ಕೇಂದ್ರ ಸಂಪುಟ ಏಕಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲಿ ಅಟೊಮ್ಯಾಟಿಕ್ ಮಾರ್ಗದಲ್ಲಿ ಅಂದರೆ ಸರಕಾರದ ಅನುಮತಿಯ ಅಗತ್ಯವಿಲ್ಲದೆ 100ಶೇ. ನೇರ ವಿದೇಶಿ ಹೂಡಿಕೆ(ಎಫ್ಡಿಐ)ಗೆ ಅವಕಾಶ ನೀಡಲು ನಿರ್ಧರಿಸಿದೆ. ಇದುವರೆಗೆ ಈ ಮಾರ್ಗದಲ್ಲಿ 49ಶೇ. ಎಫ್ಡಿಐ ಗೆ ಮಾತ್ರ ಅವಕಾಶ ಕೊಡಲಾಗಿತ್ತು. ಇದನ್ನು ಸಿಪಿಐ(ಎಂ) ಪೊಲಿಟ್ಬ್ಯುರೊ ಬಲವಾಗಿ ವಿರೋಧಿಸಿದೆ. ಚಿಲ್ಲರೆ ವ್ಯಾಪಾರದಲ್ಲಿ ಎಫ್ಡಿಐನ್ನು ಉದಾರೀಕರಿಸುವ ಈ ಕ್ರಮ ದೇಶೀ ಚಿಲ್ಲರೆ ವ್ಯಾಪಾರಿಗಳಿಗೆ ಮತ್ತು ಅಂಗಡಿ ಇಟ್ಟುಕೊಂಡವರಿಗೆ ಹಾನಿಯುಂಟು ಮಾಡುತ್ತದೆ ಎಂದು ಅದು ಹೇಳಿದೆ.
ಮೋದಿ ಸರಕಾರ ಬಹುಬ್ರಾಂಡ್ ಚಿಲ್ಲರೆ ವ್ಯಾಪಾರದಲ್ಲೂ ಎಫ್ಡಿಐಗೆ ಅವಕಾಶ ನೀಡುವತ್ತ ಸಾಗುತ್ತಿದೆ ಎಂಬುದರ ಸಂಕೇತವನ್ನು ಇದು ಕೊಡುತ್ತಿದೆ. ಬಿಜೆಪಿ ಪ್ರತಿಪಕ್ಷವಾಗಿದ್ದಾಗ ಚಿಲ್ಲರೆ ವ್ಯಾಪಾರದಲ್ಲಿ ವಿದೇಶಿ ಕಂಪನಿಗಳ ಪ್ರವೇಶವನ್ನು ವಿರೋಧಿಸುತ್ತಿತ್ತು. ಈಗ ಸರಕಾರಕ್ಕೆ ಬಂದ ಮೇಲೆ ತನ್ನ ನಿಲುವನ್ನು ಬದಲಿಸುವ ಕಪಟತನವನ್ನು ಪ್ರದರ್ಶಿಸಿದೆ ಎಂದು ಸಿಪಿಐ(ಎಂ) ಗೇಲಿ ಮಾಡಿದೆ.
ಏರ್ಇಂಡಿಯಾ: ಈಗ ವಿದೇಶಿ ಕಂಪನಿಗೆ ವಹಿಸುವ ಹುನ್ನಾರ
ಏರ್ಇಂಡಿಯಾದಲ್ಲಿ ವಿದೇಶಿ ಏರ್ಲೈನ್ಗಳಿಗೆ 49ಶೇ. ವರೆಗೆ ಹೂಡಿಕೆ ಮಾಡಲು ಅವಕಾಶ ಕೊಡುವ ನಿರ್ಧಾರವನ್ನೂ ಕೇಂದ್ರ ಸಂಪುಟ ಮಾಡಿದೆ. ಮೊದಲಿಗೆ ಈ ಸರಕಾರ ಏರ್ಇಂಡಿಯಾವನ್ನು ಖಾಸಗೀಕರಿಸುವ ನಿರ್ಧಾರವನ್ನು ಮಾಡಿತ್ತು. ಸಾರಿಗೆ, ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಇಲಾಖೆಯ ಸ್ಥಾಯೀ ಸಮಿತಿ ಸರಕಾರ ತನ್ನ ನಿರ್ಧಾರವನ್ನು ಮರುಪರಿಶೀಲಿಸಬೇಕು,
ಏರ್ಇಂಡಿಯಾಕ್ಕೆ ಪುನರುಜ್ಜಿÃವನಕ್ಕೆ ಐದು ವರ್ಷಗಳನ್ನು ಕೊಡಬೇಕು, ಅದರ ಸಾಲವನ್ನು ರೈಟ್ಆಫ್ ಮಾಡಬೇಕು ಎಂದು ಶಿಫಾರಸು ಮಾಡಿದೆ. ಆದರೆ ಮೋದಿ ಸರಕಾರ ಈಗ ಅದನ್ನು ಖಾಸಗಿಯವರಿಗೆ ವಹಿಸಿಕೊಡುವ ದಾರಿಯಲ್ಲಿ ಸಾಗಿದೆ ಎಂದಿರುವ ಸಿಪಿಐ(ಎಂ) ಪೊಲಿಟ್ಬ್ಯರೊ ಮೋದಿ ಸರಕಾರ ಸ್ಥಾಯೀಸಮಿತಿಯ ಶಿಫಾರಸಿನತ್ತ ಗಮನ ಹರಿಸಬೇಕು ಎಂದು ಆಗ್ರಹಿಸಿದೆ.