ಈ ದಿನ ಬ್ರಿಟಿಶ್ ಭಾರತದಲ್ಲಿ ನಾಗರಿಕರ ಅತಿ ದೊಡ್ಡ ಹತ್ಯಾಕಾಂಡ ಪಂಜಾಬಿನ ಅಮೃತಸರದಲ್ಲಿರುವ ಜಲಿಯಾನ್ ವಾಲಾ ಬಾಗ್ ಎಂಬ ದೊಡ್ಡ ಸಾರ್ವಜನಿಕ ಪಾರ್ಕಿನಲ್ಲಿ ನಡೆಯಿತು. ನಾಗರಿಕ ಸ್ವಾತಂತ್ರ್ಯಗಳನ್ನು ತೀವ್ರವಾಗಿ ಮಿತಗೊಳಿಸುವ ರೌಲತ್ ಆಕ್ಟ್ ವಿರುದ್ಧ ದೇಶದಲ್ಲಿ ಆಕ್ರೋಶವಿತ್ತು. ಅದರ ವಿರುದ್ಧ ಒಂದು ಸಭೆಯೂ, ಬೈಸಾಖಿ ಹಬ್ಬದ ಜಾತ್ರೆಯೂ ಅವತ್ತು ಬಾಗ್ ನಲ್ಲಿ ಇತ್ತು. ಸಭೆಯನ್ನು ನಿಷೇಧಿಸಲಾಗಿದ್ದು ಬಹುಪಾಲು ಸಾರ್ವಜನಿಕರಿಗೆ ಗೊತ್ತಿರಲಿಲ್ಲ.
ದೊಡ್ಡ ಜನಜಂಗುಳಿ ಕಂಡ ಕರ್ನಲ್ ಡಾಯರ್ ಎಂಬ ಮಿಲಿಟರಿ ಅಧಿಕಾರಿ ಯಾವುದೇ ಎಚ್ಚರಿಕೆ ಇಲ್ಲದೆ ಗುಂಡು ಹಾರಿಸಲು ಆಜ್ಞೆ ಮಾಡಿದ. ಈ ಹತ್ಯಾಕಾಂಡದಲ್ಲಿ ಸಾವಿರಕ್ಕೂ ಹೆಚ್ಚು ಜನ ಸತ್ತರು. ಸಾವಿರಾರು ಜನ ಗಾಯಗೊಂಡರು. ಈ ಹತ್ಯಾಕಾಂಡ ಪಂಜಾಬು ಮತ್ತು ಇಡೀ ದೇಶದ ಜನತೆಯನ್ನು ರೊಚ್ಚಿಗೆಬ್ಬಿಸಿತ್ತು. ಇದು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಒಂದು ತಿರುಗುಬಿಂದು ಆಗಿತ್ತು.
ಅಲ್ಲಿವರೆಗೆ ಕೆಲವರ ಮನವಿ ಪತ್ರ ಸಲ್ಲಿಕೆಗೆ ಸೀಮಿತವಾಗಿದ್ದ ಚಳುವಳಿ ಸಮರಶೀಲ ಸಾಮೂಹಿಕ ಕಾರ್ಯಾಚರಣೆಯ ರೂಪ ತಾಳಿತು. ಈ ಹತ್ಯಾಕಾಂಡಕ್ಕೆ ಕಾರಣನಾದ ಡಾಯರ್ ನ್ನು ತನಿಖೆಯ ನಂತರ ಮಿಲಿಟರಿಯಿಂದ ನಿವೃತ್ತಿಗೊಳಿಸಲಾಯಿತು.