ಡಾರ್ಜಿಲಿಂಗ್ ಗುಡ್ಡಗಾಡು ಪ್ರದೇಶದಲ್ಲಿ ಶಾಂತಿ ಮತ್ತು ಸಾಮಾನ್ಯ ಸ್ಥಿತಿ ಏರ್ಪಟ್ಟಿದೆ ಎಂದು ಪಶ್ಚಿಮ ಬಂಗಾಲದ ಮುಖ್ಯಮಂತ್ರಿಗಳು ಮತ್ತು ರಾಜ್ಯ ಸರಕಾರ ಹೇಳಿಕೊಳ್ಳುತ್ತಿದ್ದರೂ ಅಲ್ಲಿ ಪ್ರತಿದಿನ ನಿರಂತರ ಮುಷ್ಕರದ ಕರೆಗಳು ಬರುತ್ತಿದ್ದು ಜನಜೀವನ ಅಸ್ಯವ್ಯಸ್ತಗೊಂಡಿದೆ ಎಂದು ಅಲ್ಲಿಯ ಪರಿಸ್ಥಿತಿಯ ಬಗ್ಗೆ ಸಿಪಿಐ(ಎಂ) ಪೊಲಿಟ್‌ಬ್ಯುರೊ ಆಳವಾದ ಆತಂಕ ವ್ಯಕ್ತಪಡಿಸಿದೆ.
ಅಲ್ಲಿ ಸಾಮಾನ್ಯಸ್ಥಿತಿ ಏರ್ಪಡಿಸಬೇಕಾಗಿದೆ. ಅದು ಗೋರ್ಖಾ ಜನಮುಕ್ತಿ ಮೋರ್ಚಾ(ಜಿಜೆಎಂ)ದೊಡನೆ ಮಾತುಕತೆಗಳ ಮೂಲಕ ಮಾತ್ರ ಸಾಧ್ಯ. ಈ ಸಂಘಟನೆಯ ಮೇಲೆ ಪೊಲೀಸ್ ದಾಳಿಗಳು, ಬಂಧನಗಳು ಮುಂತಾದ ಸರ್ವಾಧಿಕಾರಶಾಹಿ ಕ್ರಮಗಳಿಂದ ಪರಿಹಾರ ಸಾಧ್ಯವಿಲ್ಲ. ಇವು ಖಂಡನೀಯ, ಇವು ಪರಿಸ್ಥಿತಿಯನ್ನು ಮತ್ತಷ್ಟು ಗೋಜಲುಗೊಳಿಸುತ್ತವೆ ಎಂದು ಸಿಪಿಐ(ಎಂ) ಹೇಳಿದೆ.
ಈ ಹಿಂದೆ ಎಡರಂಗ ಸರಕಾರ, ಕೇಂದ್ರಸರಕಾರ ಮತ್ತು ಜಿಜೆಎಂ ಪ್ರತಿನಿಧಿಗಳ ನಡುವೆ ನಡೆದ ತ್ರಿಪಕ್ಷೀಯ ಒಪ್ಪಂದದ ನಂತರ ಗೋರ್ಖಾ ಪ್ರಾದೇಶಿಕ ಆಡಳಿತ(ಜಿಟಿಎ) ಎಂಬುದನ್ನು ಸ್ಥಾಪಿಸಲಾಗಿತ್ತು. ರಾಜ್ಯ ಸರಕಾರ ಮತ್ತು ಮುಖ್ಯಮಂತ್ರಿಗಳು ಈ ತ್ರಿಪಕ್ಷೀಯ ವ್ಯವಸ್ಥೆಯನ್ನು ತಕ್ಷಣವೇ ಬಳಸಬೇಕು ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಸಲಹೆ ಮಾಡಿದೆ.
ಇದರ ಜೊತೆಗೇ ಈ ಪ್ರದೇಶದ ಶ್ನೆಗಳ ಪರಿಹಾರಕ್ಕೆ ಮತ್ತು ಸಾಮಾನ್ಯ ಸ್ಥಿತಿಯನ್ನು ತರಲು ರಾಜ್ಯಸರಕಾರ ಮತ್ತು ಮುಖ್ಯಮಂತ್ರಿಗಳು ದಾರ್ಜಿಲಿಂಗ್ ಪರಿಸ್ಥಿತಿಯ ಬಗ್ಗೆ ಒಂದು ರಾಜಕೀಯ ಪ್ರಕ್ರಿಯೆಯನ್ನು ಆರಂಭಿಸಬೇಕು. ಇದು ಪಶ್ಚಿಮ ಬಂಗಾಲದಲ್ಲಿ ನೆಲೆಸಿರುವ ಜನಗಳ ಐಕ್ಯತೆ ಮತ್ತು ರಾಜ್ಯದ ಸಮಗ್ರತೆಯ ದೃಷ್ಟಿಯಿಂದ ಅತ್ಯಗತ್ಯ ಎಂದು ಸಿಪಿಐ(ಎಂ) ಪೊಲಿಟ್‌ಬ್ಯುರೊ ಹೇಳಿದೆ.