ಅಮೆರಿಕ ಸಂಯುಕ್ತ ಸಂಸ್ಥಾನಗಳ ಕನ್ಸಾಸ್ನ ಒಲಥೆ ನಗರದಲ್ಲಿ ಒಬ್ಬ ಯುವ ಭಾರತೀಯನನ್ನು ಕೊಂದ ಮತ್ತು ಮತ್ತೊಬ್ಬನನ್ನು ಗಾಯಗೊಳಿಸಿರುವ ದ್ವೇಷಾಪರಾಧದ ಕೃತ್ಯದ ಬಗ್ಗೆ ಸಿಪಿಐ(ಎಂ) ಪೊಲಿಟ್ಬ್ಯುರೊ ಆಕ್ರೋಶ ವ್ಯಕ್ತಪಡಿಸಿದೆ. ಪ್ರಾಣ ಕಳಕೊಂಡ ಶ್ರೀನಿವಾಸ ಕುಚಿಬೊತ್ಲ ಮತ್ತು ಗಾಯಗೊಂಡಿರುವ ಅಲೋಕ್ ಮದ್ಸಾನಿ ಇಬ್ಬರೂ ಕಾನೂನಬದ್ಧವಾಗಿ ಆ ದೇಶದಲ್ಲಿ ನೆಲೆಸಿದ್ದರು ಮತ್ತು ಕೆಲಸ ಮಾಡುತ್ತಿದ್ದರು.
ಈ ದ್ವೇಷ ಕೃತ್ಯ ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿ ಕೆಲಸ ಮಾಡುತ್ತಿರುವ ವಲಸಿಗರ ವಿರುದ್ಧ ಟ್ರಂಪ್ ಆಡಳಿತ ಅಧಿಕಾರ ವಹಿಸಿಕೊಂಡ ನಂತರ ಹೆಚ್ಚೆಚ್ಚು ವಿಷ ಕಾರುತ್ತಿರುವ ಹಿನ್ನೆಲೆಯಲ್ಲಿ ಬಂದಿದೆ. ಹಲವು ದೇಶಗಳಿಂದ ಈ ದೇಶಕ್ಕೆ ಪ್ರಯಾಣದ ಮೇಲೆ ನಿರ್ಬಂಧಗಳನ್ನು ಹೇರಿರುವುದು ಈಗ ‘ಹೊರಗಿನವರು’ ಎಂದು ಪರಿಗಣಿಸ ಲಾಗುತ್ತಿರುವವರ ಮೇಲೆ ಗುರಿಯಿಡುವುದಕ್ಕೆ ಪೋಷಣೆ ನೀಡಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಈ ಹಲ್ಲೆ ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಸಮುದಾಯದವರನ್ನು ನಡುಗಿಸಿ ಬಿಟ್ಟಿದೆ, ಭಾರತ ಸರಕಾರ ತಕ್ಷಣವೇ ಈ ಪ್ರಶ್ನೆಯನ್ನು ಅಮೆರಿಕನ್ ಸರಕಾರದೊಂದಿಗೆ ಎತ್ತಿಕೊಳ್ಳಬೇಕು, ಅಪರಾಧಿಗಳಿಗೆ ಶಿಕ್ಷೆಯಾಗುವಂತೆ ಮಾಡಬೇಕು ಮತ್ತು ಇಂತಹ ಘಟನೆ ಮತ್ತೆ ನಡೆಯದಂತೆ ಭರವಸೆ ಪಡೆಯಬೇಕು ಎಂದು ಆಗ್ರಹಿಸಿದೆ.
ಶ್ರೀನಿವಾಸ್ ಅವರ ತಂದೆ-ತಾಯಿ ಮತ್ತು ಕುಟುಂಬದವರಿಗೆ ಸಿಪಿಐ(ಎಂ) ಪೊಲಿಟ್ಬ್ಯುರೊ ಹಾರ್ದಿಕ ಸಂತಾಪಗಳನ್ನು ವ್ಯಕ್ತಪಡಿಸಿದೆ.
ಇಲ್ಲಿ ಯಾರೂ ವಿಜಯಿಗಳಿಲ್ಲ-ಯೆಚುರಿ
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಕೂಡ ಶ್ರೀನಿವಾಸ್ ಕುಚಿಬೊತ್ಲ ಅವರ ಕುಟುಂಬದವರಿಗೆ ಸಿಪಿಐ(ಎಂ) ಪೊಲಿಟ್ಬ್ಯುರೊ ಹಾರ್ದಿಕ ಸಂತಾಪಗಳನ್ನು ವ್ಯಕ್ತಪಡಿಸುತ್ತ ಮತ್ತು ಅಲೋಕ್ ರೆಡ್ಡಿ ಮದ್ಸಾನಿ ಬೇಗನೇ ಗುಣಮುಖರಾಗಲಿ ಎಂದು ಹಾರೈಸುತ್ತ ‘ನನ್ನ ದೇಶದಿಂದ ಹೊರಟ್ಹೋಗಿ’ ಎಂದು ಹೇಳುತ್ತ ನಡೆದಿರುವ ಈ ದ್ವೇಷಾಪರಾಧ ಅತ್ಯಂತ ಖಂಡನೀಯವಾದ ಮತ್ತು ಬೇಸರದ ಸಂಗತಿ ಎಂದಿದ್ದಾರೆ.
ಇದು ಬೇಜವಾಬ್ದಾರಿ ಹಾಗೂ ಸಂಕುಚಿತ ದೃಷ್ಟಿಯ ರಾಜಕೀಯ ಉಂಟು ಮಾಡುವ ನೋವನ್ನು ಮತ್ತೊಮ್ಮೆ ಬೆಳಕಿಗೆ ತಂದಿದೆ. ಇಂತಹ ರಾಜಕೀಯ ಐಡೆಂಟಿಟಿ, ಮೈಬಣ್ಣ ಅಥವ ಮತೀಯ ನಂಬಿಕೆಗಳ ಆಧಾರದಲ್ಲಿ ಅಲ್ಪಸಂಖ್ಯಾತರು ಮತ್ತು ಸಣ್ಣ ಗುಂಪುಗಳ ಬೆನ್ನಟ್ಟುತ್ತದೆ.
ನಾವು ಈ ಹಿಂದೆ ಇದನ್ನು ದಾದ್ರಿಯಲ್ಲಿ ಅಖ್ಲಾಖ್ ವಿಷಯದಲ್ಲಿ ನೋಡಿದ್ದೇವೆ, ಲತೇಹಾರ್ನಲ್ಲಿ ಇಬ್ಬರು ದನದ ವ್ಯಾಪಾರಿಗಳನ್ನು ನೇಣಿಗೇರಿಸಿದ್ದರಲ್ಲಿ ನೋಡಿದ್ದೇವೆ, ಹೇಗೆ ಈ ಭಾವೋದ್ವೇಗವನ್ನು ಬಡಿದೆಬ್ಬಿಸಿದಾಗ ಜನಜಂಗುಳಿಗಳು ವ್ಯಕ್ತಿಗಳು ಕೊಲೆಗಳಿಗಿಳಿಯುತ್ತಾರೆ ಎಂಬುದನ್ನು ನೋಡಿದ್ದೇವೆ. ಇಲ್ಲಿ ಯಾರೂ ವಿಜಯಿಗಳಿಲ್ಲ ಎಂದಿರುವ ಯೆಚುರಿ ನಮ್ಮ ಸರಕಾರ ಅಮೆರಿಕ ಸಂಯುಕ್ತ ಸಂಸ್ಥಾನಗಳ ಆಡಳಿತಕ್ಕೆ ಸಂಬಂಧಪಟ್ಟವರು ಇಂತಹ ಘಟನೆಗಳು ಮತ್ತೆ ನಡೆಯದ ಹಾಗೆ ಆದಷ್ಟು ಬೇಗನೇ ಕ್ರಮ ಕೈಗೊಳ್ಳುವಂತೆ ಬಲವಾದ ಒತ್ತಡವನ್ನು ಹಾಕಬೇಕು ಎಂದು ಆಗ್ರಹಿಸಿದ್ದಾರೆ.