ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲುಕಿನ ದಿಡ್ಡಳ್ಳಿ ಪ್ರದೇಶದಲ್ಲಿ ವಾಸಮಾಡುತ್ತಿದ್ದ 577 ಆದಿವಾಸಿ ಕುಟುಂಬಗಳನ್ನು ಯಾವುದೇ ಮುನ್ಸೂಚನೆ ನೀಡದೆ ನೆಲಸಮ ಮಾಡಿ, ಬೀದಿ ತಳ್ಳಿದ ಸರಕಾರದ ಕ್ರಮವನ್ನು ಭಾರತ ಕಮ್ಯೂನಿಸ್ಟ್ ಪಕ್ಷ (ಮಾರ್ಕ್ಸ್ ವಾದಿ) ಉಗ್ರವಾಗಿ ಖಂಡಿಸುತ್ತದೆ.
ಸರಕಾರದ ಇಲಾಖಾ ಅಧಿಕಾರಿಗಳ ಈ ಆಕ್ರಮಣ ತನ್ನದೇ ನಾಗರೀಕರ ಮೇಲಿನ ಧಾಳಿಯಾಗಿದೆ ಮತ್ತು ಮಾನವ ಹಕ್ಕುಗಳ ಹಾಗೂ ಸಂವಿಧಾನದ ಭರವಸೆಯ ಉಲ್ಲಂಘನೆಯಾಗಿದೆ. ಆದ್ದರಿಂದ ಜಿಲ್ಲಾಡಳಿತ ಬೇಷರತ್ತಾಗಿ ಜನತೆಯ ಕ್ಷಮೆ ಕೋರಬೇಕು.
ಮುಖ್ಯವಾಗಿ ಬೀದಿಗೆ ಬಿದ್ದಿರುವ ಆ ಎಲ್ಲಾ ಕುಟುಂಬಗಳಿಗೆ ನಿವೇಶನ-ಹಕ್ಕು ಪತ್ರ ನೀಡಿ, ಮನೆಯನ್ನು ಕಟ್ಟಿಕೊಡಲು ಸಂಪೂರ್ಣ ನೆರವನ್ನು ಕೊಡಬೇಕೆಂದು ಸಿಪಿಐ(ಎಂ) ಪಕ್ಷ ಆಗ್ರಹಿಸುತ್ತದೆ. ಆದಿವಾಸಿಗಳು ನಮ್ಮ ಸಂಸ್ಕøತಿ, ನಾಗರೀಕತೆಯ ಬಹು ಮುಖ್ಯ ಭಾಗ. ಮಾತ್ರವಲ್ಲ, ಆಧಾರವೂ ಕೂಡ ಎಂಬುದನ್ನು ಗಮನಿಸಬೇಕು. ಆ ಕಾರಣಕ್ಕೆ ನಮ್ಮ ಸಂವಿಧಾನದಲ್ಲಿಯೇ ಅವರ ಬದುಕು, ಪರಂಪರೆಯ ರಕ್ಷಣೆಗೆ ಅತ್ಯಂತ ಶಕ್ತಿಯುತ ಸ್ಥಾನವನ್ನು ನೀಡಲಾಗಿದೆ.
ಆದರೆ ಆದಿವಾಸಿ-ಬುಡಕಟ್ಟು ಸಮುದಾಯಗಳಿಗೆ ಭೂಮಿ, ಮನೆ, ಆಹಾರ-ಆರೋಗ್ಯದ ಕನಿಷ್ಠ ಸೌಲಭ್ಯಗಳೂ ಇಲ್ಲದೇ ಅತಂತ್ರರನ್ನಾಗಿ ಮಾಡಲಾಗಿದೆ. ಅವರ ಸ್ವಾಭಿಮಾನ, ಬದುಕಿನ ಮೇಲೆ ನಿರಂತರ ಧಾಳಿಗಳು ನಡೆಯುತ್ತಿರುವುದು ಅಮಾನುಷವಾಗಿದೆ. ಇದನ್ನು ನಿಲ್ಲಿಸಿ, ಗೌರವಿಸಿ, ಬದುಕಿಗೆ, ಅವರ ಸ್ವಾತಂತ್ರ್ಯಕ್ಕೆ ಪೂರ್ಣ ಅವಕಾಶ ನೀಡಬೇಕು.
ಈ ದೆಸೆಯಲ್ಲಿ ಕೂಡಲೇ ರಾಜ್ಯ ಸರಕಾರ, ಉಸ್ತುವಾರಿ ಸಚಿವರು, ಅರಣ್ಯ ಹಾಗೂ ಸಮಾಜ ಕಲ್ಯಾಣ ಸಚಿವರು ಮಧ್ಯ ಪ್ರವೇಶಿಸಿ ಇಡೀ ಕೊಡಗು ಜಿಲ್ಲೆಯ ಎಲ್ಲಾ ಆದಿವಾಸಿ-ದಲಿತರಿಗೆ, ನಿವೇಶನ, ಮನೆ ಕೊಡಲು ಕ್ರಮವಹಿಸಬೇಕು. ಮುಖ್ಯವಾಗಿ ಸಚಿವರು ದಿಡ್ಡಳ್ಳಿ-ತಳ್ಳಳ್ಳಿ ನಿರಾಶ್ರಿತರಾದ ಬುಡಕಟ್ಟು ಹಾಗೂ ದಲಿತ ಸಮುದಾಯಗಳ ಸಮಸ್ಯೆ ಬಗೆಹರಿಸಬೇಕು. ಬೇರೆಡೆಗೆ ಪರ್ಯಾಯ ಕಲ್ಪಿಸುವ ಬಾಯಿ ಮಾತಿನ ಭರವಸೆ ಬಿಟ್ಟು ಅಲ್ಲಿಯೇ ಇರುವ ಅರಣ್ಯ-ಪೈಸಾರಿ ಭೂಮಿಯನ್ನು ಕಂದಾಯ ಇಲಾಖೆ ಸೂಕ್ತ ಕ್ರಮವಹಿಸಿ ಹಂಚಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.
ಇಲ್ಲಿಗೆ 13 ದಿನಗಳಾದರೂ ಖಚಿತ ತೀರ್ಮಾನ ಕೊಡುವಲ್ಲಿ ಜಿಲ್ಲಾಡಳಿತ ವಿಫಲವಾಗಿದೆ. ಇದೇ ಸ್ಥಿತಿ ಮುಂದುವರೆದಲ್ಲಿ ಈ ಹೋರಾಟವನ್ನು ತೀವ್ರಗೊಳಿಸಲಾಗುವುದಲ್ಲದೆ ರಾಜ್ಯದಾದ್ಯಂತ ವಿಸ್ತರಿಸಲಾಗುವುದು. ಎಲ್ಲಾ ಸಂಘಟನೆಗಳು ತೀರ್ಮಾನಿಸಿದಂತೆ ಇದೇ ಡಿಸೆಂಬರ್ 22ರಂದು ಪಾದಯಾತ್ರೆ ಮೂಲಕ ಹೊರಟು 23ಕ್ಕೆ ಜಿಲ್ಲಾಧಿಕಾರಿ ಕಛೇರಿಯೆದುರು ನಿರಂತರ ಧರಣಿ ನಡೆಸಲಾಗುವುದು. ಈ ಎಲ್ಲಾ ಹೋರಾಟಕ್ಕೆ ಸಿಪಿಐ(ಎಂ) ಪೂರ್ಣ ಬೆಂಬಲ ನೀಡುತ್ತದೆ ಎಂದು ಎಸ್.ವೈ.ಗುರುಶಾಂತ್, ಸಿಪಿಐ(ಎಂ) ರಾಜ್ಯ ಸಮಿತಿ ಸದಸ್ಯರು, ಡಾ||ದುರ್ಗಾಪ್ರಸಾದ್ ಐ.ಆರ್., ಜಿಲ್ಲಾ ಕಾರ್ಯದರ್ಶಿ, ರಮೇಶ್ ಹೆಚ್.ಬಿ., ಜಿಲ್ಲಾ ಸಂಘಟನಾ ಸಮಿತಿ ಸದಸ್ಯರು ಹೇಳಿಕೆಯಲ್ಲಿ ತಿಳಿಸಿದ್ದಾರೆ.