ದಿಲ್ಲಿಯಿಂದ ತನ್ನೂರಿಗೆ ಬರುವ ರೈಲಿನಲ್ಲಿ ದ್ವೇಷ ಪ್ರಚಾರದ ದಾಳಿಗೆ ಬಲಿಯಾದ ಜುನೈದ್ನ ಹಳ್ಳಿ ಖತಾವಾಲಿಯಲ್ಲಿ ಆಗಸ್ಟ್ 23ರಂದು ನಡೆದ ಒಂದು ಗಂಭೀರ ಮತ್ತು ಹೃದಯಸ್ಪರ್ಶಿ ಸಭೆಯಲ್ಲಿ ಸಿಪಿಐ(ಎಂ) ಪೊಲಿಟ್ಬ್ಯುರೊ ಸದಸ್ಯರಾದ ಬೃಂದಾ ಕಾರಟ್, ಹರ್ಯಾಣ ರಾಜ್ಯ ಕಾರ್ಯದರ್ಶಿ ಸುರಿಂದರ್ ಮಲಿಕ್ ಮತ್ತು ಇತರ ಮುಖಂಡರಿದ್ದ ಸಿಪಿಐ(ಎಂ) ನಿಯೋಗ ಜುನೈದ್ ತಂದೆ ಜಲಾಲುದ್ದಿನ್ ಮತ್ತು ಸಾಯಿರಾ ಅವರಿಗೆ ಸಿಪಿಐ(ಎಂ) ಕೇರಳ ರಾಜ್ಯಸಮಿತಿಯ ಪರವಾಗಿ 5ಲಕ್ಷ ರೂ.ಗಳ ಎರಡು ಚೆಕ್ಗಳನ್ನು ನೀಡಿದರು.
ಕಳೆದ ತಿಂಗಳು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದಿಲ್ಲಿಗೆ ಬಂದಿದ್ದಾಗ ಅವರನ್ನು ಈ ದುಃಖತಪ್ತ ದಂಪತಿಗಳು ಭೇಟಿ ಮಾಡಿದ್ದರು. ಜುನೈದ್ನ ತಾಯಿ ತನ್ನ ಮಗನ ಹೆಸರಿನಲ್ಲಿ ಹೆಣ್ಣು ಮಕ್ಕಳಿಗೆ ಒಂದು ಶಾಲೆ ತೆರೆಯ ಬೇಕೆಂದಿರುವುದಾಗಿ ಹೇಳಿದ್ದರು.
ಈ ನಿಧಿ ಈ ನೋವು ಮತ್ತು ಹತಾಶೆಯ ಸಮಯದಲ್ಲಿ ಒಂದು ಬಲವಾದ ಸೌಹಾರ್ದದ ಸಂಕೇತ ಮಾತ್ರ ಎಂದ ಬೃಂದಾ ಕಾರಟ್, ಜುನೈದ್ನಂತವರನ್ನು ಬಡಿದು ಸಾಯಿಸುತ್ತಿರುವ ಕರಾಳ ಶಕ್ತಿಗಳನ್ನು ಎದುರಿಸಿ, ಸೋಲಿಸಲು ಸಿಪಿಐ(ಎಂ) ಬದ್ಧ ಎಂಬುದನ್ನು ಪುನರುಚ್ಚರಿಸುತ್ತೇವೆ ಎಂದರು.
ಈ ಹತ್ಯೆಗೆ ಸಂಬಂಧಿಸಿದಂತೆ ಬಂಧಿಸಿದ್ದ ಆರು ಮಂದಿಯಲ್ಲಿ ನಾಲ್ವರನ್ನು ಜಾಮೀನಿನ ಮೇಲೆ ಈಗಾಗಲೇ ಬಿಡುಗಡೆ ಮಾಡಿದ್ದು ನ್ಯಾಯವನ್ನು ಬುಡಮೇಲು ಮಾಡಲಾಗುತ್ತಿದೆ ಎಂದು ಬಲವಾಗಿ ಖಂಡಿಸಿದರು. ಸುರಿಂದರ್ ಮಲಿಕ್ ಮಾತಾಡಿ ಹರ್ಯಾಣದ ಸಿಪಿಐ(ಎಂ) ಸದಾ ಜುನೈದ್ ಕುಟುಂಬದವರೊಂದಿಗೆ ಇರುತ್ತದೆ, ಜುನೈದ್ ಹತ್ಯೆಗೆ ಹೊಣೆಯಾಗಿರುವ ಬಿಜೆಪಿ ಸರಕಾರದ ವಿರುದ್ಧ ಬಹುಮುಖೀ ಹೋರಾಟವನ್ನು ಮುಂದುವರೆಸುತ್ತದೆ ಎಂದರು.