ಮೋದಿ ಸರಕಾರದ ಮೂರು ವರ್ಷಗಳು ನಮ್ಮ ದೇಶದ ಜನಗಳಿಗೆ ಅದು ನೀಡಿರುವ ಚುನಾವಣಾ ಆಶ್ವಾಸನೆಗಳು ಹುಸಿಯಾಗಿ ಜನತೆಗೆ ವಿಶ್ವಾಸಘಾತದ ಮೂರು ವರ್ಷಗಳು, ‘ಅಚ್ಛೇ ದಿನ್’ ಬದಲು ಜನಗಳಿಗೆ ದಕ್ಕಿದ್ದು ಇನ್ನಷ್ಟು ನೋವುಗಳು, ಅವರ ಸಂಕಟಗಳು ಹೆಚ್ಚುತ್ತಲೇ ಇವೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ವಿಶ್ಲೇಷಿಸಿದೆ. ಜೂನ್ 6 ಮತ್ತು 7ರಂದು ನವದೆಹಲಿಯಲ್ಲಿ ನಡೆದ ಪೊಲಿಟ್‍ಬ್ಯುರೊ ದೇಶದಲ್ಲಿನ ಪ್ರಸ್ತುತ ವಿದ್ಯಮಾನಗಳನ್ನು ಪರಿಶೀಲಿಸಿತು. ಈಬಗ್ಗೆ ನಿಡಿರುವ ಪತ್ರಿಕಾಹೇಳಿಕೆಯ ಇತರ ವಿವರಗಳು ಈ ಕೆಳಗಿನಂತಿವೆ.
ನಿರುದ್ಯೋಗದ ನಾಗಾಲೋಟ
ಪ್ರತಿವರ್ಷ ಎರಡು ಕೋಟಿ ಉದ್ಯೋಗಗಳನ್ನು ಸೃಷ್ಟಿಸಲಾಗುವುದು ಎಂದು ಯುವಜನತೆಗೆ ಆಶ್ವಾಸನೆ ನೀಡಲಾಗಿತ್ತು. ಅದರೆ ಅದರ ಬದಲು ನಾವೀಗ ಔದ್ಯಮಿಕ ವಲಯದಲ್ಲಿ ಕಳೆದ ಎಂಟು ವರ್ಷಗಳಲ್ಲೇ ಅತಿ ಕಡಿಮೆ ಉದ್ಯೋಗ ಬೆಳವಣಿಗೆಯನ್ನು ಕಾಣುತ್ತಿದ್ದೇವೆ.
ಇನ್ನು ಗ್ರಾಮೀಣ ಉದ್ಯೋಗಗಳ ಬಗ್ಗೆ ಹೇಳುವುದಾದರೆ, ಸ್ವತಃ ಸರಕಾರವೇ, ಕಳೆದ ಮೂರು ವರ್ಷಗಳಲ್ಲಿ ಪ್ರತಿ ವರ್ಷವೂ ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ(ಮನರೇಗ)ಯ ಅಡಿಯಲ್ಲಿ 20,000 ಕೋಟಿ ರೂ.ಗಳಿಗಿಂತಲೂ ಹೆಚ್ಚು ಹಣ ನೀಡಲು ನಿರಾಕರಿಸಿದೆ ಎಂಬುದನ್ನು ಒಪ್ಪಿಕೊಂಡಿದೆ. ಅಂದರೆ ಈಗಾಗಲೇ ನರಳುತ್ತಿರುವ ಗ್ರಾಮೀಣ ಬಡಜನಗಳಿಗೆ ಕೂಲಿಗಳನ್ನೂ ನಿರಾಕರಿಸುತ್ತಿದೆ.
ಮಾಹಿತಿ ತಂತ್ರಜ್ಞಾನ(ಐಟಿ) ವಲಯದಲ್ಲಿ ಈಗಿರುವ 40ಲಕ್ಷ ಉದ್ಯೋಗಿಗಳಲ್ಲಿ ಸುಮಾರು 50ರಿಂದ 60 ಶೇ. ಈ ವರ್ಷದ ಅಂತ್ಯದ ವೇಳೆಗೆ ಅನಗತ್ಯರಾಗುತ್ತಾರೆ ಎಂದು ಅಂತರ್ರಾಷ್ಟ್ರೀಯ ಏಜೆನ್ಸಿ ಮೆಕಿನ್ಸೆ ಲೆಕ್ಕ ಹಾಕಿದೆ. ಇನ್ಫೊಸಿಸ್, ವಿಪ್ರೊ, ಕಾಗ್ನಿಸೆಂಟ್ 60,000 ಕೆಲಸಗಾರರನ್ನು ರಿಟ್ರೆಂಚ್ ಮಾಡಲಿದ್ದಾರೆ ಎಂದು ವರದಿಗಳಿವೆ. ಎಲ್ ಅಂಡ್ ಟಿ ಮತ್ತಿತರ ಮೂಲರಚನೆ ವಲಯದ ದೈತ್ಯ ಕಂಪನಿಗಳು ಈಗಾಗಲೇ ತಮ್ಮ ಕೆಲಸಗಾರರ ಸಂಖ್ಯೆಯನ್ನು ಗಮನಾರ್ಹವಾಗಿ ಇಳಿಸಿವೆ.
ಹೀಗೆ ವರ್ಷಕ್ಕೆ 2 ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಮಾತು ಹಾಗಿರಲಿ, ಈ ಸರಕಾರದ ಧೋರಣೆಗಳಿಂದಾಗಿ ಆರ್ಥಿಕ ನಿಧಾನಗತಿ ಸಂಭವಿಸುತ್ತಿದ್ದು, ಉದ್ಯೋಗ ಇದ್ದವರೂ ನಿರುದ್ಯೋಗಿಗಳ ಸಾಲಿಗೆ ಸೇರುತ್ತಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಗಮನಿಸಿತು.
ಗ್ರಾಮೀಣ ಭಾರತ
ಬಿಜೆಪಿ ಮತ್ತು ಪ್ರಧಾನ ಮಂತ್ರಿ ಮೋದಿ ತಮ್ಮ ಸರಕಾರದಲ್ಲಿ ನಮ್ಮ ದೇಶದ ರೈvರೊಮದಿಗೆ ಹೊಸದೊಂದು ರೀತಿಯಲ್ಲಿ ವ್ಯವಹರಿಸಲಾಗುವುದು ಎಂದು ಆಶ್ವಾಸನೆ ನೀಡಿದ್ದರು. ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ ಲೆಕ್ಕ ಹಾಕಿದಂತೆ ಲಾಗುವಾಡುಗಳ ವೆಚ್ಚಗಳ ಒಂದೂವರೆ ಪಟ್ಟು ಕನಿಷ್ಟ ಬೆಂಬಲ ಬೆಲೆಗಳನ್ನು ಕೊಡುವುದಾಗಿ ಆಶ್ವಾಸನೆ ನೀಡಿದ್ದರು. ಇದನ್ನು ಈಡೇರಿಸಿಲ್ಲ. ಅಲ್ಲದೆ ಕೃಷಿ ಉತ್ಪನ್ನಗಳ ಮೇಲಿನ ಆಮದು ಸುಂಕಗಳಲ್ಲಿ ಕಡಿತ ಮುಂತಾದ ಈ ಸರಕಾರದ ಇತರ ಧೋರಣೆಗಳಿಂದಾಗಿ ರೈತರನ್ನು ತಮ್ಮ ಬೇಸಾಯದಿಂದ ತಮ್ಮ ಕುಟುಂಬದ ಅಗತ್ಯಗಳನ್ನು ಪೂರೈಸಲು ಮತ್ತು ಸಾಲಗಳನ್ನು ತೀರಿಸಲು ಆಗುತ್ತಿಲ್ಲ ಎಂಬುದು ಹೆಚ್ಚೆಚ್ಚು ಬಾಧಿಸುತ್ತಿದೆ. ಸಾಲಗಳ ಹೊರೆಗಳಿಂದಾಗಿ ರೈತರ ಆತ್ಮಹತ್ಯೆಗಳು ದೇಶದಲ್ಲಿ ಆತಂಕಕಾರಿಯಾಗಿ ಹೆಚ್ಚುತ್ತಿವೆ. ಸ್ವತಃ ಸರಕಾರವೇ, ಕಳೆದ ಮೂರು ವರ್ಷಗಳಲ್ಲಿ ಪ್ರತಿವರ್ಷ 12,000ಕ್ಕಿಂತ ಹೆಚ್ಚು ರೈತರು ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಸರ್ವೋಚ್ಚ ನ್ಯಾಯಾಲಯದ ಮುಂದೆ ಒಪ್ಪಿಕೊಂಡಿದೆ. ಅಂದರೆ ಈ ಮೂರು ವರ್ಷಗಳಲ್ಲಿ 36,000ಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಸರಕಾರ ಸಾಲಮನ್ನಾಗಳ ಮೂಲಕ ರೈತರಿಗೆ ತುಸುವಾದರೂ ಪರಿಹಾರ ಒದಗಿಸುವ ಬದಲು, ನಮ್ಮ ರಾಷ್ಟ್ರೀಕೃತ ಬ್ಯಾಂಕುಗಳಿಂದ ಸಾಲಗಳನ್ನು ಪಡೆದು, ಅವನ್ನು ತೀರಿಸದೆ ಲೂಟಿ ಹೊಡೆಯುತ್ತಿರುವ ಶ್ರೀಮಂತ ಕಾರ್ಪೊರೇಟ್‍ಗಳಿಗೆ ಪರಿಹಾರ ಒದಗಿಸುವ ಬಗ್ಗೆಯೇ ಯೋಚಿಸುತ್ತಿದೆ. ಒಬ್ಬ ಬಡ ರೈತ ಸಾಲ ತೀರಿಸಲಾಗದಿದ್ದರೆ ಆತನ ಆಸ್ತಿ, ಜಾನುವಾರುಗಳನ್ನು ಮುಟ್ಟುಗೋಲು ಹಾಕಿಕೊಂಡು ದಂಡಿಸುತ್ತಿದ್ದರೆ, ಅತ್ತ ಈ ಶ್ರೀಮಂತ ಕಾರ್ಪೊರೇಟ್‍ಗಳು ಯಾವ ದಂಡನೆಯೂ ಇಲ್ಲದೆ ಹಾಯಾಗಿರುತ್ತವೆ.
ಇಂತಹ ಆರ್ಥಿಕ ನಿಧಾನಗತಿ, ಹೆಚ್ಚುತ್ತಿರುವ ನಿರುದ್ಯೋಗ, ಏರುತ್ತಿರುವ ಬೆಲೆಗಳು ಮತ್ತು ಕೃಷಿ ಸಂಕಟದ ಸಂದರ್ಭದಲ್ಲಿ ವಾರ್ಷಿಕೋತ್ಸವ ಆಚರಣೆಗೆ ಯಾವುದೇ ಕಾರಣ ಇಲ್ಲ.
ಮೋದಿ ಸರಕಾರ ಮೂರು ವರ್ಷಗಳನ್ನು ಪೂರೈಸಿರುವುದರ ಆಚರಣೆಯ ಪ್ರಚಾರವನ್ನು ಸಾರ್ವಜನಿಕ ವಲಯದ ಘಟಕಗಳು ತಮ್ಮ ಸಂಪನ್ಮೂಲಗಳಿಂದ ನಿಭಾಯಿಸಬೇಕು ಎಂದು ಸರಕಾರ ಒತ್ತಡ ಹಾಕುತ್ತಿದೆ. ಸಾರ್ವಜನಿಕ ವಲಯದ ತೈಲ ಕಂಪನಿಗಳು ಸರ್ದಾರ್ ಪಟೇಲ್ ಅವರ ದೈತ್ಯಗಾತ್ರದ ಪ್ರತಿಮೆ ನಿರ್ಮಿಸುವ ಪ್ರಧಾನ ಮಂತ್ರಿಗಳ ಮೆಚ್ಚಿನ ಪ್ರಾಜೆಕ್ಟ್‍ಗೆ ಅಪಾರ ಹಣವನ್ನು ಕಕ್ಕುವಂತೆ ಹೇಳಲಾಗಿದೆ.
ಇದು ವೈಯಕ್ತಿಕ ವೈಭವಕ್ಕಾಗಿ ಸಾರ್ವಜನಿಕ ಸಂಪನ್ಮೂಲಗಳ ನಗ್ನ ದುರುಪಯೋಗ ಮತ್ತು ಅತ್ಯುನ್ನತ ಮಟ್ಟದ ಭ್ರಷ್ಟಾಚಾರ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ.
ರಾಷ್ಟ್ರಪತಿ/ಉಪರಾಷ್ಟ್ರಪತಿ ಚುನಾವಣೆಗಳು
ರಾಷ್ಟ್ರಪತಿ ಹುದ್ದೆಗೆ ಭಾರತೀಯ ಸಂವಿಧಾನವನ್ನು ರಕ್ಷಿಸುವ ಗುರುತರ ಹೋಣೆಯನ್ನು ನಿಭಾಯಿಸಬಲ್ಲ, ಅಕ್ಷುಣ್ಣ ಜಾತ್ಯತೀತ ಹಿನ್ನೆಲೆಯಿರುವ ವ್ಯಕ್ತಿಯೊಬ್ಬರನ್ನು ಪ್ರತಿಪಕ್ಷಗಳ ಜಂಟಿ ಸ್ಪರ್ಧಿಯಾಗಿ ನಿಲ್ಲಿಸಬೇಕು ಎಂಬ ತಿಳುವಳಿಕೆಯ ಆಧಾರದಲ್ಲಿ ಇತರ ಜಾತ್ಯತೀತ ಪ್ರತಿಪಕ್ಷಗಳೊಂದಿಗೆ ಸಿಪಿಐ(ಎಂ)ಚರ್ಚಿಸುತ್ತಿದೆ.
ಉಪರಾಷ್ಟ್ರಪತಿಗಳ ಹುದ್ದೆಗೂ, ಇದೇ ರೀತಿಯಲ್ಲಿ ನಮ್ಮ ಗಣತಂತ್ರದ ಸಂವಿಧಾನಿಕ ಮೌಲ್ಯಗಳನ್ನು ಎತ್ತಿ ಹಿಡಿಯುವ ಒಬ್ಬ ಜಂಟಿ ಅಭ್ಯರ್ಥಿಯನ್ನು ಪ್ರತಿಪಕ್ಷಗಳ ಪರವಾಗಿ ಸ್ಪರ್ಧೆಗಿಳಿಸಬೇಕÉಂದು ಸಿಪಿಐ(ಎಂ) ಯತ್ನಿಸುತ್ತಿದೆ ಎಂದು ಪೊಲಿಟ್‍ಬ್ಯುರೊ ಹೇಳಿಕೆ ತಿಳಿಸಿದೆ.
ತ್ರಿಪುರ ವಿಧಾನಸಭಾ ಚುನಾವಣೆಗಳು
ಮುಂಬರುವ ಚುನಾವಣೆಗಳಿಗೆ ಸಿಪಿಐ(ಎಂ)ನ ತ್ರಿಪುರ ಘಟಕ ನಡೆಸುತ್ತಿರುವ ತಯ್ಯಾರಿಗಳ ಕುರಿತ ವರದಿಯನ್ನು ಪೊಲಿಟ್‍ಬ್ಯುರೊ ಆಲಿಸಿತು. ಬಿಜೆಪಿ ಈಶಾನ್ಯ ಭಾರತದಲ್ಲಿ ಎಡಶಕ್ತಿಗಳ ಈ ಭದ್ರಕೋಟೆಯೊಳಕ್ಕೆ ನುಸುಳಲು ಭಾರೀ ಪ್ರಯತ್ನಗಳನ್ನು ನಡೆಸುತ್ತಿದೆ. ಅದು ಈಗಾಗಲೇ ಜನಗಳ ಪ್ರಜಾಸತ್ತಾತ್ಮಕ ಆಯ್ಕೆಯ ಮೇಲೆ ಪ್ರಭಾವ ಬೀರಲು ಗಮನಾರ್ಹ ರೀತಿಯಲ್ಲಿ ಸಂಪನ್ಮೂಲಗಳನ್ನು ಸುರಿಯಲಾರಂಭಿಸಿದೆ. ತನ್ನ ಎಂದಿನ ಚರ್ಯೆಯಂತೆ ಅದು ಕೋಮು ಮತ್ತು ಜನಾಂಗೀಯ ವೈಷಮ್ಯಗಳನ್ನು ಉದ್ರೇಕಿಸಲು ಪ್ರಯತ್ನಿಸುತ್ತಿದೆ, ಮತ್ತು ಚುನಾವಣಾ ಲಾಭಕ್ಕಾಗಿ ಕಾನೂನುಬಾಹಿರಗೊಂಡಿರುವ ಉಗ್ರಗಾಮಿ ಸಂಘಟನೆಗಳೊಂದಿಗೆ ಮೈತ್ರಿಗಳನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ.
ದೇಶದಲ್ಲಿ ಆರೆಸ್ಸೆಸ್/ಬಿಜೆಪಿ ನಿರ್ದಿಷ್ಟವಾಗಿ
ಸಿಪಿಐ(ಎಂ) ಮೇಲೆ ಗುರಿಯಿಟ್ಟಿರುವ-ಕೇರಳದಲ್ಲಿ ಭಯೋತ್ಪಾದನೆ ಮತ್ತು ಹಿಂಸಾಚಾರದ ತಂತ್ರಗಳ ಮೂಲಕ ಎಡ ಪ್ರಜಾಪ್ರಭುತ್ವ ರಂಗದ ಸರಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಗಳು ಮತ್ತು ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‍ನ ಜೊತೆ ಸ್ಪರ್ಧಾತ್ಮಕ ಕೋಮುವಾದವನ್ನು ಉದ್ರೇಕಿಸುತ್ತ ತಾಳ ಹಾಕುತ್ತಿರುವ-ಹಿನ್ನೆಲೆಯಲ್ಲಿ ತ್ರಿಪುರದಲ್ಲಿನ ಈ ಚುನಾವಣೆಗಳು ದೇಶದಲ್ಲಿ ಎಡ ಮತ್ತು ಕೋಮುವಾದಿ ಶಕ್ತಿಗಳ ನಡುವಿನ ಒಂದು ಸಮರವಾಗಿ ಮಹತ್ವ ಪಡೆದಿದೆ.
ಸಿಪಿಐ(ಎಂ) ಈ ಎಡ ಭದ್ರಕೋಟೆಯನ್ನು ರಕ್ಷಿಸಿಕೊಳ್ಳಲು ಮತ್ತು ಒಂದು ಬಲವಾದ ವಿಜಯ ಗಳಿಸಿ ಸರಕಾರಕ್ಕೆ ಮರಳಲು ದೃಢನಿರ್ಧಾರ ಮಾಡಿದೆ ಎಂದು ಪೊಲಿಟ್‍ಬ್ಯುರೊ ಹೇಳಿದೆ.
ಕಾಶ್ಮೀರ
ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಸನ್ನಿವೇಶ ಗಮನಾರ್ಹವಾಗಿ ಹದಗೆಟ್ಟಿದೆ. ಕಾಶ್ಮೀರಿ ಜನತೆಯ ಪರಕೀಯ ಭಾವ ಈಗ ಸುಮಾರಾಗಿ ಪೂರ್ಣಗೊಳ್ಳುತ್ತಿರುವಂತೆ ಕಾಣುತ್ತಿದೆ. ಬಿಜೆಪಿ ಕೇಂದ್ರ ಸರಕಾರದ ಕಾಶ್ಮೀರ ಧೋರಣೆ ಶೋಚನೀಯವಾಗಿ ವಿಫಲವಾಗಿದೆ. ಬಿಜೆಪಿ ಸರಕಾರ ಜಮ್ಮು ಮತ್ತು ಕಾಶ್ಮೀರದ ಜನತೆಗೆ ನೀಡಿದ ಆಶ್ವಾಸನೆಗಳನ್ನು ಮುರಿದಿರುವುದೇ ಈ ಪರಕೀಯ ಭಾವ ಹೆಚ್ಚಲು ಮುಖ್ಯ ಕಾರಣ. ಕೇಂದ್ರ ಗೃಹಮಂತ್ರಿಗಳ ನೇತೃತ್ವದ ಸರ್ವಪಕ್ಷ ಸಂಸದೀಯ ನಿಯೋಗ ಜಮ್ಮು ಮತ್ತು ಕಾಶ್ಮೀರ ಜನತೆಗೆ ಮತ್ತು ದೇಶಕ್ಕೆ ಸರಕಾರ ವಿಶ್ವಾಸ ಕುದುರಿಸುವ ಕ್ರಮಗಳ ಮೂಲಕ ಪರಿಸ್ಥಿತಿಯನ್ನು ಸಾಮಾನ್ಯಗೊಳಿಸಲು ಪ್ರಯತ್ನಿಸುತ್ತದೆ ಎಂದು ಭರವಸೆ ನೀಡಿತ್ತು. ಇವುಗಳಲ್ಲಿ ಪೆಲೆಟ್ ಗನ್‍ಗಳನ್ನು ಬಳಸದಿರುವುದು ಮತ್ತು ಕಾಶ್ಮೀರಿ ಯುವಜನತೆಗೆ ಉದ್ಯೋಗಾವಕಾಶಗಳನ್ನು ನಿರ್ಮಿಸುವುದು ಹಾಗೂ ರಾಜ್ಯದಲ್ಲಿ ಒಂದು ರಾಜಕೀಯ ಪರಿಹಾರಕ್ಕೆ ಬರಲು ಸಂಬಂಧಪಟ್ಟ ಎಲ್ಲರೊಂದಿಗೆ ಒಂದು ಸಂವಾದದ ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸುವುದು ಸೇರಿತ್ತು.
ಬಿಜೆಪಿಯೂ ಭಾಗೀದಾರನಾಗಿರುವ ರಾಜ್ಯ ಸರಕಾರ ಪರಿಸ್ಥಿತಿಯನ್ನು ಹತೋಟಿಗೆ ತರುವಲ್ಲಿಯೂ ಮತ್ತು ಯಾವುದೇ ರಾಜಕೀಯ ಮುತುವರ್ಜಿ ವಹಿಸುವಲ್ಲಿಯೂ ಶೋಚನೀಯವಾಗಿ ವಿಫಲವಾಗಿದೆ ಎಂಬುದು ಸ್ಪಷ್ಟವಾಗಿದೆ.
“ಕಾಶ್ಮೀರ:ಮುನ್ನಡೆಯ ದಾರಿ” ಎಂಬಂತಹ ವಿಷಯದೊಂದಿಗೆ ಒಂದು ರಾಷ್ಟ್ರೀಯ ಮಧ್ಯಪ್ರವೇಶ ನಡೆಸಲು ಜಾತ್ಯತೀತ ರಾಜಕೀಯ ಪಕ್ಷಗಳ ಸಹಕಾರಕ್ಕೆ ಸಿಪಿಐ(ಎಂ) ಪ್ರಯತ್ನಿಸುವುದಾಗಿ ಪೊಲಿಟ್‍ಬ್ಯುರೊ ಹೇಳಿದೆ.
ಬಿಜೆಪಿಯೇತರ ರಾಜ್ಯ ಸರಕಾರಗಳ ಸಂಯೋಜನೆ
ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮಂತ್ರಾಲಯ ಕಡಿಯುವುದಕ್ಕಾಗಿ ಜಾನುವಾರುಗಳ ಮಾರಾಟವನ್ನು ನಿಷೇಧಿಸಿ ಹೊರಡಿಸಿರುವ ಅಧಿಸೂಚನೆಯನ್ನು ಬಹಳಷ್ಟು ಬಿಜೆಪಿಯೇತರ ರಾಜ್ಯ ಸರಕಾರಗಳು ವಿರೋಧಿಸಿವೆ. ಕೇಂದ್ರ ಸರಕಾರದ ಈ ಪ್ರಯತ್ನ ರಾಜ್ಯಗಳ ಹಕ್ಕುಗಳ ಉಲ್ಲಂಘನೆ ಎಂಬ ಆಧಾರದಲ್ಲಿ ಇದನ್ನು ಜಂಟಿಯಾಗಿ ವಿರೋಧಿಸಬೇಕು ಎಂದು ಕೇರಳ ಮುಖ್ಯ ಮಂತ್ರಿಗಳು ಎಲ್ಲ ಬಿಜೆಪಿಯೇತರ ರಾಜ್ಯಸರಕಾರಗಳಿಗೆ ಮನವಿ ಮಾಡಿದ್ದಾರೆ. ಈ ಪ್ರಶ್ನೆಯ ಮೇಲೆ ನಾವು ಮುತುವರ್ಜಿ ವಹಿಸಿ ಪ್ರಮುಖ ಬಿಜೆಪಿಯೇತರ ಮುಖ್ಯಮಂತಿ ್ರಗಳೊಂದಿಗೆ ಸಭೆಗಳನ್ನು ನಡೆಸುವುದಾಗಿ ಪೊಲಿಟ್‍ಬ್ಯುರೊ ಹೇಳಿದೆ.
ಜನತಾ ಹೋರಾಟಗಳ ವೇದಿಕೆ
ಎಡಪಕ್ಷಗಳ ವಿವಿಧ ವರ್ಗ ಮತ್ತು ಸಾಮೂಹಿಕ ಸಂಘಟನೆಗಳು ಮತ್ತು ಪ್ರಗತಿಶೀಲ ಜಾತ್ಯತೀತ ಜನತಾ ಆಂದೋಲನಗಳ ಸಂಘಟನೆಗಳ ಒಂದು ಪ್ರಸ್ತಾವಿತ ವೇದಿಕೆ ಸದ್ಯ ಭವಿಷ್ಯದಲ್ಲಿ ಒಂದು ರಾಷ್ಟ್ರೀಯ ಮಟ್ಟದ ಸಮಾವೇಶವನ್ನು ನಡೆಸುವುದು ಮತ್ತು ಈ ಸರಕಾರದ ಧೋರಣೆಗಳು ನಮ್ಮ ಬಹು ದೊಡ್ಡ ಜನವಿಭಾಗಗಳ ಮೇಲೆ ಹೇರುತ್ತಿರುವ ಸರ್ವತೋಮುಖ ಆರ್ಥಿಕ ಹೊರೆಗಳು ಮತ್ತು ಸಂಕಟಗಳ ವಿರುದ್ಧ ಬೃಹತ್ ಸ್ವರೂಪದ ಜನತಾ ಪ್ರತಿಭಟನಾ ಕಾರ್ಯಕ್ರಮಗಳನ್ನು ಆರಂಭಿಸುವ ಕುರಿತ ವರದಿಗಳನ್ನು ಪೊಲಿಟ್‍ಬ್ಯುರೊ ಆಲಿಸಿತು.
ಮಾಧ್ಯಮಗಳ ಮೇಲೆ ಹಲ್ಲೆ
ಸಂಸದೀಯ ಪ್ರಜಾಪ್ರಭುತ್ವದ ಎಲ್ಲ ಸಂಸ್ಥೆಗಳು ಬಿಜೆಪಿ ನೇತೃತ್ವದ ಸರಕಾರದ ಅಡಿಯಲ್ಲಿ ದಾಳಿಗೊಳಗಾಗುತ್ತಿವೆ. ಇದೊಂದು ಅಪಾಯಕಾರಿ ಸರ್ವಾಧಿಕಾರಶಾಹಿ ಪ್ರವೃತ್ತಿ. ಇದು ಬೆಳೆಯುತ್ತಿದೆ.
ಇವುಗಳಲ್ಲಿ ಮಾಧ್ಯಮಗಳ ಮೇಲೆ ದಾಳಿಗಳೂ ಸೇರಿವೆ. ಇವು ಮಾಧ್ಯಮಗಳು ತಮ್ಮ ಜವಾಬ್ದಾರಿಯನ್ನು ನಿರ್ವಹಿಸದಂತೆ ತಡೆಯಲು ಪ್ರಯತ್ನಿಸುವ ದಾಳಿಗಳು. ಸ್ವಾತಂತ್ರ್ಯ ನಮ್ಮ ಪ್ರಜಾಪ್ರಭುತ್ವದ ಯಾರೂ ಉಲ್ಲಂಘಿಸಬಾರದ ನೀತಿ. ಕಾನೂನಿನ ಕೈಮೇಲಾಗಬೇಕು, ಆದರೆ ಮಾಧ್ಯಮ ಗುಂಪುಗಳಿಗೆ ಕಿರುಕುಳಗಳನ್ನು ಒಪ್ಪಲು ಸಾಧ್ಯವಿಲ್ಲ ಎಂದು ಸಿಪಿಐ(ಎಂ) ಪೊಲಿಟ್‍ಬ್ಯುರೊ ಹೇಳಿದೆ.