ಕಂಬಳ ನಿಷೇಧಕ್ಕೆ ಸಂಬಂಧಿಸಿ ಜನವರಿ 30 ರಂದು ವಿಚಾರಣೆ ನಡೆಸಿದ ರಾಜ್ಯ ಉಚ್ಛ ನ್ಯಾಯಾಲಯವು 2 ವಾರಗಳ ಕಾಲ ಮುಂದೂಡಿರುವ ಅನಿಶ್ಚಿತತೆಯ ಹಿನ್ನಲೆಯಲ್ಲಿ ರಾಜ್ಯ ಸರಕರ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಿಪಿಐ(ಎಂ) ಉಡುಪಿ ಜಿಲ್ಲಾ ಸಮಿತಿ ಒತ್ತಾಯಿಸುತ್ತದೆ.
ಪ್ರಾಣಿ ಹಿಂಸೆ ತಡೆಕಾಯ್ದೆಗೆ ತಿದ್ದುಪಡಿ ತಂದು ಕರಾವಳಿಯ ಜನಪ್ರಿಯ ಜಾನಪದ ಕ್ರೀಡೆಯಾಗಿರುವ ಕಂಬಳಕ್ಕೆ ಅವಕಾಶ ನೀಡುವುದಾಗಿ ರಾಜ್ಯ ಸರಕಾರ ಹೇಳಿದ್ದರೂ ಸರಕಾರ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಇದರಿಂದಾಗಿ ಅನಿಶ್ಚಿತತೆ ಮುಂದುವರಿಯುತ್ತಿದೆ.
ಕಂಬಳವೆಂಬುದು ಜಾನಪದ ಕ್ರೀಡೆ. ಕರಾವಳಿ ಜಿಲ್ಲೆಗಳಲ್ಲಿ ಗ್ರಾಮೀಣ ಪ್ರದೇಶದ ಎಲ್ಲಾ ಜನರು ಸಾರ್ವತ್ರಿಕವಾಗಿ ಆಚರಿಸುವ ಕ್ರೀಡೆಯಾಗಿ ಬೆಳೆದಿದೆ. ಕೆಲವು ಕಡೆಗಳಲ್ಲಿ ಜೂಜು, ಕೋಣಗಳಿಗೆ ಹೊಡೆಯುವುದು ಮೊದಲಾದ ಸಾಮಾಜಿಕ ಅನಿಷ್ಟ ಪದ್ಧತಿಗಳು ಇವೆಯಾದರೂ ಅದನ್ನು ತೊಡೆದು ಹಾಕಲು ಪ್ರಯತ್ನಿಸಬೇಕು.
ರಾಜ್ಯ ಸರಕಾರವು ತಡಮಾಡದೆ ಕೂಡಲೇ ಕಂಬಳ ನಿಷೇಧ ತೆರವಿಗೆ ಬೇಕಾದ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಸಿಪಿಐ(ಎಂ) ಒತ್ತಾಯಿಸುತ್ತದೆ.
ಬಾಲಕೃಷ್ಣ ಶೆಟ್ಟಿ, ಉಡುಪಿ ಜಿಲ್ಲಾ ಕಾರ್ಯದರ್ಶಿ