’ಗೋರಕ್ಷಕ’ರ ದಾಳಿಗೆ ಹಾಲು ಉತ್ಪಾದಕ ರೈತರ ಮೇಲೆ ದಾಳಿ ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ(ಎಂ) ನಿಯೋಗದ ಆಗ್ರಹ
ಎಪ್ರಿಲ್ ೮ ರಂದು ಸಿಪಿಐ(ಎಂ) ನಿಯೋಗವೊಂದು ರಾಜಸ್ತಾನದ ಬೆಹ್ರೊರ್ಗೆ ಭೇಟಿ ನಿಡಿತು ಇದು ಎಪ್ರಿಲ್೧ ರಂದು ಗೋರಕ್ಷಕರು ಎಂದು ಹೇಳಿಕೊಳ್ಳುವ ಮಂದಿ ಹಾಲು ಉತ್ಪಾದನೆಯಲ್ಲಿ ತೊಡಗಿದ್ದ ಹರ್ಯಾಣದ ಕೆಲವು ರೈತರ ಮೇಲೆ ಭೀಕರ ದಾಳಿ ಮಾಡಿದ ಸ್ಥಳ. ಅವರಲ್ಲಿ ಒಬ್ಬರಾದ ಪೆಹ್ಲೂಖಾನ್ ಸಾವುಂಟಾಗಿದೆ.
ನಿಯೋಗ ಮೊದಲು ಆ ಸ್ಥಳದ ಪೋಲೀಸ್ ಠಾಣೆಗೆ ಹೋಗಿ ಅಲ್ಲಿನ ಡಿಎಸ್ಪಿ ಪರ್ಮಾಲ್ ಅವರನ್ನು ಭೇಟಿ ಮಾಡಿತು. ಇವರು ತನಿಖಾ ಅಧಿಕಾರಿಯಾಗಿದ್ದಾರೆ. 1ನೇ ತಾರೀಕಿನಂದು ಪಹ್ಲೂ ಖಾನ್ ಪ್ರಾಣ ಕಳಕೊಂಡ ಆ ಘಟನೆ ನಡೆಯುವ ಮೊದಲು ಹಸುಗಳಿದ್ದ ನಾಲ್ಕು ವ್ಯಾನ್ಗಳನ್ನು ಪೋಲಿಸ್ ಠಾಣೆಗೆ ತರಲಾಯಿತು ಮತ್ತು ಎಲ್ಲರನ್ನು ಬಂಧಿಸಲಾಯಿತು ಎಂದು ಅವರು ಹೇಳಿದರು. ಅವರಿನ್ನೂ ಕಸ್ಟಡಿಯಲ್ಲಿದ್ದಾರೆ. ಆನಂತರ ಇನ್ನೆರಡು ವ್ಯಾನ್ಗಳನ್ನು ಜೈಪುರ-ದಿಲ್ಲಿ ಹೆದ್ದಾರಿಯಲ್ಲಿ ಒಂದು ಜನಜಂಗುಳಿ ತಡೆದು ನಿಲ್ಲಿಸಿತು ಮತ್ತು ಅದರಲ್ಲಿ ಇದ್ದವರನ್ನು ಭಯಂಕರವಾಗಿ ಥಳಿಸಿತು. ಪೋಲೀಸರು ನಿಜವಾಗಿ ಜನಜಂಗುಳಿಯನ್ನು ಓಡಿಸಲು ಬಲಪ್ರಯೋಗ ನಡೆಸಿತು ಮತ್ತು ಗಾಯಗೊಂಡವರನ್ನು ಆಸ್ಪತ್ರೆಗೆ ಸೇರಿಸಿತು ಎಂದು ಡಿಎಸ್ಪಿ ಹೇಳಿದರು. ಪಹ್ಲೂಖಾನ್ ಬಿಟ್ಟು ಇತರರೆಲ್ಲರೂ ಮರುದಿನ ಆಸ್ಪತ್ರೆಯಿಂದ ಹೋದರು. ಆತ ಎಪ್ರಿಲ್ ೩ರಂದು ನಿಧನರಾದರು.
ಎಪ್ರಿಲ್ ೧ರಂದು ವ್ಯಾನ್ನಲ್ಲಿ ಇದ್ದ ಎಲ್ಲರ ಮೇಲೂ ಮತ್ತು ಹಲ್ಲೆ ಮಾಡಿದವರ ಮೇಲೂ ಎಫ್ಐಆರ್ ದಾಖಲಿಸಲಾಯಿತು. ಹಲ್ಲೆ ಮಾಡಿದವರಲ್ಲಿ ಯಾರೂ ಬಂಧಿತರಾಗಿಲ್ಲ. ಪಹ್ಲೂ ಖಾನ್ ಸಾವಿನ ನಂತರ ಹಲ್ಲೆ ಮಾಡಿದ ಜನಜಂಗುಳಿಯ ವಿರುದ್ಧ ಸೆಕ್ಷನ್ 302ನ್ನು ಎಫ್ಐಆರ್ಗೆ ಸೇರಿಸಲಾಯಿತು. ಇತರರೊಂದಿಗೆ ಆರು ಜನರ ಹೆಸರು ಸೇರಿಸಲಾಯಿತು. ಅವರಲ್ಲಿ ಯಾರನ್ನೂ ಬಂಧಿಸಿಲ್ಲ. ಇತರರಲ್ಲಿ 3 ಮಂದಿಯನ್ನು ಬಂಧಿಸಲಾಗಿದೆ, ಮತ್ತು ಒಬ್ಬನನ್ನು ನಿಯೋಗದ ಮುಂದೆಯೇ ಠಾಣೆಗೆ ತರಲಾಯಿತು. ಬಂಧಿತರಾದ ಅಥವ ಹಲ್ಲೆಗೊಳಗಾದ ಯಾರ ಬಳಿಯೂ ಆ ಪ್ರಾಣಿಗಳನ್ನು ಕಾನೂನುಬದ್ಧವಾಗಿ ಖರೀದಿಸಲಾಗಿದೆ ಮತ್ತು ಅದನ್ನು ಕಾನೂನುಬದ್ಧವಾಗಿ ಸಾಗಿಸಲಾಗುತ್ತಿತ್ತು ಎಂಬ ಬಗ್ಗೆ ಯಾವುದೇ ದಸ್ತಾವೇಜು ಇರಲಿಲ್ಲ ಎಂದು ಡಿಎಸ್ಪಿ ಹೇಳಿದರು. ಆದರೆ ಇದು ಒಂದು ಸುಳ್ಳು ಹೇಳಿಕೆ ಎಂದು ಸಾಬೀತಾಗಿದೆ. ಏಕೆಂದರೆ ದಸೀದಿಗಳ ಫೋಟೋಗಳು ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಎಂದು ನಿಯೋಗ ಹೇಳಿದೆ.
ಹಲ್ಲೆಗೊಳಗಾದವರ ಜೇಬುಗಳಲ್ಲಿ ಒಟ್ಟು 25,೦೦೦ ರೂ. ಸಿಕ್ಕಿತು, ಅದು ಅವರ ಇತರ ಪೇಪರುಗಳೊಂದಿಗೆ ಆಸ್ಪತ್ರೆ ಆಡಳಿತದ ಬಳಿ ಸುರಕ್ಷಿತವಾಗಿ ಇಡಲ್ಪಟ್ಟಿದೆ ಎಂದೂ ತನಿಖಾಧಿಕಾರಿ ಹೇಳಿದರು.
ನಂತರ ಸಿಪಿಐ(ಎಂ) ನಿಯೋಗ ಜಿಲ್ಲಾ ಕಲೆಕ್ಟರ್ ಮುಕ್ತಾನಂದ ಅಗ್ರವಾಲ್ ಅವರನ್ನು ಅಲವರ್ನಲ್ಲಿ ಭೇಟಿ ಮಾಡಿತು. ನಿಯೋಗ ಅವರೊಂದಿಗೆ ಘಟನೆಯ ಬಗ್ಗೆ ಚರ್ಚಿಸಿದಾಗ ಅವರು ನಡೆದದ್ದೆಲ್ಲ ಬಹಳ ತಪ್ಪು ಎಂದು ಒಪ್ಪಿಕೊಂಡರು. ಹಲ್ಲೆಗೊಳಗಾದವರ ಬಳಿ ಹಸುಗಳ ಕುರಿತಾದ ರಸೀದಿಗಳಿದ್ದವು ಎಂದೂ ಅವರು ಹೇಳಿದರು.
ಸಿಪಿಐ(ಎಂ) ನಿಯೋಗ ಈ ಕೆಳಗಿನ ಆಗ್ರಹಗಳನ್ನು ಮುಂದಿಟ್ಟಿದೆ:
- ಕಾವಲು ಕೋರತನ ನಡೆಸುವ ಗುಂಪುಗಳ ವಿರುದ್ಧ ಬಲವಾದ ಮತ್ತು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕು, ಹಿಂದೂ ಚೌಕಿಗಳು ಎಂಬುದನ್ನು ರಚಿಸುತ್ತಿದ್ದರೆ ಅವನ್ನು ತೆಗೆಯಬೇಕು. ಕಾವಲುಗಿರಿ ಕೃತ್ಯದಲ್ಲಿ ತೊಡಗಿರುವವರನ್ನು ಮತ್ತು ಬೆಂಬಲಿಸುವವರನ್ನು ಶಿಕ್ಷಿಸಬೇಕು.
- ಜಿಲ್ಲಾ ಆಡಳಿತ ಜೈಪುರ ಮಹಾನಗರಪಾಲಿಕೆ ಸಂಘಟಿಸಿದ ಜೈಪುರ ಹಾಟ್ವಾಡದಲ್ಲಿ ಪಶುಗಳನ್ನು ಖರೀದಿಸಿದ ಎಲ್ಲ ವಿವರಗಳನ್ನು ಪಡೆಯಬೇಕು. ಈ ರಸೀದಿಗಳಲ್ಲಿ ಹಲ್ಲೆಗೊಳಗಾದವರ ಹೆಸರುಗಳಲ್ಲದೆ ಅವರ ವಿಳಾಸಗಳೂ ಇರುತ್ತವೆ. ಹಾಗಿದ್ದಲ್ಲಿ ಮಹಾನಗರಪಾಲಿಕೆ ಅಧಿಕಾರಿಗಳು ರಾಜ್ಯದ ಹೊರಗಿನವರಿಗೆ ಹಸುಗಳನ್ನು ಏಕೆ ಮಾರಿತು ಎಂದು ವಿವರಣೆ ಕೊಡಬೇಕಾಗುತ್ತದೆ. ಇದು ಅಗತ್ಯವೇಕೆಂದರೆ, ಇನ್ನೊಂದು ರಾಜ್ಯಕ್ಕೆ ಅಗತ್ಯ ಅನುಮತಿ ಇಲ್ಲದೆ ಪಶುಗಳನ್ನು ಸಾಗಿಸುವುದು ಕಾನೂನುಬಾಹಿರ ಎಂದು ಪೋಲಿಸರು ಒತ್ತಿ ಹೇಳುತ್ತಿದ್ದಾರೆ. ಮಾರಾಟದ ಮೊದಲು ಮಹಾನಗರಪಾಲಿಕೆ ಅಗತ್ಯ ಅನುಮತಿ ಒದಗಿಸಬೇಕಾಗಿತ್ತು.
- ಹಲ್ಲೆಗೊಳಗಾದವರ ಬಳಿಯಿದ್ದುದೆಲ್ಲವೂ ಆಸ್ಪತ್ರೆಯಲ್ಲಿವೆ, ಅವನ್ನು ಜಿಲ್ಲಾ ಆಡಳಿತ ಅವರಿಗೆ ಹಿಂದಿರುಗಿಸಬೇಕು.
- ಹಿಂಸಾಚಾರ ಮತ್ತು ಕೊಲೆಯ ಆಪಾದನೆ ಇರುವವರೆಲ್ಲರನ್ನೂ ಬಂಧಿಸಬೇಕು ಮತ್ತು ಈ ಕೇಸನ್ನು ತ್ವರಿತವಾಗಿ ಇತ್ಯರ್ಥ ಮಾಡಬೇಕು.
- ಪಹ್ಲೂ ಖಾನ್ ಕುಟುಂಬಕ್ಕೆ ಪರಿಹಾರ ನೀಡಬೇಕು ಮತ್ತು ಅವರ ಮರುವಸತಿಗೆ ನೆರವಾಗಬೇಕು. ಗಾಯಗೊಂಡ ಇತರರಿಗೆ ಪರಿಹಾರ ಒದಗಿಸಬೇಕು ಮತ್ತು ಅವರ ಹಸುಗಳನ್ನು ಅವರಿಗೆ ಹಿಂದಿರುಗಿಸಬೇಕು. ಮತ್ತು ಅವರನ್ನು ಬಿಡುಗಡೆ ಮಾಡಬೇಕು.
ಸಿಪಿಐ(ಎಂ)ನ ಈ ನಿಯೋಗದಲ್ಲಿ ಪೊಲಿಟ್ಬ್ಯುರೊ ಸದಸ್ಯೆ ಸುಭಾಷಿಣಿ ಅಲಿ, ಪಶ್ಚಿಮ ಬಂಗಾಲದ ಲೋಕಸಭಾ ಸದಸ್ಯ ಬದ್ರುದ್ದುಜ ಖಾನ್, ತ್ರಿಪುರಾದ ಲೋಕಸಭಾ ಸದಸ್ಯ ಶಂಕರ ಪ್ರಸಾದ್ ದತ್ತ, ಸಿಪಿಐ(ಎಂ) ರಾಜಸ್ತಾನ ಕಾರ್ಯದರ್ಶಿ ಆಮ್ರ ರಾಮ್ ಮತ್ತು ಸಿಪಿಐ(ಎಂ) ರಾಜ್ಯ ಮುಖಂಡರಾದ ಸುಮಿತ್ರ ಚೋಪ್ರ, ರಯಿಸ ಹಾಗೂ ಗುರುಚರಣ್ಸಿಂಗ್ ಮೋರ್ ಇದ್ದರು.
ತಂಡ ಪೆಹ್ಲೂ ಖಾನ್ ಅವರ ತಾಯಿ ಅಂಕುರಿ ಬೇಗಂ ಮತ್ತು ಹೆಂಡತಿ ಜೆಬಿನಾ ಬೇಗಂ ಹಾಗೂ ಇಬ್ಬರು ಗಂಡು ಮಕ್ಕಳು ಇರ್ಷಾದ್ ಹಾಗೂ ಆರಿಫ್ ಇವರುಗಳನ್ನು ಭೇಟಿಯಾದರು. ಈ ಇಬ್ಬರು ಹುಡುಗರು ಕೂಡ ’ಗೋರಕ್ಷಕ’ರ ಹಲ್ಲೆಗೆ ತುತ್ತಾದವರು. ಹಲ್ಲೆಗೆ ತುತ್ತಾದ ಈ ಊರಿನ ಇನ್ನೊಬ್ಬ ರೈತ ಅಜ್ಮತ್ ಮನೆಗೂ ತಂಡ ಭೇಟಿ ನೀಡಿತು. ಈತನನ್ನು ಅಲವರ್ ಆಸ್ಪತ್ರೆಯಿಂದ ಬಲವಂತವಾಗಿ ಡಿಸ್ಚಾರ್ಜ್ ಮಾಡಲಾಗಿದ್ದು ಈಗ ಮನೆಯಲ್ಲಿ ಹಾಸಿಗೆ ಹಿಡಿದಿದ್ದಾನೆ.
ಪೆಹ್ಲೂ ಕಾನ್ ಕುಟುಂಬ ೧.೫ ಎಕ್ರೆ ಜಮೀನು ಹೊಂದಿದೆ. ಬದುಕಿಗೆ ಗೋದಿ ಬೆಳೆ ಮತ್ತು ಹೈನುಗಾರಿಕೆಯನ್ನು ನಂಬಿರುವ ಕುಟುಂಬ. ಪೆಹ್ಲೂ ಖಾನ್, ಆತನ ಇಬ್ಬರು ಮಕ್ಕಳು, ಅಳಿಯ ಮತ್ತು ಹಳ್ಳಿಯ ಇನ್ನಿಬ್ಬರು ರೈತರು ಜೈಪುರದ ಪಶು ಸಂತೆಯಲ್ಲಿ ಕಡಿಮೆ ಬೆಲೆಗೆ ಹಸು-ಎಮ್ಮೆಗಳು ಸಿಗುತ್ತವೆ ಎಂದು ಹೋಗಿದ್ದರು.
ಈ ಹಳ್ಳಿಯಿರುವ ಮೇವತ್ ಪ್ರದೇಶದಲ್ಲಿ ಮುಸ್ಲಿಮರು ಬಹಳ ಸಂಖ್ಯೆಯಲ್ಲಿದ್ದಾರೆ. ಅವರಲ್ಲಿ ಹೆಚ್ಚಿನವರು ರೈತರು ಅಥವ ಪಶುಪಾಲಕರು. ಹಿಂದೂ-ಮುಸ್ಲಿಂ ಐಕ್ಯತೆಯ ದೀರ್ಘ ಪರಂಪರೆಯಿರುವ ಪ್ರದೇಶ ಇದು. ಪೆಹ್ಲೂ ಖಾನ್ ಅಮಾನುಷ ಕೊಲೆ ಈ ಶಾಂತಿಪ್ರಿಯ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ ಎಂದು ಎಐಕೆಎಸ್ ತಂಡದ ಪತ್ರಿಕಾ ಹೇಳಿಕೆ ತಿಳಿಸುತ್ತದೆ.
ಎಐಕೆಎಸ್ ತಂಡ ಬರುತ್ತದೆಂಬ ಸುದ್ದಿ ಕೇಳಿ ನೂರಾರು ಹಳ್ಳಿಗರು ಸೇರಿದ್ದರು. ಅವರು ಒಂದು ಸಭೆಯನ್ನೂ ಏರ್ಪಡಿಸಿದರು. ಮಾಜಿ ಶಾಸಕ ಅಜ್ಮಲ್ ಖಾನ್, ಮಾಜಿ ಸರಪಂಚ ಕಾಲೆಖಾನ್, ಮತ್ತಿತರ ಈ ಪ್ರದೇಶದ ಮುಖಂಡರುಗಳು ಈ ಸಭೆಯಲ್ಲಿ ಭಾಗವಹಿಸಿದರು. ಸುತ್ತಮುತ್ತಲ ಹಳ್ಳಿಗಳ ಜನರ ಪಂಚಾಯತನ್ನು ಕರೆಯಲು ಸಭೆ ನಿರ್ಧರಿಸಿತು.
ಈ ಪ್ರಕರಣದಲ್ಲಿ ಹಾಕಿರುವ ಎಫ್ಐಆರ್ ರೈತರ ಮೇಲೆ ಹಲ್ಲೆ ಮಾಡಿದವರು ಭಜರಂಗ ದಳ ಮತ್ತು ವಿಹೆಚ್ಪಿಗೆ ಸೇರಿದವರು ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ. ಪೆಹ್ಲೂ ಖಾನ್ ಸಾವಿನ ನಂತರ ವಿಹೆಚ್ಪಿಯ ಜಿಲ್ಲಾ ಮುಖಂಡರು ತಮ್ಮ ಕಾರ್ಯಕರ್ತರನ್ನು ಬಂಧಿಸಬಾರದು ಎಂದು ಹಿರಿಯ ಪೋಲೀಸ್ ಅಧಿಕಾರಿಗಳಿಗೆ ಬೆದರಿಕೆ ಹಾಕಿರುವುದಾಗಿ ತಿಳಿದುಬಂದಿದೆ. ಪೆಹ್ಲೂ ಖಾನ್ ಮತ್ತು ಇತರ ರೈತರ ಬಳಿ ಜೈಪುರ ನಗರಸಭೆ ನೀಡಿದ ಖರೀದಿ ರಸಿದಿ ಇದ್ದರೂ ಅವರ ಮೇಲೆ ಸುಳ್ಳು ಎಫ್ಐಆರ್ ಹಾಕಲಾಗಿದೆ. ಸ್ವತಃ ರಾಜಸ್ತಾನದ ಗೃಹಮಂತ್ರಿಯೇ ರೈತರು ಕಾನೂನು ಉಲ್ಲಂಘಿಸಿ ಹಸುಗಳ ಕಳ್ಳ ಸಾಗಣೆ ಮಾಡುತ್ತಿದ್ದರು ಎಂದು ಆಪಾದಿಸಿದರು. ಕೇಂದ್ರ ಮಂತ್ರಿ ಮುಕ್ತಾರ್ ಅಬ್ಬಾಸ್ ನಕ್ವಿದಲಿಗೆ ಈ ಬಡಿದು ಸಾಯಿಸಿದ ಘಟನೆ ನಡೆದೇ ಇಲ್ಲ ಎಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದರು. ತೀವ್ರ ಪ್ರತಿಭಟನೆಯ ನಂತರ ತಾನು ಹೇಳಿದ್ದು ಹಾಗಲ್ಲ ಎಂದೆಲ್ಲ ಸಮರ್ಥಿಸಿಕೊಳ್ಳಲು ಹೆಣಗಾಡಿದರು.
ಇವೆಲ್ಲ ಈ ಹೀನ ಕೃತ್ಯ ಎಸಗಿದವರನ್ನು ಬಚಾವ್ ಮಾಡಲು ಆರೆಸ್ಸೆಸ್ ಮತ್ತು ಬಿಜೆಪಿ ಮುಖಂಡರು ಪ್ರಯತ್ನಿಸುತ್ತಿದ್ದಾರೆ ಎಂಬುದನ್ನು ಬಯಲಿಗೆಳೆದಿದೆ ಎಂದಿರುವ ಎಐಕೆಎಸ್ ಇದು ದೇಶವನ್ನು ಅರಾಕತೆ ಮತ್ತು ಕಾನೂನುಬಾಹಿರತೆಯತ್ತ ಎಳೆಯುವ ಒಂದು ಗಂಭೀರ ಸನ್ನಿವೇಶ ಎಂದು ಹೇಳಿದೆ. ಇದನ್ನು ಬಲವಾಗಿ ಪ್ರತಿರೋಧಿಸಬೇಕು, ಜನತೆಯ ಪ್ರಜಾಪ್ರಭುತ್ವ ಹಕ್ಕುಗಳು ಮತ್ತು ಸಮಾಜದ ಜಾತ್ಯತೀತ ಹಂದರವನ್ನು ರಕ್ಷಿಸಬೇಕಾದರೆ ಇದು ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟಿದೆ. ಆದ್ದರಿಂದ ಅಲವರ್ ಕೊಲೆಸುಲಿಗೆಯಲ್ಲಿ ಸಂಘಪರಿವಾರದ ಪಿತೂರಿಯನ್ನು ಹೊರಗೆಳೆಯಲು ಒಂದು ಉನ್ನತ ಮಟ್ಟದ ತನಿಖೆ ನಡೆಯಬೇಕಾಗಿದೆ, ಇದಕ್ಕಾಗಿ ಜನಗಳನ್ನು ಅಣಿನೆರೆಸಲು ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ ಎಂದು ಎಐಕೆಎಸ್ ಮುಖಂಡರು ಹೇಳಿದ್ದಾರೆ.
ಈ ಪ್ರಕರಣದಲ್ಲಿನ ಎಲ್ಲ ಅಪರಾಧಿಗಳಿಗೆ ಕಾನೂನಿನ ಪ್ರಕಾರ ಕಠಿಣ ಶಿಕ್ಷೆಯಾಗುವಂತೆ ಮಾಡಲು ಕಾನೂನು ನೆರವು ಸೇರಿದಂತೆ ಎಲ್ಲ ನೆರವನ್ನು ಒದಗಿಸಲಾಗುವುದು ಎಂದು ಎಐಕೆಎಸ್ ಮುಖಂಡರು ಈ ಹಳ್ಳಿ ಜನಗಳಿಗೆ ಮತ್ತು ಹಲ್ಲೆಗೊಳಗಾದವರ ಕುಟುಂಬಗಳ ಸದಸ್ಯರಿಗೆ ಭರವಸೆ ನೀಡಿದರು.