ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಅಮರನಾಥ ಯಾತ್ರಿಕರ ಮೇಲೆ ಜುಲೈ 10ರ ರಾತ್ರಿ ಭಯೋತ್ಪಾದಕರು ದಾಳಿ ಮಾಡಿದ್ದು, ಏಳು ಮಂದಿ ಹತರಾಗಿದ್ದಾರೆ, ಇವರಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು, 19 ಮಂದಿ ಗಾಯಗೊಂಡಿದ್ದಾರೆ. ಇದೊಂದು ಅತ್ಯಂತ ನೀಚ ಹೇಡಿ ಕೃತ್ಯ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ.
ತಮ್ಮ ಬಂಧುಗಳನ್ನು ಕಳೆದುಕೊಂಡಿರುವ ಕುಟುಂಬಗಳಿಗೆ ಹಾರ್ದಿಕ ಸಂತಾಪಗಳನ್ನು ಮತ್ತು ಗಾಯಗೊಂಡಿರುವವರಿಗೆ ಸಹಾನುಭೂತಿಯನ್ನು ಪೊಲಿಟ್ಬ್ಯುರೊ ವ್ಯಕ್ತಪಡಿಸಿದೆ.
ಕಾಶ್ಮೀರದ ಜನತೆ ಅಮರನಾಥ ಯಾತ್ರೆ ತಮ್ಮ ಸಮ್ಮಿಶ್ರ ಪರಂಪರೆಯ ಭಾಗವೆಂದೇ ಸದಾ ಕಂಡಿದ್ದಾರೆ. ಯಾತ್ರಿಕರ ಮೇಲೆ ದಾಳಿ ಉಗ್ರಗಾಮಿಗಳ ನಡುವೆ ಧಾರ್ಮಿಕ ಉಗ್ರವಾದ ಬೆಳೆಯುತ್ತಿರುವುದರ ಸಂಕೇತ.
ಕೋಮು ವಿಭಜನೆಯನ್ನು ಆಳಗೊಳಿಸುವುದು ಈ ದಾಳಿಯ ಉದ್ದೇಶಗಳಲ್ಲಿ ಒಂದು. ಅವರ ಈ ಪ್ರಚೋದನೆ ಯಶಸ್ವಿಯಾಗದಂತೆ ನೋಡಿಕೊಳ್ಳುವುದು ಮಹತ್ವದ ಸಂಗತಿ.ಇದನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಹಾಗೂ ದೇಶದ ಇತರೆಡೆಗಳಲ್ಲಿ ಶಾಂತಿ ಮತ್ತು ಕೋಮು ಸೌಹಾರ್ದವನ್ನು ಕಾಯ್ದುಕೊಳ್ಳುವ ಮೂಲಕ ಸಾಧಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ಬಿಜೆಪಿ ಸರಕಾರದ ವಿಫಲತೆಯೇ ಹೊಣೆ-ಯೆಚುರಿ
ಈ ದಾಳಿಯನ್ನು ಬಲವಾಗಿ ಖಂಡಿಸುತ್ತ, ಇದಕ್ಕೆ ಬಲಿಯಾದವರ ಕುಟುಂಬಗಳಿಗೆ ಸಂತಾಪ ವ್ಯಕ್ತಪಡಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿಯನ್ನು ಬಿಜೆಪಿ ಸರಕಾರ ತಪ್ಪಾಗಿ ನಿರ್ವಹಿಸುತ್ತಿರುವುದು ಗಂಭೀರ ಆತಂಕದ ಸಂಗತಿ ಎಂದಿದ್ದಾರೆ.
ಅವರ ಕಣ್ಮುಂದೆಯೇ ಪರಿಸ್ಥಿತಿ ಹದಗೆಡುತ್ತ ಸಾಗಿದೆ. ಅಮರನಾಥ ಯಾತ್ರಿಕರ ಮೇಲೆ ಈ ಹಿಂದೆ ದಾಳಿ ನಡೆದದ್ದು 2010ರಲ್ಲಿ. ಅದೂ ನಡೆದದ್ದು ಬಿಜೆಪಿ ನೇತೃತ್ವದ ಎನ್ಡಿಎ ಸರಕಾರದ ಅಡಿಯಲ್ಲಿ ಎಂದು ನೆನಪಿಸಿರುವ ಅವರು ಕಾಶ್ಮೀರದಲ್ಲಿನ ಪರಿಸ್ಥಿತಿ ಈ ಮಟ್ಟಕ್ಕೆ ಏಕೆ ಬಂದಿದೆ ಎಂದು ಪ್ರಶ್ನಿಸಿದ್ದಾರೆ.
ಬಿಜೆಪಿ ರಾಜ್ಯದಲ್ಲಿನ ಸನ್ನಿವೇಶವನ್ನು ಸರಿಯಾಗಿ ನಿರ್ವಹಿಸುವಲ್ಲಿ ವಿಫಲವಾಗಿರುವುದರಿಂದ ಈಗ ಮುಗ್ಧ ಜೀವಗಳು ಬಲಿಯಾಗುವಂತಾಗಿದೆ. ಇದಕ್ಕೆ ಬಿಜೆಪಿ ಸರಕಾರವೆ ಜವಾಬುದಾರ ಎಂದು ಅವರು ಹೇಳಿದ್ದಾರೆ.