ಬಿಜೆಪಿಯನ್ನು ಸೋಲಿಸಲು, ಅದರ ದ್ವೇಷಯಂತ್ರವನ್ನು ಧ್ವಂಸ ಮಾಡಲು ಪರ್ಯಾಯ ಧೋರಣೆಗಳ ವೇದಿಕೆಯ ಮೇಲೆ ಐಕ್ಯ ಪ್ರತಿರೋಧ-ಸೀತಾರಾಮ್ ಯೆಚುರಿ
ಗುಜರಾತ್ ವಿಧಾನಸಭಾ ಚುನಾವಣೆಗಳ ಫಲಿತಾಂಶಗಳಲ್ಲಿ ಬಿಜೆಪಿಗೆ ಸಂಭ್ರಮಪಡುವಂತದ್ದೇನೂ ಇಲ್ಲ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಅಭಿಪ್ರಾಯ ಪಟ್ಟಿದೆ. ಬಿಜೆಪಿ ಬಹುಮತವನ್ನು ಪಡೆದು ಸರಕಾರವನ್ನೇನೋ ರಚಿಸಬಹುದು. ಆದರೆ ಅದು ಪಡೆದಿರುವುದು ಕಳೆದ ಎರಡು ದಶಕಗಳಲ್ಲೇ ಅತಿ ಕಡಿಮೆ ಸೀಟುಗಳು. ಕಳೆದ ಬಾರಿ 115 ಸೀಟುಗಳನ್ನು ಪಡೆದಿದ್ದ ಅದು ಈ ಬಾರಿ ಗಳಿಸಿದ್ದು 99 ಮಾತ್ರ. ಇದು ಬಿಜೆಪಿ ಅಧ್ಯಕ್ಷ ಅಮಿತ್ ಷಾ ಘೋಷಿಸಿದ “ಮಿಶನ್ 150”ದಿಂದ ಒಂದು ದೊಡ್ಡ ಪತನ. ಅಷ್ಟೆ ಅಲ್ಲ, 2014ರ ಲೋಕಸಭಾ ಚುನಾವಣೆಗಳಲ್ಲಿ ಅದು 165 ಅಸೆಂಬ್ಲಿ ಸೀಟುಗಳಲ್ಲಿ ಮುಂದಿತ್ತು ಎಂಬುದನ್ನು ಗಮನಿಸಿದರೆ ಅದರ ಬೆಂಬಲ ಪ್ರಮಾಣ ಎಷ್ಟೊಂದು ಕುಸಿದಿದೆ ಎಂಬುದನ್ನು ಕಾಣಬಹುದು ಎಂದು ಪೊಲಿಟ್ಬ್ಯುರೊ ಹೇಳಿದೆ.
ಒಂದು ಪರ್ಯಾಯ ಕಾರ್ಯಕ್ರಮವಿರುವ ವಿಶ್ವಾಸಾರ್ಹ ಪ್ರತಿಪಕ್ಷವಿದ್ದಿದ್ದರೆ ಬಿಜೆಪಿಯ ವಿರುದ್ಧ ಜನಗಳ ಅಸಂತೃಪ್ತಿಯನ್ನು ಕ್ರೋಡೀಕರಿಸಲು ಸಾಧ್ಯವಾಗುತ್ತಿತ್ತು ಎಂದು ಸಿಪಿಐ(ಎಂ) ಹೇಳಿದೆ.
ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಸರಾಗವಾಗಿ ಚುನಾವಣೆ ಗೆದ್ದಿದೆ.ಇದು ವೀರಭದ್ರ ಸಿಂಗ್ ಸರಕಾರದ ಭ್ರಷ್ಟ ಆಳ್ವಿಕೆ ಮತ್ತು ದುರಾಡಳಿತದ ವಿರುದ್ಧ ಜನತೆ ನೀಡಿರುವ ತೀರ್ಪು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ವಿಶ್ಲೇಷಿಸಿದೆ.
ಬಿಜೆಪಿಯ ವಿರುದ್ಧ ದು ಆಳವಾದ ಅಸಂತೃಪ್ತಿ ಇದೆ ಎಂಬುದನ್ನು ಗುಜರಾತ್ ವಿಧಾನಸಭಾ ಚುನಾವಣೆಗಳ ಫಲಿತಾಂಶ ತೋರಿಸುತ್ತಿದೆ ಎಂದು ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚುರಿ ಹೇಳಿದ್ದಾರೆ. ಬಿಜೆಪಿಯನ್ನು ನಿರ್ಣಾಯಕವಾಗಿ ಸೋಲಿಸಬೇಕಾದರೆ ಜನತೆಯ ಹಿತಕ್ಕಾಗಿ ಕೆಲಸ ಮಾಡುವ ಒಂದು ಪರ್ಯಾಯ ಧೋರಣೆಗಳ ಚೌಕಟ್ಟು ಬೇಕಾಗಿದೆ. ಬಿಜೆಪಿಗೆ ವಿರುದ್ಧವಾದ ಎಲ್ಲ ಶಕ್ತಿಗಳು ಒಂದು ಪರ್ಯಾಯ ಧೋರಣೆಗಳ ವೇದಿಕೆಯ ಮೇಲೆ ಸಾಧ್ಯವಾದಷ್ಟು ವಿಶಾಲವಾದ ರೀತಿಯಲ್ಲಿ ಒಟ್ಟುಗೂಡಿ ಕೊನೆಗೂ ಬಿಜೆಪಿಯನ್ನು ಸೋಲಿಸುತ್ತವೆ ಮತ್ತು ಅದರ ದ್ವೇಷ ಯಂತ್ರವನ್ನು ಧ್ವಂಸ ಮಾಡುತ್ತವೆ ಎಂದು ಯೆಚುರಿ ಹೇಳಿದ್ದಾರೆ
ಹಿಮಾಚಲ ಪ್ರದೇಶದ ಥಿಯೊಗ್ ಕ್ಷೇತ್ರದಲ್ಲಿ ಸಿಪಿಐ(ಎಂ) ಗೆಲುವು
ಸಿಪಿಐ(ಎಂ) ಒಂದು ಸೀಟು ಪಡೆದು ಇಪ್ಪತ್ತು ವರ್ಷಗಳ ನಂತರ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಪ್ರಾತಿನಿಧ್ಯ ಪಡೆಯುತ್ತಿದೆ . ಅದಕ್ಕಾಗಿ ಈ ವಿಧಾನಸಭಾ ಕ್ಷೇತ್ರದ ಜನತೆಯನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಅಭಿನಂದಿಸಿದೆ. ಎರಡು ಪ್ರಧಾನ ಪಕ್ಷಗಳ ನಡುವೆ ಅತ್ಯಂತ ಧ್ರುವೀಕರಣಗೊಂಡ ಚುನಾವಣೆಗಳಲ್ಲಿ ಸಿಪಿಐ(ಎಂ) ಅಭ್ಯರ್ಥಿ ರಾಕೇಶ್ ಸಿಂಘ ರವರ ವಿಜಯ ಇನ್ನಷ್ಟು ಮಹತ್ವದ್ದು ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯುರೊ ಈ ವಿಜಯ ಹಿಮಾಚಲ ಪ್ರದೇಶದ ವಿಧಾನ ಸಭೆಯಲ್ಲಿ ಸಿಪಿಐ(ಎಂ) ತಮ್ಮ ಹಕ್ಕುಗಳ ರಕ್ಷಣೆಗೆ ಮತ್ತು ತಮ್ಮ ಹಿತಾಸಕ್ತಿಗಳಿಂದ ಕೆಲಸ ಮಾಡುತ್ತದೆ ಎಂಬ ಜನತೆಯ ವಿಶ್ವಾಸವನ್ನು ಬಿಂಬಿಸುತ್ತದೆ ಎಂದಿದೆ. ಈ ವಿಜಯಕ್ಕಾಗಿ ಶ್ರಮಿಸಿರುವ ಪಕ್ಷದ ಎಲ್ಲ ಕಾರ್ಯಕರ್ತರಿಗೆ ಮತ್ತು ಬೆಂಬಲಿಗರಿಗೆ ಸಿಪಿಐ(ಎಂ) ಪೊಲಿಟ್ಬ್ಯುರೊ ಶುಭಾಶಯ ವ್ಯಕ್ತಪಡಿಸಿದೆ.