– ತರಿಗಾಮಿಯವರ ಕಳಕಳಿಯ ಮನವಿ
ಏಳು ಮಂದಿ ಯಾತ್ರಿಕರ ಹತ್ಯೆಮಾಡಿರುವ ಮತ್ತು ಹಲವರು ಗಾಯಗೊಳಿಸಿರುವದಾಳಿಕಾಶ್ಮೀರದ ಕೋಮು ಸೌಹಾರ್ದದ ಪರಂಪರೆಗೆ ಒಂದು ನಾಚಿಕೆಗೇಡಿನ ದೊಡ್ಡ ಪ್ರಹಾರ ಎಂದು ಸಿಪಿಐ(ಎಂ)ನ ಹಿರಿಯ ಕಾಶ್ಮೀರಿ ಮುಖಂಡ ಮತ್ತು ಶಾಸಕ ಎಂ.ವೈ.ತರಿಗಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನಮ್ಮ ರಾಜ್ಯ ಸದಾ ಕೋಮು ಸೌಹಾರ್ದದ, ಸೋದರಭಾವದ ಶ್ರೀಮಂತ ಪರಂಪರೆಯ ಬೀಡಾಗಿದೆ, ಅತ್ಯಂತ ಸಂಕ್ಷೋಭೆಯ ಕಷ್ಟಕರ ಘಟ್ಟದಲ್ಲೂ ಅದನ್ನು ಕಾಯ್ದುಕೊಂಡಿದೆ. ಈ ದಾಳಿ ರಾಜ್ಯದ ಬಹುಳತ್ವಕ್ಕೆ ಅಪಖ್ಯಾತಿ ತರುವ ಒಂದು ಪ್ರಯತ್ನ” ಎಂದು ಅವರು ಹೇಳಿದ್ದಾರೆ.
ಮುಂದುವರೆದು ಅವರು “ನಾವೆತ್ತ ಸಾಗುತ್ತಿದ್ದೇವೆ ಎಂದು ಕೇಳಿಕೊಳ್ಳಬೇಕಾಗಿದೆ, ಇಂತಹ ನೀಚ ಕೃತ್ಯಗಳ ಮೂಲಕ ನಾವು ಯಾರ ಮೇಲೆ ಗುರಿಯಿಡುತ್ತಿದ್ದೇವೆ, ಬೇರಾರ ಮೇಲೂ ಅಲ್ಲ, ನರಳುತ್ತಿರುವ ಕಾಶ್ಮೀರದ ಜ£ತೆಯ ಮೇಲೆಯೇ ಮತ್ತು ನಮ್ಮ ಅಸ್ಮಿತೆಯ ಬುನಾದಿಯ ಮೇಲೆಯೇ” ಎಂದು ಅವರು ಅತ್ಯಂತ ನೋವಿನಿಂದ ಹೇಳಿದ್ದಾರೆ.
ಅಮರನಾಥ ಯಾತ್ರೆ ದೀರ್ಘ ಕಾಲದಿಂದ ನಡೆದುಕೊಂಡು ಬಂದಿದೆ. ಕಾಶ್ಮೀರದ ಜನತೆಗೆ ಈ ಪರಂಪರೆ ಜೀವನಾಧಾರವೂ ಆಗಿದೆ, ಅವರು ಯಾತ್ರಿಗಳನ್ನು ಸ್ವಾಗತಿಸುವಲ್ಲಿ ಅತ್ಯಂತ ಉತ್ಸಾಹದಿಂದ ಮುಂಚೂಣಿಯಲ್ಲಿರುವವರು ಎಂದು ನೆನಪಿಕೊಳ್ಳುತ್ತ ಅವರು ‘ಯಾತ್ರಿಗಳು ಯಾವುದೇ ರಾಜಕೀಯ ಅಜೆಂಡಾದೊಂದಿಗೆ ಬಂದಿಲ್ಲ, ಕಾಶ್ಮೀರದ ಜನತೆಗೆ ಭಾರತದ ಜನತೆಯೊಂದಿಗೆ ಯಾವುದೇ ವೈರತ್ವವಿಲ್ಲ. ಇಂತಹ ಬರ್ಬರ ಕೃತ್ಯಗಳು ಕಾಶ್ಮೀರದ ಜನತೆಯನ್ನು ಇನ್ನಷ್ಟು ಏಕಾಂಗಿಯಾಗಿಸುತ್ತವೆ” ಎಂದು ಖೇದ ವ್ಯಕ್ತಪಡಿಸಿದ್ದಾರೆ.
“ನಮ್ಮ ರಾಜ್ಯದ ಜನತೆ ನಮ್ಮ ಸೌಹಾರ್ದವನ್ನು ಛಿದ್ರಗೊಳಿಸುವ ಹತಾಶ ಪ್ರಯತ್ನ ನಡೆಸುತ್ತಿರುವ ಉಗ್ರವಾದದ ಶಕ್ತಿಗಳಿಗೆ ಬಲಿಬೀಳಬಾರದು ಎಂದು ನಾವು ಮನವಿ ಮಾಡಿಕೊಳ್ಳುತ್ತೇವೆ. ನಮ್ಮ ಅತಿ ದೊಡ್ಡ ಶಕ್ತಿ ನಮ್ಮ ಐಕ್ಯತೆಯಲ್ಲಿದೆ. ನಾವು ಛಿದ್ರಕಾರಿ ಶಕ್ತಿಗಳ ವಿರುದ್ಧ ಒಕ್ಕೊರಲಿನಿಂದ ನಮ್ಮ ದನಿಯನ್ನು ಎತ್ತಬೇಕು“ ಎಂದು ಅವರು ಅತ್ಯಂತ ಕಳಕಳಿಯಿಂದ ಮನವಿ ಮಾಡಿದ್ದಾರೆ.