ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಕಗ್ಗೊಲೆ ನಡೆದಿರುವುದನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ. ಅವರ ಮನೆಯ ಮುಂದೆ ಇದು ನಡೆದಿದೆ.
ಈ ಕೊಲೆ ಈಗ ಪರಿಚಿತವಾಗಿ ಬಿಟ್ಟಿರುವ ಆರೆಸ್ಸೆಸ್-ಬಿಜೆಪಿಯ ದ್ವೇಷ ಮತ್ತು ಅಸಹಿಷ್ಣುತೆಯ ವಾತಾವರಣದ ವಿರುದ್ಧ ಮಾತಾಡುವ ಧೈರ್ಯ ತೋರುವ ದನಿಗಳನ್ನು ಅಡಗಿಸುವ ವಿಧಾನಕ್ಕೆ ಅನುಸಾರವಾಗಿಯೇ ಇದೆ.
ಗೋವಿಂದ ಪನ್ಸರೆ, ದಭೋಲ್ಕರ್, ಕಲ್ಬುರ್ಗಿ ಮತ್ತು ಈಗ ಗೌರಿ ಲಂಕೇಶ್ ಅವರ ಹತ್ಯೆಗಳು ಎಲ್ಲವೂ ಪರಸ್ಪರ ಸಂಬಂಧ ಇರುವಂತವುಗಳು. ಇವರೆಲ್ಲರೂ ಅಂಧಶ್ರದ್ಧೆ, ಅವೈಚಾರಿಕತೆ ಮತ್ತು ಬಲಪಂಥೀಯ ಹಿಂದುತ್ವ ಶಕ್ತಿಗಳು ಕೋಮುವಾದಿ ಅಜೆಂಡಾವನ್ನು ಗಟ್ಟಿಗೊಳಿಸುತ್ತಿರುವುದರ ವಿರುದ್ಧ ಖಡಾಖಂಡಿತವಾಗಿ ಮಾತಾಡುತ್ತಿದ್ದವರು ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಕರ್ನಾಟಕ ಸರಕಾರ ಕೂಡಲೇ ಅಪರಾಧಿಗಳನ್ನು ಪತ್ತೆ ಹಚ್ಚಬೇಕು ಮತ್ತು ಬಂಧಿಸಬೇಕು ಎಂದು ಆಗ್ರಹಿಸಿದೆ.
ಈ ಹೀನ ಕಗ್ಗೊಲೆ ಮತ್ತು ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣುತೆ ಮತ್ತು ದ್ವೇಷಭಾವದ ವಿರುದ್ಧ ಎಡ ಮತ್ತು ಜನವಾದಿ ಶಕ್ತಿಗಳು ಒಂದು ಬಲವಾದ ಪ್ರತಿಭಟನೆಯನ್ನು ಆರಂಭಿಸಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಕರೆ ನೀಡಿದೆ.
ಪ್ರತಿಭಟನೆಯ ದನಿಗಳು ಇನ್ನಷ್ಟು ಗಟ್ಟಿಯಾಗುತ್ತವೆ: ಸೀತಾರಾಮ್ ಯೆಚುರಿ
ಇದೊಂದು ಅತ್ಯಂತ ಹೀನ ಕಗ್ಗೊಲೆ, ವಿಕರಾಳ ವಿಧಾನದ ಕೊಲೆಗಡುಕ ಹಿಂಸಾಚಾರ ಎಂದು ಖಂಡಿಸಿರುವ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿಯವರು ದೇಶದಲ್ಲಿ ಈ ಧರ್ಮಾಂಧತೆ, ದ್ವೇಷ, ಅಸಹಿಷ್ಣುತೆ ಮತ್ತು ಹಿಂಸಾಚಾರದ ವಾತಾವರಣವನ್ನು ಪೋಷಿಸುತ್ತಿರುವವರು ಯಾರು, ಅವರಿಗೆ ಈಕೆ ಒಂದು ಬೆದರಿಕೆಯಾಗಿ ಕಂಡಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ. ಆದರೆ ಅವರು ಅಡಗಿಸ ಬಯಸುವ ದನಿಗಳು ಇನ್ನಷ್ಟು ಗಟ್ಟಿಯಾಗಿ ಕೇಳಬರುತ್ತವೆ ಎಂದು ಅವರು ಎಚ್ಚರಿಸಿದ್ದಾರೆ.