ಏರ್ ಇಂಡಿಯ ಖಾಸಗೀಕರಣ: ಸಾರ್ವಜನಿಕ ಹಣದ ಉಳಿತಾಯಕ್ಕಲ್ಲ,

ರಾಷ್ಟ್ರೀಯ ಆಸ್ತಿಯ ಅಗ್ಗದ ಮಾರಾಟಕ್ಕೆ: ಸಿಪಿಐ(ಎಂ) ಪೊಲಿಟ್‍ಬ್ಯುರೊ

ಮೋದಿ ಸರಕಾರ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ಏರ್‍ ಇಂಡಿಯವನ್ನು ಖಾಸಗೀಕರಿಸಲು ನಿರ್ಧರಿಸಿದೆ. ಕೇಂದ್ರ ಸಂಪುಟ ಏರ್‍ ಇಂಡಿಯ ಮತ್ತು ಅದರ ಐದು ಉಪಸಂಸ್ಥೆಗಳ ಶೇರುಗಳನ್ನು ಮಾರಬೇಕೆಂಬ ನೀತಿ ಆಯೋಗದ ಶಿಫಾರಸಿನ ಸೂತ್ರಕ್ಕೆ ಒಪ್ಪಿಗೆ ನೀಡಿದೆ. ಮೋದಿ ಸರಕಾರದ ನಿರ್ಧಾರವನ್ನು ಸಿಪಿಐ(ಎಂ) ಪೊಲಿಟ್‍ಬ್ಯುರೊ ಬಲವಾಗಿ ಖಂಡಿಸಿದೆ.

ಈ ನಿರ್ಧಾರವನ್ನು 2008ರಿಂದ ಸತತವಾಗಿ ನಷ್ಟ ಅನುಭವಿಸುತ್ತಿದ್ದ ಏರ್  ಇಂಡಿಯ ಈಗ ಲಾಭಗಳಿಸಲಾರಂಭಿಸಿದ ಮೇಲೆ ಮಾಡಲಾಗಿದೆ ಎಂಬ ಸಂಗತಿಯತ್ತ ಸಿಪಿಐ(ಎಂ) ಗಮನ ಸೆಳೆದಿದೆ. 2015-16ರಲ್ಲಿ ಅದು 105 ಕೋಟಿ ರೂ. ಕಾರ್ಯ ನಿರ್ವಹಣೆಯ ಲಾಭ ದಾಖಲಿಸಿತು. 2016-17ರಲ್ಲಿ ಇದು 300 ಕೋಟಿ ರೂ. ಎಂದು ಅಂದಾಜು ಮಾಡಲಾಗಿದೆ.

ವಾಸ್ತವವಾಗಿ ಏರ್‍ಇಂಡಿಯವನ್ನು ಕುಂಠಿತಗೊಳಿಸಿದ್ದು, ಅದರ ಮೇಲೆ ಸಾಲದ ಭಾರೀ ಹೊರೆ ಬೀಳುವಂತೆ ಮಾಡಿದ್ದು ಕೇಂದ್ರದಲ್ಲಿನ ಸರಕಾರಗಳ ಪ್ರಮಾದ ಭರಿತ ಲೆಕ್ಕಾಚಾರಗಳಿಂದ ಮತ್ತು ಕೆಲವು ತಪ್ಪು ನಿರ್ಧಾರಗಳಿಂದಾಗಿಯೇ. ಈಗ ಆ ತಪ್ಪುಗಳಿಗೆ ಆ ಸಂಸ್ಥೆಯನ್ನೇ ಬಲಿ ಪಶುವಾಗಿ ಮಾಡಿ ಖಾಸಗೀಕರಿಸುವ ಪ್ರಯತ್ನ ಮಾಡಲಾಗುತ್ತಿದೆ.

ಕೇಂದ್ರದ ಸರಕಾರಗಳ ತಪ್ಪು ಧೋರಣೆಗಳಿಂದಾಗಿ ಉಂಟಾಗಿರುವ 30,000 ಕೋಟಿ ರೂ.ಗಳ ಸಾಲ ಹೊರೆಯನ್ನು ಮನ್ನಾ ಮಾಡಿ ಇದನ್ನು ಖರೀದಿಸಬಹುದಾದ ಖಾಸಗಿಯವರಿಗೆ ಸರಕಾರ ಒಂದು ಬಕ್ಷೀಸನ್ನೂ ಕೊಡುತ್ತಿದೆ. ಆದ್ದರಿಂದ ಏರ್‍ಇಂಡಿಯದ ಖಾಸಗೀಕರಣ ಈ ಕ್ರಮದ ಬೆಂಬಲಿಗರು ವಾದಿಸುವಂತೆ ಸಾರ್ವಜನಿಕ ಹಣವನ್ನು ಉಳಿಸಲಿಕ್ಕಾಗಿ ಅಲ್ಲ, ಬದಲಾಗಿ ದೇಶದ ಖಜಾನೆಗೆ ವಂಚಿಸಿ ರಾಷ್ಟ್ರೀಯ ಆಸ್ತಿಗಳನ್ನು ದೇಶಿ-ವಿದೇಶಿ ಖಾಸಗಿ ಕುಳಗಳಿಗೆ ಅತ್ಯಂತ ಅಗ್ಗದಲ್ಲಿ ಮಾರಲಿಕ್ಕಾಗಿ ಎಂದು ಅಭಿಪ್ರಾಯ ಪಟ್ಟಿರುವ ಸಿಪಿಐ(ಎಂ) ಪೊಲಿಟ್‍ಬ್ಯುರೊ, ಏರ್‍ ಇಂಡಿಯದ ಮಾರಾಟ ಮೋದಿ ಸರಕಾರದ ಒಟ್ಟಾರೆ ಖಾಸಗೀಕರಣದ ಧಾವಂತದ ಒಂದು ಭಾಗ, ಇದು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದದ್ದು, ಇದನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಹೇಳಿದೆ.

Leave a Reply

Your email address will not be published. Required fields are marked *