ಆರೆಸ್ಸೆಸ್ನ ವಿದ್ಯಾರ್ಥಿ ಸಂಘಟನೆ ಎಬಿವಿಪಿ ದಿಲ್ಲಿ ವಿಶ್ವವಿದ್ಯಾಲಯದಲ್ಲಿ ನಡೆಸಿರುವ ಹಿಂಸಾಚಾರವನ್ನುಮತ್ತು ಗೂಂಡಾಗಿರಿಯನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ. ಮೊದಲಿಗೆ ಎಬಿವಿಪಿ ರಾಮಜಾಸ್ ಕಾಲೇಜಿನಲ್ಲಿ ಇಂಗ್ಲಿಷ್ ವಿಭಾಗ ಸಂಘಟಿಸಿದ ಒಂದು ವಿಚಾರ ಸಂಕಿರಣವನ್ನು ಛಿದ್ರಗೊಳಿಸಲು ಪ್ರಯತ್ನಿಸಿತು. ಅಲ್ಲಿನ ವಿದ್ಯಾರ್ಥಿಗಳು ಪ್ರತಿಭಟಿಸಿದಾಗ ಮರುದಿನ ಎಬಿವಿಪಿ ಗೂಂಡಾಗಳು ವಿದ್ಯಾರ್ಥಿಗಳು ಮತ್ತು ಅಧ್ಯಾಪಕರುಗಳ ಮೇಲೆ ದಾಳಿ ಮಾಡಿ ಹಲವರನ್ನು ಗಾಯಗೊಳಿಸಿದರು. ಮಾಧ್ಯಮಗಳ ಸಿಬ್ಬಂದಿಗಳನ್ನೂ ಬಿಡಲಿಲ್ಲ. ದಿಲ್ಲಿ ಪೋಲೀಸರು ಎಬಿವಿಪಿ ಗೂಂಡಾಗಳಿಗೆ ಸೌಕರ್ಯಗಳನ್ನು ಒದಗಿಸಿ ಕೊಡುವ ನಾಚಿಕೆಗೆಟ್ಟ ಪಾತ್ರವನ್ನು ವಹಿಸಿದರು, ಅವರು ವಿದ್ಯಾರ್ಥಿಗಳ ಮೇಲೆ ಕಲ್ಲುಗಳನ್ನು ಎಸೆಯುತ್ತಿದ್ದಾಗ ಸುಮ್ಮನೇ ನಿಂತು ನೋಡುತ್ತಿದ್ದರು.
ಸ್ಥಳೀಯ ಪೊಲಿಸ್ ಠಾಣೆಗೆ ಪ್ರತಿಭಟನೆ ನಡೆಸಲು ಹೊರಟಿದ್ದ ದಿಲ್ಲಿ ವಿಶ್ವವಿದ್ಯಾಲಯದ ಅಧ್ಯಾಪಕರ ಸಂಘ ಮತ್ತು ಅಕೆಡೆಮಿಕ್ ಕೌನ್ಸಿಲ್ನ ಸದಸ್ಯರೂ ಸಏರಿದಂತೆ ಅಧ್ಯಾಪಕರು ಮತ್ತು ವಿದ್ಯಾರ್ಥಿಗಳ ಮೇಲೆ ದಿಲ್ಲಿ ಪೋಲೀಸರೇ ಹಲ್ಲೆ ನಡೆಸಿದರು ಎಂದು ವರದಿಯಾಗಿದೆ. ಇದು ಎಲ್ಲ ಪ್ರಜಾಪ್ರಭುತ್ವವಾದಿ ಪ್ರತಿಭಟನೆಗಳು, ಅದರಲ್ಲೂ ವಿಶ್ವವಿದ್ಯಾಲಯಗಳಲ್ಲಿನ ಪ್ರತಿಭಟನೆಗಳಿಗೆ ಆರೆಸ್ಸೆಸ್-ಬಿಜೆಪಿ ಕೂಟ ಮತ್ತು ಅದರ ವಿವಿಧ ಅಂಗಗಳು ಪ್ರಭುತ್ವ ಯಂತ್ರದ ಬೆಂಬಲದೊಂದಿಗೆ ಪ್ರದರ್ಶಿಸುತ್ತಿರುವ ಹಿಂಸಾತ್ಮಕ ಅಸಹಿಷ್ಣುತೆಯಿನ್ನೊಂದು ನಾಚಿಕೆಹೀನ ಉದಾಹರಣೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ವಿಚಾರಸಂಕಿರಣವನ್ನು ಕದಡಿಸಲು ಮತ್ತು ಪ್ರಜಾಸತ್ತಾತ್ಮಕ ಪ್ರತಿಭಟನೆಗಳ ಮೇಲೆ ಹಲ್ಲೆ ನಡೆಸಲು ಹಿಂಸಾಚಾರದಲ್ಲಿ ತೊಡಗಿದ ಎಲ್ಲರನ್ನೂ ಬಂಧಿಸಬೇಕು, ಎಬಿವಿಪಿಯೊಂದಿಗೆ ಶಾಮೀಲಾ ಗಿರುವ ದಿಲ್ಲಿ ಪೋಲೀಸ್ ಸಿಬ್ಬಂದಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.