ಭ್ರಷ್ಟಾಚಾರವನ್ನು, ಅದರಲ್ಲೂ ಚುನಾವಣಾ ಪ್ರಕ್ರಿಯೆಯಲ್ಲಿ, ನಿಗ್ರಹಿಸಿ ದೇಶವನ್ನು ಶುದ್ಧಗೊಳಿಸುವ ದೊಡ್ಡ-ದೊಡ್ಡ ಮಾತುಗಳನ್ನಾಡುತ್ತಿರುವ ಮೋದಿ ಸರಕಾರ ಈ ದೇಶದ ಜನಗಳ ಕಣ್ಣಿಗೆ ಮಣ್ಣೆರಚಲು ಅತಿ ದೊಡ್ಡ ವಂಚನೆಯಲ್ಲಿ ತೊಡಗಿದೆ ಎಂಬುದು ಹಣಕಾಸು ಮಸೂದೆ 2017ರಲ್ಲಿ ತೂರಿಸಿರುವ ಒಂದು ತಿದ್ದುಪಡಿಯಿಂದ ಸ್ಪಷ್ಟವಾಗಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಟೀಕಿಸಿದೆ.
ಈ ಮಸೂದೆಯಲ್ಲಿ ಕಂಪನಿ ಕಾಯ್ದೆಯನ್ನು ತಿದ್ದುಪಡಿ ಮಾಡುವ ಅಂಶವನ್ನೂ ಸೇರಿಸಿ ಬಿಡಲಾಗಿದೆ. ಇದರ ಪ್ರಕಾರ ರಾಜಕೀಯ ಪಕ್ಷಗಳಿಗೆ ವಂತಿಗೆ ನೀಡಲು ಕಂಪನಿಗಳ ಮೇಲಿದ್ದ “ಹಿಂದಿನ ಮೂರು ವರ್ಷಗಳಲ್ಲಿ ನಿವ್ವಳ ಲಾಭದ 7.5% ಮಿತಿ”ಯನ್ನು ಕೈಬಿಡಲಾಗಿದೆ, ಅಲ್ಲದೆ ವಂತಿಗೆ ನೀಡಿದ ರಾಜಕೀಯ ಪಕ್ಷಗಳ ಹೆಸರು ಪ್ರಕಟಿಸಬೇಕು ಎಂಬ ಅಂಶವನ್ನೂ ತೆಗೆದು ಹಾಕಲಾಗಿದೆ. ಅಂದರೆ ಕಂಪನಿ ಕಾಯ್ದೆಯ ಈ ತಿದ್ದುಪಡಿಯ ನಂತರ ಕಾರ್ಪೊರೇಟ್ಗಳು ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್ಗಳ ಸ್ಕೀಮಿನ ಮೂಲಕ ಎಷ್ಟು ಬೇಕಾದರೂ ವಂತಿಗೆಗಳನ್ನು ರವಾನಿಸಬಹುದು, ಮತ್ತು ಅದರ ಫಲಾನುಭವಿಗಳ ಹೆಸರುಗಳನ್ನು ಪ್ರಕಟಿಸಬೇಕಾಗಿರುವುದಿಲ್ಲ!
ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳು ಉನ್ನತ ಸ್ಥಾನಗಳಲ್ಲಿ ಭ್ರಷ್ಟಾಚಾರದ ಮೂಲಸೆಲೆಗಳು ಎಂದು ಅದನ್ನು ಸತತವಾಗಿ ವಿರೋಧಿಸಕೊಂಡು ಬಂದಿರುವ ಸಿಪಿಐ(ಎಂ), ಮೋದಿ ಸರಕಾರ ಈ ಮೂಲಕ ರಾಜಕೀಯ ಪಕ್ಷಗಳಿಗೆ ಕಾರ್ಪೊರೇಟ್ ದೇಣಿಗೆಗಳ ಪ್ರಕ್ರಿಯೆಯನ್ನು ವಿಸ್ತಾರಗೊಳಿಸಿದೆ, ಮಾತ್ರವೇ ಅಲ್ಲ, ವ್ಯಾಪಕ ಪ್ರಮಾಣದಲ್ಲಿ ಕಪ್ಪು ಹಣವನ್ನು ಬಿಳಿಮಾಡಲು ಹೊಸ ದಾರಿಗಳನ್ನು ಕಲ್ಪಿಸಿ ಕೊಟ್ಟಿದೆ ಎಂದು ಬಲವಾಗಿ ಖಂಡಿಸಿದೆ.
ನಮ್ಮ ಪ್ರಜಾಸತ್ತಾತ್ಮಕ ಚುನಾವಣಾ ಪ್ರಕ್ರಿಯೆಯನ್ನು ಬಲಿಷ್ಟಗೊಳಿಸಬೇಕು ಎಂಬ ಸದಾಶಯ ಹೊತ್ತಿರುವ ಎಲ್ಲ ರಾಜಕೀಯ ಪಕ್ಷಗಳು, ಸಾಮಾಜಿಕ ಆಂದೋಲನಗಳು ಮತ್ತು ವ್ಯಕ್ತಿಗಳು ರಾಜಕೀಯ ಭ್ರಷ್ಟಾಚಾರವನ್ನು ಅಸಹ್ಯ ಮಟ್ಟಗಳ ವರೆಗೆ ಒಯ್ಯುವ ಈ ಕ್ರಮಗಳನ್ನು ಒಟ್ಟಾಗಿ ವಿರೋಧಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಕರೆ ನೀಡಿದೆ.