ಆರೆಸ್ಸೆಸ್ ಮುಖಂಡರು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಬೆದರಿಕೆಗಳನ್ನು ಹಾಕುತ್ತಿದ್ದಾರೆ. ಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಒಬ್ಬ ಆರೆಸ್ಸೆಸ್ ಮುಖಂಡ ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಮುಖ್ಯಮಂತ್ರಿಯ ತಲೆತಂದು ಕೊಟ್ಟವರಿಗೆ 1 ಕೋಟಿ ರೂ.ಗಳ ಬಹುಮಾನ ಘೋಷಿಸಿದ್ದಾರೆ. ಇದನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ.
ಈ ಮೂಲಕ ತಾನು ಹಿಂಸಾಚಾರದ ರಾಜಕೀಯದ ಮುಂಚೂಣಿಯಲ್ಲಿದ್ದೇನೆ ಎಂಬುದನ್ನು ಆರೆಸ್ಸೆಸ್ ಮತ್ತೊಮ್ಮೆ ದೃಢಪಡಿಸಿದೆ. ಕೇರಳದಲ್ಲಿ ಇದು ಇತ್ತೀಚಿನ ತಿಂಗಳುಗಳಲ್ಲಿ ಸ್ಪಷ್ಟವಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ರಾಜ್ಯ ಮತ್ತು ಕೇಂದ್ರ ಸರಕಾರಗಳು ಕಾನೂನಿನ ಪ್ರಕಾರ ತಕ್ಷಣವೇ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ. ಈ ಸರಕಾರಗಳ ಮೌನ ಇದಕ್ಕೆ ನೀಡುವ ಅನುಮೋದನೆಯಾಗುತ್ತದೆ, ಇದು ಆರೆಸ್ಸೆಸ್ ಇಂತಹ ಅಸಹ್ಯ ಬೆದರಿಕೆಗಳನ್ನು ಹಾಕಲು ಕುಮ್ಮಕ್ಕು ನೀಡುತ್ತದೆ ಎಂದು ಅದು ಹೇಳಿದೆ.
ಆರೆಸ್ಸೆಸ್ ಒಂದು ಭಯೋತ್ಪಾದಕ ಸಂಘಟನೆ ಎಂದು ಪ್ರಕಟವಾಗಿದೆ-ಯೆಚುರಿ
ಇದು ಘಾತುಕ ಹೇಳಿಕೆ. ಒಂದು ರಾಜ್ಯದ ಮುಖ್ಯಮಂತ್ರಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದರೆ ಅವರಿಗೆ ಸರಕಾರದ ರಕ್ಷಣೆ, ಪೋಷಣೆ ಇದೆ ಎಂದು ಅರ್ಥ ಎಂದು ಈ ಹೇಳಿಕೆಯನ್ನು ಖಂಡಿಸುತ್ತ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಹೇಳಿದ್ದಾರೆ. ಆರೆಸ್ಸೆಸ್ ಒಂದು ಭಯೋತ್ಪಾದಕ ಸಂಘಟನೆ ಎಂಬ ಅದರ ನಿಜ ಬಣ್ಣವನ್ನು ಪ್ರಕಟಗೊಳಿಸಿದೆ, ಪ್ರಧಾನ ಮಂತ್ರಿಗಳು ಮತ್ತು ಅವರ ಸರಕಾರದ ಮೌನ ಇನ್ನೂ ಇರುತ್ತದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
ಆರೆಸ್ಸೆಸ್ ಹಲವು ತಲೆಗಳನ್ನು ಕಡಿದಿದೆ, ಆದರೆ ನಾನೇನೂ ಪ್ರಯಾಣಗಳನ್ನು ನಿಲ್ಲಿಸುವುದಿಲ್ಲ ಎಂದು ಪಿಣರಾಯಿ ವಿಜಯನ್ ಈ ಹೇಳಿಕೆಗೆ ಶಾಂತವಾಗಿ ಪ್ರತಿಕ್ರಿಯಿಸಿದ್ದಾರೆ.