2ಜಿ ತರಂಗಾಂತರ ಕೇಸಿನಲ್ಲಿ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಉತ್ತರಿಸಿರುವುದಕ್ಕಿಂತ ಹೆಚ್ಚಿನ ಪ್ರಶ್ನೆಗಳನ್ನು ಎತ್ತಿದೆ ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಅಭಿಪ್ರಾಯ ಪಟ್ಟಿದೆ. 2ಜಿ ತರಂಗಾಂತರ ಹಂಚಿಕೆಯಲ್ಲಿ ದೊಡ್ಡ ನಷ್ಟವಾಗಿದೆ ಎಂಬುದು ಚೆನ್ನಾಗಿ ಸ್ಥಾಪಿತಗೊಂಡಿರುವ ಸಂಗತಿ. ಮಹಾ ಲೆಕ್ಕ ಪರಿಶೋಧಕರ ಕಚೇರಿ(ಸಿಎಜಿ) ಈ ನಷ್ಟ 1,76,000 ಕೋಟಿ ರೂ. ಎಂದು ಲೆಕ್ಕ ಹಾಕಿದೆ.
ಸುಪ್ರಿಂ ಕೋರ್ಟ್ ಕೆಲವು ಟೆಲಿಕಾಂ ಕಂಪನಿಗಳು ತಮಗೆ ನೀಡಿದ ತರಂಗಾಂತರಗಳ ದುರ್ಬಳಕೆ ಮಾಡಿವೆ ಎಂದು ತೀರ್ಪಿತ್ತು ಸಂಬಂಧಪಟ್ಟ ಕಂಪನಿಗಳ ಲೈಸೆನ್ಸ್ ಗಳನ್ನೂ ರದ್ದು ಮಾಡಿತ್ತು ಎಂದು ಸಿಪಿಐ(ಎಂ) ನೆನಪಿಸಿದೆ.
ಸಿಬಿಐನ ಮೊಕದ್ದಮೆ ಮತ್ತು ಫಿರ್ಯಾದು ಅಸಮರ್ಪಕ ಎಂದು ಸಾಬೀತಾಗಿರುವುದರಿಂದ ತಕ್ಷಣವೇ ಈ ವಿಷಯವನ್ನು ಕಾನೂನಾತ್ಮಕವಾಗಿ ಮುಂದುವರೆಸಲು ಅಗತ್ಯಕ್ರಮಗಳನ್ನು ತೆಗೆದುಕೊಳ್ಳಬೇಕು, ಈ ಮೂಲಕ ತಪ್ಪಿತಸ್ಥರನ್ನು ಶಿಕ್ಷಿಸುವಂತಾಗಬೇಕು ಎಂದು ಸಿಪಿಐ(ಎಂ) ಪೊಲಿಟ್ಬ್ಯುರೊ ಆಗ್ರಹಿಸಿದೆ.