ರಾಜಸ್ಥಾನದ ಪ್ರಾಥಮಿಕ ಮತ್ತು ಮಾಧ್ಯಮಿಕ ಶಿಕ್ಷಣ ಮಂತ್ರಿಗಳು ರಾಜ್ಯದ ರಾಜಧಾನಿ ಜಯಪುರದಲ್ಲಿ ನಡೆಯುವ ಐದು ದಿನಗಳ ‘ಹಿಂದು ಆಧ್ಯಾತ್ಮಿಕ ಮತ್ತು ಸೇವಾ ಮೇಳ’ಕ್ಕೆ ತಮ್ಮ ವಿದ್ಯಾರ್ಥಿಗಳನ್ನು ಕರೆದೊಯ್ಯಬೇಕು ಎಂದು ಎಲ್ಲ ಸರಕಾರೀ ಹಾಗೂ ಖಾಸಗಿ ಶಾಲೆಗಳಿಗೆ ನಿರ್ದೇಶನವಿತ್ತಿದ್ದಾರೆ ಎಂದು ವರದಿಯಾಗಿದೆ. ಇದು ಅತ್ಯಂತ ಆಕ್ರೋಶಕಾರಿ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾಗಿ ಖಂಡಿಸಿದೆ.
ಈ ಮೇಳದಲ್ಲಿ ವಿಹೆಪ್ಪಿಯಂತವುಗಳ ಸ್ಟಾಲುಗಳಿವೆ. ಇದರಲ್ಲಿ ‘ಲವ್ ಜಿಹಾದ್’ ವಿರುದ್ಧ ಎನ್ನುವ ಕರಪತ್ರಗಳಲ್ಲಿ ಮುಸ್ಲಿಮ್ ಗಂಡಸರು ಹಿಂದೂ ಹೆಂಗಸರಿಗೆ ‘ಬಲೆ ಬೀಸು’ತ್ತಾರೆ ಎಂದು ಆಪಾದಿಸಲಾಗಿದೆ, ಮತ್ತು ಇಂತಹ ‘ಬಲೆ ಬೀಸುವ’ ಕೆಲಸ ಎಲ್ಲೆಲ್ಲಿ ನಡೆಯಬಹುದು ಎಂದು ವರ್ಣಿಸಲಾಗಿದೆ. ಹೀಗೆ ‘ಬಲೆ ಬೀಸಿದ’ ನಂತರ ಮುಸ್ಲಿಂ ಗಂಡಸರು ನಿರ್ದಿಷ್ಟ ಮೊತ್ತಕ್ಕೆ ಅವರನ್ನು ಮತಾಂತರ ಮಾಡುತ್ತಾರೆ ಎಂದು ಆಪಾದಿಸಲಾಗಿದೆ.
ಕ್ರೈಸ್ತ ಮಿಶನರಿಗಳು ವಿವಾದಾತ್ಮಕ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ, ಅವರಿಗೆ ಮತಾಂತರಗಳನ್ನು ನಡೆಸಲು ಅಪಾರ ವಿದೇಶಿ ಹಣ ಬರುತ್ತಿದೆ ಎಂದು ಆಪಾದಿಸುವ ಕರಪತ್ರಗಳನ್ನು ಹಂಚಲಾಗುತ್ತಿದೆ. ಇದು ನಮ್ಮ ಸಂವಿಧಾನದ ಜಾತ್ಯತೀತ ಸ್ವರೂಪದ ಒಂದು ನಗ್ನ ಉಲ್ಲಂಘನೆಯಾಗಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಹೇಳಿದೆ.
ಈ ಸಂವಿಧಾನದ ಅಡಿಯಲ್ಲಿ ರಚಿತವಾಗಿರುವ ಸರಕಾರವೊಂದು ಇಂತಹ ಮೇಳ ನಡೆಸಲು ಅನುಮತಿ ನೀಡಿದೆ ಎಂಬುದೇ ಒಂದು ಆಕ್ಷೇಪಾರ್ಹ ಸಂಗತಿ. ಆದರೆ ಅಷ್ಟಕ್ಕೇ ನಿಲ್ಲದೆ, ಈ ಸರಕಾರ ವಾಸ್ತವವಾಗಿ ಶಾಲಾವಿದ್ಯಾರ್ಥಿಗಳು ಆ ಮೇಳಕ್ಕೆ ಹೋಗಬೇಕೆಂದು ಕಡ್ಡಾಯಗೊಳಿಸಿ ಅವರನ್ನು ಅಲ್ಪಸಂಖ್ಯಾತ ಸಮುದಾಯಗಳ ವಿರುದ್ಧ ಹಗೆತನದ ಪ್ರಚಾರಕ್ಕೆ ಒಡ್ಡುವುದು ಸಂಪೂರ್ಣವಾಗಿ ಒಪ್ಪಲಾಗದ ಸಂಗತಿ. ಕೇಂದ್ರ ಮತ್ತು ರಾಜ್ಯ ಸರಕಾರಗಳು ಇಂತಹ ಮೇಳಗಳನ್ನು ನಡೆಸಲು ಅನುಮತಿ ನೀಡಬಾರದು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ.