ಕಾಶ್ಮೀರದಲ್ಲಿ ಕೇಂದ್ರೀಯ ಭದ್ರತಾ ಪಡೆಗಳ ಜೀಪಿಗೆ ಒಬ್ಬ ಯುವಕನನ್ನು ಕಟ್ಟಿ ಹಾಕಿ ಹತ್ತಾರು ಹಳ್ಳಿಗಳಲ್ಲಿ ಪ್ರದರ್ಶಿಸಲಾಯಿತು ಎಂಬ ವರದಿ ವ್ಯಾಪಕ ಆಕ್ರೋಶವನ್ನು ಉಂಟು ಮಾಡಿದೆ. ಆತನನ್ನು ಕಲ್ಲೆಸೆಯುವವರಿಗೆ ಎದುರಾಗಿ ಮಾನವ ಗುರಾಣಿಯಾಗಿ ಬಳಸಲಾಯಿತು ಎನ್ನಲಾಗಿದೆ. 26 ವರ್ಷದ ಫರೂಕ್ ಅಹ್ಮದ್ ದರ್ ಕಾಶ್ಮೀರಿ ಶಾಲುಗಳಿಗೆ ಕಸೂತಿ ಹಾಕುವ ಕೆಲಸ ಮಾಡುವ ಯುವಕ ತಾನು ಎಂದೂ ಕಲ್ಲೆಸೆಯುವ ಕೆಲಸ ಮಾಡಿಲ್ಲ ಎಂದು ಮಾಧ್ಯಮಗಳಿಗೆ ಹೇಳಿದ್ದಾನೆ.
ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿಗಳು ಈ ಬಗ್ಗೆ ತನಿಖೆ ಮಾಡಲಾಗುವುದು ಎಂದು ಪ್ರಕಟಿಸಿದರೂ ಸಹ, ಒಬ್ಬ ಕಾಶ್ಮೀರಿ ಯುವಕನನ್ನು ಮಿಲಿಟರಿ ಜೀಪಿಗೆ ಕಟ್ಟಿ 8-10 ಹಳ್ಳಿಗಳಲ್ಲಿ ಪ್ರದರ್ಶಿಸಿರುವ ಆಕ್ರೋಶಕಾರಿ ಕೃತ್ಯವನ್ನು ನಡೆಸಿದವರು ಇದಕ್ಕೆ ಉತ್ತರ ಕೊಡುವಂತೆ ಮಾಡಬೇಕಾಗಿದೆ ಮತ್ತು ಅವರನ್ನು ಶಿಕ್ಷಿಸಬೇಕಾಗಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ಚುನಾವಣಾ ಕರ್ತವ್ಯವನ್ನು ನಿಭಾಯಿಸುತ್ತಿದ್ದ ಸಿಆರ್ಪಿಎಫ್ ಸಿಬ್ಬಂದಿಯನ್ನು ಕಲ್ಲೆಸೆಯುವವರು ಕೆಣಕುವ ಮತ್ತು ಹಲ್ಲೆ ಮಾಡುವ ಒಂದು ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದ್ದರಿಂದ ಎದ್ದ ಕ್ರೋಧದ ಹಿನ್ನೆಲೆಯಲ್ಲಿ ಈ ಘಟನೆ ನೆಡೆದಿದೆ ಎನ್ನಲಾಗಿದ್ದು ಸಿಪಿಐ(ಎಂ) ಪೊಲಿಟ್ಬ್ಯುರೊ ಇದನ್ನು ಗಮನಿಸಿದೆ.
ಆದರೆ ಮಾನವ ಗುರಾಣಿಯಾಗಿ ಬಳಕೆಯಾಗಿದ್ದ ಫರೂಕ್ ಅಹ್ಮದ್ ದರ್ ಆ ದಿನ ಪ್ರತ್ಯೇಕತಾವಾದಿಗಳ ಬಹಿಷ್ಕಾರದ ಕರೆಯನ್ನು ಉಲ್ಲಂಘಿಸಿ ಮತದಾನ ಮಾಡಿದ್ದ ಕೇವಲ 7% ಮತದಾರರಲ್ಲಿ ಒಬ್ಬನಾಗಿದ್ದ, ಮತ ಹಾಕಿ ಕುಟುಂಬದಲ್ಲಿ ಆದ ಒಂದು ಸಾವಿಗೆ ಸಂತಾಪ ವ್ಯಕ್ತಪಡಿಸಲು ಹೋಗುತ್ತಿರುವಾಗ ಭದ್ರತಾ ಸಿಬ್ಬಂದಿ ಆತನನ್ನು ಮನಬಂದಂತೆ ಥಳಿಸಿ, ನಂತರ ತಮ್ಮ ಜೀಪಿಗೆ ಕಟ್ಟಿ 8-10 ಹಳ್ಳಿಗಳಲ್ಲಿ ಸುತ್ತಾಡಿಸಿ ಒಯ್ದರು ಎಂದು ನಂತರ ಬಂದ ಮಾಧ್ಯಮ ವರದಿಗಳು ಹೇಳುತ್ತವೆ. ತಾನು ಇನ್ನೆಂದೂ ಮತದಾನ ಮಾಡುವುದಿಲ್ಲ ಎಂದು ಆತ ಬಹಳ ಬೇಸರದಿಂದ ಹೇಳಿರುವುದಾಗಿ ವರದಿಯಾಗಿದೆ.