ಸಿಪಿಐ(ಎಂ) ಕೇಂದ್ರ ಸಮಿತಿ ಕಚೇರಿಯಲ್ಲಿ ಆಗಸ್ಟ್ 11ರ ಸಂಜೆಯಿಂದ ಇಂಟರ್ನೆಟ್ ಸಂಪರ್ಕಗಳು ಕೆಲಸ ಮಾಡುತ್ತಿಲ್ಲ. ದೂರುಗಳಿಗೆ ಎಂಟಿಎನ್‍ಎಲ್ ಸ್ಪಂದಿಸಿಲ್ಲ. ಆದ್ದರಿಂದ ಮೋದಿ ಸರಕಾರದ ಸಂಪರ್ಕ ಇಲಾಖೆಯ ರಾಜ್ಯಮಂತ್ರಿ ಮಧ್ಯಪ್ರವೇಶಿಸುವಂತೆ ಆಗ್ರಹಿಸಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ಆಗಸ್ಟ್ 18ರಂದು ಪತ್ರ ಬರೆದು ಈ ವ್ಯತ್ಯಯ ಉದ್ದೇಶಪೂರ್ವಕವಾದ ಪ್ರಯತ್ನವೇ ಎಂದು ವಿಚಾರಿಸುವಂತೆ ಕೋರಿದ್ದಾರೆ. ಪತ್ರದ ಪೂರ್ಣ ಪಾಟ ಇಲ್ಲಿದೆ:
ಶ್ರೀ ಮನೋಜ್ ಜೋಶಿ
ಸಂಪರ್ಕ ರಾಜ್ಯ ಮಂತ್ರಿಗಳು, ಭಾರತ ಸರಕಾರ
ಪ್ರಿಯ ಶ್ರೀ ಸಿನ್ಹಾಜಿ,
ಅತ್ಯಂತ ಖೇದದಿಂದ ನಿಮ್ಮ ಬಳಿ ಕೇಳಬೇಕಾಗಿದೆ.
ಸಿಪಿಐ(ಎಂ) ಕೇಂದ್ರ ಕಚೇರಿಯಲ್ಲಿ ನಾವು ಸಾರ್ವಜನಿಕ ವಲಯದ ಎಂಟಿಎನ್‍ಎಲ್‍ನ ಐದು ಫೈಬರ್ ಟು ಹೋಮ್ ಕನೆಕ್ಷನ್‍ಗಳನ್ನು ಹೊಂದಿದ್ದೇವೆ. ಈ ಎಲ್ಲ ಸಂಪರ್ಕಗಳೂ ಆಗಸ್ಟ್ 11. 2017 ರ ಸಂಜೆಯಿಂದ ಕೆಲಸ ಮಾಡುತ್ತಿಲ್ಲ. ಈಗ ಒಂದು ವಾರವಾಗಿದೆ. ಎಲ್ಲ ಸಂಪರ್ಕ, ವಾಣಿಜ್ಯ, ಬ್ಯಾಂಕಿಂಗ್ ಮುಂತಾದವುಗಳ ಮೇಲೆಯೇ ಎಲ್ಲ ಒತ್ತೂ ಇರುವ ಈ ದಿನಗಳಲ್ಲಿ ಈ ವ್ಯತ್ಯಯಗಳಿಂದಾಗಿ ನಮ್ಮ ಕೆಲಸಗಳಿಗೆ ಎಷ್ಟೊಂದು ತೊಂದರೆಯಾಗಿದೆ ಎಂಬುದನ್ನು ನೀವು ಊಹಿಸಬಲ್ಲಿರಿ.
ನಮ್ಮ ಕಚೇರಿಯಿಂದ ವಿವಿಧ ಎಂಟಿಎನ್‍ಎಲ್ ಅಧಿಕಾರಿಗಳಿಗೆ ಮತ್ತೆ-ಮತ್ತೆ ದೂರುಗಳನ್ನು ಕೊಟ್ಟರೂ ಏನೂ ಸ್ಪಂದನ ದೊರೆತಿಲ್ಲವಾದ್ದರಿಂದ, ಎಂಟಿಎನ್‍ಎಲ್ ನಿಮ್ಮ ಇಲಾಖೆಯ ವ್ಯಾಪ್ತಿಗೆ ಬರುವುದರಿಂದ ಎಂಟಿಎನ್‍ಎಲ್‍ನ ಸಂಬಂಧಪಟ್ಟ ಅಧಿಕಾರಿಗಳಿಗೆ ಈ ಸೇವೆಗಳನ್ನು ತಕ್ಷಣವೇ ಲಭ್ಯವಾಗುವಂತೆ ಮಾಡಬೇಕು ಎಂದು ಸೂಚನೆ ನೀಡಬೇಕೆಂದು ಕೇಳಲು ನಿಮ್ಮಬಳಿ ಕೇಳಬೇಕಾಗಿ ಬಂದಿದೆ.
ಈ ಸೇವೆಗಳನ್ನು ವ್ಯತ್ಯಯಗೊಳಿಸುವ ಉದ್ದೇಶಪೂರ್ವಕ ಪ್ರಯತ್ನ ನಡೆದಿದೆಯೇ ಎಂದು ಕೂಡ ವಿಚಾರಿಸಬೇಕೆಂದು ನಾನು ನಿಮ್ಮನ್ನು ಆಗ್ರಹಿಸುತ್ತೇನೆ. ಈ ವಿಷಯದ ತುರ್ತನ್ನು ಗಮನಿಸಿ ನೀವು ತಕ್ಷಣವೇ ಮಧ್ಯಪ್ರವೇಶಿಸುತ್ತೀರಿ ಮತ್ತು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತೀರಿ ಎಂದು ಆಶಿಸುತ್ತೇನೆ.
ಆದರದಿಂದ,
ನಿಮ್ಮ ವಿಶ್ವಾಸಿ
ಸೀತಾರಾಮ್ ಯೆಚುರಿ