ಸಿಪಿಐ(ಎಂ) ಕೇಂದ್ರ ಸಮಿತಿ ಜುಲೈ 1, 2017ರಿಂದ ಜಾರಿಗೆ ತಂದಿರುವ ಸರಕು ಮತ್ತು ಸೇವಾ ತೆರಿಗೆ(ಜಿಎಸ್ಟಿ)ಯ ಪ್ರತಿಕೂಲ ಪರಿಣಾಮಗಳ ಬಗ್ಗೆ ಆಳವಾದ ಆತಂಕ ವ್ಯಕ್ತಪಡಿಸಿದೆ. ಜುಲೈ 24 ರಿಂದ 26 ರವರೆಗೆ ದಿಲ್ಲಿಯಲ್ಲಿ ಸಭೆ ಸೇರಿದ ಕೇಂದ್ರ ಸಮಿತಿ ಈ ಕುರಿತಂತೆ ಒಂದು ಪ್ರತ್ಯೇಕ ಠರಾವನ್ನೇ ಅಂಗೀಕರಿಸಿದೆ.
ಜಿಎಸ್ಟಿ ಜನಸಾಮಾನ್ಯರು, ಸಣ್ಣ ಮತ್ತು ಪುಟ್ಟ ಉದ್ದಿಮೆಗಳು, ವ್ಯಾಪಾರಸ್ಥರು ಮತ್ತು ಅಸಂಘಟಿತ ವಲಯದ ವೃತ್ತಿಗಳ ಮೇಲೆ ಹೊಸ ಹೊರೆಗಳನ್ನು ಹಾಕಿದೆ. ಜವಳಿ, ಬೀಡಿ, ಔಷಧಿಗಳು, ಕಟ್ಟಡ ನಿರ್ಮಾಣ, ಸಾರಿಗೆ, ಹೊಲಿಗೆ, ಸಣ್ಣ ಪತ್ರಿಕೆಗಳು, ಬೆಂಕಿಪೊಟ್ಟಣಗಳು, ಮತ್ತು ಸುಡುಮದ್ದುಗಳ ಮೇಲೂ ಬಹಳ ಕೆಟ್ಟ ಪರಿಣಾಮ ಉಂಟಾಗಿದೆ; ಕೃಷಿ ಮತ್ತು ಸಂಬಂಧಿತ ವಲಯಗಳ ಮೇಲೂ ದುಷ್ಪರಿಣಾಮ ಉಂಟಾಗಿದೆ. ಜಿಎಸ್ಟಿ ಹಲವು ಸರಕುಗಳ ಬೆಲೆಗಳನ್ನು ಕೆಳಕ್ಕೆ ತಂದಿದೆ ಎಂದು ಸರಕಾರ ಹೇಳಿಕೊಂಡರೂ ನಿಜ ಸಂಗತಿಯೆಂದರೆ ಅಸಮ ತೆರಿಗೆ ರಚನೆಯಿಂದಾಗಿ ಹಲವು ಸರಕುಗಳು ಮತ್ತು ಸೇವೆಗಳ ಬೆಲೆಗಳು ಏರಿವೆ.
ಪರೋಕ್ಷ ತೆರಿಗೆಗಳ ಪ್ರಮಾಣವನ್ನು ಹೆಚ್ಚಿಸಲಾಗಿದೆ. ಈಗ ಜಾರಿಗೆ ತಂದಿರುವ ಜಿಎಸ್ಟಿಯು ಮೋದಿ ಸರಕಾರದ ನವ-ಉದಾರವಾದಿ ಧಾವಂತದ ಒಂದು ಭಾಗವಾಗಿದೆ ಎಂದು ಕೇಂದ್ರ ಸಮಿತಿ ಹೇಳಿದೆ.
ಜಿಎಸ್ಟಿ ಸಂರಚನೆ ಕಾರ್ಪೊರೇಟ್ಗಳಿಗೆ ಅನುಕೂಲ ಕಲ್ಪಿಸುವತ್ತಲೇ ಒತ್ತು ನೀಡುವಂತಿದೆ. ಎಲ್ಲಿ ತೆರಿಗೆ ದರಗಳು ಇಳಿದಿವೆಯೋ ಅದರ ಪ್ರಯೋಜನವನ್ನು ಬಳಕೆದಾರರಿಗೆ ವರ್ಗಾಯಿಸುತ್ತಿಲ್ಲ, ಬದಲಿಗೆ ಅದರಿಂದ ಕಾರ್ಪೊರೇಟ್ಗಳಿಗೆ ಲಾಭದ ಸುರಿಮಳೆಯಾಗುತ್ತಿದೆ ಎಂದು ಗಮನಿಸಿರುವ ಕೇಂದ್ರ ಸಮಿತಿ, ನಿರ್ದಿಷ್ಟವಾಗಿ, ಅಂಗವಿಕಲರು ಬಳಸುವ ಸಾಧನಗಳ ಮೇಲೆ 5%, ಸ್ಯಾನಿಟರಿ ನ್ಯಾಪ್ಕಿನ್ಗಳ ಮೇಲೆ 12%, ಎಸಿ ಮತ್ತು ಎಸಿಯೇತರ ರೆಸ್ಟೊರೆಂಟ್ಗಳಲ್ಲಿ ಅನುಕ್ರಮವಾಗಿ 18% ಮತ್ತು 12%, ಮತ್ತು ಅಗತ್ಯ ಔಷಧಿಗಳ ಮೇಲೆ ಜಿಎಸ್ಟಿ. ಇವೆಲ್ಲ ಸಮರ್ಥನೀಯವಲ್ಲ ಎಂದು ಅಭಿಪ್ರಾಯ ಪಟ್ಟಿದೆ.
ಕೃತ್ರಿಮ ನೂಲಿನ ಮೇಲೆ 18% ತೆರಿಗೆಯಿಂದಾಗಿ ಹೆಚ್ಚಾಗಿ ಬಡ ಹೆಂಗಸರೇ ಉಡುವ ಸಿಂಥೆಟಿಕ್ ಸೀರೆಗಳು ಹೆಚ್ಚು ವೆಚ್ಚದಾಯಕವಾಗಿವೆ. ಕಲ್ಲಿದ್ದಲೇತರ ಗಣಿಗಾರಿಕೆ, ಬೀಡಿ, ಸಿನೆಮಾ ಮುಂತಾದ ವಲಯಗಳಲ್ಲಿ ಕಲ್ಯಾಣಕಾರಿ ಸೆಸ್ಗಳು ಜಿಎಸ್ಟಿಯೊಳಗೆ ಸೇರಿ ಹೋಗಿರುವುದರಿಂದ ಈ ವಲಯಗಳಲ್ಲಿನ ಕಾರ್ಮಿಕರ ಕಲ್ಯಾಣ/ ಸಾಮಾಜಿಕ ಭದ್ರತೆಗೆ ಸಂಚಕಾರ ಬಂದಿದೆ. ಸ್ವಚ್ಛ ಇಂಧನ ಮತ್ತು ಕಾರ್ಬನ್ ತೆರಿಗೆಯ ಸೆಸ್ಗಳನ್ನು ರಾಜ್ಯ ಜಿಎಸ್ಟಿ ಪರಿಹಾರದತ್ತ ತಿರುಗಿಸುವುದರಿಂದ ಸ್ಚಚ್ಛ ಇಂಧನ ಪ್ರೋತ್ಸಾಹಕ್ಕೆ ಭಾರೀ ಹೊಡೆತ ಬೀಳುತ್ತದೆ.
ವಾರ್ಷಿಕ 20 ಲಕ್ಷ ರೂ.ಗಳಿಗಿಂತ ಹೆಚ್ಚು ವಹಿವಾಟಿನ ಸಣ್ಣ ವ್ಯಾಪಾರಿಗಳು ತಮ್ಮ ರಿಟರ್ನ್ ಗಳನ್ನು ಇಂಟರ್ನೆಟ್ ಮೂಲಕವೇ ಸಲ್ಲಿಸಬೇಕಾಗಿದೆ ಮತ್ತು ತಮ್ಮ ಲಾಗುವಾಡು ತೆರಿಗೆಗಳ ಪಾವತಿ ಪಡೆಯಬೇಕಾಗಿದೆ, ಇದರಿಂದ ಅವರಿಗೆ ತಮ್ಮ ವ್ಯವಹಾರಗಳನ್ನು ನಡೆಸಲು ಬಹಳ ಕಷ್ಟವಾಗುತ್ತಿದೆ.
ಬಳಕೆ ಸರಕುಗಳಲ್ಲಿ ಹಣದುಬ್ಬರದ ಮತ್ತು ಸರ್ವತೋಮುಖ ಹೆಚ್ಚಳದ ಬೆದರಿಕೆ ಇದೆ. ಜಿಎಸ್ಟಿ ವ್ಯವಸ್ಥೆ ಒಕ್ಕೂಟ ರಚನೆಯನ್ನು ಬುಡಮೇಲು ಮಾಡಿ ರಾಜ್ಯಗಳ ಹಕ್ಕುಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ.
ಜಿಎಸ್ಟಿ ಮಂಡಳಿಯು ಕೂಡಲೇ ಜಿಎಸ್ಟಿ ತೆರಿಗೆ ಸಂರಚನೆಯ ಪರಾಮರ್ಶೆ ಮತ್ತು ಪರಿಷ್ಕರಣೆಗೆ ಕ್ರಮಗಳನ್ನು ಕೈಗೊಂಡು ಅತಾರ್ಕಿಕ ಮತ್ತು ಅಸಮ ತೆರಿಗೆಗಳನ್ನು ತೆಗೆದು ಹಾಕಬೇಕು, ಇಲ್ಲವೇ ಇಳಿಸಬೇಕು ಎಂದು ಸಿಪಿಐ(ಎಂ) ಕೇಂದ್ರ ಸಮಿತಿ ಕೇಂದ್ರ ಸರಕಾರವನ್ನು ಆಗ್ರಹಿಸಿದೆ.
ಉದಾಹರಣೆಗೆ, ಅಂಗವಿಕಲರು ಬಳಸುವ ಸಾಧನಗಳ ಮೇಲಿನ ತೆರಿಗೆಗಳನ್ನು ಸೊನ್ನೆಗೆ ಇಳಿಸಬೇಕು; ಔಷಧಿ ಬೆಲೆ ಹತೋಟಿ ಆದೇಶದ ಅಡಿಯಲ್ಲಿ ಅಗತ್ಯ ಔಷಧಿಗಳ ರಾಷ್ಟ್ರೀಯ ಪಟ್ಟಿಯ ಮೇಲೆ ಜಿಎಸ್ಟಿ ಇರಬಾರದು; ಸ್ಯಾನಿಟರಿ ನ್ಯಾಪ್ಕಿನ್ಗಳ ಮೇಲಿನ ತೆರಿಗೆಯನ್ನು ರದ್ದು ಮಾಡಬೇಕು; ಜಿಎಸ್ಟಿ ಅಡಿಯಲ್ಲಿ ಬರುವ ವ್ಯಾಪಾರಿಗಳ ವಾರ್ಷಿಕ ವಹಿವಾಟಿನ ಮಿತಿಯನ್ನು 20ಲಕ್ಷ ರೂ.ಗಳಿಂದ ಗಣನೀಯವಾಗಿ ಏರಿಸಬೇಕು ಇತ್ಯಾದಿ.
ಜಿಎಸ್ಟಿ ಮಂಡಳಿಯ ನಿರ್ಧಾರಗಳನ್ನು ಸಂಸದೀಯ ಪರೀಕ್ಷಣೆಗೆ ಒಳಪಡಿಸಬೇಕು ಹಾಗೂ ಜಿಎಸ್ಟಿಎನ್(ಜಿಎಸ್ಟಿ ನೆಟ್ವರ್ಕ್)ನ್ನು ಸಿಎಜಿ(ಮಹಾ ಲೆಕ್ಕ ಪರಿಶೋಧಕರು) ಮತ್ತು ಆರ್ಟಿಐ(ಮಾಹಿತಿ ಹಕ್ಕು) ಕಾಯ್ದೆಯ ವ್ಯಾಪ್ತಿಗೆ ಒಳಪಡಿಸಬೇಕು ಎಂದೂ ಸಿಪಿಐ(ಎಂ) ಕೇಂದ್ರ ಸಮಿತಿ ಆಗ್ರಹಿಸಿದೆ.
ಜಿಎಸ್ಟಿ ಯನ್ನು ಜಾರಿಗೆ ತಂದಂದಿನಿಂದ ವಿವಿಧ ಜನವಿಭಾಗಗಳು ಪ್ರತಿಭಟಿಸಿ ಬೀದಿಗಿಳಿದಿವೆ, ವಿವಿಧ ವಲಯಗಳಲ್ಲಿ ಮುಷ್ಕರಗಳು ನಡೆದಿವೆ. ಇದನ್ನು ಗಮನಿಸಿರುವ ಸಿಪಿಐ(ಎಂ) ಕೇಂದ್ರ ಸಮಿತಿ ಜಿಎಸ್ಟಿ ಮೂಲಕ ವಿವಿಧ ವಿಭಾಗಗಳು ಮತ್ತು ವಲಯಗಳ ಮೇಲೆ ಹೇರಿರುವ ಹೊರೆಗಳನ್ನು ತೆಗೆಯುವಂತೆ ಪ್ರತಿಭಟನಾ ಕಾರ್ಯಾಚರಣೆಗಳನ್ನು ಮತ್ತು ಹೋರಾಟಗಳನ್ನು ಸಂಘಟಿಸಬೇಕು, ಬೆಂಬಲಿಸಬೇಕು ಮತ್ತು ಅವುಗಳಲ್ಲಿ ಸಕ್ರಿಯವಾಗಿ ಬಾಗವಹಿಸಬೇಕು ಎಂದು ಪಕ್ಷದ ಎಲ್ಲ ಘಟಕಗಳಿಗೆ ಕರೆ ನೀಡಿದೆ.