ಹಿರಿಯ ಕಾರ್ಮಿಕ ನೇತಾರ, ದೇಶದಲ್ಲಿ ರಾಜ್ಯಸರಕಾರಿ ನೌಕರರ ಆಂದೋಲನವನ್ನು ಕಟ್ಟಿ ಬೆಳೆಸಿದ ಮತ್ತು ಅಂರ್ರಾಷ್ಟ್ರೀಯ ಕಾರ್ಮಿಕ ಆಂದೋಲನದಲ್ಲೂ ನೇತೃತ್ವ ನೀಡಿರುವ ಸುಕೋವiಲ್ ಸೆನ್ ನವಂಬರ್ 22ರಂದು ನಿಧನರಾಗಿದ್ದಾರೆ. ಅವರಿಗೆ 83 ವರ್ಷ ವಯಸ್ಸಾಗಿತ್ತು. ಇತ್ತೀಚೆಗೆ ಬಹಳ ಸಮಯದಿಂದ ಅವರು ಅನಾರೋಗ್ಯದಿಂದ ನರಳುತ್ತಿದ್ದರು.
ಅಖಿಲ ಭಾರತ ರಾಜ್ಯ ಸರಕಾರಿ ನೌಕರರ ಫೆಡರೇಶನ್ 1960ರಲ್ಲಿ ಆರಂಭವಾದಾಗ ಅದರ ಸ್ಥಾಪಕ ಮುಖಂಡರಲ್ಲಿ ಒಬ್ಬರಾಗಿದ್ದ ಕಾಂ. ಸೆನ್ 1982ರಿಂದ 2008 ರ ವರೆಗೆ ಅದರ ಪ್ರಧಾನ ಕಾರ್ಯದರ್ಶಿಯಾಗಿದ್ದರು. ನಂತರ ನಿಧನದ ವರೆಗೂ ಅದರ ಹಿರಿಯ ಉಪಾಧ್ಯಕ್ಷರಾಗಿದ್ದರು.
ದೇಶದ ಕಾರ್ಮಿಕ ಆಂದೋಲನಕ್ಕೆ ಅವರ ಒಂದು ಬಹುಮುಖ್ಯ ಕೊಡುಗೆ ಎಂದರೆ “ವರ್ಕಿಂಗ್ ಕ್ಲಾಸ್ ಆಫ್ ಇಂಡಿಯ: ಹಿಸ್ಟರಿ ಆಫ್ ಎಮರ್ಜೆನ್ಸ್ ಅಂಡ್ ಮೂವ್ಮೆಂಟ್’ 1830-2010(ಭಾರತದ ಕಾರ್ಮಿಕ ವರ್ಗ: ಉದಯ ಮತ್ತು ಆಂದೋಲನದ ಇತಿಹಾಸ) ಎಂಬ ಅಮೂಲ್ಯ ಕೃತಿ.
ಎರಡು ಅವಧಿಗಳಲ್ಲಿ ಅವರು ಸಿಪಿಐ(ಎಂ) ನಿಂದ ರಾಜ್ಯಸಭಾ ಸದಸ್ಯರೂ ಆಗಿದ್ದರು. 1952ರಲ್ಲಿ ಕಮ್ಯುನಿಸ್ಟ್ ಪಕ್ಷ ಸೇರಿದ್ದ ಅವರು ಬಹಳ ಸಮಯದ ವರೆಗೆ ಸಿಪಿಐ(ಎಂ) ಕೇಂದ್ರ ಸಮತಿ ಸದಸ್ಯರಾಗಿದ್ದರು. ನಿಧನದ ವೇಳೆಗೆ ಪಕ್ಷದ ಕೇಂದ್ರಿಯ ಹತೋಟಿ ಆಯೋಗದ ಅಧ್ಯಕ್ಷರಾಗಿದ್ದು, ಆ ಪ್ರಯುಕ್ತ ಕೇಂದ್ರ ಸಮಿತಿ ಸದಸ್ಯರಾಗಿದ್ದರು.
ಕಾಂ. ಸುಕೋಮಲ್ ಸೆನ್ ಒಬ್ಬ ಬದ್ಧ ಮಾರ್ಕ್ಸ್ ವಾದಿ-ಲೆನಿನ್ವಾದಿ ಆಗಿದ್ದರು ಮತ್ತು ಒಬ್ಬ ಅಪ್ರತಿಮ ಕಾರ್ಮಿಕ ಮುಖಂಡರಾಗಿದ್ದರು ಎಂದು ಅವರ ನಿಧನಕ್ಕೆ ಆಳವಾದ ದುಃಖ ವ್ಯಕ್ತಪಡಿಸುತ್ತ ಸಿಪಿಐ(ಎಂ) ಪೊಲಿಟ್ಬ್ಯುರೊ ಶ್ರದ್ಧಾಂಜಲಿ ಅರ್ಪಿಸಿದೆ.
ಕಾರ್ಮಿಕ ಆಂದೋಲನದ ಹಿರಿಯ ಚೇತನ
ಕಾರ್ಮಿಕ ಆಂದೋಲನ ಒಬ್ಬ ಹಿರಿಯ ಮುಖಂಡರನ್ನು, ಒಬ್ಬ ಮೇಧಾವಿ ದೃಷ್ಟಾರನನ್ನು ಮತ್ತು ಒಬ್ಬ ಮಹಾನ್ ಬೋಧಕರನ್ನು ಕಳೆದುಕೊಂಡಿದೆ -ಸಿಐಟಿಯು ಶ್ರದ್ಧಾಂಜಲಿ
ಕಾಂ. ಸುಕೋಮಲ್ ಸೆನ್ ದೇಶದ ಕಾರ್ಮಿಕ ಮತ್ತು ನೌಕರರ ಆಂದೋಲನಕ್ಕೆ ಸೈದ್ಧಾಂತಿಕವಾಗಿಯೂ, ಸಂಘಟನಾತ್ಮಕವಾಗಿಯೂ ಅಪಾರ ಕೊಡುಗೆ ನೀಡಿರುವ ದುಡಿಯುವ ಜನಗಳ ಐಕ್ಯತೆಯನ್ನು ಕಟ್ಟಿ, ಆಂದೋಲನವನ್ನು ವರ್ಗನೋಟದಿಂದ ಸಾಗುವಂತೆ ಮಾಡಿರುವ ಹಿರಿಯ ಚೇತನಗಳಲ್ಲಿ ಒಬ್ಬರು ಎಂದು ಸಿಐಟಿಯು ಪರವಾಗಿ ಶ್ರದ್ಧಾಂಜಲಿ ಅರ್ಪಿಸುತ್ತ ಪ್ರಧಾನ ಕಾರ್ಯದರ್ಶಿ ತಪನ್ ಸೆನ್ ಹೇಳಿದ್ದಾರೆ.
ಅವರು ಬಂಡವಾಳಶಾಹಿ ವ್ಯವಸ್ಥೆ ತನ್ನ ವಿವಿಧ ಘಟ್ಟಗಳಲ್ಲಿ ಅನುಸರಿಸಿದ ಧೋರಣೆಗಳನ್ನು ಸತತವಾಗಿ ಬಯಲು ಮಾಡುತ್ತ ಬಂದವರು. ಸರಕಾರಿ ನೌಕರರ ಸಂಘಟನೆಯ ಸ್ಥಾಪಕ ಮುಖಂಡರಾಗಿ ಅದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಲ್ಲದೆ, ಕಾಂ. ಸೆನ್ ಅವರು ಇತರ ವಲಯಗಳಲ್ಲೂ ಕಾರ್ಮಿಕ ಸಂಘಟನೆಗಳನ್ನು ಕಟ್ಟುವಲ್ಲಿ, ಅವಕ್ಕೆ ಮುಖಂಡತ್ವ ಮತ್ತು ಮಾರ್ಗದರ್ಶನ ನೀಡುವಲ್ಲಿ ಸಕ್ರಿಯರಾಗಿದ್ದರು. ಅವರು ದಶಕಗಳ ಕಾಲ ಸಿಐಟಿಯುನ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು, 2010ರಲ್ಲಿ ಚಂಡೀಗಡ ಸಮಮೇಳನದಲ್ಲಿ ಸಿಐಟಿಯು ನ ಉಪಾಧ್ಯಕ್ಷರಾಗಿ ಆಯ್ಕೆಯಾದರು. 2016 ರ ವರೆಗೆ ಆ ಸ್ಥಾನದಲ್ಲಿದ್ದ ಅವರನ್ನು ಪುರಿಯಲ್ಲಿ ನಡೆದ 15ನೇ ರಾಷ್ಟ್ರೀಯ ಸಮ್ಮೇಳನ ಸಿಐಟಿಯುನ ರಾಷ್ಟ್ರೀಯ ಕಾರ್ಯದರ್ಶಿ ಮಂಡಳಿಗೆ ಖಾಯಂ ಆಹ್ವಾನಿತರಾಗಿ ಚುನಾಯಿಸಿತು.
ಕಾಂ.ಸೆನ್ ಅಂತರ್ರಾಷ್ಟ್ರೀಯ ಕಾರ್ಮಿಕ ಆಂದೋಲನದಲ್ಲೂ ಒಬ್ಬ ಜನಪ್ರಿಯ ವ್ಯಕ್ತಿಯಾಗಿದ್ದರು. ಅವರು 1982ರಲ್ಲಿ ಆಗಿನ ಝೆಕೊಸ್ಲೊವಾಕಿಯಾದಲ್ಲಿದ್ದ ಸಾರ್ವಜನಿಕ ಮತ್ತು ಸಂಬಂಧಪಟ್ಟ ನೌಕರರ ಅಂತರ್ರಾಷ್ಟ್ರೀಯ ಕಾರ್ಮಿಕ ಸಂಘದ ನಿರ್ದೇಶಕ ಸಮಿತಿಯ ಸದಸ್ಯರಾಗಿ ಅಂತರ್ರಾಷ್ಟ್ರೀಯ ಕಾರ್ಮಿಕರಂಗವನ್ನು ಪ್ರವೇಶಿಸಿದರು. 1996ರಲ್ಲಿ ಅವರು ಈ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಚುನಾಯಿತರಾಗಿ, 2009ರಲ್ಲಿ ಆ ಹುದ್ದೆಯಿಂದ ನಿವೃತ್ತರಾಗುವ ವರೆಗೂ ವಿವಿಧ ದೇಶಗಳಲ್ಲಿ ಸರಕಾರಿ ನೌಕರರುಮತ್ತು ಸಾರ್ವಜನಿಕ ವಲಯದ ನೌಕರರ ಆಂದೋಲನವನ್ನು ಮತ್ತು ಚಟುವಟಿಕೆಗಳನ್ನು ಸಂಯೋಜಿಸುವಲ್ಲಿ ಮುಂಚೂಣಿ ಪಾತ್ರ ವಹಿಸಿದರು.
ಸೈದ್ಧಾಂತಿಕ ಕೆಲಸ
ಕಾರ್ಮಿಕ ಆಂದೋಲನದ ಸಂಘಟಕರಾಗಿ ಮತ್ತು ಮುಂಚೂಣಿ ಮುಖಂಡರಾಗಿ ಮಾತ್ರವಲ್ಲ, ಕಾರ್ಮಿಕ ಆಂದೋಲನದ ಸೈದ್ಧಾಂತಿಕ ಹೂರಣವನ್ನು ಶ್ರೀಮಂತಗೊಳಿಸುವಲ್ಲಿಯೂ ಅವರ ಪಾತ್ರ ಅಪ್ರತಿಮ ಎಂದು ತಪನ್ ಸೆನ್ ನೆನಪಿಸಿಕೊಂಡಿದ್ದಾರೆ. ಮೇಲೆ ಹೇಳಿದ ಅವರ ಗ್ರಂಥ 1830ರಿಂದ 2010ರ ವರೆಗಿನ ಭಾರತ ಕಾರ್ಮಿಕ ಅಂದೋಲನದ ಇತಿಹಾಸವನ್ನು ಪ್ರಸ್ತುತ ಪಡಿಸುವ ಅವರ ಮೇರುಕೃತಿ ಭಾರತದ ಹಲವು ಭಾಷೆಗಳಲ್ಲಿ ಪ್ರಕಟವಾಗಿದೆ. ಅಲ್ಲದೆ “ ಭಾರತದಲ್ಲಿ ಮೇದಿನ ಮತ್ತು ಎಂಟು ಗಂಟೆಗಳ ಹೋರಾಟ”, “ಅಖಿಲ ಭಾರತ ರಾಜ್ಯ ಸರಕಾರಿ ನೌಕರರ ಒಕ್ಕೂಟದ ಇತಿಹಾಸ”, ವಿಶ್ವ ಕಾರ್ಮಿಕ ಸಂಘಗಳ ಒಕ್ಕೂಟ (ಡಬ್ಲ್ಯುಎಫ್ಟಿಯು)ನ 1945ರಲ್ಲಿ ಸ್ಥಾಪನಾ ಮಹಾಧಿವೇಶನದಿಂದ 2011ರ ವಿಶ್ವ ಮಹಾಧಿವೇಶನದ ವರೆಗಿನ ಇತಿಹಾಸದ ರೂಪುರೇಷೆಯನ್ನು ಕೊಡುವ ಅಂತರ್ರಾಷ್ಟ್ರೀಯ ಕಾರ್ಮಿಕ ಆಂದೋಲನ- ವರ್ಗಶಾಮೀಲಿಗೆ ಎದುರಾಗಿ ವರ್ಗಹೋರಾಟದ ಚಲನಶೀಲತೆ” ಅವರ ಇತರ ಪ್ರಮುಖ ಕೃತಿಗಳು.
ಇತರ ಹಲವು ವಿಷಯಗಳ ಮೇಲೂ, ಭಾರತೀಯ ಸಮಾಜದಲ್ಲಿ ಸಂಸ್ಕೃತಿ ಮತ್ತು ಸಾಮಾಜಿಕ ಕ್ರಾಂತಿಯ ಪ್ರಶ್ನೆ, ಜಾತಿ, ಧರ್ಮ ಮತ್ತು ಭಾರತೀಯ ಸಮಾಜ, ಫ್ಯಾಸಿಸಂ ಇತ್ಯಾದಿಗಳ ಮೇಲೆ ರಾಷ್ಟ್ರೀಯ ಮತ್ತು ಅಂತರ್ರಾಷ್ಟ್ರೀಯ ಪತ್ರಿಕೆಗಳಲ್ಲಿ ಅವರ ಹಲವು ಲೇಖನಗಳು ಪ್ರಕಟವಾಗಿವೆ. ಅವರು 1979ರಲ್ಲಿ ಆರಂಭವಾದ ಅಖಿಲ ಭಾರತ ರಾಜ್ಯ ಸರಕಾರಿ ನೌಕರರ ಒಕ್ಕೂಟದ ಮುಖಪತ್ರಿಕೆಯಾದ ‘ಎಂಪ್ಲಾಯೀಸ್ ಫೋರಂ’ನ ಸಂಪಾದಕರಾಗಿ ಮೂರು ದಶಕಗಳಕಾಲ ಕೆಲಸ ಮಾಡಿದ್ದರು. ಅವರ ಇತ್ತೀಚಿನ ಕೃತಿ ಎಂದರೆ ಅಕ್ಟೋಬರ್ ಕ್ರಾಂತಿ ಮತ್ತು ನಂತರ ಬೆಳವಣಿಗೆಗಳ ಕುರಿತ ಎರಡು ಸಂಪುಟಗಳು.
ಕಾಮ್ರೇಡ್ ಸುಕೋಮಲ್ ಸೆನ್ ನಿಧನದೊಂದಿಗೆ ಕಾರ್ಮಿಕ ಆಂದೋಲನ ಒಬ್ಬ ಹಿರಿಯ ಮುಖಂಡರನ್ನು, ಒಬ್ಬ ಮೇಧಾವಿ ದೃಷ್ಟಾರನನ್ನು ಮತ್ತು ಒಬ್ಬ ಮಹಾನ್ ಬೋಧಕರನ್ನು ಕಳೆದುಕೊಂಡಿದೆ ಎಂದು ಶ್ರದ್ಧಾಂಜಲಿ ಅರ್ಪಿಸುತ್ತ,, ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಸೆನ್, ಕಾರ್ಮಿಕ ಆಂದೋಲನ ಭಾರೀ ಭೌತಿಕ ಮತ್ತು ಸೈದ್ಧಾಂತಿಕ ದಾಳಿಗಳನ್ನು ಎದುರಿಸುತ್ತಿರುವ ಪ್ರಸಕ್ತ ಕಾಲಘಟ್ಟದಲ್ಲಿ ಅವರಿಲ್ಲದಿರುವುದು ಒಂದು ತುಂಬಲಾಗದ ನಷ್ಟ ಎಂದಿದ್ದಾರೆ.