ರಾಜ್ಯ ಬಿಜೆಪಿ ಅಧ್ಯಕ್ಷರನಿಂದನೆಯ ಹೇಳಿಕೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗಕ್ಕೆಸೀತಾರಾಂ ಯೆಚುರಿ ಪತ್ರ
ದೇಶದ ಆಳುವ ಪಕ್ಷ ಬಿಜೆಪಿಯ ತ್ರಿಪುರಾ ಘಟಕದ ಅಧ್ಯಕ್ಷರೇ ಚುನಾವಣಾ ಆಯೋಗ ಇತ್ತೀಚೆಗೆ ಸಮರ್ಥಿಸಿಕೊಂಡಿರುವ ಇಲೆಕ್ಟ್ರಾನಿಕ್ ಮತದಾನ ಯಂತ್ರ(ಇವಿಎಂ)ದ ಕಾರ್ಯವೈಖರಿಯನ್ನು ನಿಂದಿಸುವ ರೀತಿಯ ಹೇಳಿಕೆ ನೀಡಿದ್ದಾರೆ. ಎಪ್ರಿಲ್ 12ರಂದು ರಾಜ್ಯದ ಕೊವಾಯ್ ಜಿಲ್ಲೆಯ ತೆಲಿಯಮುರದಲ್ಲಿ ಸಾರ್ವಜನಿಕ ರ್‍ಯಾಲಿಯಲ್ಲಿ ಮಾತಾಡುತ್ತ ಅವರು ಮತದಾರರು ಬೇರೆ ಯಾವುದೇ ಪಕ್ಷಕ್ಕೆ ಮತ ನೀಡಿದರೂ ಅವು ಬಿಜೆಪಿಗೇ ಹೋಗುತ್ತವೆ, ಸ್ವತಃ ಮಾಣಿಕ್ ಸರ್ಕಾರ್ ಕೂಡ ತನ್ನ ಸಿಪಿಐ(ಎಂ) ಪಕ್ಷಕ್ಕೆ ಹಾಕಿದ ಮತ ಕಮಲದ ಪರವಾಗಿ ದಾಖಲಾಗುತ್ತದೆ, ಗುಂಡಿಗೆಯಿದ್ದರೆ ನೀವು ಬಿಪ್ಲಬ್ ದೇವ್ ವಿರುದ್ಧ ದೂರು ಕೊಡಬಹುದು ಎಂದು ಹೇಳಿರುವುದಾಗಿ ವರದಿಯಾಗಿದೆ.
ಆಳುವ ಪಕ್ಷದ ರಾಷ್ಟ್ರೀಯ ಮುಖಂಡರೊಂದಿಗೆ ಮತ್ತು ಕೇಂದ್ರ ಸರಕಾರದ ಮುಖಂಡರೊಂದಿಗೆ ನಿಕಟ ಸಂಪರ್ಕ ಇರುವ ಮುಖಂಡರೊಬ್ಬರ ಇಂತಹ ತಿಕ್ಕಲುತನದ ಹೇಳಿಕೆ ಬಹಳ ಗಂಭೀರ ಸಂಗತಿ ಎಂದು ತ್ರಿಪುರ ಎಡರಂಗ ಸಮಿತಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದೆ.
ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ಇಂತಹ ಹೇಳಿಕೆಯ ಹಿನ್ನೆಲೆಯಲ್ಲಿ ತ್ರಿಪುರಾದಲ್ಲಿ ಈ ಮತಯಂತ್ರಗಳನ್ನು ’ಮತದಾರ ಪರೀಕ್ಷಿಸುವ ಮತ ಪರಿಶೋಧನಾ ಜಾಡು’(ವಿವಿಪಿಎಟಿ)ನೊಂದಿಗೆ ಬಳಸಬೇಕು ಎಂದು ಆಗ್ರಹಿಸುವ ಪತ್ರವನ್ನು ಚುನಾವಣಾ ಆಯೋಗಕ್ಕೆ ಬರೆದಿದ್ದಾರೆ.
ಅವರ ಪತ್ರದ ಪೂರ್ಣ ಪಾಠ ಹೀಗಿದೆ:
ನಾನು ತ್ರಿಪುರ ರಾಜ್ಯದಿಂದ ಒಂದು ಗಂಭೀರ ಸಂಗತಿಯನ್ನು ತಮ್ಮ ಅವಗಾಹನೆಗೆ ಕಳಿಸುತ್ತಿದ್ದೇನೆ. ನೀವು ಈಗಾಗಲೇ ಸಿಪಿಐ(ಎಂ)ನ ತ್ರಿಪುರ ರಾಜ್ಯ ಸಮಿತಿಯಿಂದ ನೇರವಾಗಿ ಕೂಡ ಇದನ್ನು ಪಡೆದಿರಬಹುದು.
ಬಿಜೆಪಿಯ ತ್ರಿಪುರ ಘಟಕದ ಅಧ್ಯಕ್ಷ ಶ್ರೀ ಬಿಪ್ಲಬ್ ದೇಬ್ ಒಂದು ಸಾರ್ವಜನಿಕ ಸಭೆಯಲ್ಲಿ ಎಲೆಕ್ಟ್ರಾನಿಕ್ ಮತದಾನ ಯಂತ್ರದ ಪ್ರಾಮಾಣಿಕತೆ ಮತ್ತು ನ್ಯಾಯಯುತತೆಯನ್ನು ನಿಂದಿಸುವ ಹೇಳಿಕೆಯನ್ನು ನೀಡಿದ್ದಾರೆ ಮತ್ತು ಧೈರ್ಯವಿದ್ದರೆ ತನ್ನ ವಿರುದ್ಧ ದೂರು ನೀಡಿ ಎಂದು ತ್ರಿಪುರ ಮುಖ್ಯಮಂತ್ರಿಗೆ ಹೇಳಿದ್ದಾರೆ. ಅವರ ಭಾಷಣ ಸಂಬಂಧಪಟ್ಟ ವಿಡಿಯೋ ತುಣುಕು ಮತ್ತು ರಾಜ್ಯದ ಮುದ್ರಣ ಮಾಧ್ಯಮದ ದೈನಿಕಗಳಲ್ಲಿ ಪ್ರಕಟವಾದ ಸುದ್ದಿಗಳನ್ನೂ ನಿಮಗೆ ಸಲ್ಲಿಸಲಾಗಿದೆ.
ಇವಿಎಂಗಳ ತಟಸ್ಥತೆ ಮತ್ತು ನ್ಯಾಯಯುತತೆಯ ಬಗ್ಗೆ ವ್ಯಾಪಕ ಸಂದೇಹಗಳು ದೇಶದ ಎಲ್ಲೆಡೆಗಳಿಂದ ವ್ಯಕ್ತವಾಗಿರುವಾಗ ಇಂತಹ ಆಕ್ರೋಶಕಾರಿ ಹೇಳಿಕೆಗಳು ಚುನಾವಣೆಗಳನ್ನು ಮುಕ್ತ ಮತ್ತು ನ್ಯಾಯಯುತವಾಗಿ ನಡೆಸುವ ಚುನಾವಣಾ ಆಯೋಗದ ಘೋಷಿತ ಗುರಿಯ ಬುನಾದಿಯನ್ನೇ ಧ್ವಂಸ ಮಾಡುತ್ತವೆ. ಒಂದು ಸಂವಿಧಾನಿಕ ಪ್ರಾಧಿಕಾರವಾದ ಚುನಾವಣಾ ಆಯೋಗ ನಮ್ಮ ಪ್ರಜಾಪ್ರಭುತ್ವದ ಅಡಿಪಾಯವಾದ ಮುಕ್ತ ಮತ್ತು ನ್ಯಾಯಯುತ ಚುನಾವಣೆಗಳು ನಡೆಯುವಂತೆ ಮಾಡಬಲ್ಲ ಏಕೈಕ ಸಂಸ್ಥೆ.
ಇಂತಹ ಆಕ್ರೋಶಕಾರಿ ಹೇಳಿಕೆಗಳ ಹಿನ್ನೆಲೆಯಲ್ಲಿ, ತಾವು ಜತೆಜತೆಗೇ, ಸಂಬಧಪಟ್ಟ ವ್ಯಕ್ತಿಯನ್ನು ಸೂಕ್ತವಾಗಿ ಶಿಕ್ಷಿಸುವ ಮತ್ತು ತ್ರಿಪುರದಲ್ಲಿ ಚುನಾವಣೆಯನ್ನು ಮುಕ್ತ ಹಾಗೂ ನ್ಯಾಯಯುತವಾಗಿ ನಡೆಸಲು ಬದ್ಧವಾಗಿದೆ ಎಂದು ರಾಜ್ಯದ ಜನತೆಗೆ ಭರವಸೆ ನೀಡುವ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ.
ಈ ಬೆಳವಣಿಗೆಗಳ ಬೆಳಕಿನಲ್ಲಿ, ತ್ರಿಪುರ ರಾಜ್ಯದಲ್ಲಿ ಬಳಸುವ ಇವಿಎಂಗಳನ್ನು ’ಮತದಾರ ಪರೀಕ್ಷಿಸುವ ಕಾಗದ ಪರಿಶೋಧನಾ ಜಾಡು’(ವಿವಿಪಿಎಟಿ) ವ್ಯವಸ್ಥೆಯೊಂದಿಗೆ ಜೋಡಿಸುವುದು ಅನಿವಾರ್ಯವಾಗಿದೆ. ಇದು ಮುಂಬರುವ ಚುನಾವಣೆಯಲ್ಲಿ ಚುನಾವಣಾ ಪ್ರಕ್ರಿಯೆಯ ಮುಕ್ತತೆ ಮತ್ತು ನ್ಯಾಯಯುತತೆಯ ಬಗ್ಗೆ ತ್ರಿಪುರಾದ ಮತದಾರರಲ್ಲಿ ಸ್ವಲ್ಪವಾದರೂ ವಿಶ್ವಾಸ ಮತ್ತೆ ಬರುವಂತೆ ಮಾಡಬಹುದಾದ ಕನಿಷ್ಟ ಕ್ರಮ.