ಕಾರ್ಪೊರೇಟ್ಗಳು ಗಿಟ್ಟಿಸುವ ಬಕ್ಷೀಸುಗಳಿಗೆ ಸಾಮಾನ್ಯ ಜನರು ಬೆಲೆ ತೆರುವಂತಾಗಬಾರದು : ಕೇಂದ್ರ ಸರಕಾರಕ್ಕೆ ಸಿಪಿಐ(ಎಂ) ಆಗ್ರಹ
ಜುಲೈ 1ರಿಂದ ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್ಟಿ)ಯನ್ನು ಆತುರಾತುರದಿಂದ ಜಾರಿ ಮಾಡಲಾಗುತ್ತಿದೆ. ಇದರಿಂದ ಹಲವು ಸಮಸ್ಯೆಗಳು ಉದ್ಭವವಾಗುತ್ತಿವೆ. ಇವನ್ನು ಬಗೆಹರಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ.
ಹಣದುಬ್ಬರದ ಬೆದರಿಕೆ ಕಾಣಿಸುತ್ತಿದೆ. ಬಳಕೆ ಸರಕುಗಳ ಬೆಲೆಗಳಲ್ಲಿ ಸರ್ವತೋಮುಖ ಏರಿಕೆ ಆಗುವ ಸಂಭವವಿದೆ. ಹಲವು ಸರಕುಗಳಿಗೆ ಈಗಿರುವ ಒಟ್ಟು ಕೇಂದ್ರ ಮತ್ತು ರಾಜ್ಯ ತೆರಿಗೆಗಳಿಗಿಂತ ಕೆಳಗಿನ ದರಗಳನ್ನು ನಿಗದಿ ಮಾಡಿದ್ದರೂ ಹೀಗಾಗಬಹುದು. ಕೇಂದ್ರ ಮತ್ತು ರಾಜ್ಯ ಸರಕಾರಗಳಿಗೆ ಕನಿಷ್ಟ 1 ಲಕ್ಷ ಕೋಟಿ ರೂ.ಗಳ ಆದಾಯ ನಷ್ಟವಾಗಲಿದೆ ಎಂದು ಅಂದಾಜು ಮಾಡಲಾಗಿದೆ. ಇದು ಕಾರ್ಪೋರೇಟ್ಗಳು ಗಿಟ್ಟಿಸುವ ಬಕ್ಷೀಸು. ಅವರು ಕಡಿಮೆ ದರಗಳ ಪ್ರಯೋಜನವನ್ನು ಬಳಕೆದಾರರಿಗೆ ವರ್ಗಾಯಿಸುವುದಿಲ್ಲ.
ಜಿಎಸ್ಟಿ ಕಾಯ್ದೆಯಲ್ಲಿ ಲಾಭಕೋರತನ ನಿರೋಧ ಅಂಶವಿದೆ. ಕಡಿಮೆ ತೆರಿಗೆ ದರದ ಪ್ರಯೋಜನವನ್ನು ಬಳಕೆದಾರರಿಗೆ ಅದಕ್ಕುನುಗುಣವಾದ ಬೆಲೆ ಇಳಿಕೆಗಳಿಂದ ವರ್ಗಾಯಿಸುವಂತೆ ಮಾಡಲೆಂದು ಈ ಆಂಶವನ್ನು ಸೇರಿಸಲಾಗಿದೆ. ಆದರೆ ಸರಕಾರ ಈ ಅಂಶವನ್ನು ಪರಿಣಾಮಕಾರಿಯಾಗಿ ಬಳಸಲು ಹಿಂದೇಟು ಹಾಕುತ್ತದೆ. ಅದಿನ್ನೂ ಈ ಲಾಭಕೋರತನ-ನಿರೋಧಕ ವಿಧಿಯ ಅಡಿಯಲ್ಲಿ ನಿಯಮಗಳನ್ನು ರೂಪಿಸಿಲ್ಲ ಎಂಬ ಸಂಗತಿಯತ್ತ ಸಿಪಿಐ(ಎಂ) ಗಮನ ಸೆಳೆದಿದೆ. ತೆರಿಗೆ ರಚನೆಯಲ್ಲಿ ಸ್ಪಷ್ಟತೆಯ ಕೊರತೆಯನ್ನು ಬಳಸಿಕೊಂಡು ಬೆಲೆಗಳನ್ನು ಏರಿಸುವ ಪ್ರಯತ್ನಗಳನ್ನು ನಡೆಸುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದೆ.
ಕೇಂದ್ರ ಸರಕಾರ ಈಗಿರುವ ಒಟ್ಟು ತೆರಿಗೆಯ ಅಡಿಯಲ್ಲಿ ಮತ್ತು ಜಿಎಸ್ಟಿಯ ಅಡಿಯಲ್ಲಿ ಸರಕುಗಳ ಬೆಲೆಗಳದು ವಿವರವಾದ ಪಟ್ಟಿಯನ್ನು ಪ್ರಕಟಿಸಬೇಕು ಮತ್ತು ಎಂ.ಆರ್.ಪಿ.(ಗರಿಷ್ಟ ಚಿಲ್ಲರೆ ಬೆಲೆ) ಯನ್ನು ಕಡಿಮೆ ಮಾಡಲು ಮಧ್ಯಪ್ರವೇಶಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ.
ಜಿಎಸ್ಟಿ ತೆರಿಗೆ ದರಗಳು ಕೆಲವು ವಲಯಗಳನ್ನು ಮತ್ತು ಸರಕುಗಳನ್ನು ಪ್ರತಿಕೂಲವಾಗಿ ತಟ್ಟುತ್ತವೆ. ಇಡೀ ಸಣ್ಣ ಪ್ರಮಾಣದ ವಲಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಏಕೆಂದರೆ 75 ಲಕ್ಷ ರೂ.ಗಳಿಗಿಂತ ಹೆಚ್ಚು ವಹಿವಾಟು ಇರುವ ಘಟಕಗಳು ಈಗ ಪೂರ್ಣ ತೆರಿಗೆ ಕಟ್ಟಬೇಕು. ಇದುವರೆಗೆ 1.5 ಕೋಟಿ ರೂ.ಗಳಿಗಿಂತ ಕಡಿಮೆಯ ಎಲ್ಲ ಘಟಕಗಳಿಗೂ ವಿನಾಯ್ತಿ ಇತ್ತು.
ಸಣ್ಣ ಉದ್ದಿಮೆಗಳ ಬದಲಾಗಿ ದೊಡ್ಡ ಉದ್ದಿಮೆಗಳ ಪರವಾಗಿ ಕೆಲಸ ಮಾಡುವ ಹಲವಾರು ಅಸಂಗತತೆಗಳಿವೆ. ಕೇಂದ್ರ ಸರಕಾರ ಮತ್ತು ಜಿಎಸ್ಟಿ ಮಂಡಳಿ ತಕ್ಷಣವೇ ಈ ಪ್ರಶ್ನೆಗಳ ಪುನರವಲೋಕನ ಮಾಡಿ ಈ ಅಸಂಗತತೆಗಳನ್ನು ತೆಗೆಯಬೇಕು. ಯಾವುದೇ ರೀತಿಯಲ್ಲಿ ಕಾರ್ಪೊರೇಟ್ಗಳು ಗಿಟ್ಟಿಸುವ ಬಕ್ಷೀಸುಗಳಿಗೆ ಸಾಮಾನ್ಯ ಜನರು ಬೆಲೆ ತೆರುವಂತಾಗಬಾರದು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಎಚ್ಚರಿಸಿದೆ.
ಮೋದಿ ಸರಕಾರ ಬಹಳ ಆತುರದಿಂದ ಜಿಎಸ್ಟಿಯನ್ನು ತಂದಿದೆ. ಇದು ಸಣ್ಣ ಉದ್ದಿಮೆಗಳು, ವ್ಯಾಪಾರಿಗಳು ಮತ್ತು ಅಂಗಡಿಯವರಿಗೆ ಹಲವಾರು ಸಮಸ್ಯೆಗಳನ್ನು ಉಂಟು ಮಾಡುತ್ತಿದೆ. ಈ ಹೊಸ ತೆರಿಗೆ ರಚನೆಯ ಅನುಷ್ಠಾನಕ್ಕೆ ಸಾಕಷ್ಟು ಸಮಯವನ್ನು ಕೊಡಬೇಕು ಎಂದು ಸಿಪಿಐ(ಎಂ) ಆಗ್ರಹಿಸಿದೆ.