ಚುನಾವಣಾ ಭರವಸೆಗಳ ಈಡೇರಿಕೆಗಾಗಿ, ಖಾಸಗೀಕರಣದ ವಿರುದ್ಧ ದೇಶವ್ಯಾಪಿ ಪ್ರತಿಭಟನಾ ಚಳುವಳಿ

ಆಗಸ್ಟ್ 15 ರಿಂದ 31ರ ವರೆಗೆ ದೇಶಾದ್ಯಂತ ಈ ಕೆಳಗಿನ ಆಗ್ರಹಗಳ ಮೇಲೆ ಚಳುವಳಿಗಳನ್ನು ಆರಂಭಿಸಲು ಜುಲೈ 24 ರಿಂದ 26 ರ ವರೆಗೆ ನವದೆಹಲಿಯಲ್ಲಿ ನಡೆದ ಸಿಪಿಐ(ಎಂ) ಕೇಂದ್ರ ಸಮಿತಿ ಸಭೆ ತನ್ನ ಎಲ್ಲ ಘಟಕಗಳಿಗೆ ಕರೆ ನೀಡಿದೆ :

  1. ತಕ್ಷಣವೇ ಸಾಲದ ಹೊರೆಯಿಂದ ಹತಾಶರಾಗಿ ಆತ್ಮಹತ್ಯೆಗಳತ್ತ ತಳ್ಳಲ್ಪಡುತ್ತಿರುವ ರೈತರಿಗೆ ಸಾಲಮನ್ನಾದ ಪರಿಹಾರ ಒದಗಿಸಬೇಕು.
  2. ಉತ್ಪಾದನಾ ಖರ್ಚಿನ ಒಂದೂವರೆ ಪಟ್ಟಿನ ಕನಿಷ್ಟ ಬೆಂಬಲ ಬೆಲೆ ಕೊಡುವ ಬಿಜೆಪಿಯ ಚುನಾವಣಾ ಭರವಸೆಯನ್ನು ಜಾರಿ ಮಾಡಬೇಕು.
  3. ಪ್ರತಿ ವರ್ಷ ಎರಡು ಕೋಟಿ ಉದ್ಯೋಗಗಳನ್ನು ನಿರ್ಮಿಸುವ ಚುನಾವಣಾ ಭರವಸೆಯನ್ನು ಜಾರಿಗೊಳಿಸಬೇಕು.
  4. ಸಾರ್ವಜನಿಕ ವಲಯ ಮತ್ತು ಸಾರ್ವಜನಿಕ ಸೇವೆಗಳ ವ್ಯಾಪಕ ಖಾಸಗೀಕರಣವನ್ನು ನಿಲ್ಲಿಸಬೇಕು.
  5. 2014 ರ ಚುನಾವಣೆಗಳಲ್ಲಿ ಭರವಸೆ ನೀಡಿದಂತೆ ಮಹಿಳಾ ಮೀಸಲಾತಿ ಮಸೂದೆಯನ್ನು ತಕ್ಷಣವೇ ಶಾಸನವಾಗಿ ಮಾಡಬೇಕು.

ಸೆಪ್ಟಂಬರ್ 1 ರಂದು ಪಕ್ಷದ ಎಲ್ಲ ಘಟಕಗಳು ವಿಶ್ವಶಾಂತಿ ಮತ್ತು ಸಾಮ್ರಾಜ್ಯಶಾಹಿ-ವಿರೋಧಿ ದಿನವನ್ನು ಆಚರಿಸಬೇಕು ಎಂದು ಕೇಂದ್ರ ಸಮಿತಿ ಕರೆ ನೀಡಿದೆ. ಈ ಸಂದರ್ಭದಲ್ಲಿ ಮೋದಿ ಸರಕಾರ ಅಮೆರಿಕನ್ ಸಾಮ್ರಾಜ್ಯಶಾಹಿಗೆ ಶರಣಾಗಿ, ಭಾರತವನ್ನು ಅಮೆರಿಕನ್ ಸಾಮ್ರಾಜ್ಯಶಾಹಿಯ ಕಿರಿಯ ಸಾಮರಿಕ ಮಿತ್ರನ ಮಟ್ಟಕ್ಕೆ ಇಳಿಸಿರುವುದರ ಮೇಲೆ ಒತ್ತು ನೀಡಬೇಕು. ಇಸ್ರೆಲಿಗೆ ಪ್ರಧಾನ ಮಂತ್ರಿಗಳ ಇತ್ತೀಚಿನ ಭೇಟಿ ಮತ್ತು ಒಂದು ಜಾಗತಿಕ ಅಮೆರಿಕ-ಇಸ್ರೆಲ್-ಭಾರತ ಅಕ್ಷವನ್ನು ರೂಪಿಸುವ ಬಿಜೆಪಿ ಸರಕಾರದ ಆಶಯ ಭಾರತ ಮತ್ತು ಅದರ ಜನತೆಯ ಹಿತಗಳಿಗೆ ಮಾರಕ ಎಂಬ ಸಂಗತಿಯನ್ನು ಒತ್ತಿ ಹೇಳಬೇಕು ಎಂದು ಅದು ಕರೆ ನೀಡಿದೆ.

* ಸೆಪ್ಟಂಬರ್ ತಿಂಗಳಲ್ಲಿ ದೇಶಾದ್ಯಂತ ಎಲ್ಲ ಪ್ರದೇಶ ಘಟಕಗಳಲ್ಲಿ ಎಲ್ಲ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಶಕ್ತಿಗಳನ್ನು ಅಣಿನೆರೆಸಿ ಕೋಮುವಾದ-ವಿರೋಧಿ ಕಾರ್ಯಕ್ರಮಗಳನ್ನು ರೂಪಿಸಲು ಮುತುವರ್ಜಿ ವಹಿಸಬೇಕು.

* ದಲಿತರು ಮತ್ತು ಮುಸ್ಲಿಮರ ವಿರುದ್ಧ ಹಲ್ಲೆಗಳನ್ನು ಬಲವಾಗಿ ಖಂಡಿಸುತ್ತ ಸಿಪಿಐ(ಎಂ) ಪಕ್ಷವು ದೇಶದ ಎಲ್ಲೆಡೆ ಜನಗಳನ್ನು ಅಣಿನೆರೆಸಿ ಗೋರಕ್ಷಕ ಸಮಿತಿಗಳನ್ನು ಮತ್ತು ನೈತಿಕ ಪೋಲೀಸ್‌ಗಿರಿ ಮುಂತಾದವನ್ನು ನಡೆಸುವ ಆರೆಸ್ಸೆಸ್-ಪ್ರಾಯೋಜಿತ ಖಾಸಗಿ ಪಡೆಗಳನ್ನು ನಿಷೇಧಿಸುವ ಕೇಂದ್ರಿಯ ಕಾನೂನನ್ನು ತರಬೇಕು ಎಂದು ಆಗ್ರಹಿಸಿ ಸೆಪ್ಟಂಬರ್ ನಲ್ಲಿ ಚಳುವಳಿಗಳನ್ನು ನಡೆಸಬೇಕು ಎಂದೂ ಕೇಂದ್ರ ಸಮಿತಿ ಕರೆ ನೀಡಿದೆ.

22ನೇ ಸಿಪಿಐ(ಎಂ) ಮಹಾಧಿವೇಶನ ಹೈದರಾಬಾದ್ ನಲ್ಲಿ

ಪಕ್ಷದ 22ನೇ ಮಹಾಧಿವೇಶನವನ್ನು ತೆಲಂಗಾಣ ರಾಜ್ಯದ ಹೈದರಾಬಾದ್ ನಲ್ಲಿ ಎಪ್ರಿಲ್ 2018ರಲ್ಲಿ ನಡೆಸಲು ಕೇಂದ್ರ ಸಮಿತಿ ನಿರ್ಧರಿಸಿದೆ.

ಪಶ್ಚಿಮ ಬಂಗಾಲ ರಾಜ್ಯಸಭಾ ಚುನಾವಣೆ

ಸಿಪಿಐ(ಎಂ) ಕೇಂದ್ರ ಸಮಿತಿ ಸಭೆಯಲ್ಲಿ ಸೀತಾರಾಮ್ ಯೆಚುರಿಯವರನ್ನು ರಾಜ್ಯಸಭೆಯ ಮೂರನೇ ಅವಧಿಗೆ ಸೂಚಿಸಬೇಕೆನ್ನುವ ಪಶ್ಚಿಮ ಬಂಗಾಲ ರಾಜ್ಯ ಸಮಿತಿಯ ಪ್ರಸ್ತಾವವನ್ನು ತಿರಸ್ಕರಿಸಿದೆ. ಪಶ್ಚಿಮ ಬಂಗಾಲದ ಪ್ರತಿಪಕ್ಷಗಳಿಗೆ ಒಪ್ಪಿಗೆಯಾಗುವ ಒಬ್ಬ ಸ್ವತಂತ್ರ ಅಭ್ಯರ್ಥಿಯನ್ನು ಕಣಕ್ಕಿಳಿಸಬಹುದು ಎಂಬ ಅಭಿಪ್ರಾಯವನ್ನು ಕೇಂದ್ರ ಸಮಿತಿ ವ್ಯಕ್ತಪಡಿಸಿತು. ಇದು ಸಾಧ್ಯವಾಗದಿದ್ದರೆ ಪಶ್ಚಿಮ ಬಂಗಾಳ ಎಡರಂಗ ಸಮಿತಿ ಸ್ಪರ್ಧಿಸುವ ಬಗ್ಗೆ ಪರಿಶೀಲಿಸುತ್ತದೆ ಎಂದು ಅದು ಹೇಳಿದೆ.

ಜನಗಳ ಮೇಲೆ ಸರ್ವತೋಮುಖ ದಾಳಿ

ದೇಶದಲ್ಲಿ ಬಿಜೆಪಿ ನೇತೃತ್ವದ ಸರಕಾರ ನಮ್ಮ ಬಹುಪಾಲು ಜನರ ಜೀವನಾಧಾರಗಳ ಮೇಲೆ ವ್ಯಾಪಕವಾಗಿ ದಾಳಿ ಮಾಡುತ್ತಿರುವುದನ್ನು ಕಾಣುತ್ತಿದೆ ಎಂದು ಕೇಂದ್ರ ಸಮಿತಿ ಪ್ರಸಕ್ತ ಸನ್ನಿವೇಶವನ್ನು ವಿಶ್ಲೇಷಿಸುತ್ತ ಹೇಳಿದೆ. ನಾಲ್ಮುಖದ ದಾಳಿಗಳು ನಡೆಯುತ್ತಿವೆ-ನಮ್ಮ ಬಹುಪಾಲು ಜನಗಳ ಮೇಲೆ ಹೆಚ್ಚೆಚ್ಚು ಸಂಕಟಗಳನ್ನು ಹೇರುವ ನವ-ಉದಾರವಾದಿ ಧೋರಣೆಗಳು; ದಲಿತರು ಮತ್ತು ಅಲ್ಪಸಂಖ್ಯಾತರ ಮೇಲೆ ಗೋರಕ್ಷರಂತಹ ಖಾಸಗಿ ಪಡೆಗಳಿಂದ ದಾಳಿಗಳ ಮೂಲಕ ತೀಕ್ಷ್ಣಗೊಳ್ಳುತ್ತಿರುವ ಕೋಮುವಾದಿ ಧ್ರುವೀಕರಣ; ಜನಗಳ ಪ್ರಜಾಪ್ರಭುತ್ವ ಹಕ್ಕುಗಳ ಮೇಲೆ ದಾಳಿ, ಆಮೂಲಕ ಸಂಸದೀಯ ಸಂಸ್ಥೆಗಳನ್ನು ಬುಡಮೇಲು ಮಾಡುತ್ತಿರುವುದು; ಮತ್ತು  ಭಾರತವನ್ನು ಮತ್ತಷ್ಟು ಗಟ್ಟಿಯಾಗಿ ಅಮೆರಿಕನ್ ಸಾಮ್ರಾಜ್ಯಶಾಹಿಯ ಕಿರಿಯ ಸಾಮರಿಕ ಮಿತ್ರನ ಮಟ್ಟಕ್ಕೆ  ಇಳಿಸಿರುವುದು, ಅದರಿಂದಾಗಿ ನಮ್ಮ ವಿದೇಶಾಂಗ ಧೋರಣೆಯಲ್ಲಿ ಪಲ್ಲಟ- ಇವೀಗ ಎದ್ದು ಕಾಣುತ್ತಿವೆ ಎಂದು ಕೇಂದ್ರ ಸಮಿತಿ ವಿಶ್ಲೇಷಿಸಿದೆ.

ಹೆಚ್ಚುತ್ತಿರುವ ಅಸಹಿಷ್ಣುತೆ: ಬಿಜೆಪಿಗೆ ತನ್ನ ಸ್ಥಾನವನ್ನು ಗಟ್ಟಿಗೊಳಿಸಲು ಸಾಧ್ಯವಾಗಿರುವುದು ಮುಖ್ಯವಾಗಿ ದೇಶದೆಲ್ಲೆಡೆಯಲ್ಲಿ ಕೋಮುವಾದಿ ಧ್ರುವೀಕರಣವನ್ನು  ಬೃಹತ್ ಪ್ರಮಾಣದಲ್ಲಿ ಗಟ್ಟಿಗೊಳಿಸುವ ಮೂಲಕವೇ. ಸಂಸದೀಯ ಪ್ರಜಾಪ್ರಭುತ್ವದ ಪ್ರತಿಯೊಂದು ಸಂಸ್ಥೆಯೊಳಕ್ಕೂ ನುಗ್ಗಿ ಅದನ್ನು ಕೋಮುಗ್ರಸ್ತಗೊಳಿಸಲಾಗುತ್ತಿದೆ. ಕೋಮುವಾದಿ ಧ್ರುವೀಕರಣವನ್ನು ತೀಕ್ಷ್ಣಗೊಳಿಸಲು ಶೈಕ್ಷಣಿಕ ಸಂಸ್ಥೆಗಳು, ಸಂಶೋಧನಾ ಸಂಸ್ಥೆಗಳು, ಪುರಾತತ್ವ ಸರ್ವೆ ಇಲಾಖೆಯಂತಹ ಸಂಸ್ಥೆಗಳೊಳಕ್ಕೆ ಆರೆಸ್ಸೆಸ್ ಮಂದಿಯನ್ನು ತೂರಿಸಿ ಇತಿಹಾಸವನ್ನು ತಿರುಚಲಾಗುತ್ತಿದೆ.

ಸಾರ್ವಜನಿಕ ಅವಕಾಶಗಳನ್ನೆಲ್ಲವನ್ನೂ ಕೋಮುಗ್ರಸ್ತಗೊಳಿಸುವ ಭರದ ಪ್ರಯತ್ನ ನಡೆಯುತ್ತಿದೆ. ಟಾಗೋರ್, ಗಾಲಿಬ್, ದಿನಕರ್, ಅವತಾರ್ ಸಿಂಗ್ ಪಾಶ್, ಉರ್ದು ಪದಗಳು, ಮೊಗಲರ ಬಗ್ಗೆ ಪ್ರಶಂಸೆ ಮುಂತಾದವುಗಳನ್ನು ಎನ್‌ಸಿಇಆರ್‌ಟಿ ಪಠ್ಯಪುಸ್ತಕಗಳನ್ನು ‘ಶುದ್ಧಿಕರಿಸಬೇಕೆಂದು ಆರೆಸ್ಸೆಸ್ ಕೂಗಾಡುತ್ತಿದೆ. ನೋಬೆಲ್ ಪ್ರಶಸ್ತಿ ವಿಜೇತ ಅಮಾರ್ತ್ಯ ಸೆನ್ ಅವರನ್ನು ಕುರಿತ ಡಾಕ್ಯುಮೆಂಟರಿ ಚಿತ್ರದಲ್ಲಿ ‘ಹಸು’, ‘ಗುಜರಾತ್’, ‘ಹಿಂದುತ್ವ’ ಮುಂತಾದ ಪದಗಳನ್ನು ತೆಗೆಯದೆ ಅದರ ಪ್ರದರ್ಶನಕ್ಕೆ ಅವಕಾಶ ಕೊಡುವುದಿಲ್ಲ ಎಂದು ಸೆನ್ಸಾರ್ ಮಂಡಳಿ ಅನುಮತಿ ನಿರಾಕರಿಸಿದೆ. ಈ ಎಲ್ಲದರ ಮೂಲಕ ದೇಶದಲ್ಲಿ ಒಂದು ಅಸಹಿಷ್ಣುತೆಯ ವಾತಾವರಣ ತೀವ್ರವಾಗಿ ಏರುತ್ತಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಅಭಿಪ್ರಾಯ ಪಟ್ಟಿದೆ.

ಇಂತಹ ಎಲ್ಲ ಖಾಸಗಿ ಪಡೆಗಳ ಸೇನೆಗಳ ಮೇಲೆ, ನಿರ್ದಿಷ್ಟವಾಗಿ ಗೋರಕ್ಷಕ ಸಮಿತಿಗಳ ಮೇಲೆ ಒಂದು ಕೇಂದ್ರಿಯ ನಿಷೇಧ ತರಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹಿಸಿದೆ.

ಜಾನುವಾರು ವ್ಯಾಪಾರದ ಮೇಲೆ ನಿಷೇಧದದ ಅಧಿಸೂಚನೆಗೆ ಮದ್ರಾಸ್ ಹೈಕೋರ್ಟ್ ತಡೆಯಾಜ್ಞೆಯನ್ನು ಅನುಸರಿಸಿ ಈಗ ಸುಪ್ರಿಂ ಕೋರ್ಟ್ ಕೂಡ ತಡೆಯಾಜ್ಞೆ ನೀಡಿದೆ. ತನ್ನ ಅಧಿಸೂಚನೆಯನ್ನು ಮಾರ್ಪಡಿಸಿ ನ್ಯಾಯಾಲಯದ ಮುಂದೆ ಮತ್ತೆ ಬರುವುದಾಗಿ ಬಿಜೆಪಿ ಸರಕಾರ ಸುಪ್ರಿಂ ಕೋರ್ಟಿಗೆ ಹೇಳಿದೆ. ಇದನ್ನು ಮಾರ್ಪಡಿಸುವ ಅಗತ್ಯವಿಲ್ಲ, ಅದಕ್ಕೆ ಅವಕಾಶವೂ ಇಲ್ಲ. ಅದನ್ನು ಸಾರಾಸಗಟು ಹಿಂದಕ್ಕೆ ತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹಿಸಿದೆ.

ಕಾರ್ಷಿಕ ಬಿಕ್ಕಟ್ಟು: ಈ ಅವಧಿಯಲ್ಲಿ ಕಾರ್ಷಿಕ ಬಿಕ್ಕಟ್ಟು ಉಲ್ಬಣಗೊಂಡಿದೆ. ದೇಶದ ವಿವಿಧೆಡೆಗಳಲ್ಲಿ ರೈತರ ಸ್ವಯಂ ಸ್ಫೂರ್ತ ಮತ್ತು ಸಂಘಟಿತ ಪ್ರತಿಭಟನೆಗಳು ಭುಗಿಲೆದ್ದಿವೆ. ರೈತರು ಹತಾಶರಾಗಿ ಆತ್ಮಹತ್ಯೆಗಿಳಿಯುತ್ತಿರುವ ವಿದ್ಯಮಾನ ಬೆಳೆಯುತ್ತಿರುವುದು ಇಂತಹ ಪ್ರತಿಭಟನೆಗಳು ಎದ್ದು ಬರುವಂತೆ ಮಾಡಿದೆ. ಮಧ್ಯಪ್ರದೇಶದ ಮಂದಸೌರ್‌ನಲ್ಲಿ ಪ್ರತಿಭಟಿಸುತ್ತಿದ್ದ ರೈತರ ಮೇಲೆ ಗೊಲೀಬಾರ್ ಮತ್ತು ಸುಮಾರಾಗಿ ಅದೇ ವೇಳೆಗೆ ಮಹಾರಾಷ್ಟ್ರದಲ್ಲಿ ರೈತರು ಘೋಷಿಸಿದ ಸಾರ್ವತ್ರಿಕ ಮುಷ್ಕರ ಕರ್ಷಕ ಸಂಕಟದ ಪ್ರಶ್ನೆಯನ್ನು ರಾಷ್ಟ್ರೀಯ ಗಮನಕ್ಕೆ ತಂದಿದೆ ಎಂದಿರುವ ಸಿಪಿಐ(ಎಂ) ಕೇಂದ್ರ ಸಮಿತಿ, ಮೋದಿ ಸರಕಾರ ತಾನು ನೀಡಿದ ಚುನಾವಣಾ ವಚನವನ್ನು ಮುರಿದು ವಿಶ್ವಾಸಘಾತ ಮಾಡಿದೆ ಎಂದು ಆಪಾದಿಸಿದೆ. ಕೃಷಿ ಉತ್ಪನ್ನಗಳಿಗೆ ಕೃಷಿ ಖರ್ಚುಗಳು ಮತ್ತು ಬೆಲೆಗಳ ಆಯೋಗ ಅಂದಾಜುಪಡಿಸುವ ಉತ್ಪಾದನಾ ಖರ್ಚಿನ ಒಂದೂವರೆ ಪಟ್ಟಿಗಿಂತ ಹೆಚ್ಚಿನ ಮಟ್ಟದಲ್ಲಿ ಕನಿಷ್ಟ ಬೆಂಬಲ ಬೆಲೆಯನ್ನು ಲಭ್ಯಗೊಳಿಸಲಾಗುವುದು ಎಂದು ಬಿಜೆಪಿ ಲೋಕಸಭಾ ಚುನಾವಣೆಗಳ ಸಂದರ್ಭದಲ್ಲಿ ಆಶ್ವಾಸನೆ ನೀಡಿತ್ತು.

ಈ ಮೂರು ವರ್ಷಗಳ ವಿಶ್ವಾಸಘಾತದ ಹಿನ್ನೆಲೆಯಲ್ಲಿ ರೈತರಿಗೆ ತಮ್ಮ ಬೆಳೆಗಳನ್ನು ಮೇಲೆ ಹೇಳಿದ ಕನಿಷ್ಟ ಬೆಂಬಲ ಬೆಲೆಗಳಿಗಿಂತ ಹೆಚ್ಚಿನ ದರಗಳಲ್ಲಿ ಮಾರುವ ಹಕ್ಕನ್ನು ಕೊಡುವ ಒಂದು ಶಾಸನವನ್ನು ಸಂಸತ್ತಿನಲ್ಲಿ ತರಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹಿಸಿದೆ. ಹೀಗೆ ಮಾಡುವುದರ ಅರ್ಥ ರೈತ ತನ್ನ ಉತ್ಪನ್ನವನ್ನು ತಂದಾಗ ಅದನ್ನು ಆತನಿಗೆ ಕಾನೂನು ಪ್ರಕಾರ ಸಿಗಬೇಕಾದ ಬೆಲೆಗಳನ್ನು ತೆತ್ತು ಖರೀದಿಸುವುದಲ್ಲದೆ ಸರಕಾರಕ್ಕೆ ಬೇರೆ ಆಯ್ಕೆ ಇರುವುದಿಲ್ಲ ಎಂದು ಸಿಪಿಐ(ಎಂ) ಹೇಳಿದೆ.

ಬೆಳೆಯುತ್ತಿರುವ ನಿರುದ್ಯೋಗ: ನೋಟು ರದ್ಧತಿ ಆರ್ಥಿಕ ವ್ಯವಸ್ಥೆಯ ಅನೌಪಚಾರಿಕ ವಲಯವನ್ನು ಸಂಪೂರ್ಣವಾಗಿ ಕುಂಠಿತಗೊಳಿಸಿದ್ದರಿಂದಾಗಿ ದಿನಗೂಲಿಯ ಅಥವಾ ವಾರದ ಕೂಲಿಯ ಉದ್ಯೊಗ ಮಾಡಿ ಬದುಕು ಸಾಗಿಸಬೇಕಾಗಿರುವ ಅಪಾರ ಜನಸಮೂಹವನ್ನು ಬೀದಿಗೆಸೆದಂತಾಗಿದೆ. ಸಂಘಟಿತ ವಲಯದಲ್ಲೂ ಉದ್ಯೊಗಾವಕಾಶಗಳಲ್ಲಿ ತೀವ್ರ ಇಳಿಕೆಯಾಗಿದೆ. ಕಳೆದ ಕೇಂದ್ರ ಸಮಿತಿ ಸಭೆಯ ನಂತರ ಪ್ರಕಟವಾಗಿರುವ ಸಿಎಂಐಇ(ಭಾರತೀಯ ಆರ್ಥಿಕದ ಮೇಲ್ವಿಚಾರಣಾ ಕೇಂದ್ರ) ಮಾಹಿತಿಯ ಪ್ರಕಾರ ಜನವರಿ-ಎಪ್ರಿಲ್ 2016 ರಿಂದ ಜನವರಿ-ಎಪ್ರಿಲ್ 2017ರ ನಡುವೆ ಔಪಚಾರಿಕ ಉದ್ಯೊಗ 9.3 ಕೊಟಿಯಿಂದ 8.6 ಕೋಟಿಗೆ ಇಳಿದಿದೆ, ಅಂದರೆ 70ಲಕ್ಷ ಮಂದಿ ತಮ್ಮ ಉದ್ಯೋಗ ಕಳೆದುಕೊಂಡಿದ್ದಾರೆ. ಮನರೇಗಾಕ್ಕೆ ನೀಡುವ ಹಣದಲ್ಲಿ ಕಡಿತವಾಗುತ್ತಲೇ ಇದೆ, ಅಂದರೆ ಗ್ರಾಮೀಣ ಉದ್ಯೋಗವೂ ಮತ್ತಷ್ಟು ಇಳಿಯುತ್ತಿದೆ. ಸೇವಾ ವಲಯದಿಂದ ಬಂದಿರುವ ವರದಿಗಳ ಪ್ರಕಾರ ಗ್ರಾಮೀಣ ಭಾರತದಲ್ಲಿ ಹೊಸ ಉದ್ಯೋಗಗಳು ಮೂಡಿ ಬರುವ ಲಕ್ಷಣಗಳಿಲ್ಲ.

ತಾವು ಸರಕಾರ ರಚಿಸಿದರೆ ಪ್ರತಿವರ್ಷ 2 ಕೋಟಿ ಉದ್ಯೊಗತಗಳನ್ನು ನಿರ್ಮಿಸುವುದಾಗಿ ಮೋದಿ ಸರಕಾರ ಆಶ್ವಾಸನೆ ನೀಡಿತ್ತು. ಅದರ ಬದಲು ನಾವಿಂದು ಕಾಣುತ್ತಿರುವುದು ದೊಡ್ಡ ಪ್ರಮಾಣದಲ್ಲಿ ಉದ್ಯೊಗಾವಕಾಶಗಳ ಇಳಿಕೆ. ಪ್ರತಿವರ್ಷ 1.5 ಕೋಟಿಯಷ್ಟು ಯುವಜನ ಉದ್ಯೋಗ ಮಾರುಕಟ್ಟೆಯನ್ನು ಪ್ರವೇಶಿಸುತ್ತಿರುವಾಗ ಇಂತಹ ಪರಿಸ್ಥಿತಿ ಯುವಜನರಲ್ಲಿ ಅಸಂತೋಷವನ್ನು ಉಂಟು ಮಾಡುತ್ತಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಗಮನಿಸಿದೆ.

ಸಾರ್ವಜನಿಕ ವಲಯದ ಘಟಕಗಳ ಖಾಸಗೀಕರಣ: ನೀತಿ ಆಯೋಗದ ಶಿಫಾರಸಿನಂತೆ, ಈ ಬಿಜೆಪಿ ಸರಕಾರ ದೊಡ್ಡಪ್ರಮಾಣದಲ್ಲಿ ಸಾರ್ವಜನಿಕ ವಲಯದ ಖಾಸಗೀಕರಣಕ್ಕೆ ಅಣಿಯಾಗುತ್ತಿದೆ. ನೀತಿ ಆಯೋಗವನ್ನು ಕಾರ್ಪೊರೇಟ್ ವಲಯ ಸಂಪೂರ್ಣವಾಗಿ ಹೈಜಾಕ್ ಮಾಡಿದೆ, ಅದರ ಎಲ್ಲ ಪ್ರಸ್ತಾವಗಳೂ ಅಂರ‍್ರಾಷ್ಟ್ರೀಯ ಹಣಕಾಸು ಬಂಡವಾಳ ಮತ್ತು ದೊಡ್ಡ ದೇಶೀ ಕಾರ್ಪೊರೇಟ್ ಮನೆತನಗಳ ನವ-ಉದಾರವಾದಿ ಆರ್ಥಿಕ ಸುಧಾರಣೆಗಳ ದಿಕ್ಕಿನಲ್ಲಿ ಮಾಡುತ್ತಿರುವ ಆಗ್ರಹಗಳಿಗೆ ಅನುಗುಣವಾಗಿಯೇ ಇವೆ. ಬೆಲೆಬಾಳುವ ಸಾರ್ವಜನಿಕ ಆಸ್ತಿಗಳನ್ನು ವಿದೇಶಿ ಮತ್ತು ದೇಶೀ ಖಾಸಗಿ ಬಂಡವಾಳಕ್ಕೆ ಅತ್ಯಂತ ಅಗ್ಗವಾಗಿ ವಹಿಸಿಕೊಡುವುದು ಈ ಸರಕಾರ ಅನುಸರಿಸುತ್ತಿರುವ ಉಗ್ರ ನವ-ಉದಾರವಾದಿ ಸುಧಾರಣೆಗಳ ಭಾಗವೇ ಆಗಿದೆ.

ರಕ್ಷಣಾ ಉತ್ಪಾದನಾ ಕೇಂದ್ರಗಳ ಖಾಸಗೀಕರಣದ  ದೊಡ್ಡ ಪ್ರಯತ್ನ ಆಗಲೇ ಆರಂಭವಾಗಿದೆ. ಇದು ವಿದೇಶಿ ರಕ್ಷಣಾ ಉಪಕರಣಗಳನ್ನು ಉತ್ಪಾದಿಸುವ ಕಾರ್ಪೊರೇಟ್‌ಗಳಿಗೆ ದೊಡ್ಡ ಬಕ್ಷೀಸು ಒದಗಿಸುವುದಲ್ಲದೆ, ಭಾರತದ ಭದ್ರತೆಗೂ ಒಂದು ಗಂಭೀರ ಬೆದರಿಕೆಯನ್ನು ಒಡ್ಡುತ್ತದೆ. ಏರ್ ಇಂಡಿಯಾದ ಖಾಸಗೀಕರಣದ ಪ್ರಕ್ರಿಯೆ ಆರಂಭವಾಗಿದೆ. ನಮ್ಮ ದೇಶವನ್ನು ಮತ್ತು ಜನತೆಯನ್ನು ಒಂದುಗೂಡಿಸುವ ಜೀವನಾಡಿಯಾದ ಭಾರತೀಯ ರೈಲ್ವೆಯನ್ನು ಈಗ ಖಾಸಗೀಕರಿಸುವ ಪ್ರಯತ್ನ ನಡೆದಿದೆ. ಕೋಟ್ಯಂತರ ಭಾರತೀಯರಿಗೆ ರೈಲ್ವೆಯು ಪ್ರಯಾಣ, ಜೀವನಾಧಾರ ಮತ್ತು ಸಂಪರ್ಕದ ಏಕಮಾತ್ರ ಜೀವನಾಡಿ. ಇದರ ಖಾಸಗೀಕರಣ ಅವರ ಮೇಲೆ ತೀವ್ರ ಹೊರೆಗಳನ್ನು ಹಾಕಲಿದೆ ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಹೇಳಿದೆ.

ಹಣಕಾಸು ವಲಯದಲ್ಲಿ ಸರಕಾರ ತರಬೇಕೆಂದಿರುವ ಹೊಸ ಎಫ್‌ಆರ್‌ಡಿಐ ಶಾಸನ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳನ್ನು ಯಾವುದೇ ರೀತಿಯ ಸಾರ್ವಜನಿಕ ಪರೀಕ್ಷಣೆ ಮತ್ತು ಸಾಮಾಜಿಕ ಹತೋಟಿಯಿಂದ ಸಂಪೂರ್ಣವಾಗಿ ಹೊರಗಿಡುತ್ತದೆ.

ಆಧಾರ್ ಮತ್ತು ಏಕಾಂತತೆಯ ಹಕ್ಕು:  ಏಕಾಂತತೆ ಒಬ್ಬ ವ್ಯಕ್ತಿಯ ಮೂಲಭೂತ ಹಕ್ಕು ಎಂಬ ಪ್ರಶ್ನೆಯ ಬಗ್ಗೆ ಸುಪ್ರಿಂ ಕೋರ್ಟಿನ ಒಂದು ಸಂವಿಧಾನ ಪೀಠ ಪರಿಶೀಲಿಸುತ್ತಿದೆ. ಈ ಹಕ್ಕಿನ ಮೇಲೆ ತರ್ಕಬದ್ಧ ನಿರ್ಬಂಧಗಳಿರಬೇಕು, ಆಧಾರ್‌ಗೆ ತಗೊಂಡಿರುವ ಜೈವಿಕ ಮಾಪನಗಳ ವೈಯಕ್ತಿಕ ಮಾಹಿತಿಗಳನ್ನು ನಿರ್ದಿಷ್ಟ ಪರಿಸ್ತಿತಿಗಳಲ್ಲಿ, ಸ್ಪಷ್ಟವಾಗಿ ನಿರೂಪಿತ ಕಾರಣಗಳಿಗಾಗಿ ಪಡೆಯುವಂತಾಗಬೇಕು ಎಂದು ಈ ಬಿಜೆಪಿ ಸರಕಾರ ಹೇಳುತ್ತಿದೆ.

ಇಲ್ಲಿರುವುದು ಭಯೋತ್ಪಾದನೆಯ ವಿರುದ್ಧ ಹೋರಾಡುವಲ್ಲಿಯೋ ಅಥವ ಆಂತರಿಕ ಭದ್ರತೆಗಾಗಿಯೋ ಒಬ್ಬ ವ್ಯಕ್ತಿಯ ಏಕಾಂತತೆಯನ್ನು ಉಲ್ಲಂಘಿಸುವ ಪ್ರಶ್ನೆ ಅಲ್ಲ ಎಂದಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಇಂದಿನ ಜಗತ್ತಿನಲ್ಲಿ ಈ ವಯಕ್ತಿಕ ಮಾಹಿತಿಗಳನ್ನು ದೊಡ್ಡ ಜಾಗತಿಕ ಕಾರ್ಪೊರೇಟ್‌ಗಳು ಮತ್ತು ಭಾರತೀಯ ಕಾರ್ಪೊರೇಟ್‌ಗಳು ತಮ್ಮ ಲಾಭಗಳನ್ನು ಹಿಗ್ಗಿಸಿಕೊಳ್ಳಳು ಹಾಗೂ ವ್ಯಕ್ತಿಗಳಿಗೆ ಕಿರುಕುಳ ಕೊಡಲು ಪಡೆಯುತ್ತವೆ ಎಂಬ ಪ್ರಶ್ನೆ  ಇಲ್ಲಿದೆ ಎಂದಿದೆ.  ಪ್ರತಿಯೊಬ್ಬ ವ್ಯಕ್ತಿಗೆ ಇಂತಹ ದುಡ್ಡು ಮಾಡುವ ಕಾರ್ಪೊರೇಟ್ ಚಟುವಟಿಕೆಗಳಿಂದ ರಕ್ಷಣೆ ಕೊಡುವ ಅಗತ್ಯವಿದೆ. ಆದ್ದರಿಂದ ಸರಕಾರ ವ್ಯಕ್ತಿಗಳ ಏಕಾಂತತೆಗೆ ರಕ್ಷಣೆ ಒದಗಿಸುವ ಮತ್ತು ಇತ್ತೀಚೆಗೆ ಜಿಯೋ ವೆಬ್‌ತಾಣಗಳಿಂದ ಆಧಾರ್ ಮಾಹಿತಿಯನ್ನು ಉಲ್ಲಂಫಿಸಿದ ಉದಾರಣೆಯಲ್ಲಿ ಕಂಡಿರುವಂತೆ ಯಾವುದೇ ಉಲ್ಲಂಘನೆಗೆ ಶಿಕ್ಷೆಯನ್ನು ಸ್ಪಷ್ಟವಾಗಿ ವಿಧಿಸುವ ಒಂದು ಹೊಸ ಕಾನೂನನ್ನು ತರಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹಿಸಿದೆ.

ಕೇರಳ: ಆರೆಸ್ಸೆಸ್ ಅಪಪ್ರಚಾರ

ಕೇರಳದಲ್ಲಿ ಎಲ್‌ಡಿಎಫ್ ಸರಕಾರ ಬಂದಂದಿನಿಂದ ಇದುವರೆಗೆ ಆರೆಸ್ಸೆಸ್ ಹಲ್ಲೆಗಳಲ್ಲಿ 13 ಸಂಗಾತಿಗಳ ಕೊಲೆಯಾಗಿದೆ, 200ಕ್ಕೂ ಹೆಚ್ಚು ಪಕ್ಷದ ಸದಸ್ಯರು ಮತ್ತು ಹಿತೈಷಿಗಳು ಗಾಯಗೊಂಡಿದ್ದಾರೆ, ಆಸ್ಪತ್ರೆ ಸೇರಿಸಬೇಕಾಗಿ ಬಂದಿದೆ, 150ಕ್ಕೂ ಹೆಚ್ಚು ಮನೆಗಳು ಮತ್ತು 50ಕ್ಕೂ ಹೆಚ್ಚು ಪಕ್ಷದ ಕಚೇರಿಗಳ ಮೇಲೆ ದಾಳಿ ನಡೆದಿದೆ, ಹಾಳುಗೆಡವಲಾಗಿದೆ ಅಥವಾ ಬೆಂಕಿ ಹಚ್ಚಲಾಗಿದೆ.

ಯುಡಿಎಫ್ ಸರಕಾರದ ಐದು ವರ್ಷಗಳಲ್ಲಿ ಆರೆಸ್ಸೆಸ್ ಗೂಂಡಾಗಳು ನಮ್ಮ 27 ಸಂಗಾತಿಗಳನ್ನು ಕೊಂದಿದ್ದರು. ಇಂತಹ ದಾಳಿಗಳು ಈಗಲೂ ಮುಂದುವರೆಯುತ್ತಿವೆ, ಆದರೆ ಸಿಪಿಐ(ಎಂ) ಅತ್ಯಾಚಾರ ನಡೆಸುತ್ತಿದೆ ಎಂದು ಆಧಾರರಹಿತವಾಗಿ ಆಪಾದಿಸಲಾಗುತ್ತಿದೆ ಎಂದಿರುವ ಸಿಪಿಐ(ಎಂ) ಕೇಂದ್ರ ಸಮಿತಿ , ಇದು ಅವರ ಕೊಲೆ ಮತ್ತು ಹಿಂಸಾಚಾರದ ಕೃತ್ಯಗಳನ್ನು ಮರೆಮಾಚಲಿಕ್ಕಾಗಿ ಎಂದು ಹೇಳಿದೆ.

ತ್ರಿಪುರಾದಲ್ಲಿ ಬಿಜೆಪಿ ಪಿತೂರಿಗಳು

ತ್ರಿಪುರ ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗಳಿಗೆ ತಯಾರಿಯಾಗಿ ಆರೆಸ್ಸೆಸ್-ಬಿಜೆಪಿ ಎಡರಂಗ ಸರಕಾರವನ್ನು ಅಸ್ಥಿರಗೊಳಿಸಲು ಸರ್ವಪ್ರಯತ್ನ ನಡೆಸುತ್ತಿವೆ. ಬುಡಕಟ್ಟು ಜನಗಳು ಮತ್ತು ಇತರರ ನಡುವೆ ಧ್ರುವೀಕರಣ ಸೃಷ್ಟಿಸುವ ಪ್ರಯತ್ನಗಳನ್ನು ಅವರು ತೀವ್ರಗೊಳಿಸುತ್ತಿದ್ದಾರೆ ಎಂದಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಇತ್ತೀಚೆಗೆ ಐಪಿಎಫ್‌ಟಿ  ಹೆದ್ದಾರಿಯಲ್ಲಿ ಸಂಚಾರವನ್ನು ಸ್ತಬ್ಧಗೊಳಿಸಿದಾಗ ಅದನ್ನು ತ್ರಿಪುರಾ ಸಿಪಿಐ(ಎಂ) ಮತ್ತು ರಾಜ್ಯ ಸರಕಾರ ನಿಭಾಯಿಸಿದ ರೀತಿಯ ಬಗ್ಗೆ ತೃಪ್ತಿವ್ಯಕ್ತಪಡಿಸಿದೆ.

ಬಿಜೆಪಿಯ ನಿರಂತರ ದಾಳಿಗಳನ್ನು ಎದುರಿಸಲು ಮತ್ತು ಮುಂದಿನ ಚುನಾವಣೆಗಳಿಗೆ ಪಕ್ಷದ ತ್ರಿಪರಾ ರಾಜ್ಯ ಸಮಿತಿ ನಡೆಸುತ್ತಿರುವ ಸಿದ್ಧತೆಗಳ ಬಗ್ಗೆ ವರದಿಯನ್ನು ಆಲಿಸಿದ ಸಿಪಿಐ(ಎಂ) ಕೇಂದ್ರ ಸಮಿತಿ ತ್ರಿಪುರಾದ ಶಾಂತಿಪ್ರಿಯ ಜನತೆ ಬಿಜೆಪಿಯ ಹಿಂಸಾಚಾರದ ದಾಂಧಲೆಗಳ ಬಗ್ಗೆ ಜಾಗೃತಗೊಂಡು, ಅದು ನಡೆಸುತ್ತಿರುವ ಈ ಎಲ್ಲ ಪಿತೂರಿಗಳನ್ನು ವಿಫಲಗೊಳಿಸುತ್ತಾರೆ ಮತ್ತು  ಎಡರಂಗದಲ್ಲಿ ತಮ್ಮ ವಿಶ್ವಾಸವನ್ನು ಪುನರುಚ್ಚರಿಸುತ್ತಾರೆ. ಮುಂಬರುವ ಚುನಾವಣೆಗಳಲ್ಲಿ ಎಡರಂಗದ ಅಭ್ಯರ್ಥಿಗಳನ್ನು ಮತ್ತೊಮ್ಮೆ ಆಯ್ಕೆ ಮಾಡುತ್ತಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದೆ.

ಕೇರಳ ಮತ್ತು ತ್ರಿಪುರ-ಅತ್ಯುತ್ತಮ ಶಿಕ್ಷಣ, ಆರೋಗ್ಯ ಸೂಚ್ಯಂಕಗಳು

ಭಾರತ ಸರಕಾರದ ಇತ್ತೀಚಿನ ಮಾಹಿತಿಗಳ ಪ್ರಕಾರ ಕೇರಳ ಮತ್ತು ತ್ರಿಪುರ ಅತ್ಯುತ್ತಮ ಶಿಕ್ಷಣ ಮತ್ತು ಆರೋಗ್ಯದ ಸೂಚ್ಯಂಕಗಳನ್ನು ಸಾಧಿಸಿರುವ ರಾಜ್ಯಗಳು. 96% ಸಾಕ್ಷರತೆ ಮತ್ತು ಸರಾಸರಿ ಆಯಸ್ಸು- ಪುರುಷರು 71 ವರ್ಷ, ಮಹಿಳೆಯರು 73 ವರ್ಷದೊಂದಿಗೆ ತ್ರಿಪುರ ಇಡೀ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಸಿಪಿಐ(ಎ೦), ಎಡರಂಗ ಸರಕಾರಗಳು ಜಾರಿ ಮಾಡುತ್ತಿರುವ ಈ ಜನಪರ ಪ್ರಗತಿಶೀಲ ಧೋರಣೆಗಳೇ ಬಿಜೆಪಿಯ ದಾಳಿಯ ಗುರಿಗಳು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಟೀಕಿಸಿದೆ.

ಕಾಶ್ಮೀರ- ಆಶ್ವಾಸನೆಗಳನ್ನು ಈಡೇರಿಸಿಲ್ಲ

ಗೃಹಮಂತ್ರಿಗಳ ನೇತೃತ್ವದ ಸರ್ವಪಕ್ಷ ಸಂಸದೀಯ ನಿಯೋಗ ಕಾಶ್ಮೀರಕ್ಕೆ ಭೇಟಿ ನೀಡಿ ಬಂದ ನಂತರ ಕಾಶ್ಮೀರದ ಜನತೆಗೆ, ಭಾರತದ ಸಂಸತ್ತಿಗೆ ಮತ್ತು ದೇಶಕ್ಕೆ ನೀಡಿದ್ದ ಎರಡೂ ಆಶ್ವಾಸನೆಗಳನ್ನು ಈಡೇರಿಸಿಲ್ಲೆಂದು ಕೇಂದ್ರ ಸಮಿತಿ ಗಮನಿಸಿತು. ಪೆಲೆಟ್‌ಗನ್‌ಗಳನ್ನು ಬಳಸದಿರುವುದು, ಕಾಶ್ಮೀರಿ ಯುವಜನತೆಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದು ಇತ್ಯಾದಿ ವಿಶ್ವಾಸ ಕುದುರಿಸುವ ಕ್ರಮಗಳನ್ನು ಕೈಗೊಳ್ಳುವುದಾಗಿ ಮತ್ತು ಅದರೊಂದಿಗೇ ಸಂಬಂಧಪಟ್ಟ ಎಲ್ಲರೊಂದಿಗೆ ಒಂದು ರಾಜಕೀಯ ಸಂವಾದವನ್ನು ಆರಂಭಿಸುವುದಾಗಿ ಸರಕಾರ ಆಗ ಪ್ರಕಟಿಸಿತ್ತು. ಈಗ ಆರು ತಿಂಗಳಾದರೂ ಈ ಎರಡು ಆಶ್ವಾಸನೆಗಳಿಗೆ ಸಂಬಂಧಪಟ್ಟಂತೆ ಒಂದೇ ಒಂದು ಹೆಜ್ಜೆಯನ್ನೂ ಮುಂದಿಟ್ಟಿಲ್ಲ. ಇದು ಕಾಶ್ಮೀರಿ ಜನತೆಯಲ್ಲಿ ಪರಕೀಯ ಭಾವ ಮತ್ತಷ್ಟು ಹೆಚ್ಚುವಲ್ಲಿ ದೊಡ್ಡ ಪಾತ್ರ ವಹಿಸಿದೆ ಎಂದು ಕೇಂದ್ರ ಸಮಿತಿ ಖೇದ ವ್ಯಕ್ತಪಡಿಸಿದೆ.

ಕೇಂದ್ರ ಸರಕಾರ ಸಂಬಂಧಪಟ್ಟ ಎಲ್ಲರೊಂದಿಗೆ ಒಂದು ರಾಜಕೀಯ ಸಂವಾದವನ್ನು ಆರಂಭಿಸುವಂತೆ ಆಗ್ರಹಿಸಲು ಸಾಧ್ಯವಾದಷ್ಟು ವ್ಯಾಪಕವಾಗಿ ರಾಜಕೀಯ ಶಕ್ತಿಗಳನ್ನು ಮತ್ತು ಜನತಾ ಆಂದೋಲನಗಳನ್ನು ಒಟ್ಟಿಗೆ ತರುವ ತನ್ನ ಪ್ರಯತ್ನಗಳನ್ನು ಸಿಪಿಐ(ಎಂ) ಮುಂದುವರಿಸತ್ತದೆ ಎಂದು ಕೇಂದ್ರ ಸಮಿತಿ ಹೇಳಿದೆ.

Leave a Reply

Your email address will not be published. Required fields are marked *