ರೈತರಿಗೆ ಕನಿಷ್ಟ ಬೆಂಬಲ ಬೆಲೆಯಲ್ಲಿ ಮಾರುವ ಹಕ್ಕನ್ನು ಕೊಡುವ ಮತ್ತು ಈ ಕನಿಷ್ಟ ಬೆಂಬಲ ಬೆಲೆಯನ್ನು ಪ್ರತಿವರ್ಷ ಪರಾಮರ್ಶಿಸುವ, ಅದು ಪ್ರತಿವರ್ಷದ ಕೃಷಿ ವೆಚ್ಚಗಳಿಗಿಂತ ಕನಿಷ್ಟ 50% ಹೆಚ್ಚಿರುತ್ತದೆ ಎಂದು ಖಾತ್ರಿ ಕೊಡುವ ಒಂದು ಶಾಸನವನ್ನು ಸಂಸತ್ತಿನ ಮುಂಬರುವ ಮುಂಗಾರು ಅಧಿವೇಶನದಲ್ಲಿ ಮಂಡಿಸಬೇಕು ಎಂದು ಆಗ್ರಹಿಸಿ ಜೂನ್ 15ರಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿಗಳು ಮತ್ತು ರಾಜ್ಯಸಭೆಯಲ್ಲಿ ಸಿಪಿಐ(ಎಂ) ಗುಂಪಿನ ಮುಖ್ಯಸ್ಥರೂ ಆಗಿರುವ ಸೀತಾರಾಮ್ ಯೆಚುರಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಆ ಪತ್ರದ ಪೂರ್ಣ ಒಕ್ಕಣಿಕೆ ಇಲ್ಲಿದೆ:
ಪ್ರಿಯ ಪ್ರಧಾನ ಮಂತ್ರಿಗಳೇ,
ನಾನು ಈ ಪತ್ರವನ್ನು ದೇಶದೆಲ್ಲೆಡೆಯಲ್ಲಿ ರೈತರ ದುಃಸ್ಥಿತಿಯತ್ತ, ಇದರ ಫಲಿತಾಂಶವಾಗಿ ಕಳೆದ ಮೂರು ವರ್ಷಗಳಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ಗ್ರಾಮೀಣ ಸಂಕಟವನ್ನು ಉಂಟುಮಾಡಿರುವ, ಸಾವಿರಾರು ರೈತರ ಆತ್ಮಹತ್ಯೆಗಳು ನಡೆಯುತ್ತಿರುವ ಪರಿಸ್ಥಿತಿಯತ್ತ ತಮ್ಮ ಗಮನವನ್ನು ಸೆಳೆಯಲು ಬರೆಯುತ್ತಿದ್ದೇನೆ. ರೈತರ ಪ್ರತಿಭಟನೆಗಳು ಒಂದಾದ ನಂತರ ಒಂದರಂತೆ ವಿವಿಧ ರಾಜ್ಯಗಳಲ್ಲಿ ಹೆಚ್ಚುತ್ತಿವೆ, ಇವುಗಳ ಬಗ್ಗೆ ನೀವು ಮೌನ ಮತ್ತು ನಿರಾಸಕ್ತಿಯಿಂದಿದ್ದರೆ, ನಿಮ್ಮ ಪಕ್ಷದ ರಾಜ್ಯ ಸರಕಾರಗಳು ಬಡ ರೈತರ ಮೇಲೆ ಪೋಲೀಸರನ್ನು ಹರಿಯ ಬಿಟ್ಟಿವೆ. ಮಧ್ಯಪ್ರದೇಶದಲ್ಲಿ ಆರು ರೈತರು ತಮ್ಮ ಪ್ರಾಣ ಕಳಕೊಂಡಿದ್ದಾರೆ., ಇನ್ನೂ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ನಡುವೆ, ಹಲವರು ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಲೇ ಇದ್ದಾರೆ, ಇದರಲ್ಲಿ ಇತ್ತೀಚಿನದೆಂದರೆ, ಮುಖ್ಯಮಂತ್ರಿಗಳ ಸ್ವಂತ ಕ್ಷೇತ್ರದಲ್ಲೆ ಇಂತಹ ಒಂದು ದುರಂತ ನಡೆದಿರುವುದು.
ಮಹಾರಾಷ್ಟ್ರದಲ್ಲಿ ನಿಮ್ಮ ಪಕ್ಷದ ರಾಜ್ಯ ಸರಕಾರದ ಸ್ಪಂದನೆ ಕೂಡ ಇಷ್ಟೇ ಸಂವೇದನಾಶೂನ್ಯ ಮತ್ತು ದಮನಕಾರಿ ಆಗಿದೆ. ನಾಶಿಕ್‌ಗೆ, 15 ತಿಂಗಳ ಹಿಂದೆ, ನಾನು ಭೇಟಿ ನೀಡಿದ್ದಾಗ, ಮಹಾರಾಷ್ಟ್ರ ರೈತರು ನಗರದಲ್ಲಿ ದಿಗ್ಬಂಧನ ಹಾಕಿದ್ದರು, ಆಗ ಮುಖ್ಯಮಂತ್ರಿಗಳು ಮಾತುಕತೆಗೆ ಕರೆದಿದ್ದರು, ಎಲ್ಲ ಬೇಡಿಕೆಗಳನ್ನು ಇತರ್ಥ ಮಾಡಲು ಆರು ತಿಂಗಳು ಕೇಳಿದ್ದರು. ಆನಂತರ ಹದಿನೈದು ತಿಂಗಳು ಕಳೆದಿವೆ, ಇದಾದ ನಂತರ ರೈತಾಪಿ ಜನಗಳು ಒಂದು ಅನನ್ಯ ಸ್ವರೂಪದ ಹೋರಾಟ ನಡೆಸಲು, ಒಂದು ರೈತ ಮುಷ್ಕರ ನಡೆಸಲು ನಿರ್ಧರಿಸಿದರು. ಅದನ್ನನುಸರಿಸಿ ಕಳೆದ ವಾರ ಮಾತುಕತೆಗಳು ನಡೆದಿವೆ. ಈಗಲೂ ಕೂಡ ರೈತ ಸಂಘಟನೆಗಳು ಇತ್ತೀಚಿನ ಈ ಒಪ್ಪಂದವನ್ನು ಅಕ್ಷರಶಃ ಗೌರವಿಸದಿದ್ದರೆ, ಜುಲೈ 26, 2017ರಿಂದ ಚಳುವಳಿಯನ್ನು ಪುನÀರಾರಂಭಿಸುವುದಾಗಿ ಎಚ್ಚರಿಸಿವೆ.
ತಾವು, ಶ್ರೀಯುತ ಪ್ರಧಾನ ಮಂತ್ರಿಗಳೇ, ನಿಮ್ಮ ಚುನಾವಣಾ ಪ್ರಚಾರದಲ್ಲಿ ರೈತರಿಗೆ ಅವರ ಉತ್ಪಾದನಾ ವೆಚ್ಚಗಳ ಮೇಲೆ 50% ನಿವ್ವಳ ಲಾಭ ಒದಗಿಸುವ ಕನಿಷ್ಟ ಬೆಂಬಲ ಬೆಲೆಯ ಆಶ್ವಾಸನೆಯನ್ನು ಕೊಟ್ಟಿದ್ದೀರಿ ಎಂಬುದನ್ನು ನೆನಪಿಸುವುದು ನನ್ನ ಕರ್ತವ್ಯ. ಕಳೆದ ಮೂರು ವರ್ಷಗಳಲ್ಲಿ, ಈ ಆಶ್ವಾಸನೆಯನ್ನು ಈಡೇರಿಸಲು ತಾವು ಏನನ್ನೂ ಮಾಡಿಲ್ಲ. ನಿಮ್ಮ ಸರಕಾರ ವಿವಿಧ ಬೆಳೆಗಳಿಗೆ ನಿಗದಿ ಮಾಡಿರುವ ಪ್ರಸಕ್ತ ಕನಿಷ್ಟ ಬೆಂಬಲ ಬೆಲೆಗಳು ರೈತರಿಗೆ ಸುಮಾರಾಗಿ ಯಾವ ಪ್ರತಿಫಲವನ್ನೂ ಕೊಡುವಂತದ್ದಲ್ಲ.
ಎರಡು ಸರಕಾರೀ ಸಂಸ್ಥೆಗಳಾದ, ಭಾರತ ಆಹಾರ ನಿಗಮ(ಎಫ್‌ಸಿಐ) ಮತ್ತು ರಾಷ್ಟ್ರೀಯ ಕೃಷಿ ಸಹಕಾರಿ ಮಾರುಕಟ್ಟೆ ಒಕ್ಕೂಟ(ನಫೆಡ್), ಈಗಿನ ಕನಿಷ್ಟ ಬೆಂಬಲ ಬೆಲೆಯಲ್ಲೂ ರೈತನ ಎಲ್ಲ ಉತ್ಪನ್ನಗಳನ್ನು ಖರೀದಿಸುವುದಿಲ್ಲ. ಇದರಿಂದಾಗಿ ರೈತ ತನ್ನ ಉತ್ಪನ್ನವನ್ನು ಮಾರುಕಟ್ಟೆಯಲ್ಲಿ ನಷ್ಟ ಮಾಡಿಕೊಂಡು ಮಾರಲೇ ಬೇಕಾಗಿ ಬರುತ್ತಿದೆ.
ಇಂತಹ ಸನ್ನಿವೇಶಗಳಲ್ಲಿ, ನಿಮ್ಮ ಸರಕಾರ ಸಂಸತ್ತಿನ ಮುಂಬರುವ ಮುಂಗಾರು ಅಧಿವೇಶನದಲ್ಲಿ ರೈತರಿಗೆ ಕನಿಷ್ಟ ಬೆಂಬಲ ಬೆಲೆಯಲ್ಲಿ ಮಾರುವ ಹಕ್ಕು ಮಾತ್ರವಲ್ಲ, ಈ ಕನಿಷ್ಟ ಬೆಂಬಲ ಬೆಲೆಯ ವಾರ್ಷಿಕ ಪರಾಮರ್ಶೆಯನ್ನು ಆಯಾ ವರ್ಷ ಕೃಷಿ ವೆಚ್ಚಗಳು ಮತ್ತು ಬೆಲೆಗಳ ಆಯೋಗ(ಸಿಎಸಿಪಿ) ನಿರ್ಧರಿಸಿದಂತ ಸಮಗ್ರ ಉತ್ಪಾದನಾ ವೆಚ್ಚಗಳಿಗಿಂತ ಕನಿಷ್ಟ 50% ಹೆಚ್ಚಿರುತ್ತದೆ ಎಂಬ ಖಾತ್ರಿಯನ್ನು ಕೊಡುವಂತಹ ಒಂದು ಶಾಸನವನ್ನು ಮಂಡಿಸಬೇಕು ಎಂದು ಆಗ್ರಹಿಸಲು ನಾನು ನಿಮಗೆ ಈ ಪತ್ರವನ್ನು ಬರೆಯುತ್ತಿದ್ದೇನೆ.
ಅಭಿವಂದನೆಗಳೊಂದಿಗೆ,
ನಿಮ್ಮ ವಿಶ್ವಾಸಿ
ಸೀತಾರಾಮ್ ಯೆಚುರಿ