ಮಧ್ಯಪ್ರವೇಶಿಸಿ ಬಲವಾದ ಸಂದೇಶ ನೀಡುವಂತೆ ಕೇಂದ್ರ ಗೃಹಮಂತ್ರಿಗಳಿಗೆ ಸಿಪಿಐ(ಎಂ) ಮನವಿ ಪತ್ರ
ಜೂನ್ 4ರಂದು ಸಿಪಿಐ(ಎಂ) ನಿಯೋಗವೊಂದು ಕೇಂದ್ರ ಗೃಹಮಂತ್ರಿ ರಾಜನಾಥ್ ಸಿಂಗ್ರವನ್ನು ಭೇಟಿಯಾಗಿ ಗೋರಕ್ಷಣೆಯ ಹೆಸರಲ್ಲಿ ಮುಸ್ಲಿಂ, ದಲಿತ ಮತ್ತು ಆದಿವಾಸಿ ಸಮುದಾಯಗಳವರನ್ನುಬಡಿದು ಸಾಯಿಸುವ ವರೆಗಿನ ಹಿಂಸಾಚಾರ ಮತ್ತು ಸುಳ್ಳು ಕೇಸುಗಳು ಹೆಚ್ಚುತ್ತಿದ್ದು ಈ ಬಗ್ಗೆ ಕೇಂದ್ರ ಗೃಹ ಮಂತ್ರಾಲಯದ ಮಧ್ಯಪ್ರವೇಶ ಅಗತ್ಯವಾಗಿದೆ ಎಂದು ವಿವರಿಸುವ ಒಂದು ಮನವಿ ಪತ್ರವನ್ನು ಸಲ್ಲಿಸಿತು. ಇದರಲ್ಲಿ ದೇಶದ ರಾಜಧಾನಿಯ ಸುತ್ತಮುತ್ತಲುನಡೆದಿರುವಐದು ನಿರ್ದಿಷ್ಟ ಪ್ರಕರಣಗಳ ವಿವರಗಳನ್ನು ಕೊಡಲಾಗಿದೆ.
ಗೋರಕ್ಷಕರೆನ್ನುವವವರು ಬಡಿದು ಸಾಯಿಸಿದ ಇಖ್ಲಾಕ್ ಖಾನ್ ಮಗ ಮತ್ತು ಪೆಹ್ಲೂ ಖಾನ್ ಮಗಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯರಾದ ಬೃಂದಾ ಕಾರಟ್, ದಿಲ್ಲಿ ಮತ್ತು ಹರ್ಯಾಣ ರಾಜ್ಯ ಕಾರ್ಯದರ್ಶಿಗಳಾದ ಕೆ ಎಂ ತಿವಾರಿ ಮತ್ತು ಸುರಿಂದರ್ ಮಲಿಕ್ ಮತ್ತಿತರ ರಾಜ್ಯ ಮುಖಂಡರುಗಳಿದ್ದ ಈ ನಿಯೋಗದ ಜತೆಗಿದ್ದರು. ಗೃಹಮಂತ್ರಿಗಳು ಮನವಿ ಪತ್ರದಲ್ಲಿ ಎತ್ತಿರುವ ಪ್ರಶ್ನೆಗಳ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಆದರೆ ನಾಗರಿಕರಿಗೆ ರಕ್ಷಣೆ ಕೊಡಲು ಸರಕಾರ ಏನು ಕ್ರಮ ಕೈಗೊಳ್ಳುತ್ತಿದೆ ಎಂದು ಕೇಳಿದಾಗ ವಿವರಿಸಲು ತಡವರಿಸಿದರು, ಇದು ರಾಜ್ಯ ಸರಕಾರಗಳ ವಿಷಯ ಎಂದರು.
ಸಂಬಂಧಪಟ್ಟ ರಾಜ್ಯ ಸರಕಾರಗಳು ಇಂತಹ ಪ್ರಕರಣಗಳ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂಬುದು ನಿಜವಾದರೂ ಕೇಂದ್ರದಲ್ಲಿ ಗೃಹ ವ್ಯವಹಾರಗಳ ಮಂತ್ರಿಗಳ ಬಲವಾದ ಮಧ್ಯಪ್ರವೇಶ ಪ್ರಕರಣಗಳಲ್ಲಿ ಅಗತ್ಯ ಎಂದು ಮನವಿ ಪತ್ರ ಸ್ಪಷ್ಟವಾಗಿ ಅಭಿಪ್ರಾಯ ಪಟ್ಟಿದೆ. ದಿಲ್ಲಿಯ ಜಂತರ್ ಮಂತರ್ನಲ್ಲಿ ರಾಷ್ಟ್ರೀಯ ರಾಜಧಾನಿ ಪ್ರದೇಶ ಮತ್ತು ಹರ್ಯಾಣದ ಸಿಪಿಐ(ಎಂ) ರಾಜ್ಯಸಮಿತಿಗಳು ಸಂಘಟಿಸಿದ ಪ್ರತಿಭಟನಾ ಧರಣಿಯಲ್ಲಿ ಈ ಪ್ರಕರಣಗಳಲ್ಲಿ ತೊಂದರೆಗೊಳಗಾದ ಕುಟುಂಬಗಳ ಸದಸ್ಯರೂ ನ್ಯಾಯ ಸಿಗಬಹುದೆಂಬ ನಿರೀಕ್ಷೆಯಿಂದ ಭಾಗವಹಿಸಿದ್ದಾರೆಂಬ ಸಂಗತಿಯನ್ನು ಮನವಿ ಪತ್ರ ಗೃಹಮಂತ್ರಿಗಳ ಗಮನಕ್ಕೆ ತಂದಿದೆ.
ಮನವಿ ಪತ್ರ ಪಟ್ಟಿ ಮಾಡಿದ ಐದು ಪ್ರಕರಣಗಳು ಹೀಗಿವೆ:
- 15 ವರ್ಷದ ಜುನೈದನನ್ನು ಲೋಕಲ್ ಟ್ರೇನಲ್ಲಿ ಬಡಿದು ಸಾಯಿಸಿದ ಪ್ರಕರಣದಲ್ಲಿ ಮುಖ್ಯ ಆಪಾದಿತರನ್ನು ಪೋಲೀಸರು ಇನ್ನೂ ಬಂಧಿಸಿಲ್ಲ ಎಂಬುದು ಆಘಾತಕಾರಿ. ಬದಲಾಗಿ ಪೋಲೀಸರು ಮಾಡಿರುವ ಕೆಲವು ಬಂಧನಗಳ ವಿರುದ್ಧವೂ ಸುತ್ತಲಿನ ಹಳ್ಳಿಗರನ್ನು ಉದ್ರೇಕಿಸಲು ಈ ಭೀಕರ ಘಟನೆಯಲ್ಲಿ ಭಾಗಿಯಾದವರು ಪ್ರಯತ್ನಿಸುತ್ತಿದ್ದಾರೆ. ರಾಜ್ಯ ಸರಕಾರ ಜುನೈದನ ಹತ್ಯೆಯ ಬಗ್ಗೆಯಾಗಲೀ, ತೀವ್ರವಾಗಿ ಗಾಯಗೊಂಡಿರುವ ಅತನ ಸೋದರ ಶಕೀರ್ ನ ಆರೋಗ್ಯದ ಬಗ್ಗೆ ವಿಚಾರಿಸಲಾಗಲೀ ಯಾರನ್ನೂಕಳಿಸದಿರುವುದರಿಮದ ಈ ಮಂದಿಗೆ ಇನ್ನಷ್ಟು ಧೈರ್ಯ ಬಂದಿದೆ. ಶಕೀರ್ ನ ಸರಿಯಾದ ಚಿಕಿತ್ಸೆಗೆ ರಾಜ್ಯ ಸರಕಾರ ಏನೂ ಮಾಡಿಲ್ಲ ‘ಆತ ತನ್ನ ಅಪಾರ ನೋವನ್ನು ತಡೆದುಕೊಂಡು ಹೊರರೋಗಿಗಳ ಸಾಲಿನಲ್ಲಿ ನಿಲ್ಲಬೇಕಾಗಿದೆ ಎಂದು ತಿಳಿದು ನಿಮಗೆ ಆಘಾತವಾಗಬಹುದು’ ಎಂದು ಮನವಿ ಪತ್ರ ಹೇಳಿದೆ. ಈ ನಡುವೆ ಆಭಾಗದಲ್ಲಿ ಸಂಚರಿಸುವ ರೈಲುಗಳಲ್ಲಿ ಈಗಲೂ ಕೋಮುವಾದಿ ಗ್ಯಾಂಗ್ಗಳು ಉದ್ರೇಕಕಾರಿ ಮಾತುಗಳನ್ನಾಡುತ್ತ ಅಲೆದಾಡುತ್ತಿದ್ದಾರೆ, ಸುರಕ್ಷೆಯ ಯಾವುದೇ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂಬ ಸಂಗತಿಯತ್ತವೂ ಮನವಿ ಪತ್ರ ಗೃಹಮಂತ್ರಿಗಳ ಗಮನ ಸೆಳೆದಿದೆ.
- ಕಳೆದ ಅಗಸ್ಟ್ 26ರಂದು ಹರ್ಯಾಣದ ದಿಂಗರ್ಹೇರಿಯಲ್ಲಿ ಕೋಮುಭಾವನೆ ಸೂಸುತ್ತಿದ್ದ ಗ್ಯಾಂಗೊಂದು ಒಂದು ಬಡ ಮುಸ್ಲಿಂ ರೈತ ಕುಟುಂಬದ ಇಬ್ಬರು ಹೆಣ್ಣು ಮಕ್ಕಳ ಮೇಲೆ ಸಾಮೂಹಿಕ ಅತ್ಯಾಚಾರ, ಒಂದು ದಂಪತಿಯ ಕೊಲೆ ಮತ್ತು ಇತರರನ್ನು ಗಾಯಗೊಳಿಸಿದ ಭೀಕರ ಪ್ರಕರಣದಲ್ಲಿ ಭಾರೀ ಪ್ರತಿಭಟನೆಗಳ ನಂತರ ಸಿಬಿಐ ತನಿಖೆಗೆ ಆದೇಶ ನೀಡಿದರೂ ಕೇಸು ಕೋರ್ಟಿನಲ್ಲಿ ಮುಂದುವರೆಯುತ್ತಿಲ್ಲ. ಈ ನಡುವೆ ಆಪಾದಿತರು ಈ ಕುಂಟುಂಬದ ಮೇಲೆ ಒತ್ತಡ ತರುತ್ತಿದ್ದಾರೆ. ಆಘಾತಕಾರಿ ಸಂಗತಿಯೆಂದರೆ ಹಲ್ಲೆಗೊಳಗಾದ ಕುಟುಂಬದ ಮೇಲೆಯೇ ಸುಳ್ಳು ಕೇಸ್ ಹಾಕಿ ಅವರು ‘ರಾಜಿ’ಗೆ ಬರುವಂತ ಒತ್ತಡ ಹಾಕಲಾಗುತ್ತಿದೆ. ಈ ಕೇಸಿನಲ್ಲೂ ಹರ್ಯಾಣ ಸರಕಾರ ಆಪಾದಿತರ ಪರ ವಹಿಸಿದೆ,ಈ ಕುಟುಂಬದ ಇಬ್ಬರು ಸದಸ್ಯರ ಮೇಲೆ ಫೆಭ್ರುವರಿ 10ರಂದು ಎಫ್ಐಆರ್ ಹಾಕಿರುವುದು ನ್ಯಾಯದ ಅಪಹಾಸ್ಯ, ಗೃಹಮಂತ್ರಿಗಳು ಮಧ್ಯಪ್ರವೇಶಿಸಿ ಈ ಸುಳ್ಳು ಕೇಸುಗಳನ್ನು ಹಿಂದಕ್ಕೆ ತಗೊಳ್ಳುವಂತೆ ಮಾಡಬೇಕು ಎಂದು ನಿಯೋಗ ಆಗ್ರಹಿಸಿದೆ.
- ಅಜ್ಮೇರ್ ನಲ್ಲಿ ಅಮಾನುಷವಾಗಿ ಸಾಯಿಸಲ್ಪಟ್ಟ ಮೇವತ್ನ ಡೇರಿ ರೈತ ಪೆಹ್ಲೂ ಖಾನ್ ಪ್ರಕರಣದಲ್ಲಿ ಎಲ್ಲ ಆಪಾದಿತರನ್ನು ಇನ್ನೂ ಬಂಧಿಸಿಲ್ಲ, ಪೆಹ್ಲೂ ಖಾನ್ ಕುಟುಂಬಕ್ಕೆ ಪರಿಹಾರವನ್ನು ಇನ್ನೂ ಒದಗಿಸಿಲ್ಲ, ಹಲ್ಲೆಕೋರರು ಕಿತ್ತುಕೊಂಡ ಅವರ ಹಣ ಮತ್ತು ಹಾಲು ಕರೆಯುವ ಹಸುಗಳನ್ನು ಇನ್ನೂ ಹಿಂದಿರುಗಿಸಿಲ್ಲ, ಸಾಲದ್ದಕ್ಕೆ ಅವರ ಮೇಲೆ ಮೇಲೆ ಹಸು ಕಳ್ಳಸಾಗಣೆಯ ಕೇಸು ಹಾಕಲಾಗಿದೆ. ಈ ವಿಷಯದಲ್ಲಿ ಗೃಹಮಂತ್ರಿಗಳು ರಾಜಸ್ತಾನ ಮತ್ತು ಹರ್ಯಾಣ ರಾಜ್ಯಸರಕಾರಗಳು ಕ್ರಮ ಕೈಗೊಳ್ಳುವಂತೆ ಮಧ್ಯಪ್ರವೇಶಿಸಬೇಕು ಎಂದು ಮನವಿ ಪತ್ರ ಕೋರಿದೆ.
- ಎರಡು ವರ್ಷಗಳ ಹಿಂದೆ ದಾದ್ರಿಯಲ್ಲಿ ಮನೆಗೆ ನುಗ್ಗಿ ಅಮಾನುಷವಾಗಿ ಮಹಮ್ಮದ್ ಇಖ್ಲಾಕ್ನನ್ನು ಹೊಡೆದು ಸಾಯಿಸಿದ,ಆತನ ಮಗ ದಾನಿಷ್ನನ್ನು ತೀವ್ರವಾಗಿ ಗಾಯಗೊಳಿಸಿದ ಪ್ರಕರಣದಲ್ಲಿ ಆಪಾದಿತರ ಮೇಲೆ ಇನ್ನೂ ಆರೋಪ ಪಟ್ಟಿ ಹಾಕಿಲ್ಲ, ಒಬ್ಬೊಬ್ಬರಾಗಿ ಎಲ್ಲ ಆಪಾದಿತರು ಜಾಮೀನಿನಲ್ಲಿ ಹೊರಗೆ ಬಂದು ಇಖ್ಲಾಕ್ ಕುಟುಂಬದವರ ಮೇಲೆ ಬೆದರಿಕೆ ಹಾಕುತ್ತಿದ್ದಾರೆ. ಸಾಯಿಸಲ್ಪಟ್ಟ ಇಖ್ಲಾಕ್ ಮತ್ತು ಆತನ ಕುಟುಂಬದವರ ಮೇಲೆಯೇ ಆಪಾದಿತನೇ ಖಾಸಗಿ ದೂರು ಕೊಟ್ಟಿದ್ದು , ಇದರ ಹೆಸರಿನಲ್ಲಿ ಕೆಟ್ಟ ಅಪಪ್ರಚಾರ ನಡೆಸಲಾಗುತ್ತಿದೆ. ಮನೆ ಮುರಿದು ಸುಳ್ಳು ಸಾಕ್ಷ್ಯಗಳನ್ನು ಮನೆಯಲ್ಲಿ ಇಟ್ಟಿರುವ ಸಂದೇಹವೂ ಇದೆ. ಇಖ್ಲಾಕ್ ಸೋದರ ಕಿರುಕುಳ ತಡೆಯಲಾರದೆ ಕುಟುಂಬದ ಮನೆ ಬಿಟ್ಟು ಹೋಗುವಂತೆ ಮಾಡಲಾಗಿದೆ ಎಂಬೆಲ್ಲ ಸಂಗತಿಗಳನ್ನು ಮನವಿ ಪತ್ರ ಗೃಹಮಂತ್ರಿಗಳ ಗಮನಕ್ಕೆ ತಂದು ಸ್ಪರ್ಧಾತ್ಮಕ ಪರೀಕ್ಷೆಗೆ ಅರ್ಜಿ ಹಾಕಿದ್ದ ಮಗ ದಾನಿಷ್ ಮೆದುಳಿನ ಶಸ್ತ್ರಚಿಕಿತ್ಸೆ ಅಗತ್ಯವಿರುವುದರಿಂದ ಪರೀಕ್ಷೆಗೆ ಕೂರಲಾಗಿಲ್ಲ, ಆತನಿಗೆ ಸರಕಾರೀ ಕೆಲಸ ಕೊಡಿಸಬೇಕು ಎಂದು ಆಗ್ರಹಿಸಿದೆ.
- ರಾಜಧಾನಿಯ ಹೃದಯ ಭಾಗದಲ್ಲೇ ಎಪ್ರಿಲ್ 24ರಂದು ನಡೆದ ಪ್ರಕರಣ ಮನವಿ ಪತ್ರದಲ್ಲಿ ನಮೂದಿಸಿದ ಐದನೇ
ಪ್ರಕರಣ. ಮೂರು ಕಾರುಗಳಲ್ಲಿ ಬಂದ ಗ್ಯಾಂಗ್ಗಳು ಟ್ರಕ್ಕೊಂದನ್ನು ತಡೆದು ನಿಲ್ಲಿಸಿ ಅದರಲ್ಲಿ ಇದ್ದವರನ್ನು ಚೆನ್ನಾಗಿ ಥಳಿಸಿದರು, ಟ್ರಕ್ಕಿನ ಡ್ರೈವರ್ ರಿಝ್ವಾನ್ ಸಲ್ಲಿಸಿದ ದೂರಿನಲ್ಲಿ ಎರಡು ಕಾರುಗಳ ನಂಬರ್ ಮತ್ತು ಆಪಾದಿತರನ್ನು ಗುರುತಿಸಿದ್ದರೂ ಆಪಾದಿತರನ್ನು ಇನ್ನು ಕೂಡ ಬಂಧಿಸಿಲ್ಲ. ದಿಲ್ಲಿಯ ಪೋಲೀಸರು ನೇರವಾಗಿ ಕೇಂದ್ರ ಗೃಹ ಮಂತ್ರಾಲಯದ ಅಡಿಯಲ್ಲೇ ಬರುತ್ತಾರೆ ಎಂಬ ಸಂಗತಿಯನ್ನು ಮನವಿ ಪತ್ರ ಗೃಹಮಂತ್ರಿಗಳ ಗಮನಕ್ಕೆ ತರಬೇಕಾಗಿ ಬಂದಿದೆ.
ಇವಲ್ಲದೆ ಹರ್ಯಾಣ, ಝಾರ್ಖಂಡ್, ರಾಜಸ್ತಾನ, ಮಧ್ಯಪ್ರದೇಶ, ಉತ್ತರ ಪ್ರದೇಶ, ಪಶ್ಚಿಮ ಬಂಗಾಲ ಮತ್ತು ದಿಲ್ಲಿಯಿಂದ ಕೂಡ ಗೋರಕ್ಷಣೆಯ ಹೆಸರಲ್ಲಿ ನಡೆದಿರುವ ಪ್ರಕರಣಗಳ ಮಾಹಿತಿಗಳನ್ನು ಕಲೆ ಹಾಕುವಂತೆ ಗೃಹಮಂತ್ರಾಲಯದ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು, ಇವು ಕೇವಲ ಜನಜಂಗುಳಿಗಳು ಇದ್ದಕ್ಕಿದ್ದಂತೆ ಸ್ವಯಂಪ್ರೇರಣೆಯಿಂದ ನಡೆಸುವ ಹಿಂಸಾಚಾರಗಳಲ್ಲ, ಇವುಗಳ ಹಿಂದೆ ಸಂಘಟಿತ ಗುಂಪುಗಳಿವೆ, ಇವರೆಲ್ಲ ಒಂದು ಹಿಂದುತ್ವ ಸಿದ್ಧಾಂತದ ನಿರ್ದಿಷ್ಟ ಬ್ರಾಂಡಿಗೆ ನಿಷ್ಠೆ ಇರುವವರು, ಇವರ ಬಗ್ಗೆ ಸರಕಾರ ಮೆದು ನಿಲುವು ತಳೆದಿದೆ ಎಂದಿರುವ ಮನವಿ ಪತ್ರ ಇವುಗಳಲ್ಲಿ ಪ್ರತಿಯೊಂದು ಅಂಶದ ಬಗ್ಗೆಯೂ ಉಸ್ತುವಾರಿ ನಡೆಸಿ ಇಂತಹ ಅಪರಾಧಗಳು ಮುಂದುವರೆಯದಂತೆ ಬಲವಾದ ಸಂದೇಶವನ್ನು ಕಳಿಸಬೇಕು ಎಂದು ಕೇಂದ್ರ ಗೃಹಮಂತ್ರಿಗಳನ್ನು ಕೋರಿದೆ.