ಚುನಾವಣಾ ಸುಧಾರಣೆ ಮತ್ತು ಕೋಮುವಾದೀ ಆಕ್ರಮಣಗಳ ವಿರುದ್ಧ ಸಮಾವೇಶಗಳು
ಎಪ್ರಿಲ್ ೧೮ ಮತ್ತು ೧೯ರಂದು ನಡೆದ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆ ರೇಷನ್ ಕಡಿತ, ಮನರೇಗ ಕಡಿತ, ಖಾಸಗೀಕರಣದ ಧಾವಂತ ಮತ್ತು ರೈತರಿಗೆ ಕನಿಷ್ಟ ಬೆಂಬಲ ಬೆಲೆಗಳ ಪ್ರಶ್ನೆಗಳ ಮೇಲೆ ಮೇ ತಿಂಗಳ ಉತ್ತರಾರ್ಧದಲ್ಲಿ ವ್ಯಾಪಕ ಪ್ರಚಾರಾಂದೋಲನ ಮತ್ತು ಹೋರಾಟಗಳನ್ನು ನಡೆಸಬೇಕೆಂದು ನಿರ್ಧರಿಸಿದೆ.
ಸಿಪಿಐ(ಎಂ)ನ ರಾಜ್ಯ ಸಮಿತಿಗಳು ಜನಗಳ ಮೇಲೆ ಅಪಾರ ಯಾತನೆಗಳನ್ನು ಹೇರುತ್ತಿರುವ ಸರಕಾರದ ಇತ್ತೀಚಿನ ನಿರ್ಧಾರಗಳ ವಿರುದ್ಧ ಪ್ರತಿಭಟನಾ ಕಾರ್ಯಾಚರಣೆಗಳ ಒಂದು ವಾರದ ಕಾರ್ಯಕ್ರಮಗಳನ್ನು ಸಂಘಟಿಸುತ್ತವೆ.
ಈ ಕಾರ್ಯಕ್ರಮಗಳು ಈ ಕೆಳಗಿನವುಗಳ ಮೇಲೆ ಗಮನ ಕೇಂದ್ರೀಕರಿಸುತ್ತವೆ:
- ಆಹಾರ ಭದ್ರತಾ ಕಾಯ್ದೆಗೆ ವ್ಯತಿರಿಕ್ತವಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಗೆ ಪೂರೈಕೆಗಳಲ್ಲಿ ತೀವ್ರ ಕಡಿತ, ಸಕ್ಕರೆ ಮತ್ತು ಸೀಮೆಎಣ್ಣೆ ಒದಗಿಸುವುದನ್ನು ನಿಲ್ಲಿಸಿರುವುದು.
- ಗ್ರಾಮಿಣ ಉದ್ಯೋಗ ಖಾತ್ರಿ ಯೋಜನೆಗೆ ನೀಡಬೇಕಾದ್ದನ್ನು ಕೂಡ ತೀವ್ರವಾಗಿ ಕಡಿತಗೊಳಿಸಲಾಗಿದೆ. ಕೇಂದ್ರ ಸರಕಾರ ಪೂರ್ಣ 1೦೦ ದಿನಗಳ ಉದ್ಯೋಗ ಒದಗಿಸಲು ಬೇಕಾಗುವಷ್ಟು ಹಣವನ್ನು ರಾಜ್ಯ ಸರಕಾರಗಳಿಗೆ ಒದಗಿಸಬೇಕು.
- ಖಾಸಗೀಕರಣದತ್ತ ಧಾವಂತ ಈಗಾಗಲೇ ಇಳಿಮುಖವಾಗಿರುವ ಉದ್ಯೋಗ ಪರಿಸ್ಥಿತಿಯನ್ನು ಪ್ರತಿಕೂಲವಾಗಿ ತಟ್ಟುತ್ತದೆ. ಇದು ಉದ್ಯೋಗ ಮೀಸಲಾತಿಯಿಂದ ಪರಿಶಿಷ್ಟ ಜಾತಿಗಳು, ಬುಡಕಟ್ಟುಗಳು, ಒಬಿಸಿಗಳು ಮತ್ತು ವಿಕಲಾಂಗರಿಗೆ ಸಿಗುತ್ತಿದ್ದ ಅಲ್ಪ-ಸ್ವಲ್ಪ ಸೌಲಭ್ಯವನ್ನೂ ತಟ್ಟುತ್ತದೆ. ಆದ್ದರಿಂದ ಖಾಸಗೀಕರಣವನ್ನು ನಿಲ್ಲಿಸಬೇಕು.
- ರೈತರಿಗೆ ಉತ್ಪಾದನಾ ಖರ್ಚಿನ ಒಂದೂವರೆ ಪಟ್ಟು ಕನಿಷ್ಟ ಬೆಂಬಲ ಬೆಲೆಯನ್ನು ಖಾತ್ರಿಗೊಳಿಸುವ ಬಿಜೆಪಿಯ ಚುನಾವಣಾ ಭರವಸೆಯನ್ನು ಕೇಂದ್ರ ಸರಕಾರ ಜಾರಿ ಮಾಡುವಂತೆ ಬಲವಂತ ಪಡಿಸಿದರೆ ಮಾತ್ರವೇ ಆಳವಾಗುತ್ತಿರುವ ಕೃಷಿ ಸಂಕಟವನ್ನು ಎದುರಿಸಲು ಸಾಧ್ಯ. ಈ ನಡುವೆ, ಸಾಲಮನ್ನಾಗಳು ಸ್ವಲ್ಪ ತಕ್ಷಣದ ಪರಿಹಾರ ನೀಡಬಹುದಷ್ಟೇ. ಆದರೆ ಅದು ಕೃಷಿ ಬಿಕ್ಕಟ್ಟಿಗೆ ಮತ್ತು ಭಾರತೀಯ ರೈತರ ಕಲ್ಯಾಣಕ್ಕೆ ದೀರ್ಘಕಾಲೀನ ಪರಿಹಾರವಲ್ಲ.
ಈ ನಾಲ್ಕು ಪ್ರಶ್ನೆಗಳ ಮೇಲೆ ಸಿಪಿಐ(ಎಂ) ಒಂದು ಪ್ರಚಾರಾಂದೋಲನ ಮತ್ತು ದೇಶಾದ್ಯಂತ ಜನತೆಯ ಹೋರಾಟಗಳನ್ನು ಆರಂಭಿಸುತ್ತದೆ. ಕೇಂದ್ರ ಸಮಿತಿ ಎರಡು ಪ್ರತ್ಯೇಕ ಸಮಾವೇಶಗಳನ್ನು ನಡೆಸಲು ಮುತುವರ್ಜಿ ವಹಿಸಬೇಕೆಂದು ಕೇಂದ್ರ ಸಮಿತಿ ನಿರ್ಧರಿಸಿದೆ. ಒಂದು, ಚುನಾವಣಾ ಸುಧಾರಣೆಗಳು ಮತ್ತು ಇತ್ತೀಚೆಗೆ ರಾಜಕೀಯ ನಿಧಿ ನೀಡಿಕೆಯ ಬಗ್ಗೆ ಮಾಡಿರುವ ಬದಲಾವಣೆಗಳನ್ನು ಕುರಿತಂತೆ. ಈ ಬದಲಾವಣೆಗಳು ರಾಜಕೀಯ ಭ್ರಷ್ಟಾಚಾರವನ್ನು ಕಾನೂನುಬದ್ಧ ಗೊಳಿಸಿವೆಯಷ್ಟೇ.
ಕೇಂದ್ರ ಸಮಿತಿ ಆರೆಸ್ಸೆಸ್-ಬಿಜೆಪಿಯ ಹೊಸದಾದ ಆಕ್ರಮಣಶೀಲತೆಯ ಹಿನ್ನೆಲೆಯಲ್ಲಿ ಒಂದು ಕೋಮುವಾದ-ವಿರೋಧಿ ಸಮಾವೇಶ ನಡೆಸಲು ಮುತುವರ್ಜಿ ವಹಿಸಬೇಕು ಎಂದೂ ನಿರ್ಧರಿಸಿದೆ. ಕಾಶ್ಮೀರ ಸನ್ನಿವೇಶ ಕುರಿತಂತೆ ಸಮಾನಮನಸ್ಕ ರಾಜಕೀಯ ಶಕ್ತಿಗಳು, ಬುದ್ಧಿಜೀವಿಗಳು ಮತ್ತು ಸಾಮಾಜಿಕ ಆಂದೋಲನಗಳ ಒಂದು ಸಮಾವೇಶವನ್ನು ನಡೆಸಲು ಕೂಡ ಕೇಂದ್ರ ಸಮಿತಿ ನಿರ್ಧರಿಸಿದೆ.
ಮಹಿಳಾಮಸೂದೆ ಕುರಿತಂತೆ ಬಿಜೆಪಿ ಸರಕಾರದ ವಿಶ್ವಾಸಘಾತವನ್ನು ಪ್ರತಿಭಟಿಸಲು ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲು ಈ ಮಸೂದೆಯನ್ನು ಅಂಗೀಕರಿಸ ಬೇಕೆಂದು ಆಗ್ರಹಿಸಿ ಒಂದು ದಿನದ ಪ್ರತಿಭಟನೆಗೆ ಕರೆ ನೀಡಲು ಕೇಂದ್ರ ಸಮಿತಿ ನಿರ್ಧರಿಸಿದೆ.
ಕೇಂದ್ರ ಸಮಿತಿ ಈ ಸಭೆಯಲ್ಲಿ ಚರ್ಚಿಸಿದ ಇತರ ವಿಷಯಗಳು ಹೀಗಿವೆ:
ಹೆಚ್ಚುತ್ತಿರುವ ಕೋಮುವಾದಿ ದಾಳಿಗಳು
ಉತ್ತರಪ್ರದೇಶ ಮತ್ತು ಉತ್ತರಾಖಂಡದಲ್ಲಿ ಚುನಾವಣಾ ವಿಜಯಗಳ ನಂತರ ಆರೆಸ್ಸೆಸ್-ಬಿಜೆಪಿ ವಿವಿಧ ರೀತಿಗಳಲ್ಲಿ ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸುವ ಉದ್ದೇಶದ ತಮ್ಮ ಚಟುವಟಿಕೆಗಳನ್ನು ತೀವ್ರಗೊಳಿಸಿದ್ದಾರೆ. ನರೇಂದ್ರ ಮೋದಿ ಪ್ರಧಾನ ಮಂತ್ರಿಯಾದ ನಂತರದ ಮೂರು ವರ್ಷಗಳಲ್ಲಿ ಆರೆಸ್ಸೆಸ್ ದೇಶದ ವಿವಿಧ ಭಾಗಗಳಲ್ಲಿ ತ್ವರಿತವಾಗಿ ಹರಡಿದೆ.
ಈ ವಿಜಯ ಮತ್ತು ನಂತರ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅಧಿಕಾರ ವಹಿಸಿಕೊಂಡ ಮೇಲೆ ಹೊಸದೊಂದು ಕೋಮುವಾದಿ ದಾಳಿಯನ್ನು ಹರಿಯ ಬಿಡಲಾಗಿದೆ. ಕಾನೂನುಬಾಹಿರ ಕಸಾಯಿಖಾನೆಗಳನ್ನು ಮುಚ್ಚುವ ಹೆಸರಿನಲ್ಲಿ ಉತ್ತರಪ್ರದೇಶದಲ್ಲಿ ಮಾಂಸ ವ್ಯಾಪಾರದ ಮೇಲೆ ಆಕ್ರಮಣಗಳು ೨೪ ಲಕ್ಷಕ್ಕಿಂತಲೂ ಹೆಚ್ಚು ಜನಗಳ ಜೀವನಾಧಾರಗಳನ್ನು ಪ್ರತಿಕೂಲವಾಗಿ ತಟ್ಟಿವೆ ಮತ್ತು ಮಾಂಸ ರಫ್ತುಗಳ ಮೇಲೆ ಬಹಳ ದುಷ್ಪರಿಣಾಮ ಬೀರಿದೆ. ಭಾರತದ ಮಾಂಸ ರಫ್ತುಗಳ ಆದಾಯಗಳಲ್ಲಿ ಹೆಚ್ಚಿನದ್ದನ್ನು ಉತ್ತರಪ್ರದೇಶವೇ ನೀಡುತ್ತಿದೆ. ಬಿಜೆಪಿ ಆಳ್ವಿಕೆಯ ರಾಜ್ಯಗಳಲ್ಲಿ ಗೋರಕ್ಷಕರೆನ್ನುವ ಕಾವಲುಕೋರರ ಕೃತ್ಯಗಳು ಅಮಾಯಕ ಮುಸ್ಲಿಮರು ಮತ್ತು ದಲಿತರ ಜೀವಗಳನ್ನು ಬಲಿತೆಗೆದುಕೊಳ್ಳುತ್ತಲೇ ಇವೆ. ಈ ದಾಳಿಗಳಲ್ಲಿ ಇತ್ತೀಚಿನದ್ದೆಂದರೆ ರಾಜಸ್ತಾನದ ಅಲವರ್ನ ಬಳಿ ಬೆಹ್ರೊರ್ನಲ್ಲಿ ಪಹ್ಲೂ ಖಾನ್ ಕೊಲೆ.
ಉತ್ತರಪ್ರದೆಶದಲ್ಲಿ ರೋಮಿಯೋ-ನಿಗ್ರಹ ತಂಡಗಳನ್ನು ರಚಿಸಿ ನೈತಿಕ ಪೋಲೀಸ್ಗಿರಿ ಮೂಲಕ ಮುಗ್ಧ ಯುವಜನರಿಗೆ ಕಿರುಕುಳ ಕೊಡಲಾಗುತ್ತಿದೆ.
ಆರ್ಥಿಕ ಹೊರೆಗಳ ಹೇರಿಕೆ
ಬಿಜೆಪಿ ಸರಕಾರ ನವ-ಉದಾರವಾದಿ ಧೋರಣೆಗಳನ್ನು ಹೆಚ್ಚು ಆಕ್ರಾಮಕವಾಗಿ ಅನುಸರಿಸಲು ಹೊರಟಿದೆ, ಈಗ ದೊಡ್ಡ ಪ್ರಮಾಣದಲ್ಲಿ ಸಾರ್ವಜನಿಕ ವಲಯದ ಖಾಸಗೀಕರಣದ ಯೋಜನೆ ಹಾಕುತ್ತಿದೆ. ಇದು ನಿರುದ್ಯೋಗ ಸನ್ನಿವೇಶವನ್ನು ಮತ್ತಷ್ಟು ಉಲ್ಬಣಗೊಳಿಸಲಿದೆ. ಇತ್ತೀಚಿನ ಅವಧಿಯಲ್ಲಿ ಸುಮಾರು ೧.೫ ಕೋಟಿ ಉದ್ಯೋಗಗಳು ನಷ್ಟವಾಗಿವೆ ಎಂದು ಸರಕಾರ ಸಂಸತ್ತಿನಲ್ಲಿ ಈಗಾಗಲೇ ಒಪ್ಪಿಕೊಂಡಿದೆ.
ಕೃಷಿ ಸಂಕಟ ಯಾತನೆಗಳನ್ನು ಹೇರುತ್ತಲೇ ಇದೆ. ಮಳೆಯ ವಿಫಲತೆ ದಕ್ಷಿಣದ ರಾಜ್ಯಗಳ ಮೇಲೆ ವಿಪರೀತ ದುಷ್ಪರಿಣಾಮಗಳನ್ನು ಉಂಟುಮಾಡಿದೆ. ತಮಿಳುನಾಡಿನಲ್ಲಿ ಆದು ಬರದ ಪರಿಸ್ಥಿತಿಗಳನ್ನು ತಂದಿದೆ, ೨೦೦ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಗ್ರಾಮೀಣ ಪ್ರದೇಶಗಳ ಬಹಳ ದೊಡ್ಡ ಭಾಗಗಳ ಲ್ಲಿ ಕೃಷಿ ಸಂಕಟ ಯಾತನೆಗಳನ್ನು ಹೇರುತ್ತಲೇ ಇದೆ. ಬಿಜೆಪಿ ಸರಕಾರ ಉತ್ಪಾದನಾ ಖರ್ಚಿನ ಒಂದೂವರೆ ಪಟ್ಟಿನ ಮಟ್ಟಗಳಿಗೆ ’ಕನಿಷ್ಟ ಬೆಂಬಲ ಬೆಲೆ’ ಹೆಚ್ಚಿಸುವ ವಚನವನ್ನು ನಿಭಾಯಿಸದೆ ಹಿಂದೇಟು ಹಾಕಿದೆ. ಇದನ್ನು ಮಾಡದೆ, ಸಾಲಮನ್ನಾಗಳಿಂದ ತಾತ್ಕಾಲಿಕ ಪರಿಹಾರ ಸಿಗಬಹುದೇ ವಿನಃ ನಮ್ಮ ಕೃಷಿ ವಲಯವನ್ನು ಆವರಿಸುತ್ತಿರುವ ಬಿಕ್ಕಟ್ಟಿಗೆ ದೀರ್ಘಕಾಲದ ಪರಿಹಾರ ನೀಡಲಾರದು.
ದಕ್ಷಿಣ ಭಾರತದಲ್ಲಿ ಮಳೆ ಸರಿಯಾಗಿ ಬಾರದೆ ಅಪಾರ ಕೃಷಿ ಸಂಕಟಕ್ಕೆ ಕಾರಣವಾಗಿದೆ. ತಮಿಳುನಾಡಿನಲ್ಲಿ ನೂರಾರು ರೈತರು ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವ್ಯಾಪಕವಾದ ಚಳುವಳಿಗಳನ್ನು ನಡೆಸಿದರೂ, ಅವು ದಿಲ್ಲಿಯಲ್ಲಿ ಸಂಸತ್ತಿನ ಅಂಗಳವನ್ನು ತಲುಪಿದರೂ ಕೇಂದ್ರ ಸರಕಾರವಾಗಲೀ, ರಾಜ್ಯ ಸರಕಾರವಾಗಲೀ ಇದುವರೆಗೆ ಯಾವುದೇ ಪರಿಹಾರವನ್ನು ಒದಗಿಸಿಲ್ಲ.
ಆರೆಸ್ಸೆಸ್-ಬಿಜೆಪಿಯ ಗುರಿ ಸಿಪಿಐ(ಎಂ) /ಎಡಪಂಥೀಯರು
ಆರೆಸ್ಸೆಸ್-ಬಿಜೆಪಿ ಸಿಪಿಐ(ಎಂ) ಮತ್ತು ಎಡಪಂಥೀಯರ ಮೇಲೆ, ವಿಶೇಷವಾಗಿ ಕೇರಳ, ಪಶ್ಚಿಮ ಬಂಗಾಳ ಮತ್ತು ತ್ರಿಪುರ(ಇಲ್ಲಿ ಸದ್ಯಕ್ಕೆ ಚುನಾವಣೆಗಳು ನಡೆಯಬೇಕಾಗಿದೆ)ದಲ್ಲಿ ಗುರಿಯಿಟ್ಟಿವೆ. ಅವರು ತಮ್ಮ ಮುಂದಿನ ಮುನ್ನಡೆಗೆ ಸಿಪಿಐ(ಎಂ) ಮತ್ತು ಎಡಪಕ್ಷಗಳು ದೊಡ್ಡ ಅಡ್ಡಿ ಎಂದು ಕಾಣುತ್ತಿದ್ದಾರೆ.
ಸುಪ್ರಿಂ ಕೋರ್ಟ್ ನಿರ್ಧಾರ ಸ್ವಾಗತಾರ್ಹ
ಸುಪ್ರಿಂ ಕೋರ್ಟ್ ಬಿಜೆಪಿ ಮುಖಂಡರಾದ ಎಲ್.ಕೆ.ಅಡ್ವಾಣಿ, ಮುರಳಿ ಮನೋಹರ ಜೋಷಿ ಮತ್ತು ಉಮಾ ಭಾರತಿ ವಿರುದ್ಧ ಬಾಬ್ರಿ ಮಸೀದಿ ಧ್ವಂಸzಲ್ಲಿ ಪಿತೂರಿಯ ಕ್ರಿಮಿನಲ್ ಆರೋಪವನ್ನು ಮತ್ತೆ ಹಾಕಲು ನಿರ್ಧರಿಸಿರುವುದನ್ನು ಕೇಂದ್ರ ಸಮಿತಿ ಸ್ವಾಗತಿಸಿದೆ. ಇದರ ಹಿನ್ನೆಲೆಯಲ್ಲಿ ಕಲ್ಯಾಣ ಸಿಂಗ್ ರಾಜ್ಯಪಾಲರ ಹುದ್ದೆಯಿಂದ ಮತ್ತು ಉಮಾಭಾರತಿ ಮಂತ್ರಿಯ ಹುದ್ದಯಿಂದ ರಾಜೀನಾಮೆ ನೀಡಬೇಕು.
ಅಮೆರಿಕದಿಂದ ವೀಸಾ ನಿರಾಕರಣೆ
ಅಮೆರಿಕನ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತೀಯ ವೃತ್ತಿನಿರತರಿಗೆ ವೀಸಾಗಳ ನಿಡಿಕೆಯನ್ನು ಮತ್ತಷ್ಟು ಕಡಿಮೆ ಮಾಡಲು ಹೊಸದಾಗಿ ಒತ್ತಾಸೆ ನೀಡಿರುವುದರ ಬಗ್ಗೆ ಕೇಂದ್ರ ಸಮಿತಿ ಆಳವಾದ ಆತಂಕವನ್ನು ವ್ತಕ್ತಪಡಿಸಿದೆ. ಈ ಹಿಂದೆ ಈ ವಿಷಯವನ್ನು ಎತ್ತಿದಾಗ, ಭಾರತ ಸರಕಾರ ಈಗಾಗಲೇ ಅಲ್ಲಿ ಕೆಲಸ ಮಾಡುತ್ತಿರುವ ಮತ್ತು ಅಲ್ಲಿಗೆ ಹೋಗುವ ಎಲ್ಲ ವ್ಯವಸ್ಥೆ ಆಗಿರುವ ಭಾರತೀಯರಿಗೆ ನೆರವು ಮತ್ತು ರಕ್ಷಣೆ ಒದಗುವಂತೆ ಸರ್ವಪ್ರಯತ್ನಗಳನ್ನು ನಡೆಸಲಾಗುವುದು ಎಂದು ಭರವಸೆ ನೀಡಿತ್ತು. ಅದು ಸಾಧ್ಯವಾಗುವಂತೆ ಮಾಡಬೇಕು.
ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷ
ಕೇಂದ್ರ ಸಮಿತಿ ಇತ್ತೀಚಿನ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್ ಮತ್ತು ಮಣಿಪುರದ ವಿಧಾನಸಭಾ ಚಉನಾವಣೆಗಳಲ್ಲಿ ಪಕ್ಷದ ಸಾಧನೆಯನ್ನು ವಿಮರ್ಶಿಸಿತು. ಪಕ್ಷದ ಸಾಧನೆ ನಿರಾಶಾದಾಯಕವಾಗಿದೆ. ಪಕ್ಷ ಮತ್ತು ಸಾಮೂಹಿಕ ಸಂಘಟನೆಗಳನ್ನು, ಜನಗಳ ನಡುವೆ ಅವುಗಳ ಚಟುವಟಿಕೆಗಳನ್ನು ಬಲಪಡಿಸುವ-ಸಾಮೂಹಿಕ ಮಾರ್ಗದ-ಮೂಲಕ ಮಾತ್ರವೇ ಪಕ್ಷ ತನ್ನ ರಾಜಕೀಯ ಮಧ್ಯಪ್ರವೇಶದ ಸಾಮರ್ಥ್ಯಗಳನ್ನು ಬಲಪಡಿಸಲು ಸಮರ್ಥವಾಗುತ್ತದೆ ಎಂಬುದನ್ನು ಪುನರುಚ್ಚರಿಸಿತು.
ಇತ್ತೀಚಿನ ಅವಧಿಯಲ್ಲಿ ಸಿಪಿಐ(ಎಂ)ನ ವಿವಿಧ ಸಾಮೂಹಿಕ ರಂಗಗಳು ದೇಶದೆಲ್ಲೆಡೆಗಳಲ್ಲಿ ಜನಗಳ ಮೇಲೆ ಹೆಚ್ಚುತ್ತಿರುವ ಹೊರೆಗಳು ಮತ್ತು ಕೋಮುಧ್ರುವೀಕರಣವನ್ನು ತೀಕ್ಷ್ಣಗೊಳಿಸುತ್ತಿರುವುದರ ವಿರುದ್ಧ ಜನಗಳ ಹೋರಾಟಗಳಿಗೆ ನೇತೃತ್ವ ನೀಡಿವೆ.
ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿನ ಪರಿಸ್ಥಿತಿಯ ಬಗ್ಗೆ ಕೇಂದ್ರ ಸಮಿತಿ ಗಂಭೀರ ಆತಂಕವನ್ನು ವ್ಯಕ್ತಪಡಿಸಿತು.
ಶ್ರೀನಗರ ಉಪಚುನಾವಣೆ ಕಾಶ್ಮೀರದ ಜನತೆಯ ಪರಕೀಯ ಭಾವ ಎಷ್ಟು ಆಳಕ್ಕೆ ಇಳಿದಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ. ಮೋದಿ ಸರಕಾರ ಕಣಿವೆಯಲ್ಲಿ ಜನತೆಯ ಅಸಂತೃಪ್ತಿಯನ್ನು ಎದುರಿಸಲು ಬಲಪ್ರಯೋಗ ಮತ್ತು ದಮನವನ್ನಷ್ಟೇ ಅವಲಂಬಿಸಿದೆ. ಎಲ್ಲ ಅಭಿಪ್ರಾಯಗಳ ರಾಜಕೀಯ ವಿಭಾಗಗಳೊಂದಿಗೆ ಸಂವಾದ ಆರಂಭಿಸುವಲ್ಲಿ ವಿಫಲತೆ ಮತ್ತು ಅದು ಹರಿಯಬಿಟ್ಟಿರುವ ಅಮಾನುಷ ದಮನ ಕಾಶ್ಮೀರವನ್ನು ಪ್ರಪಾತದ ಅಂಚಿಗೆ ತಂದು ನಿಲ್ಲಿಸಿದೆ. ಜನತೆಯ ಪ್ರತಿಭಟನೆಗಳ ಅಮಾನುಷ ದಮನವನ್ನು ಕೊನೆಗೊಳಿಸಬೇಕು ಎಂದು ಕೇಂದ್ರ ಸಮಿತಿ ಆಗ್ರಹಿಸಿದೆ.
ಒಂದು ರಾಜಕೀಯ ಸಂವಾದವನ್ನು ಆರಂಭಿಸಲು ಸರಕಾರ ತಕ್ಷಣ ಕ್ರಮಗಳನ್ನು ಕೈಗೊಳ್ಳಬೇಕು.ಕಾಶ್ಮೀರ ಸನ್ನಿವೇಶ ಕುರಿತಂತೆ ಸಮಾನಮನಸ್ಕ ರಾಜಕೀಯ ಶಕ್ತಿಗಳು, ಬುದ್ಧಿಜೀವಿಗಳು ಮತ್ತು ಸಾಮಾಜಿಕ ಆಂದೋಲನಗಳ ಒಂದು ಸಮಾವೇಶವನ್ನು ನಡೆಸಲು ಕೇಂದ್ರ ಸಮಿತಿ ನಿರ್ಧರಿಸಿತು.
ಮಹಿಳಾ ಮೀಸಲಾತಿ
ಮಹಿಳಾ ಮೀಸಲಾತಿ ಮಸೂದೆಯನ್ನು ತ್ವರಿತವಾಗಿ ಅಂಗೀಕರಿಸುವಂತೆ ಮಾಡುವ ತನ್ನ ವಚನ ಪಾಲನೆ ಮಾಡದೆ ಬಿಜಪಿ ಸರಕಾರ ವಿಶ್ವಾಸಘಾತ ಮಾಡುತ್ತಲೇ ಇದೆ. ಇದನ್ನು ಪ್ರತಿಭಟಿಸಲು ಮುಂಬರುವ ಸಂಸತ್ತಿನ ಮಳೆಗಾಲದ ಅಧಿವೇಶನದ ಮೊದಲು ಈ ಮಸೂದೆಯನ್ನು ಅಂಗೀಕರಿಸ ಬೇಕೆಂದು ಆಗ್ರಹಿಸಿ ಒಂದು ದಿನದ ಪ್ರತಿಭಟನೆಗೆ ಕರೆ ನೀಡಲು ಕೇಂದ್ರ ಸಮಿತಿ ನಿರ್ಧರಿಸಿದೆ. ರಾಜ್ಯಸಭೆ ಈಗಾಗಲೇ ಇದನ್ನು ಪಾಸು ಮಾಡಿದೆ. ಆದರೆ ಈಗ ಲೋಕಸಬೆಯಲ್ಲಿ ಅತ್ಯಂತ ಸ್ಪಷ್ಟ ಬಹುಮತ ಇದ್ದರೂ ಬಿಜೆಪಿ ಈ ಮಸೂದೆಯನ್ನು ಶಸನವಾಗಿಸಲು ನಿರಾಕರಿಸುತ್ತಿದೆ. ಇದು ಸ್ಪಷ್ಟವಾದ ವಿಶ್ವಾಸಘಾತ.