ಕೇಂದ್ರ ಮತ್ತು ರಾಜಸ್ತಾನ ಸರಕಾರ ಸುಪ್ರಿಂಕೋರ್ಟ್ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು, ಕಾವಲುಕೋರ, ಪೊಲಿಸ್ಗಿರಿ ಗ್ಯಾಂಗುಗಳನ್ನು ನಿಷೇಧಿಸಬೇಕು -ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹ
ರಾಜಸ್ತಾನದ ಅಲ್ವರ್ನಲ್ಲಿ ಹೈನುಗಾರಿಕೆಯಲ್ಲಿ ತೊಡಗಿದ್ದ ಮತ್ತೊಬ್ಬ ರೈತ ಉಮ್ಮರ್ಖಾನ್ ಭೀಕರ ಹತ್ಯೆ ನಡೆದಿದೆ. ಇದನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ. ಉಮ್ಮರ್ ಖಾನ್ ಮತ್ತು ಆತನ ಜತೆಗಿದ್ದ ತಾಹಿರ್ಖಾನ್ ಮತ್ತು ಜಾವೆದ್ ಖಾನ್ ಅಲ್ವರ್ನಿಂದ ಖರೀದಿಮಾಡಿದ ಹಸುಗಳನ್ನು ಸಾಗಿಸುವಾಗ ಮೂವರ ಮೇಲೂ ಹಲ್ಲೆ ನಡೆದು ಉಮ್ಮರ್ ಖಾನ್ ಪ್ರಾಣ ಕಳಕೊಂಡಿದ್ದಾರೆ, ತಾಹಿರ್ ಖಾನ್ ಆಸ್ಪತ್ರೆಯಲ್ಲಿದ್ದಾರೆ ಮತ್ತು ಜಾವೆದ್ ಖಾನ್ ಎಲ್ಲಿದ್ದಾರೆ ತಿಳಿದಿಲ್ಲ. ಇವರು ಮೂವರನ್ನೂ ಗೋರಕ್ಷಕರೆನಿಸಿಕೊಂಡವರು ಹೊಡೆದಿದ್ದಾರೆ ಮತ್ತು ಅವರಿಗೆ ಗುಂಡಿಕ್ಕಿದ್ದಾರೆ. ಆದರೂ ರಾಜಸ್ತಾನ ಪೋಲೀಸರು ಅವರ ವಿರುದ್ಧವೇ ಕೇಸು ದಾಖಲಿಸಿದ್ದಾರೆ, ಕಾವಲುಕೋರರು ತಪ್ಪಿಸಿಕೊಳ್ಳಲು ಅವಕಾಶ ನೀಡಿದ್ದಾರೆ. ಇದು ಇನ್ನಷ್ಟು ಆಘಾತಕಾರಿ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ತೀರ ಇತ್ತೀಚೆಗಷ್ಟೇ, ಸುಪ್ರಿಂ ಕೋರ್ಟ್ ಇಂತಹ ದಾಳಿಗಳನ್ನು ತಡೆಯಲು ಹಾಗೂ ಇಂತಹ ಕಾವಲುಕೋರ ಘಟನೆಗಳಲ್ಲಿ ಕಟ್ಟುನಿಟ್ಟಾದ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಕಟ್ಟುನಿಟ್ಟಾದ ಸೂಚನೆಗಳನ್ನು ನೀಡಿದೆ. ಪ್ರತಿಯೊಂದು ಜಿಲ್ಲೆಯಲ್ಲಿ ಒಬ್ಬ ಹಿರಿಯ ಪೋಲಿಸ್ ಅಧಿಕಾರಿಗೆ ಈ ಹೊಣೆಯನ್ನು ವಹಿಸಬೇಕು ಎಂದೂ ಅದು ಹೇಳಿದೆ. ಇಂತಹ ಕಾವಲುಕೋರತನಕ್ಕೆ ಬಲಿಯಾದವರಿಗೆ ಸರಿಯಾದ ಪರಿಹಾರ ತೆರಬೇಕು ಎಂದೂ ಅದು ಹೇಳಿದೆ ಎಂಬ ಸಂಗತಿಯನ್ನು ಈ ಸಂದರ್ಭದಲ್ಲಿ ಸಿಪಿಐ(ಎಂ) ಪೊಲಿಟ್ಬ್ಯುರೊ ನೆನಪಿಸಿದೆ.
ಕೇಂದ್ರ ಸರಕಾರ ಮತ್ತು ರಾಜಸ್ತಾನ ಸರಕಾರ ಸುಪ್ರಿಂ ಕೋರ್ಟಿನ ಸೂಚನೆಗಳನ್ನು ಪಾಲಿಸಬೇಕು, ತಪ್ಪಿತಸ್ಥರನ್ನು ಹಿಡಿದು ಶಿಕ್ಷಿಸಬೇಕು, ಈ ಹಿಂಸಾಚಾರಕ್ಕೆ ತುತ್ತಾದವರ ಕುಟುಂಬಗಳಿಗೆ ಸಾಕಷ್ಟು ಪರಿಹಾರ ಒದಗಿಸಬೇಕು ಮತ್ತು ನ್ಯಾಯ ದ ಭರವಸೆ ನೀಡಬೇಕು ಎಂದು ಪೊಲಿಟ್ಬ್ಯುರೊ ಆಗ್ರಹಿಸಿದೆ.
ಕೇಂದ್ರ ಸರಕಾರ ಇಂತಹ ಗೋವು ಸಂಬಂಧಿ ಕಾವಲುಕೋರತನದಲ್ಲಿ ಮತ್ತು ನೈತಿಕ ಪೋಲೀಸ್ಗಿರಿಯಲ್ಲಿ ತೊಡಗಿರುವ ಎಲ್ಲ ಗ್ಯಾಂಗುಗಳನ್ನು ನಿಷೇಧಿಸಬೇಕು ಎಂದೂ ಅದು ಆಗ್ರಹಿಸಿದೆ.