ರಾಜಸ್ತಾನ, ಮಹಾರಾಷ್ಟç, ಮಧ್ಯಪ್ರದೇಶ ಮತ್ತು ಛತ್ತಿಸ್ಗಡದ ರೈತರ ಹೋರಾಟಗಳು ಈಗ ದೇಶದ ವಿವಿಧ ಇತರ ಭಾಗಗಳಿಗೂ ಹರಡುತ್ತಿವೆ. ಅಕ್ಟೋಬರ್ 2ರಂದು ಸಭೆ ಸೇರಿದ ಸಿಪಿಐ(ಎಂ) ಪೊಲಿಟ್ಬ್ಯುರೊ ಇದನ್ನು ಪ್ರಶಂಸಿಸುತ್ತ ಮೋದಿ ಸರಕಾರ ತಕ್ಷಣವೇ ರೈತರಿಗೆ ಉತ್ಪಾದನಾ ಖರ್ಚಿನ ಒಂದೂವರೆ ಪಟ್ಟು ಕನಿಷ್ಟ ಬೆಂಬಲ ಬೆಲೆಯನ್ನು ಪ್ರಕಟಿಸುವ ಮತ್ತು ಸಾಲ ಮನ್ನಾದ ತನ್ನ ಚುನಾವಣಾ ಭರವಸೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದೆ. ಸರಕಾರ ರೈತರಿಂದ ಕನಿಷ್ಟ ಬೆಂಬಲ ಬೆಲೆಯಲ್ಲಿ ರೈತರ ಉತ್ಪನ್ನಗಳನ್ನು ಕಡ್ಡಾಯವಾಗಿ ಖರೀದಿಸುವಂತೆ ಮಾಡುವ ಒಂದು ಕೇಂದ್ರೀಯ ಕಾಯ್ದೆಯನ್ನು ತರಬೇಕು ಎಂದೂ ಸಿಪಿಐ(ಎಂ) ಆಗ್ರಹಿಸಿದೆ.
ವಿವಿಧ ಜನವಿಭಾಗಗಳು ವಿನಾಶಕಾರಿ ಆರ್ಥಿಕ ಧೋರಣೆಗಳ ವಿರುದ್ಧ ಮತ್ತು ತಮ್ಮ ಬದುಕಿನ ಪರಿಸ್ಥಿತಿಗಳು ತ್ವರಿತವಾಗಿ ಹದಗೆಡುತ್ತಿರುವುದರ ವಿರುದ್ಧ ದೊಡ್ಡ ಹೋರಾಟಗಳಿಗೆ ಸಿದ್ಧಗೊಳ್ಳುತ್ತಿದ್ದಾರೆ. ಕಾರ್ಮಿಕ ಸಂಘಗಳು, ರೈತ ಸಂಘಟನೆಗಳು ಮತ್ತು ಯುವಜನರು ಹೋರಾಟಗಳಿಗೆ ಮತ್ತು ಇವುಗಳಲ್ಲಿ ಭಾರೀ ಸಂಖ್ಯೆಯಲ್ಲಿ ಜನಗಳನ್ನು ಅಣಿನೆರೆಸಲು ಸ್ವತಂತ್ರವಾಗಿ ಕರೆ ನೀಡಿವೆ. ವಿವಿಧ ಎಡ ಸಾಮೂಹಿಕ ಸಂಘಟನೆಗಳು ಮತ್ತು ಜನಾಂದೋಲನಗಳ ಜನ ಏಕತಾ ಜನ ಅಧಿಕಾರ್ ಆಂದೋಲನ ಎಂಬ ಒಂದು ಜಂಟಿ ವೇದಿಕೆ ರಚನೆಗೊಂಡಿದೆ. ಈ ಮೋದಿ ಸರಕಾರದ ಆರ್ಥಿಕ ಧೋರಣೆಗಳ ವಿಧ್ವಂಸಕಾರಿ ಪ್ರತಿಣಾಮಗಳಿಂದ ನರಳುತ್ತಿರುವ ಜನಗಳು ಈ ಪ್ರತಿಭಟನೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸೇರಿಕೊಳ್ಳಬೇಕು ಎಂದು ಪೊಲಿಟ್ಬ್ಯುರೊ ಜನಗಳಿಗೆ ಕರೆ ನೀಡಿದೆ.
ಮತ್ತೆ-ಮತ್ತೆ ಇಂಧನ ಬೆಲೆ ಏರಿಕೆ
ಅಂತರ್ರಾಷ್ಟ್ರೀಯ ತೈಲ ಬೆಲೆಗಳು ಗಮನಾರ್ಹವಾಗಿ ಇಳಿಯುತ್ತಿರುವಾಗ ಮೋದಿ ಸರಕಾರ ಇಂಧನ ಬೆಲೆಗಳನ್ನು ಮತ್ತೆ ಹೆಚ್ಚಿಸುತ್ತಿದೆ. ಕಳೆದ ವರ್ಷ ಅಂತರ್ರಾಷ್ಟ್ರೀಯ ಬೆಲೆಗಳು 85%ದಷ್ಟು ಇಳಿದಿವೆ. ಆದರೆ ಇಳಿದ ಬೆಲೆಗಳ ಪ್ರಯೋಜನ ಜನಗಳಿಗೆ ದೊರೆಯುವಂತೆ ಮಾಡುವ ಬದಲು ಈ ಮೋದಿ ಸರಕಾರ ಅಬಕಾರಿ ಸುಂಕವನ್ನು 125%ದಷ್ಟು ಹೆಚ್ಚಿಸಿದೆ. ಆಮೂಲಕ ತನ್ನ ರೆವಿನ್ಯೂ ಸಂಗ್ರಹದಲ್ಲಿ ಭಾರೀ ಹೆಚ್ಚಳದ ಬಕ್ಷಿಸು ಬಾಚಿಕೊಂಡಿದೆ. ಏರುತ್ತಿರುವ ಇಂಧನ ಬೆಲೆಗಳ ಪರಿಣಾಮವಾಗಿ ಹೆಚ್ಚುತ್ತಿರುವ ಹಣದುಬ್ಬರದಿಂದ ಭಾರತೀಯ ಜನತೆಯ ಬಹುಪಾಲು ಮಂದಿ ನರಳುವಂತೆ ಮಾಡಿ ಅವರ ಖರ್ಚಿನಲ್ಲಿ ಸರಕಾರ ಇದನ್ನು ಬಾಚಿಕೊಂಡಿದೆ. ಈ ಹೆಚ್ಚಳವನ್ನು ಹಿಂತೆಗೆದುಕೊಳ್ಳಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ.
ಎಡಪಂಥೀಯರ ಮೇಲೆ ಆರೆಸ್ಸೆಸ್ ಗುರಿ
ಆರೆಸ್ಸೆಸ್ ಸರಸಂಘಚಾಲಕ ಮೋಹನ ಭಾಗವತ್ರ ವಿಜಯದಶಮಿ ಭಾಷಣ ಎಡಪಕ್ಷಗಳ ಬಲಿಷ್ಟ ನೆಲೆಗಳಾದ ಕೇರಳ ಮತ್ತು ಪಶ್ಚಿಮ ಬಂಗಾಲದ ಮೇಲೆ ನೇರ ದಾಳಿ ಮಾಡಿದೆ., ಕೇರಳದ ಎಲ್ಡಿಎಫ್ ಸರಕಾರ ರಾಜ್ಯದಲ್ಲಿ ಜಿಹಾದಿ ಚಟುವಟಿಕೆಗಳು ಬೆಳೆಯಲು ಅವಕಾಶ ಮಾಡಿಕೊಡುತ್ತಿದೆ ಎನ್ನುವಷ್ಟರ ಮಟ್ಟಿಗೆ ಅದು ಹೋಗಿದೆ. ಇದು ಬರೀ ಸುಳ್ಳು ಮಾತ್ರವೇ ಅಲ್ಲ, ಸಿಪಿಐ(ಎಂ) ಮತ್ತು ಎಡಪಂಥದ ಮೇಲೆ ಗುರಿಯಿಡುವುದು ಇದರ ಉದ್ದೇಶ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ಮಾಧ್ಯಮ ವ್ಯಕ್ತಿಗಳ ಮೇಲೆ ದಾಳಿಗಳು
ಪ್ರಗತಿಪರ ಬುದ್ಧಿಜೀವಿಗಳು ಮತ್ತು ಪತ್ರಕರ್ತರ ಮೇಲೆ ದಾಳಿಗಳು ಮುಂದುವರೆಯುತ್ತಿರುವುದನ್ನು ಪೊಲಿಟ್ಬ್ಯುರೊ ಖಂಡಿಸಿದೆ. ಗೌರಿ ಲಂಕೇಶ್ ಅವರ ಅಮಾನುಷ ಹತ್ಯೆಯ ನಂತರ ತ್ರಿಪುರಾದ ಯುವ ಟಿವಿ ಪತ್ರಕರ್ತ ಶಂತನು ಭೌಮಿಕ್ ಅವರನ್ನು ಬಿಜೆಪಿ ಬೆಂಬಲಿತ ಐಪಿಎಫ್ಟಿ ಹತ್ಯೆ ಮಾಡಿದೆ. ವಿವಿಧ ಆರೆಸ್ಸೆಸ್ ಸಂಯೋಜಿತ ಹಿಂದುತ್ವ ಸಂಘಟನೆಗಳು ಪತ್ರಕರ್ತರಿಗೆ ಬೆದರಿಕೆಗಳನ್ನು ಹಾಕುತ್ತಿರುವುದನ್ನು ಬಲವಾಗಿ ಖಂಡಿಸಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮತ್ತು ಮಾಧ್ಯಮಗಳ ಹಕ್ಕುಗಳಿಗೆ ಚ್ಯುತಿ ಬರದಂತೆ ನೋಡಿಕೊಳ್ಳಬೇಕು ಎಂದು ಸಂಬಂಧಪಟ್ಟ ಸರಕಾರಗಳಿಗೆ ಕರೆ ನೀಡಿದೆ. ಇಂತಹ ಬೆದರಿಕೆಗಳು ಮತ್ತು ಕೊಲೆಗಡುಕ ದಾಳಿಗಳ ವಿರುದ್ಧ ಜನಗಳ ಪ್ರತಿಭಟನೆಗಳು ತೀವ್ರಗೊಳ್ಳಬೇಕು ಎಂದು ಅದು ಹೇಳಿದೆ.
ಬಿಹೆಚ್ಯು ವಿದ್ಯಾರ್ಥಿನಿಯರ ಮೇಲೆ ದಾಳಿ
ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಮೇಲೆ ಅನಗತ್ಯವಾಗಿ ಪೋಲೀಸರು ದಾಳಿ ಮಾಡಿರುವುದನ್ನು ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ. ಲೈಂಗಿಕ ಕಿರುಕುಳಗಳ ವಿರುದ್ಧ ಪ್ರತಿಭಟಿಸುತ್ತಿರುವ ವಿದ್ಯಾರ್ಥಿನಿಯರ ದೂರುಗಳನ್ನು ಪರಿಹರಿಸುವ ಬದಲು ಉಪಕುಲಪತಿಗಳು ವಿದ್ಯಾರ್ಥಿಗಳ ವಿರುದ್ಧವೇ ಕಾರ್ಯಾಚರಣೆ ನಡೆಸುವಂತೆ ಪೋಲೀಸರಿಗೆ ಆದೇಶ ನೀಡಿದ್ದಾರೆ. ಪುರುಷ ಪೋಲೀಸ್ ಸಿಬ್ಬಂದಿ ವಿದ್ಯಾರ್ಥಿನಿಯರನ್ನು ಥಳಿಸಿದ್ದಾರೆ. ಇದು ದೇಶಾದ್ಯಂತ ಉನ್ನತ ಅಧ್ಯಯನದ ಸಂಸ್ಥೆಗಳ ಮೇಲೆ ಆರೆಸ್ಸೆಸ್/ಬಿಜೆಪಿ ಸರಕಾರಗಳ ದಾಳಿಗಳ ಭಾಗ ಎಂದು ಪೊಲಿಟ್ಬ್ಯುರೊ ಹೇಳಿದೆ.
ಉಪಕುಲಪತಿಗಳನ್ನು ತಕ್ಷಣವೇ ತೆಗೆಯಬೇಕು ಮತ್ತು ಪ್ರತಿಭಟಿಸುತ್ತಿರುವ ವಿದ್ಯಾರ್ಥಿನಿಯರ ದೂರುಗಳನ್ನು ಕೂಡಲೇ ಪರಿಹರಿಸಬೇಕು ಎಂದು ಅದು ಆಗ್ರಹಿಸಿದೆ.
22ನೆ ಮಹಾಧಿವೇಶನಕ್ಕೆ ಸಿದ್ಧತೆ
ಪೊಲಿಟ್ಬ್ಯುರೊ ಪಕ್ಷದ 22ನೇ ಮಹಾಧಿವೇಶನದ ಕರಡು ರಾಜಕೀಯ ಠರಾವಿನ ರೂಪುರೇಷೆಗಳನ್ನು ಚರ್ಚಿಸಿತು. ಇದನ್ನು ಅಕ್ಟೋಬರ್ 14ರಿಂದ 16 ರವರೆಗೆ ನಡೆಯಲಿರುವ ಸಿಪಿಐ(ಎಂ) ಕೇಂದ್ರ ಸಮಿತಿಯ ಸಭೆ ಕೈಗೆತ್ತಿಕೊಳ್ಳುತ್ತದೆ ಎಂದು ಪೊಲಿಟ್ಬ್ಯುರೊ ಹೇಳಿದೆ.