೋರಿಸುತ್ತದೆ.
‘ಪ್ರಮುಖ ರಕ್ಷಣಾ ಭಾಗೀದಾರ’ ಹುದ್ದೆಯ ಪ್ರಕಟಣೆಯ ಭಾಗವಾಗಿ ರಕ್ಷಣಾ ಮಂತ್ರಾಲಯ ಸಂಸತ್ತಿನ ಎರಡೂ ಸದನಗಳು ಅಧಿವೇಶನದಲ್ಲಿ ಇದ್ದಾಗಲೇ, ಈಗಲೂ ಇರುವಾಗಲೇ, ಇವೆಲ್ಲವುಗಳಿಗೆ ಬದ್ಧವಾಗಿರುವುದಂತೂ ಅವಮಾನದ ಸಂಗತಿ. ಇದು ಸಂಸದೀಯ ವ್ಯವಸ್ಥೆಯ ಸ್ಥಾಪಿತ ನಿಯಮಾವಳಿಗಳು ಮತ್ತು ಆಚರಣೆಗಳ ಸಂಪೂರ್ಣ ಉಲ್ಲಂಘನೆಯಾಗಿದೆ.
ಅಲ್ಲದೆ, ನಿಮ್ಮ ಸರಕಾರ ಸಂಸತ್ತನ್ನು ನಿರ್ಲಕ್ಷಿಸುವಲ್ಲಿ ಬಹಳ ಆಸಕ್ತಿ ಹೊಂದಿರುವಂತೆ ಕಾಣುತ್ತದೆ ಎಂದು ನಾನು ಹೇಳಲೇಬೇಕಾಗಿದೆ. ಏಕೆಂದರೆ, ಎಲ್ಇಎಂಒಎ ಪಠ್ಯವನ್ನು ಕೂಡ ಇನ್ನೂ ಯಾವುದೇ ಸದನದ ಮುಂದೆಯಾಗಲೀ, ರಕ್ಣಣಾ ಇಲಾಖೆಯ ಸ್ಥಾಯೀ ಸಮಿತಿಯ ಮುಂದಾಗಲೀ ಇಟ್ಟಿಲ್ಲ. ಸಂಸತ್ತು ಈ ಮಹಾನ್ ದೇಶದ ಜನತೆಯನ್ನು ಪ್ರತಿನಿಧಿಸುತ್ತದೆ, ಅದನ್ನು ಉದ್ದೇಶ ಪೂರ್ವಕವಾಗಿಯೇ ಉಪೇಕ್ಷಿಸುವ ದಾರಿಯನ್ನು ಆರಿಸಿಕೊಂಡು ನೀವು 130 ಕೋಟಿ ಭಾರತೀಯರಿಗೆ ಅಗೌರವ ತೋರಿಸುತ್ತಿದ್ದೀರಿ ಎಂದು ನೆನಪಿಸುವ ಅಗತ್ಯವಿಲ್ಲ.
ನಾನು, ಈ ಎರಡೂ ಪಠ್ಯಗಳನ್ನು ಸಂಸತ್ತಿನ ಮುಂದಿಡಬೇಕು ಮತ್ತು ತಕ್ಷಣವೇ ಸಾರ್ವಜನಿಕಗೊಳಿಸಬೇಕು ಎಂದು ಆಗ್ರಹಿಸುತ್ತೇನೆ.
ಸಂಸತ್ತಿಗೆ ನಿಮ್ಮ ಸರಕಾರದ ಹೊಣೆಗಾರಿಕೆಗಳ ಭಾಗವಾಗಿ ನೀವು ‘ಸಮರ ಸಾಗಾಣಿಕೆ ವಿನಿಮಯ ಒಪ್ಪಂದದ ಮನವಿ’ಯ ಪೂರ್ಣ ಪಠ್ಯವನ್ನು ಮತ್ತು ಪ್ರಮುಖ ರಕ್ಷಣಾ ಭಾಗೀದಾರ’ ಹುದ್ದೆಯ ಭಾಗವಾಗಿ ಒಪ್ಪಿರುವ ಶರತ್ತುಗಳ ಪಟ್ಟಿಯನ್ನು ತಕ್ಷಣವೇ ಸಂಸತ್ತಿನ ಮುಂದೆ, ಈ ಚಳಿಗಾಲದ ಅಧಿವೇಶನವನ್ನು ಮುಗಿಸುವ ಮೊದಲು ಇಡುತ್ತೀರಿ ಎಂದು ಆಶಿಸುತ್ತೇನೆ.
ಸಹಿ/-
ಸೀತಾರಾಂ ಯೆಚೂರಿ
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ