ಅಡುಗೆ ಅನಿಲ ಸಿಲಿಂಡರ್ನ ಬೆಲೆಯನ್ನು ಪ್ರತಿತಿಂಗಳು 4ರೂ.ನಂತೆ ಏರಿಸುತ್ತ ಅದರ ಮೇಲಿನ ಸರಕಾರೀ ಸಬ್ಸಿಡಿಯನ್ನು ಸಂಪೂರ್ಣವಾಗಿ ತೆಗೆದು ಹಾಕಲು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರಕಾರ ನಿರ್ಧರಿಸಿರುವುದನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಖಂಡಿಸಿದೆ.
ಇದು ಪ್ರಧಾನ ಮಂತ್ರಿಗಳ ಈ ಹಿಂದಿನ ಅಬ್ಬರದ ‘ಗಿವ್ ಇಟ್ ಅಪ್’ ಪ್ರಚಾರಕ್ಕೆ ತದ್ವಿರುದ್ಧವಾಗಿದೆ. ಸಬ್ಸಿಡಿಯಿಲ್ಲದ ಅಡುಗೆ ಅನಿಲ ಸಿಲಿಂಡರ್ಗಳನ್ನು ಕೊಳ್ಳಬಲ್ಲ ಕುಟುಂಬಗಳು ಅದನ್ನು ಬಿಟ್ಟು ಕೊಟ್ಟು ಬಡವರಿಗೆ ಅವನ್ನೆಲ್ಲ ಕೊಡುವಂತೆ ಅವಕಾಶ ಮಾಡಿ ಮಾಡಬೇಕು ಎಂಬುದು ಈ ಪ್ರಚಾರವಾಗಿತ್ತು.
ಇನ್ನೂ ಒಂದು ಸಂಗತಿಯೆಂದರೆ, ಅಂತರ್ರಾಷ್ಟ್ರೀಯ ತೈಲ ಬೆಲೆಗಳು ತೀಕ್ಷ್ಣವಾಗಿ ಇಳಿಯುತ್ತಿರುವಾಗ ಸರಕಾರ ಈ ನಿರ್ಧಾರ ಮಾಡಿದೆ. ನಿಜವಾಗಿ ಹೇಳಬೇಕೆಂದರೆ ಇದಕ್ಕೆ ಅನುಗುಣವಾಗಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆಗಳು ಇಳಿಯಬೇಕು. ಆದರೆ ಸರಕಾರ ತನ್ನ ಆದಾಯ ಸಂಗ್ರಹವನ್ನು ಹಿಗ್ಗಿಸಿಕೊಳ್ಳಲಿಕ್ಕಾಗಿ ಜನಗಳನ್ನು ಸುಲಿಯುತ್ತಿದೆ ಎಂಬುದು ಸ್ಪಷ್ಟ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ನಮ್ಮ ದೇಶದ ಬಹುಪಾಲು ಜನಗಳ ಮೇಲೆ ಹೇರುತ್ತಿರುವ ಕಠಿಣ ಹೊರೆಯನ್ನು ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದೆ.